ಬೆಂಗಳೂರಿನ ಗತ ವೈಭವಗಳಲ್ಲೊಂದು, ಮುಸ್ಸಂಜೆಯಾಗುತ್ತಿದ್ದಂತೆಯೇ ದಿನವಿಡೀ ಆಹಾರ ಅರಸಿ ಕಾಯಕ ಮುಗಿಸಿದ ವಿವಿಧ ಜಾತಿಯ ಕಾಡುಹಕ್ಕಿಗಳು ಆಗಸದೆತ್ತರಕ್ಕೆ ಸಾಲು ಸಾಲಾಗಿ ನೀರಿನ ಪ್ರದೇಶಗಳಿಂದ ನಗರದ ಹೊರವಲಯದ ಅಡವಿ- ತಾಣಗಳಲ್ಲಿ ಸ್ವಚ್ಛಂದವಾಗಿ ಕಟ್ಟಿದ ಗೂಡುಗಳನ್ನರಸಿ ಮರಳುವ ಮೋಹಕ ದೃಶ್ಯ.
ಪರೇಡ್ ಮಾಡುವ ಸೈನಿಕರ ಕವಾಯತ್ತಿಗೂ ಸಾಟಿಯಾದಂತೆ ನಾಯಕ ಹಕ್ಕಿಯನ್ನನುಸರಿಸಿ ಶಿಸ್ತಿನಿಂದ ಹಾರುವ ಆ ಪಕ್ಷಿ- ಸರಣಿಗಳು ನಗರ ಬೆಳೆದಂತೆ ಮಾಯವಾಗುತ್ತಿವೆಯೆಂಬುದು ಖೇದದ ಸಂಗತಿ. ಆದಾಗ್ಯೂ, ನಗರದ ಸಮೀಪದಲ್ಲಿ ಕೆಲವಾರು ದೊಡ್ಡ ಕೆರೆ – ನೀರಿನ ತಾಣಗಳು ಇನ್ನೂ ಜೀವಂತವಾಗಿರುವುದು ಸಮಾಧಾನಕರವಾದದ್ದು. ಅಲ್ಲೆಲ್ಲಾ ಕೆಲವು ನೀರು ಹಕ್ಕಿಗಳು ಮೀನನ್ನು ಬೇಟೆಯಾಡಿ ಬದುಕುತ್ತಿವೆಯೆಂಬುದೇ ಖುಷಿಯ ವಿಷಯ. ಆ ನೀರಿನ ತಟಗಳಲ್ಲಿ ಗೂಡುಕಟ್ಟಿ ಜೀವಿಸಲು ಆ ಪಕ್ಷಿಗಳಿಗೆ ಬೃಹತ್ ವೃಕ್ಷಗಳಿಲ್ಲದೇ, ನಿತ್ಯ ಅವು ರಕ್ಷಣೆ ಸಿಗಬಹುದಾದ ದೂರದ ವನ್ಯ ಪ್ರದೇಶಗಳಲ್ಲಿ ಕಟ್ಟಿಕೊಂಡ ಗೂಡುಗಳಿಗೆ ಸಂಜೆಯಾಗುತ್ತಿದ್ದಂತೆಯೇ ಮರಳಬೇಕಾದ್ದು ಅನಿವಾರ್ಯ.
ಹೊಸಕೋಟೆ ಸರೋವರದಲ್ಲಿ ದಿನವಿಡೀ ವಿಹರಿಸಿ, ಹೊಟ್ಟೆತುಂಬಿಸಿಕೊಂಡ ನೀರುಕಾಗೆಗಳು (CORMORANT) ಸಂಜೆ ಆರೂಕಾಲು ಹೊತ್ತಿಗೆ ಗುಂಪಾಗಿ ಅಲ್ಲಿಂದ ಹಾರಿ, ಕೃಷ್ಣರಾಜಪುರಂ ಕೆರೆಯೆಡೆಗೆ ಬಂದು ದಣಿವಾರಿಸಿ, ಪುನಹ ಆಗಸವನ್ನೇರಿ ನಗರದಾಚೆಯ ಗೂಡಿನೆಡೆಗೆ ಸಾಲಾಗಿ ಹಾರುವ ಆ ಸುಂದರ ದೃಶ್ಯವನ್ನು ಪೂರ್ಣಿಮೆಗೆ ಮೂರು ದಿನವಿದ್ದೊಂದು ಸಂಜೆ ಪೂರ್ವದಲ್ಲಿ ಮೂಡಿದ್ದ ಚಂದಿರನ ಹಿನ್ನೆಲೆಯಲ್ಲಿ ಮರುಕಳಿಸದ ಈ ಅಪರೂಪದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು, ಕೃಷ್ಣರಾಜಪುರಂ ಬಳಿಯ ಭಟ್ಟರಹಳ್ಳಿಯ ವಿನಾಯಕ ಬಡಾವಣೆ ನಿವಾಸಿ ದಿನೇಶ್ ರಾವ್ ಮೂಡಬಿದ್ರಿ.
ಕೆಮಿಕಲ್ ಎಂಜಿನಿಯರ್ ಆಗಿದ್ದು, AKZONOBE* INDIA ಲಿಮಿಟೆಡ್‌ನಲ್ಲಿ ಪ್ರಾಡಕ್ಟ್ ಸ್ಪೆಷಲಿಸ್ಟ್ ಆಗಿದ್ದು ಮೂರು ವರ್ಷಗಳಿಂದ ವನ್ಯಜೀವಿ, ಪಕ್ಷಿ, ಪ್ರಕೃತಿ, ಲ್ಯಾಂಡ್ ಸ್ಕೇಪ್ ಮತ್ತು ಮ್ಯಾಕ್ರೊ ಛಾಯಾಗ್ರಹಣದಲ್ಲಿ ಹವ್ಯಾಸ ರೂಢಿಸಿಕೊಂಡ ಅವರು ಬಳಸಿದ ಕ್ಯಾಮೆರಾ, ಕೆನಾನ್ 750 ಡಿ, ಜೊತೆಗೆ 70- 300 ಎಂ.ಎಂ. ಜೂಂ ಲೆನ್ಸ್. ಅವರ ಎಕ್ಸ್‌ಪೋಷರ್ ವಿವರ ಇಂತಿದೆ: 100 ಎಂ.ಎಂ. ಫೋಕಲ್ ಲೆಂಗ್ತ್ , ಅಪರ್ಚರ್ ಎಫ್. 8, ಶಟರ್ ವೇಗ 1/ 160 ಸೆಕೆಂಡ್, ಐ.ಎಸ್.ಒ 125, ಟ್ರೈಪಾಡ್ ಬಳಸಿಲ್ಲ.
ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:
* ಉತ್ತಮವಾದ ಗುಣಮಟ್ಟದ ಕ್ಯಾಮೆರಾದಲ್ಲಿ ಸೂಕ್ತವಾದ ಜೂಂ ಲೆನ್ಸ್ ಅಳವಡಿಸಿ ನೆಲದಿಂದ ಸುಮಾರು ಇನ್ನೂರೈವತ್ತಡಿ ಎತ್ತರದಲ್ಲಿ ಹಾರುತ್ತಿರುವ ಪಕ್ಷಿಗಳ ಹಾರಾಟದ ಈ ಆಕಸ್ಮಿಕ ದೃಶ್ಯವನ್ನು ಆಗಷ್ಟೇ ಮೇಲೇರಿದ್ದ ಚಂದಿರನ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಸಾಧ್ಯವಿಲ್ಲದ ಸಂದರ್ಭವಾದರೂ ಇಷ್ಟೊಂದು ಸಮರ್ಪಕವಾಗಿ ಕ್ಯಾಮೆರಾದಲ್ಲಿ ತ್ವರಿತವಾಗಿ ಸೆರೆಹಿಡಿಯುವುದು ಸುಲಭ ಸಾಧ್ಯವಲ್ಲ. ಕೆಲವೇ ವರ್ಷಗಳ ಛಾಯಾಗ್ರಹಣ ಹವ್ಯಾಸವನ್ನು ಬೆಳೆಸಿಕೊಂಡಿರುವ ದಿನೇಶ್ ರಾವ್ ಅವರ ತಾಂತ್ರಿಕ ಪರಿಣಿತಿ ಮತ್ತು ಕಲಾತ್ಮಕ ಕೌಶಲ ಮೆಚ್ಚತಕ್ಕದ್ದೇ !
* ಆಗಸದ ಕಡು ನೀಲವರ್ಣ, ಮೇಲ್ಮೆಯಲ್ಲಿನ ಚಿತ್ತಾರದೊಂದಿಗೆ ಬೆಳಗುತ್ತಿದ್ದ ಚಂದಿರ ಹಾಗೂ ನೀರುಕಾಗೆಗಳ ಬಿಚ್ಚಿದ ರೆಕ್ಕೆಗಳ, ಜೊತೆಗೆ ಅವುಗಳ ಚಾಚಿದ ಕೊಕ್ಕು- ಬಾಲಗಳನ್ನೂ ಸ್ಪುಟವಾಗಿ ಚೌಕಟ್ಟಿನಲ್ಲಿ ಮೂಡಿಸಿರುವುದಕ್ಕೆ ಎಕಪೋಶರ್ ಅಂಶಗಳೆಲ್ಲವೂ ತಾಂತ್ರಿಕವಾಗಿ ಸರಿಯಾಗಿರುವುದೇ ಕಾರಣ. ಇನ್ನೂ ಸಂಜೆಯ ಬೆಳಕು ಸಾಕಷ್ಟು ಪ್ರಮಾಣದಲ್ಲಿ ಪಸರಿಸಿರುವ ಸಮಯವಾದ್ದರಿಂದ ಈ ವರ್ಣಪ್ರಸರಣವನ್ನು ( ಟೊನಲ್ ಡಿಸ್ತ್ರಿಬ್ಯೂಷನ್) ಈಗಿನಂತೆಯೇ ಸಾದರಪಡಿಸುವುದು ಕ್ಲಿಷ್ಟಕರವಾದದ್ದು. ಅಪರ್ಚರ್ ಅಥವಾ ಐ.ಎಸ್.ಒ ಸ್ವಲ್ಪವಾದರೂ ಹೆಚ್ಚಿದ್ದರೆ , ಚಂದಿರ ಮತ್ತು ಆಗಸ ಬಿಳಿಚಿಬಿಡಬಹುದಿತ್ತು, ಕಡಿಮೆಯಾಗಿದ್ದರೆ ಆಕಾಶ ರಾತ್ರಿಯಂತಾಗಿ, ಪಕ್ಷಿಗಳು ಕಾಣಿಸದಾಗಬಹುದಿತ್ತು.
* ಚಿತ್ರಕಲಾಭ್ಯಾಸಿಗಳಿಗೆ ಥಟ್ಟನೆ ಮನತಟ್ಟುವುದು, ಅದರ ಸಂಯೋಜನೆಯ ದೆಸೆಯಿಂದ. ಇಲ್ಲಿ ಹೊಳೆಯುವ ಚಂದಿರ ಇಡೀ ಚೌಕಟ್ಟಿನ ಗೋಲ್ಡನ್ ಕ್ರಾಸ್ ರೂಲ್‌ಗೆ ಅನುಗುಣವಾಗಿ ಒಂದು ಮೂರಾಂಶದಲ್ಲಿ ಮೂಡಿರುವುದು. ಬಲಭಾಗದ ಕೆಳ ಮೂಲೆಯಿಂದ ಹಿಡಿದು ಚೌಕಟ್ಟಿನ ಎಡಭಾಗದ ಮೇಲ್ಭಾಗದಂಚಿನವರೆಗೆ ಸಾಗಿರುವ ಪಕ್ಷಿಗಳ ಸಾಲು ಋಜುರೇಖಾ ವಿನ್ಯಾಸದಂತೆ (ಡಯಾಗ್ನಲ್ ಕಾಂಪೋಸಿಷನ್) ದೃಶ್ಯವನ್ನು ಜಡ ( ಸ್ಟಿಲ್)ವಾಗಿಸದೇ, ಅವುಗಳ ಚಲನಶೀಲತೆಯನ್ನು (ಮೂವ್‌ಮೆಂಟ್) ನೋಡುಗನ ಮನಸ್ಸಿಗೆ ನಾಟಿಸುತ್ತದೆ, ಅಂತೆಯೇ ಒಟ್ಟಾರೆ ಚಿತ್ರಣದ ಜೀವಂತಿಕೆಯನ್ನು (ವೈಟ್ಯಾಲಿಟಿ) ಸಾದರಪಡಿಸುತ್ತದೆ.
* ಚಂದಿರನ ಉಪಸ್ಥಿತಿಯು, ನೀಲಾಕಾಶದ ಹಿನ್ನೆಲೆಯಲ್ಲಿ, ರಂಗೋಲಿ ಹಾಕಿದಂತೆ ಅಥವಾ ಕುಂಚದಲ್ಲಿ ರೂಪಿಸಿರುವಂತಿರುವ ಕಪ್ಪನೆಯ ನೀರುಕಾಗೆಗಳ ವಿನ್ಯಾಸದೊಂದಿಗೆ ಸಹಜವಾಗಿ ಇಡೀ ಚಿತ್ರಕ್ಕೇ ದೃಷ್ಟಿ ಬೊಟ್ಟು ಇಟ್ಟಂತೆ ಸೌಂದರ್ಯ ಪ್ರಜ್ಞೆಯನ್ನು ಇಮ್ಮಡಿಸಿದೆ. ಅದರಿಂದಾಗಿ, ಇಡೀ ಚೌಕಟ್ಟೇ ಮಧುರವಾದ ಭಾವನೆಗಳನ್ನು ನೋಡುಗನ ಮನದಲ್ಲಿ ಸೃಷ್ಟಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.