ADVERTISEMENT

Explainer | ಏನಿದು ಟಿಆರ್‌ಪಿ; ಚಾನೆಲ್‌ಗಳಿಗೆ ಯಾಕಷ್ಟು ಮುಖ್ಯ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2020, 15:02 IST
Last Updated 8 ಅಕ್ಟೋಬರ್ 2020, 15:02 IST
ಟಿವಿ ವೀಕ್ಷಣೆಯಲ್ಲಿರುವ ಜನರು–ಸಾಂಕೇತಿಕ ಚಿತ್ರ
ಟಿವಿ ವೀಕ್ಷಣೆಯಲ್ಲಿರುವ ಜನರು–ಸಾಂಕೇತಿಕ ಚಿತ್ರ   

ಮುಂಬೈ ಪೊಲೀಸರ ಪ್ರಕಾರ ರಿಪಬ್ಲಿಕ್‌ ಟಿವಿ ಸೇರಿದಂತೆ ಮೂರು ಟಿವಿ ಚಾನೆಲ್‌ಗಳ ವಿರುದ್ಧ ಟಿಆರ್‌ಪಿ ತಿದ್ದುಪಡಿಗೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲಾಗಿದೆ. ಮುಂಬೈ ಪೊಲೀಸ್‌ನ ಅಪರಾಧ ವಿಭಾಗದಿಂದ ತನಿಖೆ ನಡೆಸುತ್ತಿರುವ 'ಟಿಆರ್‌ಪಿ ಹಗರಣ' ಪ್ರಕರಣ ಸದ್ಯ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ನಾವೆಲ್ಲರೂ ಟಿವಿ ಚಾನೆಲ್‌ಗಳನ್ನು ನೋಡುತ್ತೇವೆ, ಆದರೆ ಅಲ್ಲಿ ಟಿಆರ್‌ಪಿ ಹೇಗೆ ಗಮನಿಸಲಾಗುತ್ತದೆ? ಅಷ್ಟಕ್ಕೂ ಏನಿದು ಟಿಆರ್‌ಪಿ?

ಈಗಾಗಲೇ ಮರಾಠಿಯ ಫಕ್ತ್ ಮರಾಠಿ ಮತ್ತು ಬಾಕ್ಸ್‌ ಸಿನಿಮಾ ಚಾನೆಲ್‌ಗಳ ಮಾಲೀಕರನ್ನು ಬಂಧಿಸಲಾಗಿದ್ದು, ಅರ್ನಬ್‌ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್‌ ಟಿವಿಯ ಸಿಬ್ಬಂದಿ ಮತ್ತು ನಿರ್ದೇಶಕರ ವಿಚಾರಣೆ ನಡೆಸಲಾಗುತ್ತದೆ ಎಂದು ಮುಂಬೈ ಪೊಲೀಸ್‌ ಕಮಿಷನರ್‌ ಪರಮ್ ವೀರ್‌ ಸಿಂಗ್‌ ಹೇಳಿದ್ದಾರೆ. ಟಿಆರ್‌ಪಿ ರೇಟಿಂಗ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಂಡಿರುವ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಾನೆಲ್‌ ನೋಡುವಾಗ ಕೆಲವು ಬಾರಿ ಟಿಆರ್‌ಪಿ ಕುರಿತು ಪ್ರಸ್ತಾಪ ಆಗಿರುವುದನ್ನು ನೋಡಿರುತ್ತೇವೆ. 'ಟಿಆರ್‌ಪಿಯಲ್ಲಿ ನಾವೇ ಮುಂದು, ನಮ್ಮ ಟಿಆರ್‌ಪಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ' ಎಂದೆಲ್ಲ. ಟಿವಿ ಚಾನೆಲ್‌ಗೆ ಜಾಹೀರಾತು ಮೂಲದಿಂದ ಆದಾಯ ಗಳಿಸಲು ಟಿಆರ್‌ಪಿ ಪ್ರಮುಖ ಪಾತ್ರವಹಿಸುತ್ತದೆ.

ADVERTISEMENT

ಟಿಆರ್‌ಪಿ ಎಂದರೆ?

ಟಿಆರ್‌ಪಿ ವಿಸ್ತೃತ ರೂಪ ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್‌. ವೀಕ್ಷಕರು ಯಾವ ಚಾನೆಲ್‌ ಅಥವಾ ಕಾರ್ಯಕ್ರಮವನ್ನು ಹೆಚ್ಚು ವೀಕ್ಷಿಸಿದ್ದಾರೆ ಎಂಬುದನ್ನು ಟಿಆರ್‌ಪಿ ಮೂಲಕ ಅಳೆಯಲಾಗುತ್ತದೆ. ಅಂದರೆ, ಇಡೀ ಚಾನೆಲ್‌ನ ಮತ್ತು ಅದರ ಪ್ರತಿಯೊಂದು ಕಾರ್ಯಕ್ರಮದ ವೀಕ್ಷಣೆಯ ಪ್ರಮಾಣವನ್ನು ಟಿಆರ್‌ಪಿ ಮೂಲಕ ತಿಳಿಯಬಹುದು. ಜಾಹೀರಾತುದಾರರಿಗೆ ಹಾಗೂ ಹೂಡಿಕೆದಾರರಿಗೆ ಜನರ ವೀಕ್ಷಣೆಯ ಮನಸ್ಥಿತಿಯನ್ನು ಟಿಆರ್‌ಪಿ ಪ್ರತಿಬಿಂಬಿಸುತ್ತದೆ. ಒಂದೇ ಚಾನೆಲ್‌ನ್ನು ಎಷ್ಟು ಬಾರಿ ವೀಕ್ಷಿಸಿದ್ದಾರೆ, ಯಾವ ಸಮಯದಲ್ಲಿ ಯಾವ ಕಾರ್ಯಕ್ರಮಗಳು ವೀಕ್ಷಣೆ ಕಂಡಿವೆ ಎಂಬುದರ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಅದೇ ವಿವರಗಳನ್ನು ಆಧರಿಸಿ ಜಾಹೀರಾತುದಾರರು ತಮ್ಮ ಜಾಹೀರಾತು ಯಾವ ಸಮಯಕ್ಕೆ ಪ್ರಸಾರವಾಗಬೇಕು ಎಂದು ನಿರ್ಧರಿಸುತ್ತಾರೆ ಹಾಗೂ ಯಾವ ಚಾನೆಲ್‌ಗೆ ಎಷ್ಟು ಮೊತ್ತದ ಜಾಹೀರಾತು ನೀಡಬೇಕು ಎಂಬುದು ಟಿಆರ್‌ಪಿಯನ್ನೇ ಆಧರಿಸುತ್ತದೆ!

ಟಿಆರ್‌ಪಿ ಅಳೆಯುವುದು ಮತ್ತು ಸಂಗ್ರಹಿಸುವುದು ಹೇಗೆ?

ಹಿಂದೆ ದೂರದರ್ಶನ ಚಾನೆಲ್ ಮಾತ್ರ ಲಭ್ಯವಿದ್ದ ಕಾಲದಲ್ಲಿ ದೂರದರ್ಶನ ಆಡಿಯನ್ಸ್ ರಿಸರ್ಚ್ ಟಿವಿ ರೇಟಿಂಗ್ಸ್‌ (ಡಾರ್ಟ್) ಬಳಕೆಯಾಗುತ್ತಿತ್ತು. ಚಾನೆಲ್‌ಗಳು ಹೆಚ್ಚಿದಂತೆ ಐಎನ್‌ಟಿಎಎಂ (ಇಂಡಿಯನ್‌ ಟೆಲಿವಿಷನ್‌ ಆಡಿಯನ್ಸ್ ಮೆಷರ್‌ಮೆಂಟ್‌) ಅಸ್ಥಿತ್ವ ಪಡೆಯಿತು. ಪ್ರಸ್ತುತ ಹಲವು ಸಂಶೋಧನಾ ಸಂಸ್ಥೆಗಳು ಟಿಆರ್‌ಪಿ ಅಳೆಯುವ ಪ್ರಕ್ರಿಯೆಗಳಲ್ಲಿ ಭಾಗಿಯಾಗುತ್ತಿವೆ.

ಸಾಮಾನ್ಯವಾಗಿ ಪೀಪಲ್‌ ಮೀಟರ್ಸ್ ಸಾಧನಗಳನ್ನು ವಲಯವಾರು ಆಯ್ಕೆ ಮಾಡಿದ ಮನೆಗಳ ಟಿವಿಗಳೊಂದಿಗೆ ಜೋಡಿಸಲಾಗುತ್ತದೆ. ಆ ಸಾಧನಗಳು ಟಿವಿಯಲ್ಲಿ ವೀಕ್ಷಿಸಲಾಗಿರುವ ಚಾನೆಲ್‌ಗಳು ಹಾಗೂ ಕಾರ್ಯಕ್ರಮಗಳ ಮಾಹಿತಿ ದಾಖಲಿಸಿಕೊಳ್ಳುತ್ತವೆ. ಅದೇ ಸಾಧನಗಳಿಂದ ಒಂದು ನಿಮಿಷದ ಸರಾಸರಿ ವೀಕ್ಷಣೆಯ ಮಾಹಿತಿಯನ್ನು ನಿರ್ವಹಣೆ ಮಾಡುವ ಐಎನ್‌ಟಿಎಎಂ ರೀತಿಯ ಸಂಸ್ಥೆ ಸಂಗ್ರಹಿಸಿಕೊಳ್ಳುತ್ತದೆ. ಅಳವಡಿಸಲಾಗಿರುವ ಸಾಧನಗಳಿಂದ ಮಾಹಿತಿ ಸಂಗ್ರಹಿಸಿ, ಅದರ ವಿಶ್ಲೇಷಣೆಯ ಬಳಿಕ ಟಿವಿ ಚಾನೆಲ್‌ನ ಅಥವಾ ಪ್ರತಿ ಕಾರ್ಯಕ್ರಮದ ಟಿಆರ್‌ಪಿ ದಾಖಲಿಸಲಾಗುತ್ತದೆ.

ಈಗಂತೂ ಬಹುತೇಕರ ಮನೆಯಲ್ಲಿ ಸೆಟ್‌ಅಪ್‌ ಬಾಕ್ಸ್‌ ಮತ್ತು ಡಿಷ್ ಸಂಪರ್ಕಿತ ಕೇಬಲ್‌ ವ್ಯವಸ್ಥೆ ಇದೆ. ಅದರೊಂದಿಗೆ ಆ್ಯಪ್‌ಗಳ ಮೂಲಕ ಕಾರ್ಯಕ್ರಮ ವೀಕ್ಷಣೆಯೂ ಹೆಚ್ಚಿರುವುದರಿಂದ ಟಿಆರ್‌ಪಿ ಸಂಗ್ರಹಿಸುವ ಹಾಗೂ ಅಳೆಯುವ ತಂತ್ರಜ್ಞಾನದಲ್ಲಿ ಬದಲಾವಣೆಯಾಗುತ್ತಿದೆ.

ಪ್ರಸ್ತುತ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾರ್ಕ್‌ (ಬ್ರಾಡ್‌ಕಾಸ್ಟ್‌ ಆಡಿಯನ್ಸ್ ರಿಸರ್ಚ್‌ ಕೌನ್ಸಿಲ್‌) ಭಾರತದಲ್ಲಿ ಟಿವಿ ಚಾನೆಲ್‌ಗಳ ವಾರದ ಟಿಆರ್‌ಪಿ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಇನ್ನೂ ವೀಕ್ಷಣೆಯ ಸಂಖ್ಯೆಯೂ ಇದರ ಟಿಆರ್‌ಪಿ ಭಾಗವಾಗಿರುವುದರಿಂದ ಚಾನೆಲ್‌ಗಳು ಹೊಸ ಕಾರ್ಯಕ್ರಮಗಳು, ರಿಯಾಲಿಟಿ ಶೋಗಳು ಹಾಗೂ ಸ್ಟಾರ್‌ಗಳ ವಿಶೇಷ ಕಾರ್ಯಕ್ರಮಗಳಿಂದ ಜನರನ್ನು ಸೆಳೆಯುವ ಪ್ರಯತ್ನ ನಿರಂತರವಾಗಿ ಮಾಡುತ್ತವೆ. ಟಿಆರ್‌ಪಿ ಆಧಾರದ ಮೇಲೆಯೇ ಜಾಹೀರಾತು ಬರುವ ಪ್ರಮಾಣವೂ ಅವಲಂಬಿತವಾಗಿರುತ್ತದೆ.

(ಬರಹ: ಹೇಮಂತ್‌ ಕುಮಾರ್ ಎಸ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.