ADVERTISEMENT

ಕಣಿವೆ ಹಾದಿಯಲ್ಲಿ ಕಪ್ಪೆ ಅರಸುತ್ತಾ..!

ವೆಂಕಟೇಶ ಜಿ.ಎಚ್.
Published 2 ಮಾರ್ಚ್ 2024, 23:24 IST
Last Updated 2 ಮಾರ್ಚ್ 2024, 23:24 IST
ಕುಂಬಾರ ಕಪ್ಪೆ
ಚಿತ್ರ: ಪ್ರದೀಪ್ ಕಲ್ಲಳ್ಳಿ
ಕುಂಬಾರ ಕಪ್ಪೆ ಚಿತ್ರ: ಪ್ರದೀಪ್ ಕಲ್ಲಳ್ಳಿ   

ಅದೊಂದು ಮಳೆಗಾಲದ ರಾತ್ರಿ. ಕಾರ್ಗಲ್ ಬಳಿಯ ದಟ್ಟಕಾನನದ ತೊರೆಯ ಹಾದಿಯಲ್ಲಿ ಗಿರೀಶ ಜೆನ್ನಿ ಮತ್ತು ಛಾಯಾಗ್ರಾಹಕ ಪ್ರದೀಪ್‌ ಕಲ್ಲಳ್ಳಿ ಮೆಲ್ಲಗೆ ಹೆಜ್ಜೆ ಹಾಕುತ್ತಿದ್ದರು. ತಲೆಗೆ ಹಾಕಿದ್ದ ಹೆಡ್‌ಟಾರ್ಚ್ ದಾರಿ ತೋರುತ್ತಿತ್ತು. ಮಳೆಯ ಆರ್ಭಟ, ಜೀರುಂಡೆಗಳ ಆಲಾಪವಿತ್ತು. ಬಂಡೆಯೊಂದರ ಬಳಿ ನಿಂತು ಅವರು ಅಲ್ಲಿಯೇ ಸಂದಿನಲ್ಲಿದ್ದ ಕಲ್ಲುಗಳನ್ನು ಸರಿಸಿದಾಗ ತೀರಾ ತಣ್ಣನೆಯ ವಸ್ತುವೊಂದು ಕೈಗೆ ತಾಕಿದಂತಾಯಿತು. ಹಿಂದೆಯೇ ವಿಷಕಾರಿ ಕಟ್ಟು ಹಾವು (ಮಂಡಲ–ಮಲಬಾರ್ ರಸಲ್‌ ವೈಪರ್) ಎದ್ದು ಕುಳಿತಿತ್ತು. ಆಗ ಕ್ಷಣಕಾಲ ಇವರ ಜೀವ ಬಾಯಿಗೆ ಬಂದಿತ್ತು. ಕಲ್ಲಿನ ಕೆಳಗೆ ಬೇಟೆಗೆ ಹೊಂಚು ಹಾಕಿ ಕುಳಿತಿದ್ದ ಹಾವಿಗೆ ಇವರ ಮಧ್ಯಪ್ರವೇಶ ಕೋಪ ತರಿಸಿತ್ತು. ಗಿರೀಶರನ್ನು ಕಚ್ಚುವ ಅದರ ಗುರಿಯನ್ನು ಹೆಡ್‌ಟಾರ್ಚ್‌ನ ಪ್ರಖರ ಬೆಳಕು ತಪ್ಪಿಸಿತ್ತು. ವಿಶೇಷವೆಂದರೆ ಆ ಕಟ್ಟು ಹಾವು ಕೂಡ ಇವರಂತೆಯೇ ಶರಾವತಿ ಕಣಿವೆಯಲ್ಲಿ ಕಾಣಸಿಗುವ ವಿಶಿಷ್ಟ ಇರುಳು ಕಪ್ಪೆಗಳನ್ನು (ಕುಂಬಾರ ಕಪ್ಪೆ) ಅರಸಿ ಬಂದಿತ್ತು. ಹಾವಿಗೆ ಬೇಟೆ, ಇವರಿಗೆ ಅಧ್ಯಯನ ಮಿತ್ರರ ಭೇಟಿ ಆಗಿತ್ತು.

ಇಂತಹ ಹತ್ತಾರು ನಾಟಕೀಯ ಘಟನೆಗಳಿಗೆ ಸಂಶೋಧಕ ಗಿರೀಶ ಜೆನ್ನಿ ಸಾಕ್ಷಿಯಾಗಿದ್ದಾರೆ. ಏಕೆಂದರೆ ಇವರು ಪಶ್ಚಿಮಘಟ್ಟದ ಶರಾವತಿ ಕಣಿವೆಯಲ್ಲಿ ಕಳೆದ 20 ವರ್ಷಗಳಿಂದ ಕಪ್ಪೆಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅಲ್ಲಿ ವಿಶೇಷವಾಗಿ ಕಾಣಸಿಗುವ ನಿಶಾಚರಿ ಕುಂಬಾರ ಕಪ್ಪೆಗಳ (ಇರುಳುಗಪ್ಪೆ–Nyctibatrachus kumbara) ಬಗ್ಗೆ ಅವರ ಅಧ್ಯಯನದ ಫಲ ಈಗ ‘ಕಪ್ಪೆರಾಗ’ ಹೆಸರಿನ ಸಾಕ್ಷ್ಯಚಿತ್ರವಾಗಿ ಮೂಡಿಬಂದಿದೆ.

ಸಾಗರ ತಾಲ್ಲೂಕಿನ ಕಲಮಂಜಿ ಗ್ರಾಮದ ಗಿರೀಶ ಜೆನ್ನಿ, ಕೃಷಿಕ ಕುಟುಂಬದವರು. ಪರಿಸರ ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದ ಅವರು, 2003-05ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ಸದ್ಯ ಅವರು ಸಾಗರದ ಇಂದಿರಾಗಾಂಧಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಸರ ವಿಜ್ಞಾನ ಬೋಧಿಸುತ್ತಿದ್ದಾರೆ.

ADVERTISEMENT

ಪಶ್ಚಿಮಘಟ್ಟಗಳ ದಟ್ಟ ಕಾಡಿನಲ್ಲಿ ತೊರೆಗಳ ಪಾದ ಮಟ್ಟದ ನೀರಿನಲ್ಲಿ ರಾತ್ರಿಯಿಡೀ ಕಳೆದು ಕುಂಬಾರ ಕಪ್ಪೆಗಳ ಬದುಕಿನ ವಿಧಾನ ಧ್ಯಾನಿಸಿದ್ದಾರೆ. ಈ ತಳಿಯ ಕಪ್ಪೆಗಳು ಕತ್ತಲೆಯಲ್ಲಿ ಕ್ರಿಯಾಶೀಲವಾಗುತ್ತವೆ. ಹಗಲು ಹೊತ್ತು ಪೊಟರೆಗಳಲ್ಲಿಯೇ ಇರುತ್ತವೆ. ಹೀಗಾಗಿ ಕತ್ತಲೆ–ಕಾನು ಇವರ ಅಧ್ಯಯನದ ಕ್ಷೇತ್ರ, ಕಾರ್ಯದ ನೆಲೆ.

ಆದರ್ಶ ಸಂಗಾತಿ

ಪ್ರತೀ ಮಹಿಳೆ ಹುಡುಕುವ ಆದರ್ಶ ಸಂಗಾತಿ ನಮ್ಮ ಗಂಡು ಕುಂಬಾರ ಕಪ್ಪೆ ಎಂದು ಗಿರೀಶ ಜೆನ್ನಿ ಚಟಾಕಿ ಹಾರಿಸಿದರು. ಹೆಣ್ಣುಕಪ್ಪೆ ನಿರ್ದಿಷ್ಟ ಸ್ಥಳಗಳಲ್ಲಿ ನೂರಾರು ಮೊಟ್ಟೆಗಳ ಇಟ್ಟು ಅಲ್ಲಿಂದ ಹೊರಡುತ್ತದೆ. ಆದರೆ, ಆ ಮೊಟ್ಟೆಗಳನ್ನು ರಕ್ಷಿಸಿ ಮರಿಗಳಾಗುವವರೆಗೂ ನಿಗಾ ವಹಿಸುವುದು ಗಂಡು ಕಪ್ಪೆ. ಪರಭಕ್ಷಕಗಳ ಕಣ್ಣಿಗೆ ಕಾಣಸಿಗದಂತೆ ಮೊಟ್ಟೆಗಳನ್ನು ರಕ್ಷಿಸಲು ಹೊರಮೈಗೆ ಮಣ್ಣು ಸವರುತ್ತದೆ. ಹೀಗೆ ಪ್ಯಾಕಿಂಗ್‌ ಮಾಡುವ ಕಾರಣಕ್ಕೆ ಅದಕ್ಕೆ ‘ಕುಂಬಾರ’ ಎಂಬ ಹೆಸರು ಬಂದಿದೆ. ಇದಕ್ಕೆ ‘ಕುಂಬಾರ’ ಎಂದು ಹೆಸರಿಟ್ಟವರು ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಹೈಯರ್‌ ಎಜುಕೇಶನ್‌ (ಮಾಹೆ) ಅಧ್ಯಾಪಕ ಕೆ.ವಿ.ಗುರುರಾಜ್ ಹಾಗೂ ತಂಡ ಎಂದು ಗಿರೀಶ ವಿವರಿಸುತ್ತಾರೆ.

‘ಅತ್ಯಂತ ಸೂಕ್ಷ್ಮ ಸ್ವಭಾವದ ಈ ಕುಂಬಾರ ಕಪ್ಪೆಗಳು ತಮ್ಮ ಆವಾಸಸ್ಥಾನದಲ್ಲಿನ ಸಣ್ಣ ಬದಲಾವಣೆಯನ್ನೂ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿಯೇ ಅವು ಜನವಸತಿ ಬಳಿ ಕಾಣಸಿಗುವುದಿಲ್ಲ. ಸಂಶೋಧನೆಯ ಆರಂಭಿಕ ದಿನಗಳಲ್ಲಿ ಮಲೆನಾಡು ಪ್ರದೇಶದಲ್ಲಿ ಈ ನಿಶಾಚರಿಗಳ ಬಗ್ಗೆ ಮಾಹಿತಿ ಇರಲಿಲ್ಲ. ಕುಂಬಾರ ಕಪ್ಪೆಗಳ ಸಂಖ್ಯೆ, ಆವಾಸಸ್ಥಾನ ಮತ್ತು ಇತರ ಅಂಶಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ನಾವು ಇಲ್ಲಿ ಇನ್ನಷ್ಟು ಇರುಳು ಕಪ್ಪೆಗಳ ಬಗ್ಗೆ ತಿಳಿದುಕೊಂಡಿದ್ದೇವೆ‘ ಎಂದು ಹೇಳುತ್ತಾರೆ.

ಗಿರೀಶ, ವರ್ಷಗಳ ಕಾಲ ಕಪ್ಪೆಗಳ ಪರಿಸರ ಅಧ್ಯಯನದ ಕಠಿಣ ಕಾರ್ಯ ಕೈಗೊಂಡಿದ್ದಾರೆ. ಇದು ನಿರ್ದಿಷ್ಟ ತೊರೆಗಳಲ್ಲಿನ ಕಪ್ಪೆಗಳ ಸಂಖ್ಯೆ, ಕಪ್ಪೆಯ ಜೀವನ ಚಕ್ರದ ಮೇಲೆ ಪರಿಣಾಮ ಬೀರುವ ಅಂಶಗಳು, ತಾಪಮಾನ ಹೆಚ್ಚಳ, ನೀರಿನ ಅಲಭ್ಯತೆಯಿಂದಾಗಿ ಆವಾಸಸ್ಥಾನಕ್ಕೆ ಆಗಿರುವ ತೊಂದರೆಯ ಮಾಹಿತಿ, ಸೂಕ್ಷ್ಮ ಪ್ರದೇಶಗಳಲ್ಲಿ ಕೈಗೊಳ್ಳಲು ಮುಂದಾಗುವ ಯಾವುದೇ ವ್ಯತಿರಿಕ್ತ ಅಭಿವೃದ್ಧಿ ಕಾರ್ಯಗಳನ್ನು ತಡೆಯಲು ಬಹಳ ಮುಖ್ಯವಾಗಿವೆ.

‘ವನ್ಯಜೀವಿ ಅಂದರೆ ಹುಲಿ, ಸಿಂಹ, ಆನೆಗಳ ಬಗ್ಗೆ ಮಾತಾಡುತ್ತೇವೆ. ಆದರೆ ನಿಸರ್ಗದ ಜೀವ ಚಕ್ರದಲ್ಲಿ ಮುಂಚೂಣಿ ಪಾತ್ರ ವಹಿಸುವ ಕಪ್ಪೆಗಳ ಬಗ್ಗೆ ನಾವ್ಯಾರೂ ಮಾತಾಡೊಲ್ಲ. ದಶಕದ ಹಿಂದಷ್ಟೇ ನೆಲಕ್ಕೆ ಮಳೆ ಹುಯ್ಯುತ್ತಿದ್ದಂತೆಯೇ ಮುಗಿಲಿಗೆ ಮುಖ ಮಾಡಿ ವಟಗುಡುವ ಕಪ್ಪೆಗಳ ಮೇಳ ಮನೆಯ ಪರಿಸರದಲ್ಲಿ ಕಾಣಸಿಗುತ್ತಿತ್ತು. ಆದರೆ ಅವು ಈಚೆಗೆ ಅಪರೂಪದ ಅತಿಥಿ‘ ಆಗಿವೆ‘ ಎನ್ನುತ್ತಾರೆ ಗಿರೀಶ.

ಪರಿಸರ ಸಂರಕ್ಷಣೆಗೆ ಮಕ್ಕಳ ಸಹಯೋಗ ಪರಿಣಾಮಕಾರಿ ಎಂದು ನಂಬಿರುವ ಗಿರೀಶ, ನಮ್ಮ ಸುತ್ತಲಿನ ಜೀವವೈವಿಧ್ಯದ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳದೇ ಯಾವುದೇ ಸಂರಕ್ಷಣಾ ಪ್ರಯತ್ನ ನಿರರ್ಥಕ ಎಂದು ನಂಬುತ್ತಾರೆ. ತಮ್ಮ ‘ಪ್ರಾಣ’ (ಪಂಚವಟಿ ರಿಸರ್ಚ್ ಅಕಾಡೆಮಿ ಫಾರ್ ನೇಚರ್) ಹೆಸರಿನ ಸಂಸ್ಥೆಯ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕಾಡಿಗೆ ಕರೆದೊಯ್ದು ಸಸ್ಯ, ಪ್ರಾಣಿ ಮತ್ತು ಮಾನವರ ನಡುವಿನ ಪರಸ್ಪರ ಸಂಬಂಧದ ಪರಿಚಯ ಮಾಡಿಕೊಡುವುದು ಅವರ ನೆಚ್ಚಿನ ಹವ್ಯಾಸ.

’ಹೊಸನಗರ ಬಳಿಯ ಕಣಿವೆಬಾಗಿಲಿನ ನನ್ನ ಅಜ್ಜನ ಮನೆಯಿಂದ ಕೇವಲ 300 ಮೀಟರ್ ದೂರದಲ್ಲಿ ತೊರೆ ಹರಿಯುತ್ತದೆ. ಅಲ್ಲಿ ಕಪ್ಪೆಗಳಿದ್ದರೂ, ಅವುಗಳತ್ತ ಆಸಕ್ತಿ ಇರಲಿಲ್ಲ. ಗಿರೀಶ ಸಂಶೋಧನೆಗಾಗಿ ಅಲ್ಲಿಗೆ ಬಂದಾಗ ಮನೆಯ ಹಿತ್ತಲಿನಲ್ಲಿದ್ದ ಉಭಯಚರಗಳ ಅದ್ಭುತ ಪ್ರಪಂಚದ ಬಗ್ಗೆ ತಿಳಿದುಕೊಂಡೆ. ಅವರು ನನ್ನಲ್ಲಿ ಕುತೂಹಲದ ಬೀಜ ಬಿತ್ತಿದರು. ಈಗಲೂ ನಾನು ಎಲ್ಲಿಯೇ ನೀರಿನ ಸೆಲೆ ಕಂಡರೂ ಅಲ್ಲಿ ಕಪ್ಪೆಗಳ ಹುಡುಕುತ್ತೇನೆ‘ ಎಂದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜಿಯೊಸ್ಪೇಶಿಯಲ್ ಮ್ಯಾನೇಜರ್ ಎಸ್‌.ಭುವನಮಿತ್ರ ಹೇಳುತ್ತಾರೆ.

ಗಿರೀಶ ಅವರು ವಿದ್ಯಾರ್ಥಿಗಳನ ಮೇಲೆ ತಮ್ಮ ದೃಷ್ಟಿ ನೆಟ್ಟಿದ್ದು, ಕಾಡು, ಪ್ರಾಣಿ, ಪಕ್ಷಿ, ಸಸ್ಯಗಳ ಬಗೆಗೆ ಕುತೂಹಲ ಮತ್ತು ಸಂಶೋಧನೆಗೆ ಬಿತ್ತಿದ್ದ ಬೀಜದಂತಿದೆ.

ಸಂಶೋಧನೆ ನಿರತ ಗಿರೀಶ ಜೆನ್ನಿ ಮತ್ತು ಪ್ರದೀಪ್‌ ಕಲ್ಲಳ್ಳಿ

ಕಪ್ಪೆರಾಗಕ್ಕೆ ಜಾಕ್ಸನ್‌ವೈಲ್ಡ್ ಗರಿ

ಕುಂಬಾರ ಕಪ್ಪೆಯ ಬದುಕಿನ ಬಗ್ಗೆ ಬೆಂಗಳೂರಿನ ಪ್ರಶಾಂತ ಎಸ್‌. ನಾಯಕ ‘ಕಪ್ಪೆರಾಗ’ ಹೆಸರಿನ ಐದೂವರೆ ನಿಮಿಷದ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದಾರೆ. ಅಮೆರಿಕದಲ್ಲಿ ವನ್ಯಜೀವಿಗಳಿಗೆ ಸಂಬಂಧಿಸಿದ ಚಿತ್ರಗಳಿಗೆ ನೀಡುವ ಪ್ರತಿಷ್ಠಿತ ಜಾಕ್ಸನ್‌ವೈಲ್ಡ್ ಹಾಗೂ ಇಂಡಿಪೆಂಡೆಂಟ್ ಶಾರ್ಟ್ಸ್‌ ಅವಾರ್ಡ್‌ಗಳು ಈ ಕಿರುಚಿತ್ರಕ್ಕೆ ಲಭಿಸಿವೆ. ಚಿತ್ರ ನಿರ್ಮಾಣಕ್ಕೆ ಗಿರೀಶ ಜೆನ್ನಿ ನೆರವಾಗಿದ್ದಾರೆ. ಈ ಕಿರುಚಿತ್ರ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ, ಮೈಸೂರಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರಶಸ್ತಿ ಗೆದ್ದಿದೆ. ಸತತ ಆರು ವರ್ಷ ಈ ಕಿರುಚಿತ್ರದ ಚಿತ್ರೀಕರಣ ಆಗಿದೆ. ಸಾಕ್ಷ್ಯಚಿತ್ರಕ್ಕೆ ಕಥೆ ಪ್ರದೀಪ್ ಶಾಸ್ತ್ರಿ ಬರೆದಿದ್ದಾರೆ. ಅಶ್ವಿನ್ ಪಿ. ಕುಮಾರ್ ಸಂಗೀತ ನೀಡಿದ್ದಾರೆ.

‘ಕಪ್ಪೆಯ ನಡವಳಿಕೆ, ಆವಾಸಸ್ಥಾನ ಮತ್ತು ಜೀವನ ಚಕ್ರ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಿದವರು ಗಿರೀಶ. ಚಿಕ್ಕಗಾತ್ರದ ಕುಂಬಾರ ಕಪ್ಪೆಗಳು ಅಷ್ಟು ಸುಲಭವಾಗಿ ಮನುಷ್ಯರ ಕಣ್ಣಿಗೆ ಕಾಣಸಿಗುವುದಿಲ್ಲ. ಸುಲಭವಾಗಿ ಗುರುತು ಮರೆಮಾಚುತ್ತವೆ. ಆದರೂ ದಟ್ಟ ಕಾಡಿನಲ್ಲಿ ಸಣ್ಣ ತೊರೆಯ ಪಕ್ಕದಲ್ಲಿ ಕುಳಿತು, ಧಾರಾಕಾರ ಮಳೆ, ಜಿಗಣೆ ಕಾಟ, ವಿಷಪೂರಿತ ಹಾವುಗಳ ಅಪಾಯ ಎದುರಿಸಿ ಸಾಕ್ಷ್ಯಚಿತ್ರ ಪೂರ್ಣಗೊಳಿಸಲು ನಮಗೆ ಸಹಾಯ ಮಾಡಿದ್ದಾರೆ. ಅದು ಗಿರೀಶ ಅವರ ಬದ್ಧತೆ’ ಎಂದು ಪ್ರಶಾಂತ ನಾಯಕ ಹೇಳುತ್ತಾರೆ. ಗಿರೀಶ ಅವರ ಕೆಲಸವು ‘ವೈಲ್ಡ್ ಕರ್ನಾಟಕ’, ‘ಲಿಟಲ್ ಪ್ಲಾನೆಟ್’ ಮತ್ತು ‘ದಿ ಲಾಸ್ಟ್ ಹೋಪ್’ ಸಾಕ್ಷ್ಯಚಿತ್ರ ತಯಾರಕರಿಗೂ ನೆರವಾಗಿದೆ.

ಗಿರೀಶ ಜೆನ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.