ಕಿರುತೆರೆಯಲ್ಲಿ ಸತತ 28 ವರ್ಷಗಳಿಂದ ಮನರಂಜನೆ ನೀಡುತ್ತಿರುವ ಉದಯ ಟಿ.ವಿಯಲ್ಲಿ ಹೊಸ ಧಾರಾವಾಹಿ ’ರಾಧಿಕಾ’ ಮಾರ್ಚ್ 14ರಿಂದ ಪ್ರಸಾರವಾಗಲಿದೆ.
ಈ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ8.30ಕ್ಕೆ ಪ್ರಸಾರವಾಗಲಿದೆ. ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಧಾರಾವಾಹಿಗಳನ್ನು ನೀಡಿರುವ ಉದಯ ವಾಹಿನಿ ಇದೀಗ ’ರಾಧಿಕಾ’ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ.
ರಾಧಿಕಾ ಮಧ್ಯಮ ವರ್ಗದ ಅವಿವಾಹಿತ ಮಹಿಳೆ. ತನ್ನ ಒಡಹುಟ್ಟಿದವರ ಭವಿಷ್ಯ ರೂಪಿಸಲು ಹಗಲು ರಾತ್ರಿ ದುಡಿಯುತ್ತಾಳೆ. ತನ್ನ ಒಡಹುಟ್ಟಿದವರ ಜೀವನವನ್ನು ದಡಮುಟ್ಟಿಸುವಲ್ಲಿ ರಾಧಿಕಾ ಗೆಲ್ಲುತ್ತಾಳಾ? ರಾಧಿಕಾ ತನ್ನ ವೈವಾಹಿಕ ಜೀವನವನ್ನು ಹೇಗೆ ರೂಪಿಸಿ ಕೊಳ್ಳುತ್ತಾಳೆ ಎಂಬುದನ್ನು ಧಾರಾವಾಹಿ ನೋಡಿ ತಿಳಿಯಬೇಕು ಎಂದು ನಿರ್ದೇಶಕ ದರ್ಶಿತ್ ಭಟ್ ಹೇಳಿದ್ದಾರೆ.
ಶ್ರೀ ದುರ್ಗಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಗಣೇಶ್ ಭಟ್ ’ರಾಧಿಕಾ’ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದಾರೆ. ದರ್ಶಿತ್ ಭಟ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಗಣೇಶ್ ಹೆಗಡೆ ಮತ್ತು ಕೃಷ್ಣ ಕಂಚನಹಳ್ಳಿ ಛಾಯಾಗ್ರಹಣ, ತುರುವೇಕೆರೆ ಪ್ರಸಾದ್ ಸಂಭಾಷಣೆ ಬರೆದಿದ್ದು, ರಾಘವೇಂದ್ರ ಸಂಕಲನದ ಹೊಣೆ ಹೊತ್ತಿದ್ದಾರೆ.
ಇದನ್ನೂ ಓದಿ:ಮೇ 6ಕ್ಕೆ ಶರಣ್ ನಟನೆಯ ‘ಅವತಾರ ಪುರುಷ’ ಬಿಡುಗಡೆ
ರಾಧಿಕಾ ಪಾತ್ರವನ್ನು ಜನಪ್ರಿಯ ನಟಿ ಕಾವ್ಯಾ ಶಾಸ್ತ್ರಿ ನಿರ್ವಹಿಸಿದ್ದಾರೆ. ಗಾಯತ್ರಿ ಪ್ರಭಾಕರ್, ರವಿ ಕಲಾಬ್ರಹ್ಮ, ಮಾಲತಿ , ಸುರೇಶ್ ರೈ, ಸವಿತಾ ಕೃಷ್ಣಮೂರ್ತಿ, ಶ್ವೇತಾ ರಾವ್, ಸುನಿಲ್, ಜೀವನ್, ರೇಖಾ ಸಾಗರ್ ಮುಂತಾದವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.