ಕಪ್ಪು ಮೈಬಣ್ಣ ಹೊಂದಿದ ಹೆಣ್ಣಿನ ಕಥೆಯನ್ನು ಹೊತ್ತು ಕೆಲ ಧಾರಾವಾಹಿಗಳು ಈಗಾಗಲೇ ಕಿರುತೆರೆಯಲ್ಲಿ ಬಂದಿವೆ. ಆದರೆ ಕಪ್ಪು ಮೈಬಣ್ಣ ಹೊಂದಿದ ಹುಡುಗನ ಸುತ್ತ ಕಥೆಯೊಂದನ್ನು ಕಿರುತೆರೆಯಲ್ಲಿ ಕಟ್ಟಿದ್ದಾರೆ ನಿರ್ದೇಶಕ ಎಸ್.ಗೋವಿಂದ್.
ಕಪ್ಪು ಹುಡುಗನ ಮನಃಸ್ಥಿತಿ, ಅವನಿಗಾಗುವ ಅವಮಾನ, ಖಿನ್ನತೆಯಿಂದ ಹೊರಬರುವ ಕಥೆ ಹೊತ್ತು ಬರಲಿದೆ ‘ಆನಂದರಾಗ’. ಮಾರ್ಚ್ 13ರಿಂದ ಸೋಮವಾರದಿಂದ ಶನಿವಾರ ರಾತ್ರಿ 7.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.
ಕಥಾನಾಯಕಿ ‘ದುರ್ಗಾ’ ಅಪ್ಪನ ಗುರಿಯನ್ನು ತನ್ನ ಗುರಿಯನ್ನಾಗಿಸಿಕೊಂಡು ಐ.ಪಿ.ಎಸ್ ಆಗುವ ಕನಸು ಹೊತ್ತವಳು. ತನ್ನ ಮುಗುಳುನಗೆಯಿಂದಲೇ ಎಲ್ಲಾ ಸಮಸ್ಯೆ ಬಗೆಹರಿಸುವ ಚತುರೆ. ಕಪ್ಪು ಮೈಬಣ್ಣ ಹಾಗು ದಪ್ಪ ದೇಹ ಹೊಂದಿರುವ ಕಥಾನಾಯಕನ ಹೆಸರು ‘ಚೆಲುವರಾಜ್’. ಈತ ನಟ ರೆಬಲ್ ಸ್ಟಾರ್ ಅಂಬರೀಷ್ ಅವರ ಅಭಿಮಾನಿ. ಅಂಬರೀಷ್ ಅವರ ರೀತಿ ಹೀರೊ ಆಗುವ ಕನಸು ಹೊತ್ತವ. ದುರ್ಗಾ ಮತ್ತು ಚೆಲುವನ ನಡುವೆ ಅರಳುವ ವಿಭಿನ್ನವಾದ ಪ್ರೇಮರಾಗವೇ ಆನಂದರಾಗ ಎಂದಿದೆ ತಂಡ.
ಧಾರಾವಾಹಿಯಲ್ಲಿ ದುರ್ಗಾಳಾಗಿ ದೀಪಾ ಹಿರೇಮಠ್ ಹಾಗು ಚೆಲುವರಾಜ ಆಗಿ ರಂಗಭೂಮಿ ಹಿನ್ನೆಲೆಯ ಮಂಜು ನಟಿಸಿದ್ದಾರೆ. ಕಥಾನಾಯಕಿಯ ತಂದೆಯಾಗಿ ಖ್ಯಾತ ನಟ ಕೀರ್ತಿರಾಜ್ ನಟಿಸಿದ್ದು, ತಾಯಿಯಾಗಿ ನಟಿ ಉಷಾ ಭಂಡಾರಿ ಕಾಣಿಸಿಕೊಳ್ಳಲಿದ್ದಾರೆ. ಕಥಾನಾಯಕನ ತಾಯಿಯಾಗಿ ವೀಣಾ ಸುಂದರ್ ನಟಿಸಿದ್ದು ನುರಿತ ಕಲಾವಿದರ ಬಳಗ ಈ ತಂಡದಲ್ಲಿದೆ. ವಿಷನ್ ಟೈಮ್ಸ್ ಈ ಧಾರಾವಾಹಿಯ ನಿರ್ಮಾಣ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.