ADVERTISEMENT

ಕಪ್ಪೆಗಳು ಸಾರ್‌ ಕಪ್ಪೆಗಳು

ಗೋಪಾಲಕೃಷ್ಣ ಹೆಗಡೆ
Published 31 ಜುಲೈ 2021, 19:30 IST
Last Updated 31 ಜುಲೈ 2021, 19:30 IST
ಕಪ್ಪೆ
ಕಪ್ಪೆ   

ಪಶ್ಚಿಮ ಘಟ್ಟ ಪ್ರದೇಶದ ಪುಟ್ಟ ಊರು ಬಾರೆ. ಅದು ಇಪ್ಪತ್ತಕ್ಕೂ ಅಧಿಕ ಪ್ರಭೇದಗಳ, ಥರಾವರಿ ಬಣ್ಣಗಳ ಕಪ್ಪೆಗಳ ಆವಾಸಸ್ಥಾನ. ಮಳೆ ಬಂದು ನಿಂತಾಗಲೊಮ್ಮೆ ಹಗಲು–ರಾತ್ರಿ ಎನ್ನದೆ ಊರಿನ ಸುತ್ತಲಿನ ಕಾಡು–ಮೇಡು ಸುತ್ತಾಡಿ ಕಪ್ಪೆಗಳ ಮೇಲೆ ಕಣ್ಣಿಟ್ಟು, ಅವುಗಳ ಜೀವನ ಕ್ರಮ ಅಭ್ಯಸಿಸಿದ ಛಾಯಾಗ್ರಾಹಕರೊಬ್ಬರು ಮಾಡಿಕೊಂಡ ಪುಟ್ಟ–ಪುಟ್ಟ ಟಿಪ್ಪಣಿಗಳ ಗುಚ್ಛವೇ ಈ ‘ಮಂಡೂಕೋಪನಿಷತ್‌’!

**
‘ವಟರ್‌, ವಟರ್‌, ಟುರ‍್ರೊ, ಟುರ‍್ರೊ, ಟರ‍್ರರ‍್ರರ‍್ರ...’

ಮಳೆಗಾಲ ಶುರುವಾದರೆ ನಮ್ಮೂರಿನ ಪರಿಸರದ ಸುತ್ತ ಈ ರೀತಿಯ ಸಂಗೀತಗೋಷ್ಠಿ ಸದಾ ಇದ್ದದ್ದೇ. ನನ್ನೂರು ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಯಲ್ಲಾಪುರ ತಾಲ್ಲೂಕಿನ ಪುಟ್ಟ ಗ್ರಾಮ ಬಾರೆ. ಆ ಸಂಗೀತ ಗೋಷ್ಠಿಗಳನ್ನೂ ಅದರಲ್ಲಿ ಪಾಲ್ಗೊಂಡ ಕಲಾವಿದರನ್ನೂ – ಅದೇ ಕಪ್ಪೆಗಳನ್ನು– ಹುಡುಕಿಕೊಂಡು, ಕ್ಯಾಮೆರಾ ಹೆಗಲಿಗೇರಿಸಿಕೊಂಡು ನಮ್ಮೂರಿನ ಸುತ್ತಲಿನ ಕಾಡು ಸುತ್ತಿದ್ದೇ ಸುತ್ತಿದ್ದು. ನಮ್ಮ ಪರಿಸರದಲ್ಲಿ ಅದೆಷ್ಟೊಂದು ಪ್ರಭೇದಗಳ ಕಪ್ಪೆಗಳು ಇವೆ ಅಂತೀರಿ! ಅವುಗಳು ‘ಹೋ’ ಎಂದು ಗಲಾಟೆ ಎಬ್ಬಿಸಿದರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ. ಆ ಸಂಗೀತ ಕಛೇರಿಯನ್ನು ಆಸ್ವಾದಿಸುವುದನ್ನು ಬಿಟ್ಟು ಶ್ರೋತೃಗಳಿಗೆ ಬೇರೆ ಆಯ್ಕೆಯೇ ಇರುವುದಿಲ್ಲ.

ADVERTISEMENT

‘ಕಪ್ಪೆಗಳ ಗಂಟಲಿನ ಕೆಳಗೆ ಚರ್ಮ ತೆಳ್ಳಗಿದ್ದು ಬಲೂನಿನಂತೆ ವಿಸ್ತಾರವಾಗುತ್ತದೆ. ಅದರೊಳಗೆ ಭರ್ತಿ ಗಾಳಿ ತುಂಬಿದಾಗ ಅದು ಸಾಕ್ಷಾತ್‌ ಬಲೂನಿನಂತೆಯೇ ಕಾಣುತ್ತದೆ. ಅದರ ತುಂಬಾ ಉಸಿರೆಳೆದು ಊದಿಸಿಕೊಂಡು ಆನಂತರ, ತಿದಿ ಒತ್ತುವಂತೆ ಗಂಟಲಿನ ಮುಖಾಂತರ ಒತ್ತಿ, ಟರ‍್ರರ‍್ರರ‍್ರ ಎಂದು ಕರ್ಕಶವಾಗಿ ಸದ್ದಾಗುವಂತೆ ಗಾಳಿಯನ್ನು ಹೊರಕ್ಕೆ ಬಿಡುತ್ತವೆ’ ಎಂದು ತೇಜಸ್ವಿಯವರು ‘ನೆರೆಹೊರೆಯ ಗೆಳೆಯರು’ ಕೃತಿಯಲ್ಲಿ ವರ್ಣಿಸಿದ್ದ ನೆನಪು. ನನ್ನ ಕ್ಯಾಮೆರಾದ ಫ್ರೇಮ್‌ನಲ್ಲಿ ಕಪ್ಪೆಗಳ ಗಂಟಲಿನ ಕೆಳಗೆ ಬಲೂನಿನಂತೆ ಚರ್ಮ ಊದಿಕೊಂಡ (ಧ್ವನಿ ಗುಳ್ಳೆ) ಚಿತ್ರ ಸೆರೆಸಿಕ್ಕಾಗ ಖುಷಿಯೋ ಖುಷಿ. ಅಂದಹಾಗೆ, ಈ ಚಿತ್ರಗಳನ್ನು ಸೆರೆ ಹಿಡಿಯಲು ಮಳೆ ಬಂದು ನಿಂತಾಗಲೆಲ್ಲ ವರ್ಷಗಟ್ಟಲೆ ನಾನು ಕಾಡು ಸುತ್ತಿದ್ದೇನೆ. ರಾತ್ರಿಯೂ ಕಾಡಿನಲ್ಲಿ ಕಳೆದಿದ್ದೇನೆ. ಥರಾವರಿ ಕಪ್ಪೆಗಳನ್ನು ಕಂಡು ಬೆರಗಾಗಿದ್ದೇನೆ.

ತೇಜಸ್ವಿಯವರೇ ಹೇಳುವಂತೆ ಕೆಲವು ಕಪ್ಪೆಗಳು ಬಟ್ಟೆ ಹರಿದಂತೆ, ಇನ್ನು ಕೆಲವು ದಾಸಯ್ಯನ ಜಾಗಟೆಯಂತೆ ಸದ್ದು ಮಾಡುವುದನ್ನು ಆಲಿಸಿದ್ದೇನೆ. ಕೆಲವು ಸಣ್ಣ ಕಪ್ಪೆಗಳು ತಮ್ಮ ದೇಹದ ಗಾತ್ರಕ್ಕಿಂತ ದೊಡ್ಡದಾದ ಬಲೂನು ಸೃಷ್ಟಿಸಿ ನನ್ನನ್ನು ವಿಸ್ಮಯಗೊಳಿಸಿದ್ದೂ ಇದೆ. ಚಿಕ್ಕವಯಸ್ಸಿನಿಂದ ಈ ಪರಿಸರದಲ್ಲೇ ಬೆಳೆದಿದ್ದರೂ ನನಗೆ ಇಲ್ಲಿನ ಪರಿಸರ, ಪ್ರಾಣಿಗಳು, ಪಕ್ಷಿಗಳ ಬಗ್ಗೆ ಅಷ್ಟೇನೂ ಸರಿಯಾಗಿ ಗೊತ್ತಿರಲಿಲ್ಲ. ಅದರ ಬಗ್ಗೆ ಅರಿವು ಮೂಡಿಸಿದ್ದು ವನ್ಯಜೀವಿ ಛಾಯಾಗ್ರಾಹಕ ಓಂಕಾರ ಉಮೇಶ್. ಪ್ರಾಣಿ-ಪಕ್ಷಿಗಳ ಜೊತೆ ಒಡನಾಟ ಬೆಳೆಯುವುದರಿಂದ ಬದುಕು ನೆಮ್ಮದಿಯಾಗಿ ಇರುತ್ತದೆ ಎಂದು ಹೇಳಿ ಒಂದು ಕ್ಯಾಮೆರಾವನ್ನು ಕೈಗಿಟ್ಟರು. ಆಗಿನಿಂದ ವನ್ಯಜೀವಿಗಳೊಂದಿಗೆ ನನ್ನ ಸಾಂಗತ್ಯ. ಅದರಲ್ಲೂ ಕಪ್ಪೆಗಳ ಪಾಲಿಗೆ ನಾನು ದೊಡ್ಡ ಸ್ನೇಹಿತ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಸಿ.ಆರ್. ನಾಯಕ್ ಮತ್ತು ಅವರ ತಂಡ ಒಮ್ಮೆ ನಮ್ಮೂರಿಗೆ ಬಂದಿತ್ತು. ಕಪ್ಪೆಗಳ ಕುರಿತು ಆಸಕ್ತಿ ಮೂಡಿಸಿದ್ದು ಅದೇ ತಂಡ. ಆ ತಂಡದ ಸಲಹೆಯಿಂದ ಪ್ರೇರಿತನಾಗಿ ಓಡಾಡಿದಾಗ ನಮ್ಮ ಊರಿನಲ್ಲಿ 24 ಜಾತಿಯ ಕಪ್ಪೆಗಳನ್ನು ಕಂಡೆ. ಕಪ್ಪೆಗಳ ಜೀವನಶೈಲಿಯನ್ನು ನೋಡುವ ಕುತೂಹಲವೂ ಉಂಟಾಯಿತು. ಆಗ ಪರಿಚಯವಾದವರು ವಿಜ್ಞಾನಿ ಕೆ.ವಿ. ಗುರುರಾಜ್. ಅವರು ಕಪ್ಪೆಗಳ ವೈಜ್ಞಾನಿಕ ಹೆಸರುಗಳನ್ನು ಹೇಳಿಕೊಟ್ಟರು. ಕಪ್ಪೆಗಳು ಮೊಟ್ಟೆ ಇಡುವುದನ್ನು, ಮೊಟ್ಟೆಗಳು ಮರಿ ಆಗುವುದನ್ನು ನೋಡಿದೆ. ಕಪ್ಪೆಗಳ ವಟರ್ ವಟರ್ ಸದ್ದಿಗೆ ಇತರೆ ಕ್ರಿಮಿಕೀಟಗಳು ಹೊರಡಿಸುವ ಜುಗಲ್‌ಬಂದಿ ಸದ್ದಿನ ಮಳೆಗಾಲದ ಸಂಗೀತಮಯ ಸಂಜೆಯನ್ನು ಆನಂದಿಸಿದೆ.

ಕಪ್ಪೆಗಳು ತೇವಾಂಶವುಳ್ಳ ಕಾಡುಗಳು ಮತ್ತು ಜೌಗು ಪ್ರದೇಶದ ಹುಲ್ಲುಗಾವಲುಗಳು, ಹಾಗೆಯೇ ಸ್ತಬ್ಧ ನದಿಗಳು ಮತ್ತು ಸುಂದರವಾದ ಸರೋವರಗಳ ತೀರದಲ್ಲಿ ವಾಸಿಸುತ್ತವೆ. ಈ ವಿಶಿಷ್ಟ ಪ್ರಾಣಿಗಳು ಬಾಲವಿಲ್ಲದ ಉಭಯಚರಗಳ ಕ್ರಮದ ಪ್ರಮುಖ ಪ್ರತಿನಿಧಿಗಳು. ಕಪ್ಪೆಗಳ ಗಾತ್ರವು ಜಾತಿಗಳ ಮೇಲೆ ಅವಲಂಬಿತ. ಅವುಗಳು ಶೀತರಕ್ತದ ಪ್ರಾಣಿಗಳು. ಆಫ್ರಿಕಾ ಅವುಗಳ ಮೂಲ ಆವಾಸಸ್ಥಾನ ಎಂದು ನಂಬಲಾಗಿದೆ. ಕಪ್ಪೆ ಒಂದು ವಿಶಿಷ್ಟ ರೀತಿಯ ಪ್ರಾಣಿಯಾಗಿದ್ದು ಅದು ಚರ್ಮದ ಬಣ್ಣವನ್ನು ಬದಲಾಯಿಸುವ ಕೋಶಗಳನ್ನು ಹೊಂದಿದೆ. ಅದು ಪ್ರಕೃತಿಯೊಂದಿಗೆ ವಿಲೀನಗೊಳ್ಳುವ ಮತ್ತು ತನ್ನ ಶತ್ರುಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ.

ಕಪ್ಪೆಗಳು ಶುದ್ಧ ನೀರಿನಲ್ಲಿ ವಾಸಿಸಲು ಇಷ್ಟಪಡುತ್ತವೆ. ಇವು ಚಲಿಸುತ್ತವೆ, ಬೃಹತ್ ಜಿಗಿತಗಳನ್ನೂ ಮಾಡುತ್ತವೆ. ಹೆಚ್ಚಿನವು ಮರಗಳ ತುದಿಯವರೆಗೂ ಹತ್ತುತ್ತವೆ ಮತ್ತು ಭೂಗತ ರಂಧ್ರಗಳನ್ನು ಅಗೆಯುತ್ತವೆ. ಕೆಲವು ಪ್ರಭೇದಗಳು ನಡೆಯಬಹುದು ಮತ್ತು ಓಡಬಹುದು, ಜೊತೆಗೆ ಈಜಬಹುದು. ಕಪ್ಪೆಗಳ ಒಂದು ಕುತೂಹಲಕಾರಿ ಲಕ್ಷಣವೆಂದರೆ ಅವು ಚರ್ಮದ ಮೂಲಕ ಆಮ್ಲಜನಕವನ್ನು ಹೀರಿಕೊಳ್ಳುತ್ತವೆ. ವಿಲಕ್ಷಣವಾದ ಶಬ್ದಗಳನ್ನು ಮಾಡಲು ಕಪ್ಪೆಗೆ ಶ್ವಾಸಕೋಶದಂತಹ ಅಂಗಗಳು ಬೇಕಾಗುತ್ತವೆ. ಇದನ್ನು ಸಾಮಾನ್ಯವಾಗಿ ಕ್ರೋಕಿಂಗ್ ಎಂದು ಕರೆಯಲಾಗುತ್ತದೆ. ಧ್ವನಿಗುಳ್ಳೆಗಳು ವ್ಯಾಪಕವಾದ ಧ್ವನಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಆ ಧ್ವನಿಯು ವಿರುದ್ಧ ಲಿಂಗಿಗಳನ್ನು ಆಕರ್ಷಿಸುತ್ತದೆ.‌ ಕಪ್ಪೆ ವೀಕ್ಷಣೆಯಿಂದ ಕಲಿಯಲು ಹಲವು ಆಸಕ್ತಿದಾಯಕ ಮತ್ತು ಅದ್ಭುತ ವಿಷಯಗಳಿವೆ.ಕಪ್ಪೆ ನಿಯತಕಾಲಿಕವಾಗಿ ತನ್ನ ಚರ್ಮವನ್ನು ಹೊರಬಿಡುತ್ತದೆ.

ಕೀಟನಾಶಕ ಕಪ್ಪೆಗಳು ಸೊಳ್ಳೆಗಳು, ಚಿಟ್ಟೆಗಳು ಮತ್ತು ಸಣ್ಣ ಹುಳುಗಳನ್ನು ಸಂತೋಷದಿಂದ ತಿನ್ನುತ್ತವೆ. ವಿಶೇಷವಾಗಿ ದೊಡ್ಡವುಗಳು ಇನ್ನೂ ಹೆಚ್ಚು ಪ್ರಭಾವಶಾಲಿ ಬೇಟೆಯನ್ನು ಆಡುತ್ತವೆ. ಕೆಲವು ಜಾತಿಯ ಕಪ್ಪೆಗಳು ಇತರೆ ಕಪ್ಪೆಗಳನ್ನೇ ತಿನ್ನುತ್ತವೆ. ಕಪ್ಪೆಗಳಿಂದ ಮನುಷ್ಯರಿಗೆ ಸಾಕಷ್ಟು ಪ್ರಯೋಜನ ಇದೆ. ಅನೇಕ ಹಾನಿಕಾರಕ ಹುಳುಗಳು, ಜೀರುಂಡೆಗಳು ಮತ್ತು ಕೀಟಗಳನ್ನು ಅವು ನಾಶ ಮಾಡುತ್ತವೆ ಮತ್ತು ತಿನ್ನುತ್ತವೆ. ಆದ್ದರಿಂದ, ತರಕಾರಿ ತೋಟಗಳು ಮತ್ತು ಪ್ಲಾಟ್‌ಗಳ ಮಾಲೀಕರು ಅಂತಹ ಸಹಾಯಕರನ್ನು ಬಹಳ ಸಹಾನುಭೂತಿಯಿಂದ ನೋಡಿಕೊಳ್ಳುತ್ತಾರೆ ಮತ್ತು ಅವುಗಳಿಗೆ ಸಂತಾನೋತ್ಪತ್ತಿ ಮಾಡಲು ಮತ್ತು ವಾಸಿಸಲು ಬಗೆಯ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತಾರೆ.

ಮಾನವ ಈ ಭೂಮಿ ಮೇಲೆ ಯಾವುದನ್ನೂ ತಿನ್ನದೆ ಬಿಟ್ಟಿಲ್ಲ. ಕಪ್ಪೆಗಳು ಕೂಡ ಅದರಿಂದ ಹೊರತಾಗಿಲ್ಲ. ಪಶ್ಚಿಮ ಘಟ್ಟದ ಅರಣ್ಯಗಳಲ್ಲಿ ಮತ್ತು ಕರಾವಳಿ ಪ್ರದೇಶದಲ್ಲಿ ಸಿಗುವ ‘ಬುಲ್ ಫ್ರಾಗ್’ಗೆ ಎಲ್ಲಿಲ್ಲದ ಬೇಡಿಕೆ. ಇದನ್ನು ಕೊಲ್ಲುವುದಕ್ಕೆ ನಿಷಿದ್ಧ ಇದ್ದರೂ ಅಕ್ರಮ ಬೇಟೆ ಆಗುತ್ತಿದೆ.

ಕಪ್ಪೆಗಳು ನೀರಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಅದರ ಪ್ರಮಾಣವು ನಿಜವಾಗಿಯೂ ಅಗಾಧವಾಗಿರುತ್ತದೆ. ಕೆಲವೊಮ್ಮೆ ಒಂದು ಸಮಯದಲ್ಲಿ 20 ಸಾವಿರ ಮೊಟ್ಟೆಗಳನ್ನು ಇಡಬಲ್ಲವು. ಮೊಟ್ಟೆಗಳಿಂದ ಟ್ಯಾಡ್‌ಪೋಲ್‌ಗಳು ಹೊರಬರುತ್ತವೆ. ಮೊಟ್ಟೆಗಳನ್ನು ಮರಿಗಪ್ಪೆಗಳು ಅಥವಾ ಮರಿಗಳಾಗಿ ಪರಿವರ್ತಿಸಲು 7ರಿಂದ 10 ದಿನಗಳು ಬೇಕಾಗುತ್ತವೆ. ಕಪ್ಪೆಗಳು ಲೈಂಗಿಕವಾಗಿ ಪ್ರಬುದ್ಧ. ಕಪ್ಪೆಗಳ ಜೀವಿತಾವಧಿಯನ್ನು ಅಳೆಯುವುದು ಕಷ್ಟ. ಆದರೆ ವೈಜ್ಞಾನಿಕ ಸಂಶೋಧನೆಯ ಪ್ರಕಾರ, 10ರಿಂದ 14 ವರ್ಷಗಳವರೆಗೆ ಅವು ಬದುಕುತ್ತವೆ. ಕಪ್ಪೆಗಳ ಕುರಿತು ನನ್ನ ಲಹರಿ ಹೀಗೇ ಮುಂದುವರಿದಿದ್ದಾಗ ಅದಕ್ಕೆ ಬ್ರೇಕ್‌ ಹಾಕಿದ್ದು ಮತ್ತೆ ಕೇಳಿಬಂದ ವಟರ್‌, ವಟರ್‌ ಸದ್ದು!

-ಗೋಪಾಲಕೃಷ್ಣ ಹೆಗಡೆ ಬಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.