ADVERTISEMENT

ಕಪ್ಪತ್ತಗುಡ್ಡ ಪ್ರಾಣಿಗಳ ಸುಖೀ ‘ಅಡ್ಡ’

ಸತೀಶ ಬೆಳ್ಳಕ್ಕಿ
Published 29 ಜುಲೈ 2023, 23:30 IST
Last Updated 29 ಜುಲೈ 2023, 23:30 IST
ಕಪ್ಪತ್ತಗುಡ್ಡ
ಕಪ್ಪತ್ತಗುಡ್ಡ   

ಇದೇ ಮೊದಲ ಬಾರಿಗೆ ಕಪ್ಪತ್ತಗುಡ್ಡದಲ್ಲಿ ಚಿಂಕಾರಗಳು ಪತ್ತೆಯಾಗಿವೆ. ರಸ್ಟಿ ಸ್ಪಾಟೆಡ್‌ ಕ್ಯಾಟ್‌ ಹಾಗೂ ಮೂರು ಜಾತಿಯ ಹುಲ್ಲೆಗಳೂ ಕಂಡಿವೆ. ಹೈನಾಗಳ ಸಂಖ್ಯೆ ಹೆಚ್ಚಾಗಿರುವುದು ಕಾಡು ಶುದ್ಧವಾಗಿರುವುದರ ಸಂಕೇತ. ಜೀವವೈವಿಧ್ಯ ಎಷ್ಟು ಹೆಚ್ಚಾಗಿದೆ ಎನ್ನುವ ಬಗೆಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ.

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಿಸಿದ ನಂತರ ಕಪ್ಪತ್ತಗಿರಿಯ ಸೊಗಸಿಗೆ ಮತ್ತಷ್ಟು ರಮ್ಯತೆ ಮೂಡಿದೆ. ಕುರುಚಲು ಕಾಡಿನ ಸೊಬಗು ದಿನೇ ದಿನೇ ದಟ್ಟವಾಗುತ್ತಿದೆ. ಖನಿಜ ನಿಕ್ಷೇಪಗಳು ಸುರಕ್ಷಿತಗೊಂಡಿವೆ. ಔಷಧೀಯ ಗುಣವುಳ್ಳ ಸಸ್ಯ ಸಂಪತ್ತು ವೃದ್ಧಿಸಿ, ಕನ್ನಡ ನಾಡಿನ ಜೀವನಾಡಿ ಎನಿಸಿದೆ. ಈ ಹಸಿರು ಸರಪಳಿಯ ಜತೆಗೆ ಇಲ್ಲೀಗ ವನ್ಯಜೀವಿಗಳ ಸಂತತಿಯೂ ಹೆಚ್ಚಾಗಿರುವುದು ಗಮನಾರ್ಹ ವಿಷಯ.

ಗದಗ ತಾಲ್ಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರಿನವರೆಗೆ ಕಪ್ಪತ್ತಗುಡ್ಡ ಚಾಚಿಕೊಂಡಿದೆ. ಶಿರಹಟ್ಟಿ ಸೇರಿ ಮೂರು ತಾಲ್ಲೂಕುಗಳಲ್ಲಿ 65 ಕಿ.ಮೀಗಳಷ್ಟು ಉದ್ದಕ್ಕೆ ಕವಲು ಕವಲಾಗಿ ಸಣ್ಣ ಮತ್ತು ದೊಡ್ಡ ಗುಡ್ಡಗಳ ಸಾಲುಗಳಿಂದ ಕಂಗೊಳಿಸುವ ಕಪ್ಪತ್ತಗುಡ್ಡದಲ್ಲಿ ಈಗ ಕಾಡುಪ್ರಾಣಿಗಳ ಸಂಖ್ಯೆ ವೃದ್ಧಿಸಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ. ಈ ಸಂಗತಿ ಪರಿಸರಪ್ರಿಯರಿಗೆ ಸಂತಸ ತರಿಸಿದೆ.

ADVERTISEMENT

ಕಪ್ಪತ್ತಗುಡ್ಡದಲ್ಲಿ ಜೀವವೈವಿಧ್ಯ ಹೆಚ್ಚಾಗಿದೆ. ಆದರೆ, ಇಲ್ಲಿ ಎಷ್ಟು ಮಾಂಸಾಹಾರಿ ಪ್ರಾಣಿಗಳಿವೆ, ಸಸ್ಯಾಹಾರಿಗಳು ಎಷ್ಟಿವೆ, ಅವು ಏನನ್ನು ಭಕ್ಷಿಸುತ್ತವೆ, ಕಾಡಿನ ಯಾವ ಭಾಗದಲ್ಲಿ ಹೆಚ್ಚಿನ ಪ್ರಾಣಿಗಳಿವೆ, ಕಡಿಮೆ ಇರುವ ಜಾಗದಲ್ಲಿ ಪ್ರಾಣಿಗಳ ಸಂತತಿ ಹೆಚ್ಚಿಸಲು ಏನು ಕ್ರಮವಹಿಸಬೇಕು ಎಂಬೆಲ್ಲಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳು ನಡೆದಿರಲಿಲ್ಲ.

ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿ ಆಶ್ರಯ ಪಡೆದಿರುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ನೆಲೆ ಕಂಡುಹಿಡಿಯಲಿಕ್ಕೆ ಗದಗ ಜಿಲ್ಲಾ ಡಿಸಿಎಫ್‌ ದೀಪಿಕಾ ಬಾಜಪೇಯಿ ವಿಶೇಷ ಆಸ್ಥೆ ವಹಿಸಿ ಪ್ರಾಥಮಿಕ ಸಮೀಕ್ಷೆ ನಡೆಸಿದ್ದಾರೆ. ಇದರಿಂದ ದೊರೆತ ಫಲಿತಾಂಶ ಅಚ್ಚರಿಯಿಂದ ಕೂಡಿದ್ದು, ಎಲ್ಲರಲ್ಲೂ ಖುಷಿ ತರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿದ ಮಾಹಿತಿ ವಿಶ್ಲೇಷಣೆಗೆ ಒಳಪಡಲಿದ್ದು, ಕಪ್ಪತ್ತಗುಡ್ಡದಲ್ಲಿ ಯಾವ ಪ್ರಾಣಿಗಳು ಎಷ್ಟು ಸಂಖ್ಯೆಯಲ್ಲಿವೆ ಎಂಬ ನಿಖರ ಮಾಹಿತಿ ಮುಂದೆ ಸಿಗಲಿದೆ.

ಡೆಹರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯಲ್ಲಿ ವಿಜ್ಞಾನಿಯಾಗಿರುವ ಡಾ. ಸಾಲ್ವಡಾರ್‌ ಲಿಂಗ್ಡೊಹ್‌ ಕಳೆದ ವರ್ಷ ಎರಡು ಬಾರಿ ಕಪ್ಪತ್ತಗುಡ್ಡಕ್ಕೆ ಭೇಟಿ ನೀಡಿದ್ದರು. ಇವರು ತೋಳಗಳ ಅಧ್ಯಯನದಲ್ಲಿ ವಿಶೇಷ ಪರಿಣತಿ ಸಾಧಿಸಿದ್ದಾರೆ. ಗದಗ ಅರಣ್ಯ ಇಲಾಖೆ ಡಿಸಿಎಫ್‌ ದೀಪಿಕಾ ಬಾಜಪೇಯಿ ಇವರ ಜತೆಗೆ ಚರ್ಚಿಸಿ ಕಪ್ಪತ್ತಗುಡ್ಡದಲ್ಲಿರುವ ವನ್ಯಜೀವಿಗಳ ಕುರಿತಾಗಿ ವೈಜ್ಞಾನಿಕ ಸಮೀಕ್ಷೆ ನಡೆಸುವ ಯೋಜನೆ ರೂಪಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಅದಕ್ಕೆ ಅನುಮತಿ ಸಿಕ್ಕ ನಂತರ ಗದಗ ಅರಣ್ಯ ಇಲಾಖೆಯು ಭಾರತೀಯ ವನ್ಯಜೀವಿ ಸಂಸ್ಥೆ, ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಯ ನೆರವಿನಿಂದ ಪ್ರಾಥಮಿಕ ಅಧ್ಯಯನ ನಡೆಸಿದೆ.

ಅಧ್ಯಯನ ಆರಂಭಿಸುವುದಕ್ಕೂ ಮುನ್ನ ಇಲಾಖೆಯಲ್ಲಿ ಚುರುಕುತನದಿಂದ ಗುರುತಿಸಿಕೊಂಡಿದ್ದ ಆರ್‌ಎಫ್‌ಒಗಳಾದ ಸುಮಾ ಹಳೆಹೊಳಿ, ಮಹೇಶ ಮರೇಣ್ಣವರ ಹಾಗೂ ಡಿಆರ್‌ಎಫ್‌ಒ ಸೋಮನಗೌಡ ಪಾಟೀಲ ಅವರನ್ನು ತರಬೇತಿ ಪಡೆಯಲು ಡೆಹರಾಡೂನ್‌ಗೆ ಕಳುಹಿಸಲಾಗಿತ್ತು. ಅಲ್ಲಿ ಅವರು ಮೂರು ತಿಂಗಳ ಕಾಲ ಇಂಟೆನ್ಸಿವ್‌ ವೈಲ್ಡ್‌ಲೈಫ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಪೂರ್ಣಗೊಳಿಸಿ, ವಿಶೇಷ ಕೌಶಲ ಪಡೆದುಕೊಂಡರು. ಡೆಹರಾಡೂನ್‌ನಲ್ಲಿ ತರಬೇತಿ ಪಡೆದಿದ್ದ ಸಿಬ್ಬಂದಿ ನೇತೃತ್ವದಲ್ಲಿ ಸ್ಥಳೀಯವಾಗಿ ಹಲವರಿಗೆ ತರಬೇತಿ ಕೊಡಿಸಿ ಒಂದೂವರೆ ತಿಂಗಳ ಕಾಲ ಸಮೀಕ್ಷೆ ನಡೆಸಲಾಗಿದೆ. ಇವರೆಲ್ಲರೂ ಮೇ 7ರಿಂದ ಜುಲೈ 15ರವರೆಗೆ ಕಪ್ಪತ್ತಗುಡ್ಡ ವನ್ಯಜೀವಿಧಾಮದಲ್ಲಿರುವ ಸಸ್ಯಾಹಾರಿ ಹಾಗೂ ಪ್ರಾಣಿಭಕ್ಷಕ ಪ್ರಾಣಿಗಳ ಸಂಖ್ಯೆಯ ಬಗ್ಗೆ, ಅವುಗಳ ಆಹಾರ ಪದ್ಧತಿ ಬಗ್ಗೆ ಪ್ರಾಥಮಿಕ ಅಧ್ಯಯನ ನಡೆಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮೆರಾ ಟ್ರ್ಯಾಪ್‌ ವಿಧಾನ ಅನುಸರಿಸುವುದಕ್ಕೂ ಮುನ್ನ ಎರಡು ಬಗೆಯಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿದ್ದರು. ಸೈನ್‌ ಸರ್ವೆ ವಿಧಾನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿನಿತ್ಯ ಮೂರರಿಂದ ಹತ್ತು ಕಿ.ಮೀ.ವರೆಗೆ ಉದ್ದಕ್ಕೆ ನಡೆಯುತ್ತಿದ್ದರು. ಹೀಗೆ ನಡೆಯುತ್ತಿರುವಾಗ ತಮ್ಮ ಎಡ ಹಾಗೂ ಬಲಭಾಗದಲ್ಲಿ ಯಾವುದಾದರೂ ಪ್ರಾಣಿಗಳು ಪತ್ರ್ಯಕ್ಷವಾಗಿ ಕಾಣಿಸಿದರೆ ಗುರುತು ಮಾಡಿಕೊಳ್ಳುತ್ತಿದ್ದರು. ಅದರ ಜತೆಗೆ ಪ್ರಾಣಿಗಳ ಮಲ ಅಥವಾ ನೆಲದಲ್ಲಿ, ಗಿಡಗಳಲ್ಲಿ ಪ್ರಾಣಿಗಳು ಪರಚಿತ ಗುರುತುಗಳು ಕಂಡುಬಂದರೆ ಜಿಪಿಎಸ್‌ ರೀಡಿಂಗ್‌ ಮೂಲಕವೇ ದಾಖಲಿಸುತ್ತ ಬಂದರು. ಸೈನ್‌ ಸರ್ವೆ ವಿಧಾನದಲ್ಲಿ ಸಂಗ್ರಹಿಸಿದ ಮಾಂಸಾಹಾರಿ ಪ್ರಾಣಿಗಳ ಮಲವನ್ನು ಸದ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರಿಂದ ಅವುಗಳ ಆಹಾರ ಪದ್ಧತಿ ತಿಳಿದು ಬರಲಿದೆ. ಅಂದರೆ, ಕಪ್ಪತ್ತಗುಡ್ಡದಲ್ಲಿರುವ ಮಾಂಸಾಹಾರಿ ಪ್ರಾಣಿಗಳು ಕಾಡುಪ್ರಾಣಿಗಳನ್ನು ಭಕ್ಷಿಸುತ್ತಿವೆಯೇ ಅಥವಾ ಹಸು, ಕುರಿಗಳನ್ನು ಕೊಂದು ತಿನ್ನುತ್ತಿವೆಯೇ ಎಂಬುದಕ್ಕೆ ಉತ್ತರ ಸಿಗಲಿದೆ.

ಲೈನ್‌ ಟ್ರಾನ್ಸಕ್ಟ್‌ ವಿಧಾನದಲ್ಲಿ ಸಸ್ಯಾಹಾರಿ ಪ್ರಾಣಿಗಳ ಹಿಕ್ಕೆಗಳನ್ನು ವೀಕ್ಷಣೆ ಮಾಡಲಾಗಿದೆ. ಜತೆಗೆ ಈ ಮಾರ್ಗದಲ್ಲಿ ಕಂಡುಬರುವ ಪ್ರತಿಯೊಂದು ಗಿಡ–ಮರದ ಜಾತಿಯನ್ನು ಕೂಡ ಪಟ್ಟಿ ಮಾಡಲಾಗಿದೆ.

ಈ ಎರಡು ವಿಧಾನಗಳ ಸರ್ವೆ ಬಳಿಕ ಕ್ಯಾಮೆರಾ ಟ್ರ್ಯಾಪ್‌ ಮಾಡಲಾಗಿದೆ. ಸೈನ್‌ ಸರ್ವೆ ಸಂದರ್ಭದಲ್ಲಿ ಯಾವೆಲ್ಲ ಜಾಗಗಳಲ್ಲಿ ಪ್ರಾಣಿಗಳ ಹೆಜ್ಜೆಗುರುತು, ಪರಚಿದ ಗುರುತುಗಳು ಕಂಡುಬಂದಿದ್ದವೋ ಅಲ್ಲಿಗೆ ಕ್ಯಾಮೆರಾಗಳನ್ನು ಅಳವಡಿಸಿ, 30 ದಿನಗಳ ಕಾಲ ಸತತವಾಗಿ ವೀಕ್ಷಣೆ ಮಾಡಿದ್ದಾರೆ. ಕ್ಯಾಮೆರಾ ಟ್ರ್ಯಾಪ್‌ ಸರ್ವೆಗೆ ಅರಣ್ಯ ಇಲಾಖೆ ಸಿಬ್ಬಂದಿ 98 ಕ್ಯಾಮೆರಾಗಳನ್ನು ಬಳಕೆ ಮಾಡಿದ್ದರು. ಒಂದು ಕ್ಯಾಮೆರಾ ಪಾಯಿಂಟ್‌ನಿಂದ ಮತ್ತೊಂದು ಪಾಯಿಂಟ್‌ಗೆ ಕನಿಷ್ಠ ಒಂದೂವರೆ ಕಿ.ಮೀ. ಅಂತರ ಕಾಯ್ದುಕೊಂಡಿದ್ದರು. ಪ್ರತಿ 10 ದಿನಗಳಿಗೊಮ್ಮೆ ಕ್ಯಾಮೆರಾದಲ್ಲಿ ಸೆರೆಸಿಕ್ಕ ಚಿತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡು, ಬೇರೆ ಮೆಮೊರಿ ಕಾರ್ಡ್‌ ಅಳವಡಿಸುತ್ತಿದ್ದರು.

ಕಪ್ಪತ್ತಗುಡ್ಡದಲ್ಲಿರುವ ಸೂಜಿ ಮಡ್ಡಿ, ಕೆಂಪ ಗುಡ್ಡ, ಗಾಳಿಗುಂಡಿ, ಎತ್ತಿನ ಗುಡ್ಡ, ಆನೆ ಸೊಂಡಿಲು, ಉಪ್ಪಿನ ಪಡಿ, ಮಂಜಿನ ದೋಣಿ, ಮಜ್ಜಿಗೆ ಬಸವಣ್ಣ ಗುಡ್ಡ ಸೇರಿದಂತೆ ಇತರೆ ಗುಡ್ಡಗಳಲ್ಲಿ ಕತ್ತೆಕಿರುಬ, ತೋಳ, ಚಿರತೆ, ನರಿ, ಗುಳ್ಳೆನರಿ, ರಸ್ಪಿ ಸ್ಟಾಟೆಡ್‌ ಕ್ಯಾಟ್‌, ಪುನುಗು ಬೆಕ್ಕು, ಚುಕ್ಕೆ ಜಿಂಕೆ, ಕೃಷ್ಣಮೃಗ ಕೊಂಡುಕುರಿ, ಮುಳ್ಳುಹಂದಿ, ಕಾಡುಹಂದಿ ಕಂಡುಬಂದಿವೆ. ಇದೇ ಮೊದಲ ಬಾರಿಗೆ ಕಪ್ಪತ್ತಗುಡ್ಡದಲ್ಲಿ ಚಿಂಕಾರಗಳು ಪತ್ತೆಯಾಗಿರುವುದು ವಿಶೇಷ. ಜತೆಗೆ ರಸ್ಟಿ ಸ್ಪಾಟೆಡ್‌ ಕ್ಯಾಟ್‌ ಹಾಗೂ ಮೂರು ಜಾತಿಯ ಹುಲ್ಲೆಗಳು ಕಂಡುಬಂದಿವೆ.

‘ಕಪ್ಪತ್ತಗುಡ್ಡದಲ್ಲಿ ಚಿಂಕಾರ ಇತ್ತು ಎಂಬುದು ಗೊತ್ತಿತ್ತು. ಆದರೆ, ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಗೋಚರಿಸಿರಲಿಲ್ಲ. ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಕಪ್ಪತ್ತಗುಡ್ಡದ ಬಹಳ ಜಾಗಗಳಲ್ಲಿ ಚಿಂಕಾರಗಳು ಸೆರೆಯಾಗಿವೆ’ ಎನ್ನುತ್ತಾರೆ ಗದಗ ಡಿಸಿಎಫ್‌ ದೀಪಿಕಾ ಬಾಜಪೇಯಿ.

‘ಪ್ರಾಥಮಿಕ ಅಧ್ಯಯನದಲ್ಲಿ ಸಿಕ್ಕ ಮಾಹಿತಿ ಆಧರಿಸಿ ಎಲ್ಲೆಲ್ಲಿ ಯಾವ ಪ್ರಾಣಿಗಳು ಇರಬಹುದು ಎಂದು ಮುಂದೆ ವಿಶ್ಲೇಷಣೆ ಮಾಡುತ್ತೇವೆ. ಹೈನಾಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಾಡು ಶುದ್ಧವಾಗಿರುವುದರ ಸಂಕೇತ. ಇವು ಸತ್ತಪ್ರಾಣಿಗಳನ್ನು ತಿಂದು, ಕಾಡಿನಲ್ಲಿ ರೋಗ ಹರಡದಂತೆ ನೋಡಿಕೊಳ್ಳುತ್ತವೆ’ ಎಂದು ಒಳ್ಳೆಯ ಸುದ್ದಿ ನೀಡಿದರು. 

ಕಪ್ಪತ್ತಗುಡ್ಡದಲ್ಲಿ ವನ್ಯಜೀವಿಗಳ ಸಂತತಿ ಇರುವಿಕೆ ಬಗ್ಗೆ ಆಗಾಗ ತಕರಾರು ತೆಗೆದು, ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಸಂಚು ರೂಪಿಸುತ್ತಿದ್ದ ಕೆಲವರ ಆಸೆಗೆ ಈ ವರದಿ ನಿರಾಸೆ ಮೂಡಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಏಕಜಾತಿಯ ನೆಡುತೋಪಿನ ಅಪಾಯ ಅರಿತು ಈ ಭಾಗದಲ್ಲಿ ನೈಸರ್ಗಿಕವಾಗಿ ಬೆಳೆಯುವ ಕ್ರಮವಹಿಸಬೇಕು. ಬೇಸಿಗೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್‌ ಕ್ಯಾಮೆರಾಗಳನ್ನು ಬಳಸುವ ಮೂಲಕ ಕಾಡಿಗೆ ಬೆಂಕಿ ಹಚ್ಚುವವರನ್ನು ಪತ್ತೆಹಚ್ಚಲು ಕ್ರಮವಹಿಸಬೇಕು ಎಂಬುದು ಪರಿಸರಪ್ರಿಯರ ಆಗ್ರಹವಾಗಿದೆ.

ಕಪ್ಪತ್ತಗುಡ್ಡದಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಆಗಿದ್ದರಿಂದ ಕಾಡಿನ ಪ್ರಮಾಣ ವೃದ್ಧಿಸಿದೆ. ಕಾಡು ಬೆಳೆಯುತ್ತಿರುವುದರಿಂದ ಪ್ರಾಣಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆಯವರು ಗುಡ್ಡದ ತಪ್ಪಲಿನಲ್ಲಿರುವ ಜನರ ಸಹಕಾರ ಪಡೆದು ಕಪ್ಪತ್ತಗುಡ್ಡವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾಳಜಿ ಮಾಡಬೇಕು ಎನ್ನುವುದು ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಅವರ ಒತ್ತಾಸೆಯಾಗಿದೆ.

ವನ್ಯಜೀವಿ, ಸಸ್ಯ ಸಂಪತ್ತು ವೃದ್ಧಿಸಲು ಕಾರಣವೇನು?

ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಣೆ ಮಾಡಿದ ನಂತರ ಮಾನವ ಹಸ್ತಕ್ಷೇಪ ತುಂಬ ಕಡಿಮೆ ಆಗಿದೆ. ಕಳ್ಳ ಬೇಟೆ ತಡೆಗೆ ಅರಣ್ಯ ಇಲಾಖೆ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಿ, ಗಸ್ತು ಬಿಗಿಗೊಳಿಸಿದೆ.

ಬೇಸಿಗೆ ಸಮಯದಲ್ಲಿ ವನ್ಯಜೀವಿಗಳು ಕುಡಿಯುವ ನೀರು ಅರಸಿ, ಜನವಸತಿಯ ಸನಿಹಕ್ಕೆ ಬರುತ್ತಿದ್ದವು. ಇದನ್ನು ತಪ್ಪಿಸಲು ಕಪ್ಪತ್ತಗುಡ್ಡದ ವಿವಿಧ ಭಾಗಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದೆ. ಬೇಸಿಗೆ ಕಾಲದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊಂಡಕ್ಕೆ ನೀರು ತುಂಬಿಸಿ, ಪ್ರಾಣಿಗಳ ದಾಹ ನೀಗಿಸುತ್ತಿದ್ದಾರೆ.

‘ಕಪ್ಪತ್ತಗುಡ್ಡ ವನ್ಯಜೀವಿಧಾಮ ಎಂದು ಘೋಷಣೆ ಆಗಿರುವುದರಿಂದ ಒಂದು ಪ್ರಾಜೆಕ್ಟ್‌ ಮಾಡಿಕೊಂಡು ವಿಶೇಷ ಅಧ್ಯಯನ ನಡೆಸಲಾಗುತ್ತಿದೆ. ಯಾವುದೇ ಜಾಗವನ್ನು ಸಂರಕ್ಷಿಸಿದರೆ ಅಲ್ಲಿ ಕಾಡು ಹೆಚ್ಚುತ್ತದೆ. ಪ್ರಾಣಿಗಳ ಸಂಖ್ಯೆಯೂ ವೃದ್ಧಿಸುತ್ತದೆ. ಆಹಾರ ಸರಪಳಿ ಬಿಗಿಗೊಂಡಂತೆ ಎಲ್ಲವೂ ಸಮೃದ್ಧಗೊಳ್ಳುತ್ತದೆ’ ಎಂದು ಸಿಸಿಎಫ್‌ ಯತೀಶ್‌ ಕುಮಾರ್‌ ಆಶಾವಾದದಿಂದ ಹೇಳುತ್ತಾರೆ.

‘ವನ್ಯಜೀವಿಧಾಮ ಆದ ನಂತರ ಕಪ್ಪತ್ತಗುಡ್ಡಕ್ಕೆ ವಿಶೇಷ ಮಹತ್ವ ಬಂದಿದೆ. ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಆಗುವ ಹಾನಿ ತಪ್ಪಿಸಲು ಬೆಂಕಿ ರೇಖೆಗಳನ್ನು ನಿರ್ಮಿಸಿ ವಿಶೇಷ ಗಮನ ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಕಾಡಿನಲ್ಲಿರುವ ಬಾಧೆ ಹುಲ್ಲು ಬೆಂಕಿಗೆ ಆಹುತಿ ಆಗುತ್ತದೆ. ಮಳೆಗಾಲದಲ್ಲಿ ಮತ್ತೇ ಹಸಿರು ನಳನಳಿಸುತ್ತದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ವನ್ಯಜೀವಿಗಳು ಸುರಕ್ಷಿತ ಸ್ಥಳಕ್ಕೆ ಓಡಿ ಹೋಗುತ್ತವೆ. ಹೀಗಾಗಿ ಬೆಂಕಿ ಆಕಸ್ಮಿಕದಲ್ಲಿ ಜೀವಹಾನಿ ಸಂಭವಿಸುವುದು ವಿರಳ. ವನ್ಯಜೀವಿಧಾಮ ಘೋಷಣೆಯ ನಂತರ ವನ್ಯಜೀವಿಗಳ ರಕ್ಷಣಗೆ ಸರ್ಕಾರದಿಂದ ವಿಶೇಷ ಅನುದಾನ ಸ್ವಲ್ಪ ಮಟ್ಟದಲ್ಲಿ ಸಿಗುತ್ತದೆ. ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಇದು ನೆರವಾಗಲಿದೆ’ ಎನ್ನುತ್ತಾರೆ ಡಿಸಿಎಫ್‌ ದೀಪಿಕಾ ಬಾಜಪೇಯಿ.

‘ಕಪ್ಪತ್ತಗುಡ್ಡ, ವನ್ಯಜೀವಿಗಳ ಸಂತತಿ ಪೊರೆಯಲು ಬೇಕಿರುವ ಅತ್ಯುತ್ತಮ ಶಕ್ತಿ ಹೊಂದಿದೆ. ಈಗ ನಡೆದಿರುವ ಪ್ರಾಥಮಿಕ ಅಧ್ಯಯನವು ನಿರಂತರ ಮೇಲ್ವಿಚಾರಣೆ ಮೂಲಕ ಭವಿಷ್ಯದ ಸಂರಕ್ಷಣೆ ಕಾರ್ಯಕ್ರಮಗಳನ್ನು ನಡೆಸಲು ಆಧಾರವಾಗಲಿದೆ’ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿ ಡಾ. ಸಾಲ್ವಡಾರ್‌ ಲಿಂಗ್ಡೊಹ್‌ ಹೇಳಿದ್ದು ಭವಿಷ್ಯದ ಕುರಿತ ಭರವಸೆಯ ಮಾತಿನಂತೆ ಇತ್ತು.

ಕಪ್ಪತ್ತಗುಡ್ಡ
ಕಪ್ಪತ್ತಗುಡ್ಡ
ಕಪ್ಪತ್ತಗುಡ್ಡ
ಶಿರಹಟ್ಟಿ ವ್ಯಾಪ್ತಿಯಲ್ಲಿ ಆವೃತ್ತವಾಗಿರುವ ಕಪ್ಪತ್ತಗುಡ್ಡದ ವಿಹಂಗಮ ದೃಶ್ಯ
ಶಿರಹಟ್ಟಿ ವ್ಯಾಪ್ತಿಯಲ್ಲಿ ಆವೃತ್ತವಾಗಿರುವ ಕಪ್ಪತ್ತಗುಡ್ಡದ ವಿಹಂಗಮ ದೃಶ್ಯ
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಚಿರತೆ
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಪ್ರಾಣಿಗಳು
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಪ್ರಾಣಿಗಳು
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಪ್ರಾಣಿಗಳು
ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕಿರುವ ಪ್ರಾಣಿಗಳು
ಕಪ್ಪತ್ತಗುಡ್ಡದಲ್ಲಿ ವನ್ಯಜೀವಿಗಳ ಅಧ್ಯಯನ ನಡೆಸಿದ ಅರಣ್ಯ ಇಲಾಖೆ ತಂಡ
ಕಪ್ಪತ್ತಗುಡ್ಡದಲ್ಲಿ ಪ್ರಾಣಿಗಳಿಗಾಗಿ ನಿರ್ಮಿಸಿರುವ ಕೃತಕ ಹೊಂಡ
ಚಿಂಕಾರ
ವನ್ಯಜೀವಿ ಸಸ್ಯ ಸಂಪತ್ತು ವೃದ್ಧಿಸಲು ಕಾರಣವೇನು?
ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಣೆ ಮಾಡಿದ ನಂತರ ಮಾನವ ಹಸ್ತಕ್ಷೇಪ ತುಂಬ ಕಡಿಮೆ ಆಗಿದೆ. ಕಳ್ಳ ಬೇಟೆ ತಡೆಗೆ ಅರಣ್ಯ ಇಲಾಖೆ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಿ ಗಸ್ತು ಬಿಗಿಗೊಳಿಸಿದೆ. ಬೇಸಿಗೆ ಸಮಯದಲ್ಲಿ ವನ್ಯಜೀವಿಗಳು ಕುಡಿಯುವ ನೀರು ಅರಸಿ ಜನವಸತಿಯ ಸನಿಹಕ್ಕೆ ಬರುತ್ತಿದ್ದವು. ಇದನ್ನು ತಪ್ಪಿಸಲು ಕಪ್ಪತ್ತಗುಡ್ಡದ ವಿವಿಧ ಭಾಗಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದೆ. ಬೇಸಿಗೆ ಕಾಲದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊಂಡಕ್ಕೆ ನೀರು ತುಂಬಿಸಿ ಪ್ರಾಣಿಗಳ ದಾಹ ನೀಗಿಸುತ್ತಿದ್ದಾರೆ. ‘ಕಪ್ಪತ್ತಗುಡ್ಡ ವನ್ಯಜೀವಿಧಾಮ ಎಂದು ಘೋಷಣೆ ಆಗಿರುವುದರಿಂದ ಒಂದು ಪ್ರಾಜೆಕ್ಟ್‌ ಮಾಡಿಕೊಂಡು ವಿಶೇಷ ಅಧ್ಯಯನ ನಡೆಸಲಾಗುತ್ತಿದೆ. ಯಾವುದೇ ಜಾಗವನ್ನು ಸಂರಕ್ಷಿಸಿದರೆ ಅಲ್ಲಿ ಕಾಡು ಹೆಚ್ಚುತ್ತದೆ. ಪ್ರಾಣಿಗಳ ಸಂಖ್ಯೆಯೂ ವೃದ್ಧಿಸುತ್ತದೆ. ಆಹಾರ ಸರಪಳಿ ಬಿಗಿಗೊಂಡಂತೆ ಎಲ್ಲವೂ ಸಮೃದ್ಧಗೊಳ್ಳುತ್ತದೆ’ ಎಂದು ಸಿಸಿಎಫ್‌ ಯತೀಶ್‌ ಕುಮಾರ್‌ ಆಶಾವಾದದಿಂದ ಹೇಳುತ್ತಾರೆ. ‘ವನ್ಯಜೀವಿಧಾಮ ಆದ ನಂತರ ಕಪ್ಪತ್ತಗುಡ್ಡಕ್ಕೆ ವಿಶೇಷ ಮಹತ್ವ ಬಂದಿದೆ. ಬೇಸಿಗೆಯಲ್ಲಿ ಕಾಡ್ಗಿಚ್ಚಿನಿಂದ ಆಗುವ ಹಾನಿ ತಪ್ಪಿಸಲು ಬೆಂಕಿ ರೇಖೆಗಳನ್ನು ನಿರ್ಮಿಸಿ ವಿಶೇಷ ಗಮನ ಹರಿಸಲಾಗುತ್ತಿದೆ. ಬೇಸಿಗೆಯಲ್ಲಿ ಕಾಡಿನಲ್ಲಿರುವ ಬಾಧೆ ಹುಲ್ಲು ಬೆಂಕಿಗೆ ಆಹುತಿ ಆಗುತ್ತದೆ. ಮಳೆಗಾಲದಲ್ಲಿ ಮತ್ತೇ ಹಸಿರು ನಳನಳಿಸುತ್ತದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ವನ್ಯಜೀವಿಗಳು ಸುರಕ್ಷಿತ ಸ್ಥಳಕ್ಕೆ ಓಡಿ ಹೋಗುತ್ತವೆ. ಹೀಗಾಗಿ ಬೆಂಕಿ ಆಕಸ್ಮಿಕದಲ್ಲಿ ಜೀವಹಾನಿ ಸಂಭವಿಸುವುದು ವಿರಳ. ವನ್ಯಜೀವಿಧಾಮ ಘೋಷಣೆಯ ನಂತರ ವನ್ಯಜೀವಿಗಳ ರಕ್ಷಣಗೆ ಸರ್ಕಾರದಿಂದ ವಿಶೇಷ ಅನುದಾನ ಸ್ವಲ್ಪ ಮಟ್ಟದಲ್ಲಿ ಸಿಗುತ್ತದೆ. ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಇದು ನೆರವಾಗಲಿದೆ’ ಎನ್ನುತ್ತಾರೆ ಡಿಸಿಎಫ್‌ ದೀಪಿಕಾ ಬಾಜಪೇಯಿ. ‘ಕಪ್ಪತ್ತಗುಡ್ಡ ವನ್ಯಜೀವಿಗಳ ಸಂತತಿ ಪೊರೆಯಲು ಬೇಕಿರುವ ಅತ್ಯುತ್ತಮ ಶಕ್ತಿ ಹೊಂದಿದೆ. ಈಗ ನಡೆದಿರುವ ಪ್ರಾಥಮಿಕ ಅಧ್ಯಯನವು ನಿರಂತರ ಮೇಲ್ವಿಚಾರಣೆ ಮೂಲಕ ಭವಿಷ್ಯದ ಸಂರಕ್ಷಣೆ ಕಾರ್ಯಕ್ರಮಗಳನ್ನು ನಡೆಸಲು ಆಧಾರವಾಗಲಿದೆ’ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿ ಡಾ. ಸಾಲ್ವಡಾರ್‌ ಲಿಂಗ್ಡೊಹ್‌ ಹೇಳಿದ್ದು ಭವಿಷ್ಯದ ಕುರಿತ ಭರವಸೆಯ ಮಾತಿನಂತೆ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.