ADVERTISEMENT

ನೀಳಕತ್ತಿನ ಸುಂದರ ಹಕ್ಕಿ ‘ಆ್ಯನ್‌ಹಿಂಗ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 19:46 IST
Last Updated 26 ಸೆಪ್ಟೆಂಬರ್ 2019, 19:46 IST
ಆ್ಯನ್‌ಹಿಂಗ
ಆ್ಯನ್‌ಹಿಂಗ   

ನೆಲವಾಸಿ ಹಕ್ಕಿಗಳಿಗೆ ಹೋಲಿಸಿದರೆ, ಜಲವಾಸಿ ಹಕ್ಕಿಗಳ ಜೀವನಕ್ರಮ ಭಿನ್ನವಾಗಿರುತ್ತದೆ. ಈ ಅಪರೂಪದ ಹಕ್ಕಿ ಮಾತ್ರ ಎರಡೂ ಪ್ರದೇಶಗಳಲ್ಲಿ ವಾಸಿಸುವ ಸಾಮರ್ಥ್ಯ ಹೊಂದಿದೆ. ಡಾರ್ಟರ್‌ ಹಕ್ಕಿಗಳ ಗುಂಪಿಗೆ ಸೇರಿದ ಇದರ ಹೆಸರು ಆ್ಯನ್‌ಹಿಂಗ (Anhinga). ಇಂದಿನ ಪಕ್ಷಿ ಪ್ರಪಂಚದಲ್ಲಿ ಈ ಅಪರೂಪದ ಹಕ್ಕಿಯ ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಆ್ಯನ್‌ಹಿಂಗಆ್ಯನ್‌ಹಿಂಗ (Anhinga anhinga). ಇದು ಆ್ಯನ್‌ಹಿಂಗಿಡೇ (Anhingidae) ಕುಟುಂಬಕ್ಕೆ ಸೇರಿದ್ದು, ಸುಲಿಫಾರ್ಮ್ಸ್‌ (Suliformes) ಹಕ್ಕಿಗಳ ಗುಂಪಿನಲ್ಲಿ ವರ್ಗೀಕರಿಸಲಾಗಿದೆ. ಬ್ರೆಜಿಲ್‌ನಲ್ಲಿ ಇದನ್ನು ದೆವ್ವದ ಹಕ್ಕಿ, ಹಾವಿನ ಹಕ್ಕಿ ಎಂದು ಕರೆಯುತ್ತಾರೆ.

ಗಾತ್ರ ಮತ್ತು ಜೀವಿತಾವಧಿ

ADVERTISEMENT

ದೇಹದ ತೂಕ- 1 ರಿಂದ1.3 ಕೆ.ಜಿ ,ದೇಹದ ಉದ್ದ- 75 ರಿಂದ 95 ಸೆಂ.ಮೀ,ರೆಕ್ಕೆಗಳ ಅಗಲ - 3 ರಿಂದ 4 ಅಡಿ,ಸರಾಸರಿ ಜೀವಿತಾವಧಿ - 12 ವರ್ಷ

ಹೇಗಿರುತ್ತದೆ?

ಕಪ್ಪು ಬಣ್ಣದ ನಯವಾದ ಪುಕ್ಕ ದೇಹವನ್ನು ಆವರಿಸಿರುತ್ತದೆ. ರೆಕ್ಕೆಗಳು ಕಪ್ಪು ಮತ್ತು ಬಿಳಿ ಬಣ್ಣದಲ್ಲಿರುತ್ತವೆ. ಕತ್ತು ನೀಳವಾಗಿದ್ದು, ಹಾವಿನಂತೆ ತಿರುಗಿಸಲು ಸಾಧ್ಯವಾಗುವಂತೆ ರಚನೆಯಗಿದೆ. ಕತ್ತಿನ ಭಾಗದಲ್ಲಿ ನೀಳವಾದ ಪುಕ್ಕ ಬೆಳೆದಿರುತ್ತದೆ. ಬಾಲದ ರೆಕ್ಕೆ ಕಪ್ಪು, ಬಿಳಿ ಬಣ್ಣದಲ್ಲಿದ್ದು, ಅಗಲವಾಗಿ ಹರಡಿಕೊಂಡಿರುತ್ತದೆ. ಕಾಲುಗಳು ಪುಟ್ಟದಾಗಿದ್ದು, ಹಳದಿ ಬಣ್ಣದಲ್ಲಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಸುತ್ತಲೂ ನೀಲಿ ಬಣ್ಣದ ವಲಯ ಇರುತ್ತದೆ. ದೃಢವಾದ ಕೊಕ್ಕು ನೀಳವಾಗಿದ್ದು, ಹಳದಿ ಮತ್ತು ಬೂದು ಮಿಶ್ರಿತಿ ಬಣ್ಣದಲ್ಲಿರುತ್ತದೆ.

ಎಲ್ಲಿದೆ?

ದಕ್ಷಿಣ ಅಮೆರಿಕ ಖಂಡ, ಮಧ್ಯ ಅಮೆರಿಕ ರಾಷ್ಟ್ರಗಳು ಮತ್ತು ಅಮೆರಿಕದ ದೇಶದ ದಕ್ಷಿಣ ಭಾಗದ ಕೆಲವು ಭೂಪ್ರದೇಶಗಳಲ್ಲಿ ಈ ಹಕ್ಕಿಯ ಸಂತತಿ ವಿಸ್ತರಿಸಿದೆ. ದಟ್ಟವಾಗಿ ಮರಗಳು ಬೆಳೆದಿರುವ ಉಷ್ಣವಲಯ ಕಾಡುಗಳು, ಅರೆಉಷ್ಣವಲಯ ಕಾಡುಗಳು, ಶುದ್ಧನೀರಿನ ಪ್ರದೇಶಗಳು, ಕರಾವಳಿ ಪ್ರದೇಶಗಳು, ಕೊಳದ ತೀರಗಳು, ಜೌಗು ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಒಂಟಿಯಾಗಿ ಜೀವಿಸಲು ಇಷ್ಟಪಡುವ ಹಕ್ಕಿ. ಹಗಲಿನಲ್ಲಿ ಮಾತ್ರ ಹೆಚ್ಚು ಚುರುಕಾಗಿರುತ್ತದೆ. ಬಾತುಕೋಳಿಗಳು, ಕೊಕ್ಕರೆಗಳಂತಹ ಜಲವಾಸಿ ಹಕ್ಕಿಗಳ ಜೊತೆಗೂ ಬೆರೆಯುವ ಗುಣ ಹೊಂದಿದೆ. ಇತರೆ ಹಕ್ಕಿಗಳು ನಿರ್ಮಿಸಿ ಬಿಟ್ಟುಹೋಗಿರುವ ಗೂಡುಗಳನ್ನೇ ನವೀಕರಿಸಿಕೊಂಡು ಇದು ವಾಸಿಸುತ್ತದೆ. ಪ್ರತಿ ಹಕ್ಕಿ ನಿರ್ದಿಷ್ಟ ಗಡಿ ಗುರುತಿಸಿಕೊಂಡಿರುತ್ತದೆ. ಒಂದರ ಗಡಿಯೊಳಗೆ ಮತ್ತೊಂದು ಪ್ರವೇಶಿಸಿದರೆ ಹೆಚ್ಚು ಆಕ್ರಮಣಕಾರಿ ಸ್ವಭಾವ ತೋರುತ್ತದೆ.

ನೀರಿನಲ್ಲಿದ್ದರೆ, ಮೀನುಗಳನ್ನು ಬೇಟೆಯಾಡುವುದರಲ್ಲೇ ಮಗ್ನವಾಗಿರುತ್ತದೆ. ನೆಲದ ಮೇಲೆ ಇದ್ದಾಗ ಮರಗಳ ಮೇಲೆ ಕುಳಿತು ಆಹಾರ ಹುಡುಕುತ್ತಿರುತ್ತದೆ. ಇದರ ರೆಕ್ಕೆಗಳು ಮತ್ತು ಪುಕ್ಕ ಜಲನಿರೋಧಕ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಹೀಗಾಗಿ ಇದು, ಸೂರ್ಯನ ಬಿಸಿಲಿಗೆ ಮೈಯೊಡ್ಡಿ ರೆಕ್ಕೆಗಳನ್ನು ಅಗಲಿಸಿ ದೇಹದ ಮೇಲಿರುವ ನೀರು ಆವಿಯಾಗುವಂತೆ ಮಾಡುತ್ತದೆ. ಸಾಕಾಗುವಷ್ಟು ಆಹಾರ ದೊರತರೆ ಒಂದೆಡೆ ಜಡವಾಗಿ ಕುಳಿತು ವಿಶ್ರಾಂತಿ ಪಡೆಯುತ್ತದೆ.

ಆಹಾರ

ಇದು ಸಂಪೂರ್ಣ ಮಾಂಸಾಹಾರಿ ಹಕ್ಕಿ. ವಿವಿಧ ಬಗೆಯ ಮೀನುಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತದೆ. ಉಭಯವಾಸಿ ಜೀವಿಗಳು, ಪುಟ್ಟ ಸಸ್ತನಿಗಳು, ಸರೀಸೃಪಗಳು, ವಿವಿಧ ಬಗೆಯ ಕೀಟಗಳನ್ನು ಭಕ್ಷಿಸುತ್ತದೆ.

ಸಂತಾನೋತ್ಪತ್ತಿ

ವಯಸ್ಕ ಹಂತ ತಲುಪಿದ ನಂತರ ಗಂಡು ಆ್ಯನ್‌ಹಿಂಗ ಸೂಕ್ತ ಹೆಣ್ಣು ಆ್ಯನ್‌ಹಿಂಗದೊಂದಿಗೆ ಜೊತೆಯಾಗುತ್ತದೆ. ಜೀವಿತಾವಧಿಯವರೆಗೂ ಒಂದೇ ಹಕ್ಕಿಯೊಂದಿಗೆ ಕೂಡಿ ಬಾಳುತ್ತದೆ. ರೆಕ್ಕೆಗಳನ್ನು ಅಗಲಿಸುವ ಮೂಲಕ ಮತ್ತು ವಿವಿಧ ಬಗೆಯ ಶಬ್ದಗಳನ್ನು ಹೊರಡಿಸುವ ಮೂಲಕ ಇದು ಸಂವಹನ ನಡೆಸುತ್ತದೆ.

ವಾಸಿಸುವ ಪ್ರದೇಶ ಮತ್ತು ವಾತಾವರಣಕ್ಕೆ ಅನುಗುಣವಾಗಿ ಇವು ಸಂತಾನೋತ್ಪತ್ತಿ ನಡೆಸುತ್ತವೆ. ಎರಡೂ ಹಕ್ಕಿಗಳು ಸೇರಿ ಗೂಡನ್ನು ಪ್ರತಿ ವರ್ಷ ನವೀಕರಿಸಿಕೊಳ್ಳುತ್ತವೆ. ಹೆಣ್ಣು 2–5 ಮೊಟ್ಟೆಗಳನ್ನು ಇಟ್ಟರೆ, ಎರಡೂ ಹಕ್ಕಿಗಳು ಸಮಾನವಾಗಿ ಮೊಟ್ಟೆಗಳಿಗೆ ಕಾವು ಕೊಡುತ್ತವೆ. ಮೊಟ್ಟೆಯಿಂದ ಮರಿಗಳಿಗೆ ಪುಕ್ಕ ಇರುವುದಿಲ್ಲ. ಹೀಗಾಗಿ ಪೋಷಕ ಹಕ್ಕಿಗಳು ವಿಶೇಷ ಕಾಳಜಿ ವಹಿಸಿ ಸಾಕುತ್ತವೆ. ಮೂರುವಾರಗಳ ವರೆಗೆ ಆಹಾರ ಉಣಿಸಿ ಬೆಳೆಸುತ್ತವೆ. ಆರು ವಾರಗಳ ನಂತರ ಮರಿಗಳಿಗೆ ಪುಕ್ಕ ಮೂಡುತ್ತದೆ. ಪುಕ್ಕ ಮೂಡಿದರೂ ಕೆಲವು ವಾರಗಳ ವರೆಗೆ ಪೋಷಕ ಹಕ್ಕಿಗಳ ಜತೆಯಲ್ಲೇ ಇರುತ್ತವೆ. ಎರಡು ವರ್ಷದ ನಂತರ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ನೀರಿನಲ್ಲಿ ಮೀನಿನಂತೆ ವೇಗವಾಗಿ ಈಜುವ ಮತ್ತು ಗಾಳಿಯಲ್ಲಿ ಹದ್ದುಗಳಂತೆ ವೇಗವಾಗಿ ಹಾರುವ ಸಾಮರ್ಥ್ಯ ಇದಕ್ಕಿದೆ.

* ಇತರೆ ಪ್ರಾಣಿಗಳಿಂದ ಎದುರಾದರೆ ಮರಿಗಳಿರುವ ಗೂಡನ್ನು ನೀರಿನ ಮೇಲೆ ಎಸೆಯುತ್ತವೆ. ಅಲ್ಲಿಂದ ಮತ್ತೆ ಗೂಡನ್ನು ಮರಗಳ ಮೇಲೆ ಇಡುತ್ತವೆ.

* ಹೆಣ್ಣು ಮತ್ತು ಗಂಡು ಆ್ಯನ್‌ಹಿಂಗಗಳ ದೇಹರಚನೆ ಭಿನ್ನವಾಗಿದ್ದು, ಗುರುತಿಸುವುದು ಸುಲಭ.

* ರೆಕ್ಕೆಗಳು ಹೆಚ್ಚು ಅಲುಗಾಡಿಸದಂತೆ ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯ ಇದಕ್ಕಿದೆ.

* ಗಂಡು ಹಕ್ಕಿಯ ಕೊಕ್ಕು ಕಪ್ಪು ಬಣ್ಣದಲ್ಲಿದ್ದರೆ, ಹೆಣ್ಣು ಹಕ್ಕಿಯ ಕೊಕ್ಕು ಕಂದು ಬಣ್ಣದಲ್ಲಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.