ADVERTISEMENT

ಭೀಮಗಡ ವನ್ಯಧಾಮ; ಶೀಘ್ರ ಆನ್‌ಲೈನ್‌ ಬುಕ್ಕಿಂಗ್‌ ಸೇವೆ

ಶ್ರೀಕಾಂತ ಕಲ್ಲಮ್ಮನವರ
Published 27 ಫೆಬ್ರುವರಿ 2019, 5:56 IST
Last Updated 27 ಫೆಬ್ರುವರಿ 2019, 5:56 IST
ಭೀಮಗಡ ವನ್ಯಧಾಮದ ಪ್ರವೇಶ ದ್ವಾರ
ಭೀಮಗಡ ವನ್ಯಧಾಮದ ಪ್ರವೇಶ ದ್ವಾರ   

ಬೆಳಗಾವಿ: ರಾಜ್ಯದ ಪ್ರಮುಖ ವನ್ಯಧಾಮಗಳಲ್ಲಿ ಒಂದಾಗಿರುವ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಭೀಮಗಡ ವನ್ಯಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಪುನರಾರಂಭಿಸಲು ಅರಣ್ಯ ಇಲಾಖೆಯಲ್ಲಿ ಸಿದ್ಧತೆಗಳು ನಡೆದಿವೆ.

ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಭೀಮಗಡ ವನ್ಯಧಾಮ ಪ್ರದೇಶವು ದಟ್ಟ ಅರಣ್ಯದಿಂದ ಆವರಿಸಿಕೊಂಡಿದೆ. ಸುಮಾರು 19,000 ಹೆಕ್ಟೇರ್‌ ಪ್ರದೇಶ ಹೊಂದಿದೆ. ಇಲ್ಲಿ ಮಳೆಗಾಲದಲ್ಲಿ ವಿಪರೀತ ಮಳೆ ಸುರಿಯುತ್ತದೆ. ಬೇಸಿಗೆಯಲ್ಲಿ ಬಿಸಿಲಿನ ಝಳ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಿಸರ್ಗ ಪ್ರಿಯರು, ಚಾರಣ ಪ್ರಿಯರು ವನ್ಯಧಾಮಕ್ಕೆ ಭೇಟಿ ನೀಡಬಹುದಾಗಿದೆ.

ಆಕರ್ಷಣೆಗಳಿವು:
ಮಹದಾಯಿ ನದಿಯ ಉಗಮ ಸ್ಥಳವು ಈ ಪ್ರದೇಶದಲ್ಲಿದೆ. ದೊಡ್ಡದಾದ ಕೆರೆ ಇದೆ. ಇಲ್ಲಿರುವ ವನ್ಯ ಪ್ರಾಣಿಗಳು ನೀರು ಕುಡಿಯಲು ಇಲ್ಲಿಗೆ ಬೆಳಿಗ್ಗೆ ಹಾಗೂ ಸಂಜೆ ವೇಳೆ ಆಗಮಿಸುತ್ತವೆ. ಪುರಾತನ ಕಾಲದ ಕೋಟೆ ಇದೆ. ಬಾರಾಪೀಡಿ ಗುಹೆ ಇದೆ. ವಿಶಿಷ್ಟ ರೀತಿಯ ಬಾವುಲಿಗಳು (ವ್ರಂಗ್ಟನ್ಸ್‌ ಫ್ರಿ– ಟೇಲ್ಡ್‌) ಇಲ್ಲಿವೆ. ಚಿರತೆ, ಆನೆ, ಜಿಂಕೆ, ಕಾಡೆಮ್ಮೆ ಹಾಗೂ ಇತರ ಪ್ರಾಣಿಗಳಿವೆ. ಆಗಾಗ ಹುಲಿಯೂ ಕಾಣಿಸಿಕೊಳ್ಳುತ್ತದೆ.

ADVERTISEMENT

ಅನುಮತಿ ಕಡ್ಡಾಯ:
ವನ್ಯಧಾಮದೊಳಗೆ ಪ್ರವೇಶಿಸಲು ಬಯಸುವವರು ಕಡ್ಡಾಯವಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಬೆಳಗಾವಿಯಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಿಂದ (ಡಿಎಫ್‌ಒ) ಅನುಮತಿ ಪಡೆಯಬೇಕು. ಸರ್ಕಾರ ನಿಗದಿಪಡಿಸಿದ ದರ ಪಾವತಿಸಿ, ಹೆಮ್ಮಡಗಾ ಪ್ರಕೃತಿ ಶಿಬಿರದಲ್ಲಿ ವಾಸ್ತವ್ಯ ಹೂಡಬಹುದು. ಅರಣ್ಯ ಇಲಾಖೆಯ ಸಿಬ್ಬಂದಿಯ ಜೊತೆ ಚಾರಣಕ್ಕೆ ತೆರಳಬಹುದು. ಊಟದ ವ್ಯವಸ್ಥೆಯೂ ಇದ್ದು, ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗುತ್ತದೆ.

ಆನ್‌ಲೈನ್‌ ಬುಕ್ಕಿಂಗ್‌ಗೆ ಒತ್ತಾಯ;
2011ರಲ್ಲಿ ಭೀಮಗಡ ವನ್ಯಧಾಮ ಪ್ರದೇಶ ಘೋಷಣೆಯಾಯಿತು. ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಾಸ್ತವ್ಯ ಹಾಗೂ ಚಾರಣಕ್ಕೆ ಸರ್ಕಾರವು ಅವಕಾಶ ಕಲ್ಪಿಸಿದೆ. ಕೆಲವು ವರ್ಷಗಳ ಹಿಂದೆ ಭೀಮಗಡ ವನ್ಯಧಾಮಕ್ಕೆ ತೆರಳಲು ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡುವ ವ್ಯವಸ್ಥೆಯೂ ಇತ್ತು. ಇತ್ತೀಚೆಗೆ 3–4 ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಇದನ್ನು ಪುನಃ ಆರಂಭಿಸಬೇಕೆಂದು ಚಾರಣ ಪ್ರಿಯರು ಹಾಗೂ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಸಫಾರಿ ಇಲ್ಲ;
ಭೀಮಗಡದಲ್ಲಿ ಚಾರಣಕ್ಕೆ ಹಾಗೂ ವಾಸ್ತವ್ಯಕ್ಕೆ ಮಾತ್ರ ವ್ಯವಸ್ಥೆ ಇದೆ. ಸಫಾರಿಗೆ ವ್ಯವಸ್ಥೆ ಇಲ್ಲ. ವನ್ಯಧಾಮಕ್ಕೆ ಭೇಟಿ ನೀಡುವವರ ಸಂಖ್ಯೆ ಏರಿಕೆಯಾಗುತ್ತಿದೆ. ಸರ್ಕಾರ ನಿಗದಿಪಡಿಸಿದ ಶುಲ್ಕ ಭರಿಸಿ, ಚಾರಣ ಪ್ರಿಯರು ಇದರ ಪ್ರಯೋಜನ ಪಡೆಯಬಹುದು. ಸದ್ಯಕ್ಕೆ ಬೆಳಗಾವಿಯ ಡಿಎಫ್‌ಒ ಕಚೇರಿಯಿಂದ ಅನುಮತಿ ಪಡೆದು ವನ್ಯಧಾಮಕ್ಕೆ ತೆರಳಬೇಕಾಗಿದೆ. ಆನ್‌ಲೈನ್‌ ಬುಕ್ಕಿಂಗ್‌ ಸೇವೆ ಆರಂಭಿಸಬೇಕೆನ್ನುವ ಬೇಡಿಕೆ ಇದ್ದು, ಇದನ್ನು ಆರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಬೆಳಗಾವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಂ. ಕರುಣಾಕರನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.