ಹಕ್ಕಿಗಳ ಪೈಕಿ ಕೊಕ್ಕರೆಗಳ ದೇಹರಚನೆ, ಜೀವನಕ್ರಮ ಭಿನ್ನ. ಜಲವಾಸಿ ಹಕ್ಕಿಗಳಲ್ಲಿ ಇವೂ ಒಂದು. ಇಂತಹ ಕೊಕ್ಕರೆ ಪ್ರಭೇಧಗಳಲ್ಲಿ ಬಸ್ಟರ್ಡ್ (ಹೆಬ್ಬಾಕ) ಹಕ್ಕಿಗಳೂ ಇವೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಕೊರಿ ಬಸ್ಟರ್ಡ್ (Kori bustard) ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಅರ್ಡಿಯೊಟಿಸ್ ಕೊರಿ (Ardeotis kori). ಇದು ಒಟಿಡಿಡೇ (Otididae) ಕುಟುಂಬಕ್ಕೆ ಸೇರಿದ್ದು, ಒಟಿಡಿಫಾರ್ಮ್ಸ್ (Otidiformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.
ಹೇಗಿರುತ್ತದೆ?
ದೊಡ್ಡ ಗಾತ್ರದ ಹಕ್ಕಿಗಳಲ್ಲಿ ಇದು ಕೂಡ ಒಂದು. ಹೆಬ್ಬಕಗಳ ಪೈಕಿ ಇದರ ಕತ್ತು ಹೆಚ್ಚು ನೀಳವಾಗಿರುತ್ತದೆ. ಕಪ್ಪು, ಬಿಳಿ ಮತ್ತು ಕಂದು ಬಣ್ಣದ ಪುಕ್ಕ ದೇಹವನ್ನು ಆವರಿಸಿರುತ್ತದೆ. ರೆಕ್ಕೆಗಳು ಮತ್ತು ಬೆನ್ನಿನ ಮೇಲೆ ಬೆಳೆದಿರುವ ಪುಕ್ಕ ಕಂದು ಬಣ್ಣದಲ್ಲಿದ್ದರೆ, ರೆಕ್ಕೆಗಳ ಒಳಭಾಗ ಬಿಳಿ ಬಣ್ಣದಲ್ಲಿರುತ್ತದೆ. ರೆಕ್ಕೆಗಳ ಅಂಚುಗಳು ಬಿಳಿ, ಕಪ್ಪು ಮಿಶ್ರಿತ ಬಣ್ಣದಲ್ಲಿರುತ್ತವೆ.
ನೀಳವಾದ ಗರಿಗಳಿಂದ ಬಾಲ ಕೂಡಿದ್ದು, ನವಿಲಿನಂತೆ ವಿಶಾಲವಾಗಿ ಹರಡುವಂತೆ ರಚನೆಯಾಗಿವೆ. ನೀಳವಾದ ಕತ್ತಿನ ಸುತ್ತ ನಯವಾದ ಪುಕ್ಕ ಬೆಳೆದಿದ್ದು, ಅಪಾಯದ ಸಂದರ್ಭಗಳಲ್ಲಿ ಸಿಂಹದ ಜೂಲಿನಂತೆ ಅರಳಿಸುವುದು ವಿಶೇಷ. ಎದೆ ಮತ್ತು ಉದರ ಭಾಗ ಬಿಳಿ ಬಣ್ಣದಲ್ಲಿರುತ್ತದೆ. ತಲೆ ದೊಡ್ಡದಾಗಿದ್ದು, ನೆತ್ತಿಯ ಮೇಲೆ ಪುಟ್ಟ ಜುಟ್ಟು ಬೆಳೆದಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ನೀಳವಾದ ಕೊಕ್ಕು ದೃಢವಾಗಿರುತ್ತದೆ. ನೀಳವಾದ ಕಾಲುಗಳು ದೃಢವಾಗಿದ್ದು, ತಿಳಿ ಹಳದಿ ಬಣ್ಣದಲ್ಲಿರುತ್ತವೆ.
ಎಲ್ಲಿದೆ?
ಆಫ್ರಿಕಾ ಖಂಡಕ್ಕೆ ಸ್ವಂತವಾದ ಹಕ್ಕಿಗಳಲ್ಲಿ ಇದು ಕೂಡ ಒಂದು. ಇಥಿಯೋಪಿಯಾ, ಕೀನ್ಯಾ, ತಾಂಜಾನಿಯಾ. ಬೋಟ್ಸ್‌ವಾನಾ, ನಮೀಬಿಯಾ, ಜಿಂಬಾಬ್ವೆ, ಸ್ವಾಜಿಲ್ಯಾಂಡ್, ಸೊಮಾಲಿಯಾ, ಸುಡಾನ್, ದಕ್ಷಿಣ ಸುಡಾನ್ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಹುಲ್ಲು ಬೆಳೆದಿರುವ ಶುಷ್ಕಭೂಮಿ, ಮರಳು ಮತ್ತು ಮಣ್ಣುಮಿಶ್ರಿತ ಪ್ರದೇಶ, ಸವನ್ನಾ ಹುಲ್ಲುಗಾವಲು ಮತ್ತು ಪೊದೆಗಳು ಬೆಳೆದಿರುವ ಪ್ರದೇಶಗಳಲ್ಲಿ ಇದು ವಾಸಿಸುತ್ತದೆ. ಕೃಷಿಭೂಮಿಗಳಲ್ಲೂ ಇದು ಕಾಣಿಸಿಕೊಳ್ಳುತ್ತದೆ.
ಜೀವನಕ್ರಮ ಮತ್ತು ವರ್ತನೆ
ವಲಸೆ ಹೋಗದ ಹಕ್ಕಿಗಳಲ್ಲಿ ಇದು ಕೂಡ ಒಂದು. ಆಹಾರ ಮತ್ತು ನೀರು ಹೆಚ್ಚಾಗಿ ದೊರೆಯುವಂತಹ ಪ್ರದೇಶದಲ್ಲೇ ಹೆಚ್ಚು ಕಾಲ ಜೀವಿಸುತ್ತದೆ. ಒಂಟಿಯಾಗಿ ಜೀವಿಸಲು ಇಷ್ಟಪಟ್ಟರೂ ಆಗಾಗ್ಗೆ ಪುಟ್ಟ ಗುಂಪುಗಳು ಅಥವಾ ಸಂಗಾತಿಯೊಂದಿಗೆ ಸುತ್ತುತ್ತದೆ. ಅಪರೂಪಕ್ಕೆ ದೊಡ್ಡ ಗುಂಪು ರಚಿಸಿಕೊಳ್ಳುತ್ತದೆ. ಹಗಲೆಲ್ಲಾ ಆಹಾರ ಅರಸಿ ಸುತ್ತುತ್ತದೆ. ದೊಡ್ಡಗಾತ್ರದ ಹಕ್ಕಿಯಾಗಿದ್ದರೂ, ಇತರೆ ಪ್ರಾಣಿ–ಪಕ್ಷಿಗಳ ಕಣ್ಣಿಗೆ ಕಾಣಿಸಿಕೊಳ್ಳುವುದಕ್ಕೆ ಹೆಚ್ಚು ಇಷ್ಟಪಡುವುದಿಲ್ಲ.
ಮಾನವರನ್ನು ಕಂಡರೆ ಭಯಪಡದಿದ್ದರೂ, ಅಪಾಯದ ಮುನ್ಸೂಚನೆ ಸಿಕ್ಕರೆ ವೇಗವಾಗಿ ಓಡಿ ತಪ್ಪಿಸಿಕೊಳ್ಳುತ್ತದೆ. ರೆಕ್ಕೆಗಳಿದ್ದರೂ ಹಾರುವ ಸಾಮರ್ಥ್ಯವಿಲ್ಲ. ರೆಕ್ಕೆಗಳನ್ನು ಬಡಿಯುತ್ತಾ ಪುಕ್ಕ ಅರಳಿಸುತ್ತಾ ಬೇಟೆಯಾಡಲು ಬಂದ ಪ್ರಾಣಿಗಳನ್ನು ಹೆದರಿಸುವ ಪ್ರಯತ್ನ ಮಾಡುತ್ತದೆ. ವಿಶಿಷ್ಟ ಶಬ್ದಗಳನ್ನು ಹೊರಡಿಸುವ ಮೂಲಕ ಇತರೆ ಹೆಬ್ಬಕಗಳೊಂದಿಗೆ ಸಂವಹನ ನಡೆಸುತ್ತದೆ.
ಆಹಾರ
ಇದು ಸರ್ವಭಕ್ಷಕ ಹಕ್ಕಿ. ಸಸ್ಯಾಹಾರ ಮತ್ತು ಮಾಂಸಾಹಾರ ಎರಡನ್ನೂ ಸೇವಿಸುತ್ತದೆ. ಹೆಚ್ಚಾಗಿ ಪ್ರಾಣಿಗಳ ಮಾಂಸ, ವಿವಿಧ ಬಗೆಯ ಹುಳುಗಳು, ಪುಟ್ಟಗಾತ್ರದ ಸಸ್ತನಿಗಳು, ಸರೀಸೃಪಗಳು ಮತ್ತು ಪುಟ್ಟಗಾತ್ರದ ಹಕ್ಕಿಗಳನ್ನು ಭಕ್ಷಿಸುತ್ತದೆ. ವಿವಿಧ ಬಗೆಯ ಕಾಳುಗಳು, ಹಣ್ಣುಗಳು, ಬೆರ್‍ರಿಗಳನ್ನೂ ತಿನ್ನುತ್ತದೆ. ಅಪರೂಪಕ್ಕೆ ಅಕೈಕಾ ಮರಗಳು ಸ್ರವಿಸುವ ಜಿಗಿರನ್ನೂ ತಿನ್ನುತ್ತದೆ.
ಸಂತಾನೋತ್ಪತ್ತಿ
ಗಂಡು ಹಕ್ಕಿ ಗಡಿಯಲ್ಲಿನ ಎಲ್ಲ ಹೆಣ್ಣು ಹೆಬ್ಬಕಗಳೊಂದಿಗೆ ಜೊತೆಯಾಗುತ್ತದೆ. ಮಾರ್ಚ್‌ನಿಂದ ಆಗಸ್ಟ್ ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಈ ಅವಧಿಯಲ್ಲಿ ಗಂಡು ಹೆಬ್ಬಕಗಳು ಹೆಣ್ಣಿನ ಗಮನ ಸೆಳೆಯಲು ವಿವಿಧ ಶಬ್ದಗಳಿಂದ ಕೂಗುತ್ತವೆ.
ಉಷ್ಟ್ರಪಕ್ಷಿಯಂತೆ ಬಲಿಷ್ಠವಾದ ಕಾಲುಗಳಿದ್ದು, ನೆಲವನ್ನು ಅಗೆದು, ಪುಟ್ಟ ಹಳ್ಳ ನಿರ್ಮಿಸಿ ಅದರಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಹೆಣ್ಣು ಹಕ್ಕಿ ಸಾಮಾನ್ಯವಾಗಿ ಒಂದು ಅಥವಾ ಎರಡು ಮೊಟ್ಟೆಗಳನ್ನು ಇಡುತ್ತದೆ. ಸುಮಾರು 25 ದಿನ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳನ್ನು ತಾಯಿ ಹಕ್ಕಿಯೇ ಹೆಚ್ಚು ಕಾಳಜಿ ವಹಿಸಿ ನೋಡಿಕೊಳ್ಳುತ್ತದೆ.
ಗಂಡು ಹೆಬ್ಬಕ ಆರೈಕೆ ಮಾಡುವುದು ಅಪರೂಪ. 4ರಿಂದ 5 ವಾರಗಳ ನಂತರ ಮರಿಗಳಿಗೆ ಪುಕ್ಕ ಮೂಡುತ್ತದೆ. ಸುಮಾರು ಒಂದು ವರ್ಷದ ವರೆಗೆ ಮರಿಗಳು ತಾಯಿ ಆರೈಕೆಯಲ್ಲೇ ಬೆಳೆಯುತ್ತವೆ. ಎರಡು ವರ್ಷಗಳ ನಂತರ ವಯಸ್ಕ ಹಂತ ತಲುಪುತ್ತವೆ.
ಸ್ವಾರಸ್ಯಕರ ಸಂಗತಿಗಳು
* ಈ ಹಕ್ಕಿ ದೇಹವನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳುವುದಕ್ಕೆ ಇಷ್ಟಪಡುತ್ತದೆ.
* ಬಹುತೇಕ ಹಕ್ಕಿಗಳು ನೀರಿಗೆ ಕೊಕ್ಕು ಚಾಚಿ ಕುಡಿಯುತ್ತವೆ. ಆದರೆ ಈ ಹಕ್ಕಿ ನೀರನ್ನು ಹೀರಿಕೊಳ್ಳುತ್ತದೆ.
* ಸಾಮಾನ್ಯವಾಗಿ ಇವು ಶಬ್ದ ಮಾಡುವುದಿಲ್ಲ. ಅಪಾಯ ಎದುರಾದಾಗ ಮಾತ್ರ ಜೋರಾಗಿ ಕಿರುಚುತ್ತವೆ. ಮರಿಗಳಿಗೆ ಅಪಾಯ ಎದುರಾದರೆ ಆಕ್ರಮಣಕಾರಿ ಸ್ವಭಾವ ತೋರುತ್ತವೆ.
*ಜೀಬ್ರಾ, ಜಿಂಕೆಯಂತಹ ಕೆಲವು ಸಸ್ಯಾಹಾರಿ ಪ್ರಾಣಿಗಳು ಗುಂಪು ಇರುವ ಕಡೆ ಇವು ಕೂಡ ಇರುತ್ತವೆ.
ಗಾತ್ರ ಮತ್ತು ಜೀವಿತಾವಧಿ
4.8–18 ಕೆ.ಜಿ.:ದೇಹದ ತೂಕ
60–120 ಸೆಂ.ಮೀ:ದೇಹದ ಎತ್ತರ
80–150 ಸೆಂ.ಮೀ: ದೇಹದ ಉದ್ದ
80 ಕಿ.ಮೀ/ಗಂಟೆಗೆ:ಓಡುವ ವೇಗ
27 ವರ್ಷ:ಸರಾಸರಿ ಜೀವಿತಾವಧಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.