ಬೆಂಗಳೂರು:ಸಾಧಕರ ಜೀವನ ಪರಿಚಯಿಸುವ ವೀಕೆಂಡ್ ವಿತ್ ರಮೇಶ್ ಸೀಸನ್ 4 ಕಾರ್ಯಕ್ರಮ ಏಪ್ರಿಲ್ 20ರಿಂದ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಮೊದಲ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಈ ಸೀಸನ್‌ನಲ್ಲಿ ನಟರಾದ ರಾಘವೇಂದ್ರ ರಾಜ್‌ಕುಮಾರ್, ಶ್ರೀಮುರಳಿ, ನಟಿ ಮಾಲಾಶ್ರೀ, ಇನ್ಫೊಸಿಸ್‌ನ ನಾರಾಯಣಮೂರ್ತಿ, ಸುಧಾ ನಾರಾಯಣಮೂರ್ತಿ, ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಒಟ್ಟು 20 ಸಾಧಕರು ನಡೆದು ಬಂದ ಜೀವನದ ಹಾದಿಯನ್ನು ಪ್ರೇಕ್ಷಕರ ಮುಂದೆ ತೆರೆದಿಡಲು ವಾಹಿನಿ ನಿರ್ಧರಿಸಿದೆ.
‘ಎರಡೂವರೆ ವರ್ಷದ ಬಳಿಕ ಮತ್ತೆ ಕಾರ್ಯಕ್ರಮ ನಡೆಯುತ್ತಿದೆ. ಈ ಸೀಸನ್‌ಪೂರ್ಣಗೊಂಡ ಬಳಿಕ ನಾಲ್ಕೂ ಸೀಸನ್‌ನಲ್ಲಿ ಸಾಧಕರ ಸೀಟ್‌ನಲ್ಲಿ ಆಸೀನರಾಗಿದ್ದ ಅತಿಥಿಗಳನ್ನು ಕರೆಸಿ ಮತ್ತೊಂದು ಅದ್ಭುತ ಕಾರ್ಯಕ್ರಮ ಮಾಡುವ ಉದ್ದೇಶವಿದೆ. ಜೊತೆಗೆ, ಸಿ.ಡಿ ಮತ್ತು ಪುಸ್ತಕವನ್ನೂ ಹೊರತರಲಾಗುವುದು’ ಎಂದು ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
‘ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ರಾಜಮೌಳಿ, ರಜನಿಕಾಂತ್ ಅವರನ್ನೂ ಸಾಧಕರ ಸೀಟಿನಲ್ಲಿ ಕೂರಿಸಬೇಕೆಂಬುದು ನಮ್ಮ ಆಸೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್, ‘ನಾನು ಈ ಕಾರ್ಯಕ್ರಮದಿಂದ ಹೆಚ್ಚು ಕಲಿತಿದ್ದೇನೆ. ನನಗೆ ದೊಡ್ಡ ಸವಾಲಾಗಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸಂಚಿಕೆ. ನಿರಂತರವಾಗಿ 12 ತಾಸು ಕಾರ್ಯಕ್ರಮ ನಡೆಸಿಕೊಟ್ಟಿದ್ದನ್ನು ಮರೆಯಲಾರೆ’ ಎಂದರು.
‘ಶಿವಾಜಿ ಸುರತ್ಕಲ್’ ಸಿನಿಮಾಕ್ಕಾಗಿ ಗಡ್ಡ ಬಿಟ್ಟಿದ್ದೇನೆ. ಈ ತಿಂಗಳ ಅಂತ್ಯಕ್ಕೆ ಶೂಟಿಂಗ್ ಮುಗಿಯಲಿದೆ. ಅಲ್ಲಿಯವರೆಗೂ ಗಡ್ಡಧಾರಿಯಾಗಿಯೇ ಕಾರ್ಯಕ್ರಮ ನಡೆಸಿಕೊಡುವುದು ಅನಿವಾರ್ಯ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.