ಬಾಲದಂಡೆ ಹಕ್ಕಿಯನ್ನು ನೋಡುವುದೇ ಸೊಗಸು. ಇಂಥ ಹಕ್ಕಿಯನ್ನು ಅರಸಿ ಹಲವು ವರ್ಷಗಳು ಅಲೆದಾಡಿದ ಲೇಖಕರು ತಮ್ಮೂರಿನ ನೀಲಗಿರಿ ನೆಡುತೋಪಿನಲ್ಲಿ ಕಂಡು ರೋಮಾಂಚನಗೊಂಡ ಅನುಭವ ಕಥನವಿದು.
ಡಾ.ಸಲೀಂ ಅಲಿ ಅವರ ‘ದ ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಪುಸ್ತಕದ ಮುಖಪುಟದಲ್ಲಿ ಈ ಸುರಸುಂದರಾಂಗ ರಾಜನ ಚಿತ್ರವೇ ರಾರಾಜಿಸುತ್ತಿದೆ. ಅಲ್ಲದೇ ಈಗಿನ ಜನಪ್ರಿಯ ಸಾಮಾಜಿಕ ಮಾಧ್ಯಮದಲ್ಲೂ ಇದರದೇ ರಾಜ್ಯಭಾರ!
ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಹೆಸರಾಂತ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರನ್ನು ಮೂಡಿಗೆರೆ ಸಮೀಪವಿರುವ ಅವರ ‘ನಿರುತ್ತರ’ ಮನೆಯಲ್ಲಿ ಭೇಟಿ ಮಾಡಿ ನಾನು ತೆಗೆದಿದ್ದ ಪಕ್ಷಿಗಳ ಚಿತ್ರಗಳನ್ನು ತೋರಿಸಿದೆ. ಆಗ ಅವರು ಕಂದುಬಣ್ಣದ ಬಾಲದಂಡೆ ಹಕ್ಕಿ(ಪ್ಯಾರಡೈಸ್ ಫ್ಲೈ ಕ್ಯಾಚರ್)ಅನ್ನು ನೋಡಿದವರು ‘ಬಿಳಿಯ ಬಣ್ಣದ ಸುಂದರ ಪಕ್ಷಿಯನ್ನು ನೋಡಿದ್ದೀರಾ’ ಎಂದು ಕೇಳಿದ್ದರು. ಕೊಂಡಜ್ಜಿಯ ಕಾಡಲ್ಲಿ ಮತ್ತು ದೃಶ್ಯ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ಮಿಂಚಿನಂತೆ ಹಾರಿ ಹೋಗಿದ್ದನ್ನು ದೂರದಿಂದ ಗಮನಿಸಿದ್ದೆವು. ಅಂದಿನಿಂದ ಅದನ್ನು ಹುಡುಕುತ್ತಲೇ ಇದ್ದೆವು.
ಕಳೆದುಕೊಂಡ ಜಾಗದಲ್ಲೇ ಹುಡುಕಬೇಕು ಎಂಬಂತೆ, ಅಂದು ಕಂದುಬಣ್ಣದ ಹಕ್ಕಿಚಿತ್ರ ತೆಗೆದಿದ್ದ ಜಾಗದಲ್ಲೇ ಹುಡುಕಲು ನಿರ್ಧರಿಸಿ, ದಾವಣಗೆರೆಯಿಂದ ಸುಮಾರು 60 ಕಿಲೊಮೀಟರ್ ದೂರದ ಹೊಳೆಹೊನ್ನೂರು ಬಳಿಯ ಕನಸಿನಕಟ್ಟೆ ಗ್ರಾಮದ (ಪೂರ್ಣಚಂದ್ರ ತೇಜಸ್ವಿಯವರ ಗೆಳೆಯರಾದ ರೈತ ಮುಖಂಡ ಕಡಿದಾಳು ಶಾಮಣ್ಣನವರ ಊರು) ಸುತ್ತಮುತ್ತಲೂ ಹಲವು ಬಾರಿ ಅಲೆದಾಡಿದರೂ, ಕಂದುಬಣ್ಣದ ಹಕ್ಕಿ ಕಂಡಿತ್ತೇ ಹೊರತು ಈ ಸುಂದರ ಮಹಾರಾಜ ದರ್ಶನವನ್ನು ಕರುಣಿಸಲೇ ಇಲ್ಲ.
ದಾವಣಗೆರೆ ಬಳಿಯ ಕೊಂಡಜ್ಜಿ ಕಾಡಲ್ಲಿ ಆಗಾಗ ತಿರುಗಾಡಿದರೂ ಈ ಹಕ್ಕಿ ಕಾಣಿಸಿರಲಿಲ್ಲ. ಹೀಗೆ ಹುಡುಕುತ್ತಿರುವಾಗ, ಅಲ್ಲೇ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬರು ‘ಏನ್ ಮಾಡ್ತಾ ಇದ್ದೀರಿ’ ಎಂದು ಕೇಳಿದರು. ‘ಹಕ್ಕಿ ಫೋಟೊ ತೆಗೀತಿದ್ದೀವಿ...’ ಎಂದೆ. ಅವರು ‘ಯಾವ ಹಕ್ಕಿ...’ ಎಂದಾಗ ಸ್ವಲ್ಪ ಅಸಡ್ಡೆಯಿಂದ ಉತ್ತರಿಸುತ್ತಿರುವಾಗ, ‘ಬಿಳಿ ಗುಬ್ಬೀನಾ...’ ಅಂದರು. ಕೂಡಲೇ ನಾವು ಅಲರ್ಟ್ ಆಗಿ, ‘ಹೌದೌದು...’ ಎಂದೆವು. ‘ಹೇ...ಅಲ್ಲಿ ಇದಾವೆ...’ ಎಂದಾಗ ‘ನಮಗೆ ಕುತೂಹಲ ಹೆಚ್ಚಾಯಿತು. ಕೂಡಲೇ ಮೊಬೈಲ್ ಫೋನ್‌ನಲ್ಲಿದ್ದ ಆ ಹಕ್ಕಿಯ ಚಿತ್ರವನ್ನು ತೋರಿಸಿದೆವು. ‘ಹೌದು...ಇದೇ...’ ಅಂದಕೂಡಲೇ ಆ ವ್ಯಕ್ತಿಯನ್ನು ಕರೆದುಕೊಂಡು ಆ ಜಾಗಕ್ಕೆ ಹೋದೆವು. ಅಲ್ಲಿ ಹುಡುಕಿದರೆ ಎಲ್ಲಿಯೂ ಕಾಣಿಸಲಿಲ್ಲ. ‘ಈಗ ನೋಡಿದ್ದೆ, ಬೆಳಿಗ್ಗೆ ಬನ್ನಿ’ ಅಂದರು. ನಾವು ನಿರಾಶೆಯಿಂದ ಹಿಂದಿರುಗಿದ್ದೆವು.
ಕೆಲಸದ ನಿಮಿತ್ತ, ಮಾರನೇ ದಿನ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ. ಕೆಲವು ದಿನಗಳ ನಂತರ ಆ ಸ್ಥಳಕ್ಕೆ ಹೋದಾಗ, ಅದೇ ವ್ಯಕ್ತಿ ನಮ್ಮನ್ನು ನೋಡಿ, ‘ರ್‍ರೀ..ರ್‍ರೀ..ಈಗ ಇಲ್ಲೇ ಇತ್ತು...ಅದೋ ಅಲ್ಲಿ’ ಎಂದು ಕೈ ತೋರಿಸಿದರು. ನಾವು ಅವರು ತೋರಿಸಿದ ದಿಕ್ಕಿನಡೆ ನೋಡತೊಡಗಿದೆವು. ನೀಲಗಿರಿ ಮರಗಳ ನೆಡುತೋಪಿನ ನೆರಳಿನ ನಡುವೆ, ಹಸಿರು ಹಿನ್ನೆಲೆಯಲ್ಲಿ ಮಿಂಚಿನಂತೆ ಹಾರಾಡುತ್ತಿದ್ದ, ಬಿಳಿಬಣ್ಣದ ಹಕ್ಕಿಯನ್ನು ನೋಡಿ ರೋಮಾಂಚನವಾಯಿತು. ಕೂಡಲೇ ಆಕರ್ಷಣ್ ಚಕಚಕನೇ ಫೋಟೊ ತೆಗೆಯತೊಡಗಿದ. ಕಣ್ಣುಮುಚ್ಚಿ ತೆಗೆಯುವುದರಲ್ಲಿ, ಬಿಳಿಸೀರೆ ಉಟ್ಟ ಪುಟ್ಟ ಹುಡುಗಿ ನಿಂತ ಕಡೆ ನಿಲ್ಲಲಾರದೆ ಸೆರಗನ್ನು ಗಾಳಿಪಟದಂತೆ ಹಾರಿಸುತ್ತಾ ಚಂಗಚಂಗನೇ ಕುಣಿಯುತ್ತಾ, ನೆಗೆಯುತ್ತಾ ಇರುವಂತೆ ಕೊಂಬೆಯಿಂದ ಕೊಂಬೆಗೆ ಹಾರುತ್ತಿರುವುದನ್ನು ನೋಡುವುದೇ ಬಲು ಸೊಗಸು.
ಇದಕ್ಕೆ ರಾಜ ಹಕ್ಕಿಯಂತಲೂ ಕರೆಯುತ್ತಾರೆ. ಹಿಂದಿಯಲ್ಲಿ ದೂಧ್‌ರಾಜ್, ಸುಲ್ತಾನ ಎಂತಲೂ, ಸಂಸ್ಕೃತದಲ್ಲಿ ಅರ್ಜುನಕ, ರಜ್ಜುವಾಲ ಎನ್ನುತ್ತಾರೆ.
ಬುಲ್ ಬುಲ್ ಗಾತ್ರದ ಹೊಳೆಯುವ ನೀಲಿಗಪ್ಪು ಬಣ್ಣದ ಮುಖಕ್ಕೆ, ಅದೇ ಬಣ್ಣದ ಕಿರೀಟ (ಚೊಟ್ಟಿ) ಹೊಂದಿರುವ ಈ ಹಕ್ಕಿಯ ಉಳಿದ ಭಾಗ ಬಿಳಿಬಣ್ಣದಿಂದ ಕೂಡಿರುತ್ತದೆ. ಇದರ ವಿಶೇಷತೆ ಅಂದರೆ ದೇಹ ಗಾತ್ರದ ಮೂರಷ್ಟು ಉದ್ದದ ನೀಳವಾದ ಎರಡು ಬಾಲದ ಪುಕ್ಕಗಳು ಇರುತ್ತವೆ. ಆದರೆ ಮರಿ ಮಾಡಲು ಶಕ್ಯತೆ ಹೊಂದಿರುವ ಉಪವಯಸ್ಕ(Sub-adult) ಗಂಡು ಹಕ್ಕಿ ಹೊಟ್ಟೆ ಭಾಗ ಬಿಳಿ ಬಣ್ಣದಿಂದ ಕೂಡಿದ್ದು, ಮುಖ, ಚೊಟ್ಟಿಯನ್ನು ಹೊರತುಪಡಿಸಿ ಉಳಿದದ್ದು ಕಂದು ಬಣ್ಣವಿರುತ್ತದೆ. ಹೆಣ್ಣು ಬಣ್ಣದಲ್ಲಿ Sub-adult ಗಂಡಿನಂತೆ ಇದ್ದು, ನೀಳವಾದ ಬಾಲವನ್ನು ಹೊಂದಿರುವುದಿಲ್ಲ.
ಈ ಹಕ್ಕಿಗಳು ಭಾರತ, ಬರ್ಮಾ, ಪಾಕಿಸ್ತಾನ, ಸಿಲೋನ್ ಬಂಗ್ಲಾದೇಶಗಳಲ್ಲಿ ಕಾಣಸಿಗುತ್ತವೆ. ಪ್ರಧಾನವಾಗಿ ಹೊರಗಿನಿಂದ ವಲಸೆ ಬರುತ್ತವೆ. ಭಾರತದಲ್ಲಿರುವ ಈ ಹಕ್ಕಿಯು ಕಂದುಬಣ್ಣದಿಂದ ಬಿಳಿಬಣ್ಣಕ್ಕೆ ಬದಲಾಗುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ಕಂದುಬಣ್ಣದಿಂದ ಬಿಳಿಬಣ್ಣಕ್ಕೆ ಬದಲಾಗುವುದಿಲ್ಲ. ಸ್ಥಳೀಯವಾಗಿ ಬಂಡಿಪುರ, ನಂದಿಬೆಟ್ಟ, ಸಾವನದುರ್ಗ, ದೇವರಾಯನದುರ್ಗ, ಬನ್ನೇರುಘಟ್ಟದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.
ಇವುಗಳು ನೀರು ಹತ್ತಿರ ಇರುವಂತಹ ನೆಡುತೋಪು, ಬಿದಿರುಮೆಳೆ, ತೋಟ, ಜನವಸತಿ ಪ್ರದೇಶದ ಬಳಿ ಕಂಡು ಬರುತ್ತವೆ. ಇವು ನೊಣ, ಹುಳು, ಚಿಟ್ಟೆಗಳನ್ನು ತಿನ್ನುತ್ತವೆ. ಫೆಬ್ರುವರಿಯಿಂದ ಜುಲೈವರೆಗೆ ಸುಮಾರು ಆರು ಅಡಿ ಎತ್ತರದ ಮರದ ಬೆರಳು ಗಾತ್ರದ ಕೊಂಬೆಗಳ ಕವಲುಗಳಲ್ಲಿ ಹುಲ್ಲು, ನಾರುಗಳಿಂದ ಜೇಡರಬಲೆಯನ್ನು ಬಳಸಿ ಬಟ್ಟಲಿನಾಕಾರದ ಗೂಡು ಕಟ್ಟಿ, ಎರಡರಿಂದ ಐದು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ. ಗಂಡು-ಹೆಣ್ಣು ಎರಡೂ ಹಕ್ಕಿಗಳು ಮೊಟ್ಟೆ-ಮರಿಗಳನ್ನು ಪೋಷಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.