ಬೆಂಗಳೂರು: ಮಾರ್ಚ್7ರಸೋಮವಾರದಿಂದ ಉದಯ ಟಿ.ವಿಯಲ್ಲಿ ಹೊಸ ಧಾರಾವಾಹಿ ‘ಮದುಮಗಳು’ ಪ್ರಸಾರವಾಗಲಿದೆ.
ಪ್ರತಿ ವಾರ ಸೋಮವಾರದಿಂದ ಶನಿವಾರದವರೆಗೆ ಸಂಜೆ 6ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.
ಉದಯ ಟಿವಿ ಇಪ್ಪತ್ತೆಂಟನೇ ವಸಂತಕ್ಕೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಕೌತುಕಗಳ ಜೊತೆ ಸೃಜನಾತ್ಮಕ ವಿಷಯಗಳಿಂದ ವೀಕ್ಷಕರಿಗೆ ರಸದೌತಣ ನೀಡಲು ತಯಾರಾಗಿದೆ.
ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಕನ್ಯಾದಾನ, ಕಾವ್ಯಾಂಜಲಿಯಂತಹ ಕೌಟುಂಬಿಕ ಧಾರವಾಹಿಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಉದಯ ಟಿವಿ ಈಗ ’ಮದುಮಗಳು’ ಎಂಬ ಹೊಸ ಕಥೆಯನ್ನು ಪ್ರೇಕ್ಷಕರಮುಂದೆ ತರಲು ಸಜ್ಜಾಗುತ್ತಿದೆ.
ಈಗಾಗಲೇ ಕಾವ್ಯಾಂಜಲಿ ಧಾರಾವಾಹಿಯನ್ನು ಕೊಟ್ಟು ಕನ್ನಡಿಗರ ಮನೆ ಮಾತಾಗಿರುವ ತಂಡ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಹೊಸದಾಗಿ ಮೂಡಿಬರುತ್ತಿರುವ,ಕುಟುಂಬ ಸಮೇತ ನೋಡುವಂತಹ ಈ ಮದುಮಗಳು ಧಾರಾವಾಹಿಯು ಊಹೆಗೂ ಮೀರಿ ತಮ್ಮ ಮನೆಮಗಳಾಗುವುದರಲ್ಲಿ ಸಂಶಯವಿಲ್ಲ ಎಂದು ಧಾರಾವಾಹಿ ತಂಡ ಹೇಳಿದೆ.
ಈ ಧಾರಾವಾಹಿ ಬಳಗದಲ್ಲಿ ಕಿರುತೆರೆಯ ಖ್ಯಾತ ನಟಿ ಸಿರಿಜಾ ಅವರು ಜವಾಬ್ದಾರಿಯುತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಳ್ಳಿತೆರೆಯಲ್ಲಿ ತನ್ನ ವಿಶಿಷ್ಟ ಪಾತ್ರಗಳಿಂದ ಛಾಪು ಮೂಡಿಸಿದ ಸುಂದರ್ ವೀಣಾ ಅವರುಬಣ್ಣ ಹಚ್ಚಿದ್ದಾರೆ. ಹಾಗೆ ಧಾರಾವಾಹಿಯ ನಾಯಕಿಯಾಗಿ ಹೊಸ ಪ್ರತಿಭೆ ರಕ್ಷಿತಾ ಅವರು ಕಾಣಿಸಿಕೊಳ್ಳಲಿದ್ದಾರೆ. ಹೊಸ ಪರಿಚಯ ಭವೀಶ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
ಮನೆಮಾತಾಗಿರುವ ಕಾವ್ಯಾಂಜಲಿಯ ನಿಪುಣ ತಂತ್ರಜ್ಞರು ಈ ಧಾರಾವಾಹಿಗೂ ಕಾರ್ಯ ನಿರ್ವಹಿಸಲಿದ್ದಾರೆ. ನಿರ್ದೇಶಕರಾಗಿ ಆದರ್ಶ್ ಹೆಗ್ಡೆ, ಛಾಯಾಗ್ರಾಹಕರಾಗಿ ರುದ್ರಮುನಿ ಬೆಳೆಗೆರೆ, ಸಹ-ಛಾಯಗ್ರಾಹಕ ಬಾಲಾಜಿ ರಾವ್ ಈ ತಂಡವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ. ಹಿಟ್ ಸೀರಿಯಲ್ ಕಾವ್ಯಾಂಜಲಿಯ ಜವಾಬ್ದಾರಿಯನ್ನು ನಿರ್ವಹಿಸಿದ ಶಾಕ್ ಸ್ಟುಡಿಯೋಸ್ ಮುಖ್ಯಸ್ಥ ಶಂಕರ್ ವೆಂಕಟರಮಣ್ ರವರೇ ಈ ಧಾರಾವಾಹಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.