ADVERTISEMENT

ಕಿರುತೆರೆಯಲ್ಲಿ ಹರಿದ ಭಕ್ತಿರಸ!

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 20:00 IST
Last Updated 27 ಡಿಸೆಂಬರ್ 2018, 20:00 IST
ಶ್ರೀ ವಿಷ್ಣು ದಶಾವತಾರ
ಶ್ರೀ ವಿಷ್ಣು ದಶಾವತಾರ   

ಕನ್ನಡದಲ್ಲಿ ಸಿನಿಮಾ ವೀಕ್ಷಕರ ಸಂಖ್ಯೆ ಎಷ್ಟು? ಹಾಗೆಯೇ, ಕಿರುತೆರೆ ವೀಕ್ಷಕರ ಸಂಖ್ಯೆ ಎಷ್ಟು? ಪ್ರಮುಖ ಮನರಂಜನಾ ಮಾಧ್ಯಮಗಳಾದ ಸಿನಿಮಾ ಹಾಗೂ ಕಿರುತೆರೆಯ ವೀಕ್ಷಕರ ಸಂಖ್ಯೆ ಎಷ್ಟೆಷ್ಟು ಎಂಬುದರ ಖಚಿತ ಅಂಕಿ–ಅಂಶ ತಕ್ಷಣಕ್ಕೆ ಲಭ್ಯವಾಗುವುದಿಲ್ಲವಾದರೂ, ‘ಕಿರುತೆರೆಯ ಮೂಲಕ ಪ್ರಸಾರವಾಗುವ ಕಾರ್ಯಕ್ರಮಗಳ ವೀಕ್ಷಕರ ಸಂಖ್ಯೆ ಸಿನಿಮಾ ವೀಕ್ಷಕರಿಗಿಂತ ಖಂಡಿತ ಹೆಚ್ಚು’ ಎಂಬ ಮಾತು ಈ ಉದ್ಯಮದಲ್ಲಿ ಇರುವವರಿಂದ ಕೇಳಿಬರುತ್ತದೆ.

ಪ್ರತಿ ಮನೆಯ ಜಗುಲಿ, ವೀಕ್ಷಕನ ಮನಸ್ಸನ್ನು ಆಕ್ರಮಿಸಿಕೊಂಡಿರುವ ಕನ್ನಡ ಕಿರುತೆರೆ ಪ್ರಪಂಚದಲ್ಲಿ 2018ರಲ್ಲಿ ಕಂಡುಬಂದ ಮಹತ್ವದ ಬದಲಾವಣೆ ಏನು? ಈ ಪ್ರಶ್ನೆಗೆ ಉತ್ತರ ಅರಸಿ ಕಿರುತೆರೆ ವಾಹಿನಿಗಳ ಮುಂದೆ ಹಾಗೂ ಆ ವಾಹಿನಿಗಳ ವೀಕ್ಷಕರ ಮುಂದೆ ನಿಂತಾಗ ಸಿಕ್ಕಿದ್ದು: ‘ಇನ್ನೇನು? ಗೊತ್ತಾಗಲಿಲ್ಲವಾ?! ಈ ವರ್ಷ ಎದ್ದುಕಂಡಿದ್ದು ಪೌರಾಣಿಕ ಧಾರಾವಾಹಿಗಳ ಅಬ್ಬರ’ ಎನ್ನುವ ಉತ್ತರ.

ಕನ್ನಡ ಕಿರುತೆರೆಯನ್ನು ಪೌರಾಣಿಕ ಧಾರಾವಾಹಿಗಳು ಆಕ್ರಮಿಸಿಕೊಳ್ಳುತ್ತವೆ ಎನ್ನುವ ಸೂಚನೆ 2017ರ ಅಂತ್ಯದಲ್ಲೇ ಕಂಡುಬಂದಿತ್ತು. ‘ಸ್ಟಾರ್‌ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾದ ‘ಹರ ಹರ ಮಹಾದೇವ’ ಅಂಥದ್ದೊಂದು ಸೂಚನೆ ನೀಡಿತ್ತು. 2018ರಲ್ಲಿ ಕನ್ನಡದ ಬಹುಪಾಲು ಮನರಂಜನಾ ವಾಹಿನಿಗಳು ಪೌರಾಣಿಕ ಧಾರಾವಾಹಿಗಳನ್ನು ಆರಂಭಿಸಿದವು. ಉದಯ ಟಿ.ವಿ.ಯಲ್ಲಿ ‘ಜೈ ಹನುಮಾನ್‌’, ಜೀ ಕನ್ನಡ ವಾಹಿನಿಯಲ್ಲಿ ‘ಶ್ರೀವಿಷ್ಣು ದಶಾವತಾರ’, ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ‘ಶನಿ’ ಮತ್ತು ‘ಮಹಾಕಾಳಿ’ಯಂತಹ ಪೌರಾಣಿಕ ಕಥೆಗಳು ತೆರೆದುಕೊಂಡವು.

ADVERTISEMENT

‘ಕೆಲವು ಸಮಯದ ಬಿಡುವಿನ ನಂತರ ಪೌರಾಣಿಕ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಮತ್ತೆ ಬಂದವು. ಉಳಿದೆಲ್ಲ ಪ್ರಕಾರಗಳ ಕಥೆಗಳ ನಡುವೆ ಈ ಬಗೆಯ ಕಥೆಗಳು ವೀಕ್ಷಕರಿಗೆ ಬೇಕು ಅನಿಸಿತ್ತು. ಯಕ್ಷಗಾನದ ಪೌರಾಣಿಕ ಪ್ರಸಂಗಗಳನ್ನು ಕರಾವಳಿ, ಮಲೆನಾಡಿನ ಜನ ಮತ್ತೆ ಮತ್ತೆ ವೀಕ್ಷಿಸುವಂತೆ, ಪೌರಾಣಿಕ ಧಾರಾವಾಹಿಗಳನ್ನೂ ಜನ ಕಾಲಕಾಲಕ್ಕೆ ವೀಕ್ಷಿಸಲು ಬಯಸುತ್ತಾರೆ. ಹಾಗಾಗಿ, 2018ರಲ್ಲಿ ಇವು ಯಶಸ್ಸು ಕಂಡವು. ಇದನ್ನು ಭಕ್ತಿರಸದ ವರ್ಷ ಎನ್ನಬಹುದು’ ಎನ್ನುತ್ತವೆ ‘ಉದಯ ಟಿ.ವಿ.’ ಮೂಲಗಳು.

ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ ‘ಉಘೇ ಉಘೇ ಮಹಾದೇಶ್ವರ’ವು ಜಾನಪದ ಕಾವ್ಯವೊಂದನ್ನು ಧಾರಾವಾಹಿಯ ಕಥಾ ರೂಪಕ್ಕೆ ಪರಿವರ್ತಿಸಿದ ಹೆಗ್ಗಳಿಕೆ ಪಡೆಯಿತು. ‘ಮಹಾದೇಶ್ವರನ ಕಥೆಯನ್ನು ಧಾರಾವಾಹಿ ರೂಪಕ್ಕೆ ತಂದಿದ್ದು ಕನ್ನಡದಲ್ಲಿ ಮೆಚ್ಚಬೇಕಾದ ಪ್ರಯತ್ನ. ಕನ್ನಡದಲ್ಲಿ ಪ್ರಸಾರವಾದ ಬಹುತೇಕ ಪೌರಾಣಿಕ ಧಾರಾವಾಹಿಗಳು ಬೇರೆ ಭಾಷೆಗಳಲ್ಲಿ ಬೇರೆ ರೂಪಗಳಲ್ಲಿ ಪ್ರಸಾರ ಕಂಡಿದ್ದವು. ಆದರೆ, ಮಹಾದೇಶ್ವರನ ಕಥೆ ಬಹಳ ಒರಿಜಿನಲ್’ ಎನ್ನುತ್ತಾರೆ ಕನ್ನಡ ಟಿ.ವಿ. ವಾಹಿನಿಯೊಂದರ ಮನರಂಜನಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹಿರಿಯರೊಬ್ಬರು.

‘ಪೌರಾಣಿಕ ಧಾರಾವಾಹಿಗಳ ಜೊತೆಯಲ್ಲೇ ಥ್ರಿಲ್ಲರ್ ಮತ್ತು ಹಾರರ್‌ ಧಾರಾವಾಹಿಗಳೂ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದ್ದವು. ನಾಗಿಣಿ, ಯಾರೇ ನೀ ಮೋಹಿನಿ, ಆತ್ಮಬಂಧನ ಧಾರಾವಾಹಿಗಳನ್ನು ಈ ಮಾತಿಗೆ ಉದಾಹರಣೆಯ ರೂಪದಲ್ಲಿ ಹೇಳಬಹುದು. ‘ಪೌರಾಣಿಕ, ಥ್ರಿಲ್ಲರ್, ಹಾರರ್‌ ಅಲ್ಲದೆ ರೊಮ್ಯಾನ್ಸ್‌ ಆಧರಿಸಿದ ಧಾರಾವಾಹಿಗಳು ಹಿಂದೆಯೂ ವೀಕ್ಷಕರಿಗೆ ರುಚಿಸಿದ್ದವು, ಈಗಲೂ ಅವು ವೀಕ್ಷಕರಿಗೆ ರುಚಿಸುತ್ತಿವೆ’ ಎನ್ನುತ್ತವೆ ಸ್ಟಾರ್‌ ಸುವರ್ಣ ವಾಹಿನಿಯ ಮೂಲಗಳು.

ಬಹುತೇಕ ವಾಹಿನಿಗಳಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳಲ್ಲಿ ಕಥೆ ನಗರ ಕೇಂದ್ರಿತ. ಪಾತ್ರಗಳು ಕೆಲವು ಧಾರಾವಾಹಿಗಳಲ್ಲಿ ಹೊರಪ್ರದೇಶಗಳ ಪಾತ್ರಗಳು ಇದ್ದರೂ, ಅವು ನಗರದೊಂದಿಗೆ ನಂಟು ಹೊಂದಿರುತ್ತವೆ. ಧಾರಾವಾಹಿಗಳಲ್ಲಿ ಕನ್ನಡದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಅಥವಾ ಬಯಲು ಸೀಮೆಯ ಪ್ರಾದೇಶಿಕ ಕಥೆಗಳು ಹೇಳಿಕೊಳ್ಳುವ ಮಟ್ಟಿಗೆ ಇಲ್ಲ ಎನ್ನುವುದು ಕಿರುತೆರೆ ಉದ್ಯಮದ ಹಿರಿಯೊಬ್ಬರ ಅನಿಸಿಕೆ.

ಟಿ.ಎನ್. ಸೀತಾರಾಮ್‌ ಪುನಃ ಕಿರುತೆರೆಗೆ

‘ಕಾಫಿ ತೋಟ’ ಸಿನಿಮಾ ಮಾಡಲು ಹೋಗಿ ಕಿರುತೆರೆ ಪ್ರೇಕ್ಷಕರಿಂದ ದೂರವಾಗಿದ್ದ ನಿರ್ದೇಶಕ ಟಿ.ಎನ್. ಸೀತಾರಾಮ್‌ ಪುನಃ ಕಿರುತೆರೆಗೆ ಮರಳಿದ್ದು 2018ರಲ್ಲಿ ಗುರುತಿಸಬೇಕಾಗ ಅಂಶ.

‘ಮ’ಕಾರದ ಮೇಲಿನ ಮಮಕಾರದ ಕಾರಣ ಅವರು ತಮ್ಮ ಹೊಸ ಧಾರಾವಾಹಿಗೆ ‘ಮಗಳು ಜಾನಕಿ’ ಎಂದು ಹೆಸರಿಟ್ಟರು. ‘ಸಿದ್ಧ ಸೂತ್ರಗಳಿಂದ ಹೊರತಾದ, ಮದುವೆಯಾಗಿ ಗಂಡನನ್ನು ಚೆನ್ನಾಗಿಟ್ಟುಕೊಳ್ಳುವುದೇ ಹೆಣ್ಣಿನ ಜೀವಿತೋದ್ದೇಶ ಎಂದು ತೋರಿಸದ ಧಾರಾವಾಹಿ ಇದು’ ಎಂದು ಈ ಧಾರಾವಾಹಿಯ ಬಗ್ಗೆ ಮೆಚ್ಚುಗೆಯ ಮಾತು ಆಡುತ್ತಾರೆ ಖಾಸಗಿ ಕಂಪನಿಯೊಂದರ ಉದ್ಯೋಗಿ ಮಂಜುಳಾ.

‘ಕೌಟುಂಬಿಕ ಕಥೆಗಳು ಇನ್ನು ಹೆಚ್ಚು ಚಲಾವಣೆಯಲ್ಲಿ ಇರುವುದಿಲ್ಲ ಎಂದು ಉದ್ಯಮ ಭಾವಿಸಿದ್ದ ಹೊತ್ತಿನಲ್ಲಿ ತೆರೆಯ ಮೇಲೆ ಕಾಣಿಸಿಕೊಂಡ ಈ ಧಾರಾವಾಹಿ, ಆ ಭಾವನೆಯನ್ನು ಹೋಗಲಾಡಿಸಿತು. ಮಾಸ್‌ ಹಾಗೂ ಕ್ಲಾಸ್‌ ವರ್ಗಗಳಿಗೆ ಸೀತಾರಾಮ್‌ ಧಾರಾವಾಹಿ ಇಷ್ಟವಾಗಿದೆ’ ಎಂದು ಕನ್ನಡ ಧಾರಾವಾಹಿಗಳ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಅಂದಹಾಗೆ, ಬಾಲ್ಕನಿಯಿಂದ ಎತ್ತಿ ಬಿಸಾಕಿಸಿಕೊಳ್ಳುತ್ತಿದ್ದ ಪಾಪದ ವ್ಯಕ್ತಿ ‘ಪಾಂಡು’ ಕೂಡ ಈ ವರ್ಷ ಕಿರುತೆರೆಗೆ ಮರಳಿದ್ದನ್ನು ಮರೆಯುವಂತೆ ಇಲ್ಲ.

ಮೋಡಿ ಮಾಡದ ಬಿಗ್‌ ಬಾಸ್‌

ಕನ್ನಡದ ಬಹುದೊಡ್ಡ ರಿಯಾಲಿಟಿ ಕಾರ್ಯಕ್ರಮಗಳಲ್ಲಿ ಒಂದಾದ ಬಿಗ್‌ ಬಾಸ್‌ ಈ ಬಾರಿ ಹಿಂದಿನಷ್ಟು ಮೋಡಿ ಮಾಡಿಲ್ಲ ಎನ್ನುವ ಮಾತುಗಳು ಟಿ.ವಿ. ಉದ್ಯಮದಿಂದಲೇ ಕೇಳಿಬಂದಿವೆ. ಇದಕ್ಕೆ ಕಾರಣ ಏನು ಎಂದು ಕೇಳಿದರೆ, ‘ಈ ಬಾರಿ ಪಾಲ್ಗೊಂಡವರಲ್ಲಿ ಹೆಚ್ಚಿನವರು ಸೆಲೆಬ್ರಿಟಿಗಳಲ್ಲ. ಹಾಗಾಗಿ, ಸಹಜವಾಗಿಯೇ ವೀಕ್ಷಕರ ಕುತೂಹಲ ಕಡಿಮೆ ಇದೆ’ ಎಂಬ ಉತ್ತರ ದೊರೆಯುತ್ತದೆ.

ಆದರೆ, ಹಾಡು – ನೃತ್ಯ – ಅಭಿನಯ ಆಧರಿಸಿದ ರಿಯಾಲಿಟಿ ಷೋಗಳು ತಮ್ಮ ಆಕರ್ಷಣೆ ಉಳಿಸಿಕೊಂಡವು ಎನ್ನುವುದು ಉದ್ಯಮದವರ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.