ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ 8 ತಾಣಗಳಲ್ಲಿ ಒಟ್ಟು 175 ಪ್ರಭೇದದ ಚಿಟ್ಟೆಗಳನ್ನು ಮಂಗಳೂರು ವಿಶ್ವವಿದ್ಯಾಲಯದ ತಂಡ ಗುರುತಿಸಿದ್ದು, ಅವುಗಳ ಬಗ್ಗೆ ದಾಖಲೆಯನ್ನು ಸಿದ್ಧಪಡಿಸಿದೆ.
ಯೇನೆಪೊಯ ವಿಶ್ವವಿದ್ಯಾಲಯದ ಸಂಶೋಧಕ ಡಾ.ಆರ್.ಶ್ಯಾಮಪ್ರಸಾದ ರಾವ್ ಹಾಗೂ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದೀಪಕ್ ನಾಯ್ಕ ಮತ್ತು ಡಾ.ಎಂ.ಎಸ್. ಮುಸ್ತಾಕ್ ಈ ಅಧ್ಯಯನ ನಡೆಸಿದ್ದಾರೆ.
ಎರಡು ವರ್ಷಗಳ ಸಮೀಕ್ಷೆಯ ಆಧಾರದ ಮೇಲೆ ಸಂಶೋಧಕರು ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಗಳ ಯಥೇಚ್ಛ ವಿನ್ಯಾಸಗಳು ಮತ್ತು ಅವುಗಳು ಇಷ್ಟಪಡುವ ಆವಾಸಸ್ಥಾನಗಳ ಕುರಿತು ದಾಖಲಾತಿ ಮಾಡಿಕೊಂಡಿದ್ದಾರೆ. ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಗಳ ಭವಿಷ್ಯದ ಪರಿವೀಕ್ಷಣೆ ಮತ್ತು ಸಂರಕ್ಷಣಾ ಕಾರ್ಯಗಳಿಗೆ ಅಗತ್ಯವಿರುವ ಬೃಹತ್ ಪ್ರಮಾಣದ ಮೂಲ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ.
ಚಿಟ್ಟೆಗಳ ಆವಾಸಸ್ಥಾನ, ಅವುಗಳ ಆಹಾರ ಸಸ್ಯಗಳು, ಅವುಗಳು ಕಾಣಸಿಗುವ ವಾತಾವರಣಗಳ ಬಗ್ಗೆ ಮಾಹಿತಿಯನ್ನು ದಾಖಲಿಸಲಾಗಿದೆ. ಆಹಾರ ಸಸ್ಯಗಳನ್ನು ಬೆಳೆಸುವ ಮೂಲಕ ಚಿಟ್ಟೆಗಳ ಆವಾಸಸ್ಥಾನ ಸೃಷ್ಟಿಸಲು ಹಾಗೂ ಚಿಟ್ಟೆಗಳ ಸಂರಕ್ಷಣೆಗೆ ಈ ಅಧ್ಯಯನ ಸಹಕಾರಿ ಆಗಲಿದೆ ಎಂದು ಡಾ. ಮುಸ್ತಾಕ್ ತಿಳಿಸಿದ್ದಾರೆ.
ಈ ಅಧ್ಯಯನದಿಂದ ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಚಿಟ್ಟೆಗಳ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಿದೆ. ಇದು ಚಿಟ್ಟೆಗಳ ದಾಖಲೆ, ವೀಕ್ಷಣೆ ಹಾಗೂ ಸಂರಕ್ಷಣೆಗೆ ಮಹತ್ವದ್ದಾಗಿದೆ.
- ಡಾ. ಮುಸ್ತಾಕ್,ಮಂಗಳೂರು ವಿವಿ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.