ಹಳಕಾರ ಊರಿನ ಜನರ ಕಾಡಿನ ಪ್ರೀತಿ ಸ್ವಲ್ಪವೂ ಮುಕ್ಕಾಗಿಲ್ಲ. ತಲೆತಲಾಂತರಗಳಿಂದಲೂ ಅನನ್ಯ ಎನ್ನುವ ಕಾಳಜಿ ಮತ್ತು ಕಣ್ಗಾವಲು ಫಲವಾಗಿ ವಿಲೇಜ್ ಫಾರೆಸ್ಟ್‌ಗೆ ಇದೀಗ ನೂರು ವರ್ಷ. ಈ ಕಾಡಿನ ಕಥೆ ಇಲ್ಲಿದೆ.
ಹಳಕಾರ ಗ್ರಾಮದ ಮೀನುಗಾರ ಹನುಮಂತ ಗಣಪು ಹರಿಕಂತ್ರ ಹುಟ್ಟಿ ಬೆಳೆದ ಊರು ತೊರೆದು ಪಕ್ಕದೂರು ಕಡ್ಲೆಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅದೇ ಊರಿನ, ಮಂಗಲಾ ಹರಿಕಂತ್ರ, ಯಮುನಾ ಹರಿಕಂತ್ರ, ಇನ್ನೂ ಕೆಲವರು ಪಕ್ಕದ ಮದ್ಗುಣಿ ಗ್ರಾಮಕ್ಕೆ ಹೋಗಿ ಸರ್ಕಾರದ ಆಶ್ರಯ ಮನೆ ಪಡೆಯಲು ಜಾಗ ಖರೀದಿಸಿದ್ದಾರೆ. ಇವರೆಲ್ಲಾ ಊರು ತೊರೆಯಲು ಬಲವಾದ ಕಾರಣವಿದೆ, ಅದು ಕಾಡು! ವರ್ಷಗಳು ಕಳೆದಂತೆ ಪುಟ್ಟ ಊರಲ್ಲಿ ಜನಸಂಖ್ಯೆ ಅಧಿಕವಾಗುತ್ತಾ ಹೋಯಿತು. ಮನೆ ಕಟ್ಟಲು ಜಾಗದ ಅವಶ್ಯಕತೆಯೂ ಹೆಚ್ಚಾಯಿತು. ಅಲ್ಲಿ ಮನೆ ಕಟ್ಟಲು ಕಾಡು ಕಡಿಯಬೇಕು. ಇದು ಊರಿನ ಜನರಿಗೆ ಸ್ವಲ್ಪವೂ ಇಷ್ಟವಿಲ್ಲ. ಏಕೆಂದರೆ, ಇವರಿಗೆ ಬುದ್ಧಿ ತಿಳಿದಾಗಿನಿಂದಲೂ ನೋಡುತ್ತಾ ಬೆಳೆದ ಮರಗಳನ್ನು ಕತ್ತರಿಸಿ ನೆಲೆ ನಿಲ್ಲಲು ಮನಸ್ಸು ಒಪ್ಪಲೇ ಇಲ್ಲ. ಪ್ರತಿಯೊಂದು ಮರದ ಜೊತೆಗೂ ಈ ಊರಿನ ಜನರಿಗೆ ವೈಯಕ್ತಿಕ ಮತ್ತು ಭಾವನಾತ್ಮಕ ಸಂಬಂಧವಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಿಂದ ಕೇವಲ ಎರಡು ಕಿ.ಮೀ. ದೂರದಲ್ಲಿ ಹಳಕಾರ ಗ್ರಾಮವಿದೆ. ಇಲ್ಲಿ 219 ಎಕರೆ ಕಾಡಿದೆ. ಇದು ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’; ಅಂದರೆ ಊರಿನ ಕಾಡು ಎಂದರ್ಥ. ಇದರ ಮಾಲೀಕರು ಗ್ರಾಮಸ್ಥರೇ ಆಗಿದ್ದಾರೆ. ಅರಣ್ಯ ಇಲಾಖೆಗೆ ಈ ಕಾಡಿನ ಮೇಲೆ ಯಾವ ಹಕ್ಕೂ ಇಲ್ಲ! ಇದೇ ವರ್ಷ ಈ ‘ವಿಲೇಜ್ ಫಾರೆಸ್ಟ್’ ಗೆ ನೂರು ವರ್ಷ ತುಂಬುತ್ತಿದೆ.
ಹಲವು ದಶಕಗಳಿಂದಲೂ ಹಿರಿಯರು ತುಂಬಾ ಶ್ರದ್ಧೆಯಿಂದ ತಮ್ಮೂರಿನ ಕಾಡನ್ನು ಹೇಗೆ ಉಳಿಸಿಕೊಳ್ಳಬೇಕು, ಬೆಳೆಸಬೇಕು ಎನ್ನುವುದನ್ನು ಕಿರಿಯರಿಗೆ ಅಂತರ್ಗತ ಮಾಡಿಕೊಟ್ಟಿದ್ದಾರೆ. ಇದರ ಪರಿಣಾಮವೇ ಹನುಮಂತ, ಮಂಗಳಾ, ಯಮುನಾ, ಇನ್ನುಳಿದವರು ಅಕ್ಕಪಕ್ಕದ ಊರಿಗೆ ವಲಸೆ ಹೋಗಿರುವುದು.
‘ಅಘನಾಶಿನಿ ಹಿನ್ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ನಮ್ಮ ಕುಟುಂಬಕ್ಕೆ ಒಂದು ಮನೆಯಿರುವಷ್ಟು ಜಾಗ ಇತ್ತು. ಅಣ್ಣನ ಮದುವೆಯಾದ ನಂತರ ನಾನು ಭವಿಷ್ಯಕ್ಕಾಗಿ ಪಕ್ಕದ ಕಡ್ಲೆ ಗ್ರಾಮದಲ್ಲಿ ಜಾಗ ಖರೀದಿಸಿ ನೆಲೆ ನಿಂತೆ. ಮನೆ ಕಟ್ಟಲು ಜಾಗ ಇಲ್ಲದವರು ಬೇರೆ ಊರುಗಳಲ್ಲಿ ಕಾಡನ್ನು ಅತಿಕ್ರಮಿಸಿ ಗುಡಿಸಲು ಕಟ್ಟಿಕೊಂಡಿದ್ದಾರೆ. ಆದರೆ ಹಳಕಾರದಲ್ಲಿ ಕಾಡು ನಮ್ಮದು ಎನ್ನುವ ಭಾವನೆ ಹಿಂದಿನಿಂದಲೂ ಇದೆ. ಊರ ಕಾಡನ್ನು ಅತಿಕ್ರಮಿಸಿ ಮನೆ ಕಟ್ಟಿದರೆ ಕೆಲವೇ ವರ್ಷಗಳಲ್ಲಿ ಕಾಡು ಮಾಯವಾಗುತ್ತದೆ’ ಎನ್ನುತ್ತಾರೆ ಹನುಮಂತ ಗಣಪು ಹರಿಕಂತ್ರ.
ಹಳಕಾರದ ಸುಮಾರು 25 ಮೀನುಗಾರರ ಕುಟುಂಬಗಳು ‘ವಿಲೇಜ್ ಫಾರೆಸ್ಟ್’ ಉಳಿವಿಗಾಗಿಯೇ ಬೇರೆ ಊರಿಗೆ ಹೋಗಿ ಬದುಕು ಕಟ್ಟಿಕೊಂಡಿವೆ. ಹಿರಿಯರು ಪಾಲಿಸಿಕೊಂಡು ಬಂದ ಊರ ಕಾಡಿನ ನಿಯಮಗಳನ್ನು ಮುರಿಯಬಾರದು ಎಂದು ಅವರೆಲ್ಲ ಊರು ಬಿಟ್ಟು ಹೋಗಿರುವುದನ್ನು ಇಲ್ಲಿನ ಜನರು ನೋವು ಮತ್ತು ಹೆಮ್ಮೆಯಿಂದ ಹೇಳುತ್ತಾರೆ.
ಅಕ್ಕಪಕ್ಕದ ಊರುಗಳಲ್ಲಿ ನೆಲೆ ನಿಂತವರು ಬೆಳಗಾದರೆ ಒಮ್ಮೆಯಾದರೂ ತಮ್ಮ ಮೂಲ ಮನೆಗೆ ಬಂದು ಹೋಗಲೇಬೇಕು. ಅದು ಆಡಿ ಬೆಳೆದ ನೆಲೆದ ಸೆಳೆತ. ‘ರಸ್ತೆಗೆ ಚಾಚಿಕೊಂಡು ನಿಂತ, ನಮ್ಮ ಮನೆಯಿಂದಲೇ ಕಾಣುವ ವಿಲೇಜ್ ಫಾರೆಸ್ಟ್‌ನ ಸುರಗಿ, ಹಳಚರಿ, ಹೊನಗಲು, ಮತ್ತಿ, ಧೂಪ, ನೇರಲು ಮುಂತಾದ ಮರಗಳನ್ನು ನೋಡುವುದೇ ಖುಷಿ. ಊರಿನ ಯಾರೂ ಒಂದೇ ಒಂದು ಮರವನ್ನು ಕಡಿದ ನೆನೆಪು ಕೆದಕಿದರೂ ಸಿಗುವುದಿಲ್ಲ’ ಎಂದು ಹಳಕಾರ ವಿಲೇಜ್ ಫಾರೆಸ್ಟ್ ಉಪಾಧ್ಯಕ್ಷ ನಾಗಪ್ಪ ಹರಿಕಂತ್ರ ಭಾವುಕರಾಗುತ್ತಾರೆ.
ಹಿಂದೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿ ಎಲ್ಲಾ ‘ವಿಲೇಜ್ ಫಾರೆಸ್ಟ್’ಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂದಾಗ ಹಳಕಾರ ಪಕ್ಕದ ಚಿತ್ರಿಗಿ, ಹೊಲನಗದ್ದೆ, ಹೆಗಡೆ, ಮುಂತಾದ ವಿಲೇಜ್ ಫಾರೆಸ್ಟ್ ಸಮಿತಿಗಳು ಅರಣ್ಯ ಇಲಾಖೆಗೆ ದಾಖಲೆ ಒಪ್ಪಿಸಿಬಿಟ್ಟವು. ಕ್ರಮೇಣ ಅಲ್ಲಿದ್ದ ಕಾಡು ನಶಿಸಿದೆ. ಕೆಲ ಪ್ರದೇಶಗಳನ್ನು ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳ ಮೈದಾನ, ವಸತಿಗೃಹ ನಿರ್ಮಾಣದಂತಹ ಮುಂತಾದ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ.
‘ಸರ್ಕಾರಕ್ಕೆ ಹಸ್ತಾಂತರವಾದ ಬೇರೆ ಬೇರೆ ವಿಲೇಜ್ ಫಾರೆಸ್ಟ್‌ಗಳು ಅರಣ್ಯ ಇಲಾಖೆಯ ಆಸ್ತಿ ಎಂಬ ಕಾರಣಕ್ಕೆ ಅದರೊಟ್ಟಿಗೆ ಹಿಂದೆ ಇದ್ದ ಜನರ ಭಾವನಾತ್ಮಾಕ ಸಂಬಂಧ ಕಡಿದು ಹೋದಂತಾಗಿದೆ. ರಾತ್ರಿ ಅಲ್ಲಿ ಯಾರದರೂ ಬಂದು ಮರ ಕಡಿದರೂ ಅರಣ್ಯ ಇಲಾಖೆ ಅಧಿಕಾರಿಗಳೇ ಬಂದು ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಿಲೇಜ್ ಫಾರೆಸ್ಟ್ ಕಾರ್ಯದರ್ಶಿ ಶಾಂತಾರಾಂ ಹರಿಕಂತ್ರ ಬೇಸರಿಸುತ್ತಾರೆ.
ಸ್ಥಾಪನೆ ಹೇಗೆ?
1920 ರಲ್ಲಿ ಅಂದಿನ ಮುಂಬೈ ಪ್ರಾಂತ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಅನುಪಯುಕ್ತ ಅರಣ್ಯ ನಿರ್ವಹಣೆ ಕಷ್ಟಕರ ಎಂದು ಮನಗಂಡು ಅವುಗಳನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ನಿರ್ಧರಿಸಿತು. ಇದಕ್ಕಾಗಿ ವೈಜ್ಞಾನಿಕ ವರದಿ ನೀಡುವಂತೆ ಜಿ.ಎಸ್.ಎಫ್ ಕಾಲಿನ್ ಎನ್ನುವ ಬ್ರಿಟಿಷ್ ಅಧಿಕಾರಿಯೊಬ್ಬರನ್ನು ಫಾರೆಸ್ಟ್ ಸೆಟಲ್‌ಮೆಂಟ್ ಆಫೀಸರ್ ಎಂದು ನೇಮಕ ಮಾಡಿತು. ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ, ಅಂಕೋಲಾ ಹಾಗೂ ಹಳಿಯಾಳ ತಾಲ್ಲೂಕುಗಳ ಕಾಡನ್ನು ಅಲೆದ ಜಿ.ಎಸ್.ಎಫ್. ಕಾಲಿನ್ ಅವುಗಳನ್ನು ‘ವಿಲೇಜ್ ಫಾರೆಸ್ಟ್’ ಎಂದು ಗುರುತಿಸಿ ವರದಿ ನೀಡಿದರು. ಆ ವರದಿ ಆಧರಿಸಿ ಬ್ರಿಟಿಷ್ ಸರ್ಕಾರ ‘ಮ್ಯಾನುವಲ್ ಫಾರೆಸ್ಟ್ ಆಕ್ಟ್’ ಅಡಿಯಲ್ಲಿ ಜನರೇ ಮುಂದೆ ಈ ಅರಣ್ಯ ನೋಡಿಕೊಂಡು ಹೋಗುವಂತೆ ಆದೇಶಿಸಿತು.
ಅದರಂತೆ ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು, ಕುಮಟಾ ತಾಲ್ಲೂಕಿನಲ್ಲಿ ಚಿತ್ರಿಗಿ, ಹಳಕಾರ, ಹೊಲನಗದ್ದೆ, ಮೂರೂರು, ಕಲ್ಲಬ್ಬೆ, ಹಟ್ಟಿಕೇರಿ ಅರಣ್ಯಗಳಿಗೆ ಒಂದೊಂದು ಸಮಿತಿ ರಚಿಸಿ ‘ವಿಲೇಜ್ ಫಾರೆಸ್ಟ್’ ಎಂದು ಹೆಸರಿಟ್ಟು ಅರಣ್ಯ ಅಧಿಕಾರವನ್ನು ಜನರಿಗೆ ಹಸ್ತಾಂತರಿಸಿತು. ಅವುಗಳಿಗೆ ಕಾಲಿನ್ ಕಟ್ಟುನಿಟ್ಟಿನ ಉಪ ನಿಯಮ ರಚಿಸಿ ಅದನ್ನು ಅಕ್ಷರಶಃ ಪಾಲಿಸುವಂತೆ ಸೂಚಿಸಿದ್ದರು.
ಕಾಲಿನ್ ರಚಿಸಿದ ನಿಯಮ ಪ್ರಕಾರ ಪ್ರತಿ ವಿಲೇಜ್ ಫಾರೆಸ್ಟ್ ಸದಸ್ಯರ ಸಮಿತಿ ಸದಸ್ಯರ ಪಟ್ಟಿಯನ್ನು ಮೂರು ವರ್ಷಗಳಿಗೊಮ್ಮೆ ತಹಶೀಲ್ದಾರ್ ದೃಢೀಕರಿಸಬೇಕು. ಪಟ್ಟಿಯಲ್ಲಿರುವ ಮೂರನೇ ಒಂದು ಭಾಗದ ಸದಸ್ಯರು ಅರಣ್ಯ ಪಂಚಾಯ್ತಿ ಸಾಮಾನ್ಯ ಸಭೆಗೆ ಹಾಜರಿದ್ದರೆ ಮಾತ್ರ ಸಭೆ ಊರ್ಜಿತ. ಕಾಡಿನಿಂದ ಯಾವ ವಸ್ತುಗಳನ್ನು ಹೊರಗೆ ಒಯ್ಯಬಹುದು ಎಂಬುದನ್ನು ಠರಾವಿನಲ್ಲಿ ನಮೂದಿಸಬೇಕು. ಅವುಗಳ ಹೊರತಾಗಿ ಬೇರೆ ಯಾವುದೇ ಮರಗಳನ್ನು ಸದಸ್ಯರು ಒಯ್ಯುವಂತಿಲ್ಲ. ಅರಣ್ಯದೊಳಗೆ ಪ್ರತಿ ವರ್ಷ ಶ್ರಮದಾನದ ಮೂಲಕ ಶುಚಿ ಕಾರ್ಯ ನಡೆಸಿ, ಗಿಡ ನೆಡುವುದು ಸದಸ್ಯರ ಕರ್ತವ್ಯ. ವಾರ್ಷಿಕ ಹಣಕಾಸು ಲೆಕ್ಕಾಚಾರವನ್ನು ತಹಶೀಲ್ದಾರ್‌ಗೆ ದೃಢೀಕರಣಕ್ಕಾಗಿ ಕಳುಹಿಸಿಕೊಡಬೇಕು. ಆಗಾಗ ತಹಶೀಲ್ದಾರ್ ನೇತೃತ್ವದಲ್ಲಿ ಅರಣ್ಯದ ಗಡಿಕಲ್ಲುಗಳನ್ನು ದುರಸ್ತಿ ಮಾಡಿಸಿಕೊಳ್ಳಲು ಸಮಿತಿಗೆ ಅವಕಾಶವಿದೆ.
ಎರಗಿದ ಸಿಡಿಲು
ಸ್ವಾತಂತ್ರ್ಯ ನಂತರ 1960 ರಲ್ಲಿ ಬಂದ ಹೊಸ ಅರಣ್ಯ ಕಾಯ್ದೆ ಪ್ರಕಾರ ಎಲ್ಲ ‘ವಿಲೇಜ್ ಫಾರೆಸ್ಟ್’ಗಳು ರದ್ದಾಗಿವೆ. ಎಲ್ಲ ಅರಣ್ಯವನ್ನು ಸರ್ಕಾರಕ್ಕೆ ವಾಪಸ್ ಕೊಡಬೇಕು ಎಂದು ಅಂದಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದರು. ಎಲ್ಲ ವಿಲೇಜ್ ಫಾರೆಸ್ಟ್ ಸಮಿತಿಗಳು ತಮ್ಮ ಅರಣ್ಯವನ್ನು ಸರ್ಕಾರಕ್ಕೆ ವಾಪಸ್ ಮಾಡಿದವು. ಹಳಕಾರ, ಮೂರೂರು-ಕಲ್ಲಬ್ಬೆ-ಬೊಗರಿಬೈಲ ವಿಲೇಜ್ ಫಾರೆಸ್ಟ್ ಸಮಿತಿ ಸದಸ್ಯರು ಮಾತ್ರ ಹತ್ತು ವರ್ಷ ನ್ಯಾಯಾಲಯದಲ್ಲಿ ಹೋರಾಟ ನಡೆಸಿದರು. 1989 ರಲ್ಲಿ ವಿಲೇಜ್ ಫಾರೆಸ್ಟ್ ಅನ್ನು ಜಿ.ಎಸ್.ಎಫ್ ಕಾಲಿನ್ ಪರಿಕಲ್ಪನೆಯಂತೆ ಜನರ ಬಳಿಯೇ ಇರಬೇಕು ಎಂದು ವಿಲೇಜ್ ಫಾರೆಸ್ಟ್ ಪರ ತೀರ್ಪು ಬಂದಿತು. ಸರ್ಕಾರಕ್ಕೆ ಹಸ್ತಾಂತರಗೊಂಡ ಎಲ್ಲ ವಿಲೇಜ್ ಫಾರೆಸ್ಟ್‌ಗಳಲ್ಲಿ ನಂತರ ಅರಣ್ಯ ಮಾಯವಾಗಿ ಕ್ರಮೇಣ ಅಲ್ಲಿ ಜನವಸತಿ, ಉದ್ಯಮ ಬೆಳೆಯಿತು.
ವಿಲೇಜ್ ಫಾರೆಸ್ಟ್‌ನ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕಾಡಿನಲ್ಲಿ ಮುರಿದು ಬಿದ್ದ ಮರಮಟ್ಟು ಹರಾಜು ಮೂಲಕ ಬರುವ ಆದಾಯ ಬಿಟ್ಟರೆ ಸಂಸ್ಥೆಗೆ ಬೇರೆ ಆದಾಯವಿಲ್ಲ. ಆದಾಯ ಬರುವಂತ ಹೊಸ ಯೋಜನೆಗಳನ್ನು ರೂಪಿಸಬೇಕು. ನೂರು ವರ್ಷದಷ್ಟು ಹಳೆಯದಾದ ಊರಿನ ಕಾಡಿಗೆ ಹೊಸರೂಪ ಕೊಡಬೇಕು.– ನಾಗರಾಜ ಭಟ್ಟ, ಮಾಜಿ ಅಧ್ಯಕ್ಷ ವಿಲೇಜ್ ಫಾರೆಸ್ಟ್
ಈ ಕಾಡಿನೊಳಗಿನ ಗಿಡಮರಗಳನ್ನು ಕಡಿಯುವುದು ಹಾಗಿರಲಿ, ಕಾಡು ಪ್ರವೇಶಿಸುವ ಯಾರೂ ಆಯುಧ ತೆಗೆದುಕೊಂಡು ಹೋಗುವಂತಿಲ್ಲ. ಉರುವಲು ಬಳಕೆಗೆ ಕೈಯಲ್ಲಿ ಮುರಿದುಕೊಂಡು ಬರುವಂಥ ಒಣ ಜಿಗ್ಗು, ಕೃಷಿ ಬಳಕೆಗಾಗಿ ತರಗೆಲೆ ಮಾತ್ರ ತರಬಹುದು. ಈ ಕಾಡಿನ ಸುಸ್ಥಿರ ಬಳಕೆ ಮಾಡುವ ಹಕ್ಕಿರುವುದು ಊರಿನ ಕಾಡಿನ ಸದಸ್ಯತ್ವ ಹೊಂದಿರುವ ರೈತ ಕುಟುಂಬಗಳಿಗೆ ಮಾತ್ರ. ಈ ಕಾಡಿನ ಸಂರಕ್ಷಣೆ ಬಗ್ಗೆ ಎಂಥ ಕಟ್ಟುನಿಟ್ಟಿನ ನಿಯಮ ನೋಡಿ? ಊರಿನವರೇ ಮಾಡಿಕೊಂಡು ಪಾಲಿಸುತ್ತಾ ಬಂದಿರುವ ನಿಯಮ. ಕುಮಟಾ ಪಟ್ಟಣದ ಮಧ್ಯೆ ಇರುವ ಈ ಕಾಡಿನಿಂದಾಗಿ ಸುತ್ತಲಿನ ಜನವಸತಿ ಪ್ರದೇಶದಲ್ಲಿ ಯಾವಾಗಲೂ ಕುಡಿಯುವ ನೀರಿನ ಬರವಿಲ್ಲ, ಸದಾ ತಂಪಾದ ವಾತಾವಾರಣ ಇಲ್ಲಿಯ ವಿಶೇಷ.
ಊರಲ್ಲಿ ಕೊಡಿಯಾ, ಪಟಗಾರ, ಮಡಿವಾಳ, ಮುಕ್ರಿ, ನಾಮಧಾರಿ, ಗುನಗಾ, ಶಾನಭಾಗ, ಹವ್ಯಕ ಬ್ರಾಹ್ಮಣ, ಹುಲಸ್ವಾರ, ಹರಿಕಂತ್ರ ಮುಂತಾದ ಸಮಾಜದವರು ಇದ್ದಾರೆ. ಗ್ರಾಮಸ್ಥರಲ್ಲಿ ಜಮೀನು, ರಾಜಕೀಯ ವಿಚಾರವಾಗಿ ಹೊಂದಾಣಿಕೆ ಇಲ್ಲದಿದ್ದರೂ ವಿಲೇಜ್ ಫಾರೆಸ್ಟ್ ವಿಚಾರ ಬಂದಾಗ ಎಲ್ಲವನ್ನೂ ಮರೆತು ಒಂದಾಗುತ್ತಾರೆ. ಒಬ್ಬರ ಮುಖ ಇನ್ನೊಬ್ಬರು ನೋಡದವರನ್ನು ವಿಲೇಜ್ ಫಾರೆಸ್ಟ್‌ನ ವಿಷಯ ಪರಸ್ಪರ ಒಂದು ಮಾಡಿದ ಎಷ್ಟೋ ಸಂದರ್ಭಗಳಿವೆ ಎನ್ನುವುದು ಗ್ರಾಮಸ್ಥರ ಮಾತು.
ಹೀಗಾಗಿಯೇ ಊರು ಕಾಡು ಇನ್ನೂ ನಳನಳಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.