ADVERTISEMENT

Adipurush| ‘ಆದಿಪುರುಷ’ ಸಂಭಾಷಣೆಗೆ ಆಕ್ಷೇಪ: ಡೈಲಾಗ್‌ ತಿದ್ದಲು ಚಿತ್ರ ತಂಡ ನಿರ್ಧಾರ

ಪಿಟಿಐ
Published 18 ಜೂನ್ 2023, 10:31 IST
Last Updated 18 ಜೂನ್ 2023, 10:31 IST
ಆದಿಪುರುಷ ಪೋಸ್ಟರ್‌
ಆದಿಪುರುಷ ಪೋಸ್ಟರ್‌   

ನವದೆಹಲಿ: ವಿವಾದಕ್ಕೆ ಗುರಿಯಾಗಿರುವ ‘ಆದಿಪುರುಷ’ ಸಿನಿಮಾದ ಕೆಲವು ಸಂಭಾಷಣೆಗಳನ್ನು ಪರಿಷ್ಕರಿಸಲು ನಿರ್ಮಾಪಕರು ನಿರ್ಧರಿಸಿರುವುದಾಗಿ ಚಿತ್ರದ ಸಂಭಾಷಣಕಾರ ಮನೋಜ್ ಮುಂತಾಶಿರ್ ಶುಕ್ಲಾ ಭಾನುವಾರ ಹೇಳಿದ್ದಾರೆ.

ಹಿಂದು ಮಹಾಕಾವ್ಯ ರಾಮಾಯಣ ಆಧಾರಿತ, ಪ್ರಭಾಸ್‌ ನಟನೆಯ, ಬಹುತಾರಾಗಣದ ‘ಆದಿಪುರುಷ’ ಸಿನಿಮಾಕ್ಕೆ ಶುಕ್ಲಾ ಅವರು ಹಿಂದಿ ಸಂಭಾಷಣೆ ಮತ್ತು ಹಾಡುಗಳನ್ನು ಬರೆದಿದ್ದಾರೆ. ತಿದ್ದುಪಡಿ ಮಾಡಿದ ಸಾಲುಗಳನ್ನು ಈ ವಾರದೊಳಗೆ ಚಿತ್ರಕ್ಕೆ ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

‘ನಿಮ್ಮ ಭಾವನೆಗಳಿಗಿಂತ ದೊಡ್ಡದು ನನಗೆ ಏನೂ ಇಲ್ಲ. ನನ್ನ ಡೈಲಾಗ್‌ಗಳ ಪರವಾಗಿ ನಾನು ಲೆಕ್ಕವಿಲ್ಲದಷ್ಟು ವಾದಗಳನ್ನು ಮಂಡಿಸಬಲ್ಲೆ. ಆದರೆ ಇದು ನಿಮ್ಮ ನೋವನ್ನು ಕಡಿಮೆ ಮಾಡುವುದಿಲ್ಲ. ನಾನು ಮತ್ತು ಚಿತ್ರದ ನಿರ್ಮಾಪಕ-ನಿರ್ದೇಶಕರು ಡೈಲಾಗ್‌ನಲ್ಲಿ ಪರಿಷ್ಕರಣೆ ಮಾಡಲು ನಿರ್ಧರಿಸಿದ್ದೇವೆ. ನಿಮ್ಮನ್ನು ನೋಯಿಸುವ ಡೈಲಾಗ್‌ಗಳನ್ನು ತೆಗೆದು, ಪರಿಷ್ಕೃತ ಡೈಲಾಗ್‌ಗಳನ್ನು ಈ ವಾರ ಚಿತ್ರಕ್ಕೆ ಸೇರಿಸಲಾಗುವುದು’ ಎಂದು ಶುಕ್ಲಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳಿನಲ್ಲಿ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾದ "ಆದಿಪುರುಷ"ದಲ್ಲಿ ಪ್ರಭಾಸ್‌ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃತಿ ಸನೋನ್ ಸೀತಾ ಪಾತ್ರಧಾರಿಯಾಗಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿದ್ದಾರೆ.

ಓಂ ರಾವುತ್ ನಿರ್ದೇಶಿಸಿದ ಮತ್ತು ಟಿ-ಸೀರೀಸ್ ನಿರ್ಮಿಸಿದ, ದೊಡ್ಡ-ಬಜೆಟ್ ಬಹುಭಾಷಾ ಸಿನಿಮಾ ‘ಆದಿಪುರುಷ’ ಅದರ ಕಳಪೆ ವಿಎಫ್‌ಎಕ್ಸ್ ಮತ್ತು ಸಂಭಾಷಣೆಗಳ ಕಾರಣಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. 'ಲಂಕಾ ದಹನ' ಸನ್ನಿವೇಶದಲ್ಲಿ ಹನುಮಂತನ ಸಂಭಾಷಣೆ ಆಕ್ಷೇಪಣೆಗೆ ಗುರಿಯಾಗಿದೆ. ಹೀಗಾಗಿ ಶುಕ್ಲಾ ಟೀಕೆಗೆ ಗುರಿಯಾಗಿದ್ದಾರೆ.

ಸಿನಿಮಾದ ಪಾತ್ರಗಳು ಬಳಸಿದ ಭಾಷೆಯನ್ನು, ವಿಶೇಷವಾಗಿ ದೇವದತ್ತ ನಾಗೆ ನಿರ್ವಹಿಸಿದ ಹನುಮಂತನ ಪಾತ್ರದ ಭಾಷೆಯನ್ನು ಪ್ರೇಕ್ಷಕರು ಮತ್ತು ರಾಜಕೀಯ ಪಕ್ಷದ ಮುಖಂಡರು ಟೀಕೆಗೆ ಗುರಿಪಡಿಸಿದ್ದಾರೆ.

‘ಮೂರು ಗಂಟೆಗಳ ಚಲನಚಿತ್ರದಲ್ಲಿ 3 ನಿಮಿಷಗಳ ಅವಧಿಯ ಸಂಭಾಷಣೆ ನಿಮ್ಮ ಕಲ್ಪನೆಗೆ ಭಿನ್ನವಾಗಿದ್ದಿರಬಹುದು. ಆದರೆ, ವೀಕ್ಷಕರು ಆತುರದಲ್ಲಿ ನನನ್ನು ‘ಸನಾತನ ದ್ರೋಹಿ’ ಎಂದು ಕರೆಯಬಾರದು’ ಎಂದು ಶುಕ್ಲಾ ಮನವಿ ಮಾಡಿಕೊಂಡಿದ್ದಾರೆ.

₹500 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ‘ಆದಿಪುರುಷ’ ಎರಡು ದಿನಗಳಲ್ಲಿ ₹240 ಕೋಟಿ ಸಂಗ್ರಹಿಸಿದೆ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.