ADVERTISEMENT

ನೆಲೆ ಕಳೆದುಕೊಳ್ಳುತ್ತಿರುವ ಬಾನಾಡಿಗಳು!

ಚಂದ್ರಹಾಸ ಕೋಟೆಕಾರ್
Published 27 ಡಿಸೆಂಬರ್ 2018, 19:30 IST
Last Updated 27 ಡಿಸೆಂಬರ್ 2018, 19:30 IST
ಕೆರೆಯಂಗಳದಲ್ಲಿ ಹಕ್ಕಿಗಳು
ಕೆರೆಯಂಗಳದಲ್ಲಿ ಹಕ್ಕಿಗಳು   

ಕಾಣದಂತೆ ಮಾಯವಾದವೋ ಹಕ್ಕಿಗಳು.. ಇದು ಪಕ್ಷಿ ಪ್ರಿಯರ ಮನದ ಅಳಲು. ನವೆಂಬರ್‌, ಡಿಸೆಂಬರ್‌ನಲ್ಲಿ ಚಳಿಗಾಲ ಕಾಲಿಡುತ್ತಿದ್ದಂತೆ ವಲಸೆ ಪಕ್ಷಿಗಳು ಉದ್ಯಾನ ನಗರದ ಕೆರೆಗಳನ್ನು ಅರಸಿಕೊಂಡು ಬರುತ್ತಿದ್ದವು. ವಿವಿಧ ಜಾತಿಯ ಸಾವಿರಾರು ಹಕ್ಕಿಗಳು ಈ ಕಾಲದಲ್ಲಿ ಕಾಣಲು ಸಿಗುತ್ತಿದ್ದವು.

ಆದರೆ ಕೆಲ ವರ್ಷಗಳಿಂದ ವಲಸೆ ಹಕ್ಕಿಗಳನ್ನು ನೋಡುವುದೇ ಅಪರೂಪವಾಗಿದೆ. ಸ್ಥಳೀಯ ಪಕ್ಷಿಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ನಗರ ಬೆಳೆದಂತೆಲ್ಲ ಹೆಚ್ಚುತ್ತಿರುವ ತಾಪಮಾನ, ಶಬ್ದ ಮತ್ತು ವಾಯು ಮಾಲಿನ್ಯದಿಂದಾಗಿ‍ಪಕ್ಷಿ ಸಂತತಿ ಕ್ಷೀಣಿಸುತ್ತಿದೆ. ಮನುಷ್ಯರಿಂದ ದೂರವಿರಲು ಪ್ರಯತ್ನಿಸುತ್ತಿವೆ.

ಕೆರೆಗಳು ಕಣ್ಮರೆಯಾಗುತ್ತಿರುವ ಸಮಸ್ಯೆ ಒಂದೆಡೆಯಾದರೆ, ಇರುವ ಕೆರೆಗಳಲ್ಲಿ ಪಕ್ಷಿ ಸಂಕುಲಕ್ಕೆ ಹಿತಕರ ವಾತಾವರಣ ಇಲ್ಲದಿರುವುದು ಅವುಗಳ ಜೀವಕ್ಕೆ ಕುತ್ತು ತರುತ್ತಿವೆ. ಇನ್ನು ಕೆರೆ ಒಡಲು ಸೇರುತ್ತಿರುವ ಕಲುಷಿತ ನೀರು ಜಲಚರಗಳ ಮಾರಣಹೋಮಕ್ಕೆ ಕಾರಣವಾಗುತ್ತಿದೆ. ಇದು ಪಕ್ಷಿಗಳ ಆಹಾರಕ್ಕೂ ಕುತ್ತು ತರುತ್ತಿವೆ.

ADVERTISEMENT

ಹೀಗಾಗಿ ವಲಸೆ ಪಕ್ಷಿಗಳು ನಗರದ ದಾರಿಯನ್ನೇ ಮರೆಯುತ್ತಿವೆ. ಕೆರೆಗಳಲ್ಲಿ ನಿಲ್ಲಲು ನೆಲೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಪಕ್ಷಿಗಳು ಇತ್ತ ಕಡೆ ತಿರುಗಿಯೂ ನೋಡುತ್ತಿಲ್ಲ.

‘ಕೆರೆಗಳ ಸುತ್ತ ಸಿಮೆಂಟ್ ಗೋಡೆ ಕಟ್ಟಿ, ನೀರಿನ ತೊಟ್ಟಿಯಂತೆ ಮಾಡಬೇಕು. ಕೆರೆಯ ಬದಿಯಲ್ಲಿ ಗಿಡ, ಮರಗಳ ಜತೆಗೆ ಹುಲ್ಲು ಬೆಳೆಸಿ ವೈಜ್ಞಾನಿಕವಾಗಿ ಕೆರೆಗಳನ್ನು ಅಭಿವೃದ್ಧಿ ಮಾಡಿದರೆ, ವಲಸೆ ಪಕ್ಷಿಗಳನ್ನು ಮತ್ತೆ ನೋಡುವ ಭಾಗ್ಯ ಉದ್ಯಾನ ನಗರದ ಜನರಿಗೆ ಸಿಗುತ್ತದೆ’ ಎನ್ನುತ್ತಾರೆ ಬಿಬಿಎಂಪಿ ವನ್ಯ ಜೀವಿ ಪರಿಪಾಲಕ ಪ್ರಸನ್ನ ಕುಮಾರ್‌ ಎ.

ಒಂದು ಕಾಲದಲ್ಲಿ ನಗರದಲ್ಲಿ ಕೆಲವು ಪ್ರದೇಶಗಳಲ್ಲಿ ತಿಳಿ ನೀರಿನಿಂದ ಕಂಗೊಳಿಸುತ್ತಿದ್ದ ಕೆರೆಗಳಿಗೆ ಬರುವ ವಲಸೆ ಹಕ್ಕಿಗಳನ್ನು ನೋಡುವುದಕ್ಕಾಗಿಯೇ ಇತರೆ ಪ್ರದೇಶಗಳಿಂದ ಪಕ್ಷಿ ಪ್ರಿಯರು ಬರುತ್ತಿದ್ದರು. ಕೆರೆಗಳ ಸುತ್ತ ಚಿಲಿಪಿಲಿ ಸದ್ದು ಮಾಡುತ್ತಾ ರೆಕ್ಕೆಬಿಚ್ಚಿ ಹಾರಾಡುವ ಅವುಗಳ ಸೊಬಗನ್ನು ನೋಡುತ್ತ ಮೈ ಮರೆಯುತ್ತಿದ್ದರು.

ಮಡಿವಾಳ, ಹೆಬ್ಬಾಳ, ಅಗರ, ಪುಟ್ಟೇನಹಳ್ಳಿ ಮತ್ತು ಸ್ಯಾಂಕಿ ಕೆರೆಗಳಲ್ಲಿ ಹೆಚ್ಚು ಹಕ್ಕಿಗಳು ವಿಹರಿಸುತ್ತಿದ್ದವು. ವಿದೇಶಿ ಹಕ್ಕಿಗಳೂ ಹೆಚ್ಚಾಗಿ ಬರುತ್ತಿದ್ದವು. ಇವು ಮೂರು ಅಥವಾ ನಾಲ್ಕು ತಿಂಗಳು ಕೆರೆಯ ಪರಿಸರದಲ್ಲೇ ಗೂಡು ಕಟ್ಟಿ, ವಾಸವಿರುತ್ತಿದ್ದವು. ನಂತರ ತಮ್ಮ ಮೂಲ ನೆಲೆಗೆ ಹಿಂತಿರುಗುತ್ತಿದ್ದವು.

‘ಈಗ ಪಕ್ಷಿಗಳನ್ನು ಆಕರ್ಷಿಸುವ ನವ ಚೈತನ್ಯ ಕೆರೆಗಳಿಗೆ ಇಲ್ಲ. ನಗರದ ಬಹುತೇಕ ಕೆರೆಗಳು ಬಡಕಲಾಗಿವೆ. ಕಲುಷಿತ ನೀರಿನಿಂದ ಮಲಿನಗೊಂಡು ಸುತ್ತಮುತ್ತ ದುರ್ನಾತ ಬೀರುತ್ತಿವೆ. ಹಕ್ಕಿಗಳಲ್ಲ, ಮನುಷ್ಯರೂ ಕೆರೆಗಳನ್ನು ನೋಡಿದರೆ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಗರದ ನಿವಾಸಿ ರಾಮೇಗೌಡ.

ಕಾಂಕ್ರಿಟ್‌ ಕಾಡಿನಂತೆ ಬದಲಾಗುತ್ತಿರುವ ನಗರದಲ್ಲಿ ಇನ್ನೂ ಅಸ್ತಿತ್ವ ಉಳಿಸಿಕೊಂಡಿರುವ ಕೆರೆ, ಹಸಿರು ತಾಣಗಳನ್ನು ರಕ್ಷಿಸಿದರೂ ಪಕ್ಷಿ ಹಾಗೂ ವನ್ಯ ಜೀವಿ ಸಂಕುಲಕ್ಕೆ ನೆಲೆ ಕಲ್ಪಿಸಿದಂತಾಗುತ್ತದೆ.

ಜೀವ ವೈವಿಧ್ಯ ತಾಣಗಳು ನಿರ್ಮಾಣವಾಗಲಿ

ನಗರದಲ್ಲಿ ಪಕ್ಷಿ ಸಂಕುಲಕ್ಕೆ ನೆಲೆ ಕಲ್ಪಿಸುವ ಕೆಲ ಸ್ಥಳಗಳಿವೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರದೇಶ, ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಆವರಣವೂ ಪಕ್ಷಿ, ವನ್ಯ ಜೀವಿಗಳಿಗೆ ನೆಲೆ ಕಲ್ಪಿಸಿದೆ.

ನೈಸರ್ಗಿಕವಾಗಿ ಜೀವ ಸಂಕುಲಕ್ಕೆ ವಾಸಕ್ಕೆ ಅನುಕೂಲ ಕಲ್ಪಿಸುವ ಪ್ರದೇಶಗಳನ್ನು ಸರ್ಕಾರ ಕಾಳಜಿ ವಹಿಸಿ ಅಭಿವೃದ್ಧಿಪಡಿಸಿದರೆ, ವಲಸೆ ಹಕ್ಕಿಗಳಿಗೆ ವಾಸಸ್ಥಾನ ಕಲ್ಪಿಸಿಕೊಟ್ಟಂತಾಗುತ್ತದೆ. ‌ಇನ್ನು ಗ್ರಾಮಾಂತರ ಪ್ರದೇಶದಲ್ಲಿರುವ ಹೊಸಕೋಟೆ ಕೆರೆಯೂ ಪಕ್ಷಿಗಳಿಗೆ ಪ್ರಿಯವಾದ ಸ್ಥಳ. ಈಗಾಗಲೇ ಇಲ್ಲಿಗೆ ವಲಸೆ ಹಕ್ಕಿಗಳು ಬರುತ್ತಿವೆ. ಇದು ಪಕ್ಷಿಗಳ ವಾಸಕ್ಕೆ ಉತ್ತಮ ನೆಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.