ನಮಸ್ಕಾರ
ಗಮಯನ ಗುಡ್ಡದಿಂದ ಮಾತಾಡ್ತಾ ಇದ್ದೀನಿ. ಹುಲ್ಲುಗಾವಲಲ್ಲಿ ನಾನಿದ್ದ ಜಾಗದಲ್ಲಿ ಮೊದಲು ಅಲ್ಲೊಂದು ಇಲ್ಲೊಂದು ಗಿಡಗಳು, ಮೇಲ್ನೋಟಕ್ಕೆ ಬಯಲು, ಈಗ ಅಕೇಶಿಯಾ ನೆಡುತೋಪಿನ ಮರಗಳು ತುಂಬಿವೆ. ನೆಡುತೋಪಿನಲ್ಲಿ ಆಹಾರವಿಲ್ಲದೇ ನಮ್ಮ ಧ್ವನಿ ಕ್ಷೀಣಿಸುತ್ತಿದೆ. ಕಷ್ಟದಲ್ಲಿ ಮಾತು ಹೊರಡುತ್ತಿಲ್ಲ. ನಾನು ಕಾಟಿ ಕಣ್ರೀ... ಕಾಡೆಮ್ಮೆ, ಗಮಯ ಅಂತಾನೂ ಕರೀತಾರೆ.
ಆರೆಂಟು ಕ್ವಿಂಟಾಲ್ ದೇಹ ಹೊತ್ತ ದೈತ್ಯ ಸಸ್ಯಾಹಾರಿ. ನಿಮ್ಮ ಗಜಣ್ಣ(ಆನೆಯಣ್ಣ)ನ ನಂತರದ ದೊಡ್ಡ ಜೀವ ಅಂದ್ರೆ ನ(ನ್ನ)ಮ್ಮದು. ದಿನಕ್ಕೆ 50-60 ಕೆ.ಜಿ ಆಹಾರ ತಿನ್ನುತ್ತ ಪಶ್ಚಿಮ ಘಟ್ಟದ ಕಾಡಲ್ಲಿ ಬದುಕಿದವರು. 15-20 ಕಿಲೋ ಮೀಟರ್ ಸರಹದ್ದಿನಲ್ಲಿ ಸುತ್ತಾಡ್ತಾ ಹುಲ್ಲು, ಗುರಿಗೆ, ಹೊರಕಣೆ, ಕಲ್ಲುಬಾಳೆ, ಕೌಲುಕಾಯಿ, ಬಿದಿರು ಸೊಪ್ಪು, ಜವುಗು ನೆಲದ ಕಳೆ ತಿನ್ತಾ ಸಂತತಿ ಬೆಳೆಸಿದವರು. ಗಮಯನ ಗುಡ್ಡ, ಗಮಯನ ಜಡ್ಡಿ, ಗಮಯನ ಮನೆ, ಎಮ್ಮೆಜಡ್ಡಿ, ಕ್ವಾಣನ ಜಡ್ಡಿ ಹೀಗೆ ಕಾಡು ನೆಲೆಗಳಿಗೆ ಹೆಸರು ಬಂದಿದ್ದು ನನ್ನ ಕುಲಜರಿಂದಲೇ! ಈಗ ಈ ಜಾಗಗಳಲ್ಲಿ ನೆಡುತೋಪು, ಅಡಿಕೆ ತೋಟ, ರಸ್ತೆಗಳಾಗಿ ಬದಲಾಗ್ತಾ ಅನಾಥರಾಗಿ ತವರುಮನೆಯಿಂದ ಬೀದಿಗೆ ಬೀಳ್ತಿದ್ದಿವಿ.
ಕಾಲುಬಾಯಿ ಬೇನೆಯಿಂದ ಉತ್ತರ ಕನ್ನಡದ ಅಣಶಿ ಪ್ರದೇಶಗಳಲ್ಲಿ ಕೆಲವೇ ತಿಂಗಳಲ್ಲಿ ನಮ್ಮ ಕುಲದ ಸುಮಾರು 15 ಜೀವಿಗಳು ಇಹಲೋಕ ತ್ಯಜಿಸಿದವು. ಸಾಂಕ್ರಾಮಿಕ ರೋಗಗಳು ಸುರಕ್ಷಿತ ಕಣಿವೆಯ ಕಾಡಿಗೆ ತಲುಪಿವೆ. ಇದೇ ಹೊತ್ತಿಗೆ ಶಿರಸಿ-ಸಿದ್ದಾಪುರ ತಾಲ್ಲೂಕಿನಲ್ಲಿ ಸಾವಿನ ಸರಣಿ ಶುರುವಾಗಿದೆ. ವನ್ಯಜೀವಿ ತಜ್ಞರ ಪ್ರಕಾರ ಈ ಪ್ರದೇಶದ ಸಿದ್ದಾಪುರ, ಕ್ಯಾದಗಿ, ಜಾನ್ಮನೆ, ಶಿರಸಿ, ಹುಲೇಕಲ್ ವಲಯಗಳಲ್ಲಿ ಆರೆಂಟು ಗುಂಪುಗಳಿಂದ ಸುಮಾರು 50 ಸಂಖ್ಯೆಯಲ್ಲಿ ಇದ್ದೀವಂತೆ. ಜಾನ್ಮನೆ ಅರಣ್ಯ ವಲಯದ ದೇವನಮನೆ ಕಾಡು ಗುಡ್ಡಗಳಲ್ಲಿ 2006 ರಲ್ಲಿ 17 ಮಂದಿ ನಾವಿದ್ದೆವು ಎಂದು ಅಂಕೋಲಾ ಅಸೊಳ್ಳಿ ಹಳ್ಳಿಗರು ಎಣಿಸಿದವರು. ಮೂರು ವರ್ಷಗಳ ಹಿಂದೆ ಎಲೆಚಿಗುರು ಘಟ್ಟದಲ್ಲಿ ಒಬ್ಬರು ಕಳ್ಳಬೇಟೆಗೆ ಬಲಿಯಾದರು. ಅದನ್ನು ದಾಖಲೂ ಮಾಡಿದರು. ಈಗ ಪ್ರದೇಶದಲ್ಲಿ ಉಳಿದದ್ದು ಆರೆಂಟು ಮಾತ್ರ! ಊರ ಗದ್ದೆ, ತೋಟ, ಕೆರೆ, ಹೊಳೆ, ಹುಲ್ಲುಗಾವಲು, ರಸ್ತೆಗಳಲ್ಲಿ ಕಾಣಿಸ್ತಿದ್ದೆವು. ಈಗ ನಮ್ಮವರೆಲ್ಲ ಎಲ್ಲಿ ಮಾಯವಾದರೋ? ಹಿರಿಯ ಅರಣ್ಯ ಅಧಿಕಾರಿಗಳಂತೆ ಫಾರಿನ್ ಟೂರ್‌ಗೆ ಹೋಗಿರಬಹುದು ಅಂದ್ರಾ? ಹಾಗೇನಿಲ್ಲ, ಬೇಟೆ ತಂಡದ ವ್ಯವಸ್ಥಿತ ಸಂಚಿಗೆ ಬಲಿಯಾಗ್ತಾ ಕೊನೆಗೆ ಉಳಿದದ್ದು ಇಷ್ಟೇ ಮಂದಿ!
ನಮ್ಮನ್ನು ಬೇಟೆಯಾಡಿ ಮಾಂಸ, ಚರ್ಮ, ಎಲುಬು, ಕೋಡು ಸಾಗಿಸುವ ಹಂತಕ ತಂಡಗಳು ಮಲೆನಾಡಿನಾದ್ಯಂತ ಕೆಲಸ ಮಾಡ್ತಿವೆ. ಮೇವಿನ ಜಾಗ, ಕೃಷಿ ಭೂಮಿಗೆ ನುಗ್ಗುವ ಸಮಯ, ನೀರು ಕುಡಿಯಲು ಬರುವ ಸ್ಥಳ ತೋರಿಸಿ ಬೇಟೆಗೆ ನೆರವು ನೀಡುವವರು ಇದ್ದಾರೆ. ಕಾಡಿನ ಹುಲ್ಲುಗಾವಲು ನೆಡುತೋಪಾಗಿ ಆಹಾರವಿಲ್ಲದೇ ಹಸಿವು ತಡೆಯೋಕೆ ಆಗದೇ ಭತ್ತದ ಅಗೆಸಸಿ ತಿನ್ನುವುದು, ಎಳೆ ಅಡಿಕೆ , ಬಾಳೆ ಮರ ಮುರಿಯೋದು ಕಲಿತ್ವಿ. ಕಬ್ಬಿನ ಬೆಳೆ ಹಾನಿ ಮಾಡಿದ್ವಿ. ಬೆಳೆ ಹಾನಿಯಾಗಿದ್ದಕ್ಕೆ ಕೃಷಿಕರಿಗೆ ನಷ್ಟ. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕಾದ ಅರಣ್ಯ ಇಲಾಖೆಯವರಿಗೆ ದಾಖಲೆಗಳು ಬೇಕು. ಹಾನಿಯ ಚಿತ್ರ, ಭೂಮಿಯ ದಾಖಲೆ, ಪಂಚನಾಮೆ ವರದಿ, ಅರ್ಜಿ ಪಡೆದು ಮೇಲಾಧಿಕಾರಿಗಳ ಕಚೇರಿ ಕಳಿಸಿ ಎಷ್ಟೋ ತಿಂಗಳ ನಂತರ ಚೂರುಪಾರು ಪರಿಹಾರ ಘೋಷಣೆ ಮಾಡ್ತಾರೆ. ಸಂಕಷ್ಟ ಅನುಭವಿಸಿದವರಿಗೆ ಕಾಡಿನ ಮೇಲೆ ಸೇಡು ಹುಟ್ಟುತ್ತ ಬೇಟೆಗೆ ಪ್ರೋತ್ಸಾಹ ಸಿಗ್ತಿದೆ.
ಪರಿಹಾರ ನೀಡಿಕೆಯಲ್ಲಿ ಸರಳೀಕರಣವಾಗಬೇಕು. ವನ್ಯಜೀವಿ ಕಾನೂನು ಪ್ರಕಾರ ಬೇಟೆ ಮಹಾ ಅಪರಾಧ. ಒಂದೊಂದು ಗುಂಪಿನಲ್ಲಿ ಐದಾರು ಮಂದಿ ಒಟ್ಟಿಗೆ ಓಡಾಡ್ತೀವಿ. ಇವನ್ನು ಮುಗಿಸಿದರೆ ಸಮಸ್ಯೆ ಶಾಶ್ವತ ಪರಿಹಾರ ಅಲ್ಲವೇ? ಬೇಟೆಯಾಡಿ ಮಾಂಸಗಳನ್ನು ಪ್ಯಾಕ್ ಮಾಡಿ ಸುರಕ್ಷಿತವಾಗಿ ದೂರದ ನಗರದ ಗ್ರಾಹಕರಿಗೆ ತಲುಪಿಸುವ ಪರಿಣಾಮ ವರ್ಷದಿಂದ ವರ್ಷಕ್ಕೆ ಸಂತತಿ ಕುಸೀತಿದೆ.
ಪಶ್ಚಿಮಘಟ್ಟ ಅಭಿವೃದ್ಧಿ, ವನ್ಯಜೀವಿ ಸಂರಕ್ಷಣೆ ಕುರಿತು ಎಷ್ಟೆಲ್ಲ ಕಾರ್ಯಕ್ರಮ ನಡೆದಿದೆಯಲ್ಲವೇ? ವಿಶ್ವ ಬ್ಯಾಂಕ್ ನೆರವಿನ ಸಾಮಾಜಿಕ ಅರಣ್ಯ ಯೋಜನೆ, ಬ್ರಿಟನ್ ನೆರವಿನ ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ, ಜಪಾನ್ ನೆರವಿನ ಕರ್ನಾಟಕ ರಾಜ್ಯ ಸುಸ್ಥಿರ ಅರಣ್ಯ ಹಾಗೂ ಜೀವ ವೈವಿಧ್ಯ ಸಂರಕ್ಷಣಾ ಯೋಜನೆಗಳು 1987-2014ರ ವರೆಗೂ ಜಾರಿಯಾಗಿವೆ. ಹುಲ್ಲು ಬೆಳೆಯುವ ಜಾಗದಲ್ಲೆಲ್ಲ ಇಲಾಖೆ ನೆಡುತೋಪು. ಕೃಷಿ ಭೂಮಿಗೆ ನುಗ್ಗಿದ ಬಳಿಕ ಮಾನವರಿಗೂ -ನಮ್ಮಂತಹ ವನ್ಯಜೀವಿಗಳಿಗೂ ಸಂಘರ್ಷ ಜೋರಾಯ್ತು.
ಉರುವಲಿಗೆ ಅಕೇಶಿಯಾ ಬೇಡವೇ? ಜನ ಸಹಭಾಗಿತ್ವ ಅರಣ್ಯ ಯೋಜನೆಯಲ್ಲಿ ಗ್ರಾಮ ಅರಣ್ಯ ಸಮಿತಿಗಳಿಗೆ ಆದಾಯ ಇದರಿಂದ ದೊರೆತ್ತಿಲ್ಲವೇ? ಅಧಿಕಾರಿಗಳು ಕೇಳುತ್ತಾರೆ. ನಮ್ಮ ತಂಡಕ್ಕೆ ಆವಾಸದ ಸರಹದ್ದಿನಲ್ಲಿ ಬಯಲಿನ ಜಾಗ ಸಿಗುವುದೇ 100-200 ಹೆಕ್ಟೇರ್, ಪ್ರತಿ ಅರಣ್ಯ ವಲಯದಲ್ಲಿ ನೆಡುತೋಪು ಬೆಳೆಸೋದು ಅರಣ್ಯೀಕರಣದ ಕಾಳಜಿಗಿಂತ ಕಾಮಗಾರಿಯ ಕಾಸಿನ ಲಾಭ, ಗುಂಡಿ ತೆಗೆದು ಹೆಚ್ಚು ಹೆಚ್ಚು ಗಿಡ ನೆಡುವ ಯುದ್ಧ.
ಯಾಣದಂಥ ನಿಸರ್ಗರಮ್ಯ ಕಾಡಿನ ಪ್ರದೇಶ ಇರಲಿ, ಕಾವೇರಿ ನದಿ ಕಣಿವೆ ಭಾಗಮಂಡಲ ಇರಲಿ, ಆಗುಂಬೆ ತುದಿಯಾಗಲಿ, ತೀರ್ಥಹಳ್ಳಿಯ ಶರಾವತಿ ನದಿಮೂಲ ಅಂಬುತೀರ್ಥವಾಗಲಿ ಇಲಾಖೆಗೆ ಗೊತ್ತಿರೋದು ಅಕೇಶಿಯಾ ಅಕೇಶಿಯಾ ಅಕೇಶಿಯಾ! ಹುಲ್ಲು ತಿನ್ನುವ ನಾವು ಇಲ್ಲಿನ ಕಾಡಲ್ಲಿರೋದು 40 ವರ್ಷದಿಂದ ಅವ್ರಿಗೆ ಮರೆತೇ ಹೋಗಿದೆ.
ವನ್ಯಜೀವಿ ಕಾನೂನು ಬಿಗಿಯಾಗಿದ್ದರೂ ಇಂದಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ನಾಲ್ಕೇ ದಿನಕ್ಕೆ ಬೇಟೆಗಾರರಿಗೆ ಜಾಮೀನು ದೊರೆಯುವ ಪರಿಸ್ಥಿತಿ. ಸತ್ತರೆ, ಬೇಟೆಯಾಡಿದ್ದು ಬೆಳಕಿಗೆ ಬಂದರೆ ಖರ್ಚಿಗೆ ಕಷ್ಟವೆಂದು ತೆರೆಮರೆಯಲ್ಲಿ ಮುಚ್ಚಿ ಹಾಕುವ ಅಧಿಕಾರಿಗಳ ಪ್ರಯತ್ನ. ಕಳ್ಳರ ಜೊತೆಗೆ ಕೈಜೋಡಿಸೋದು ಯಾವತ್ತಿನ ಲಾಭದಾಯಕ ಕೆಲಸ. ತೋಟ, ಗದ್ದೆ ತಿನ್ನೋ ಜೀವಿ ಸತ್ತರೆ ಬೇಸಾಯಕ್ಕೆ ಅನುಕೂಲ ಅನ್ನೋ ಲೆಕ್ಕಾಚಾರದಲ್ಲಿ ಕಾಡಿನೂರಲ್ಲಿ ನಮಗೆಲ್ಲ ಸಾವಿನ ಭಾಗ್ಯ ಸಿಗುತ್ತಿದೆ.
ಕಾಡಲ್ಲಿ ನಾವು ಎಷ್ಟು ಸಂಖ್ಯೇಲಿ ಇದ್ದೀವಿ? ನಮಗೆ ಆಹಾರ ಕೊರತೆ ಇದೆಯೇ? ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು 2017 ರಲ್ಲಿ ಬರೆದ ಪತ್ರ ನೋಡಿ ‘ಸಿದ್ದಾಪುರ, ಜಾನ್ಮನೆ, ಹುಲೇಕಲ್, ಕ್ಯಾದಗಿ ವಲಯಗಳಲ್ಲಿ ಕಾಡೆಮ್ಮೆ ಇರುವ ಸಾಧ್ಯತೆ ಇದೆ, ಎಷ್ಟು ಸಂಖ್ಯೆಯಲ್ಲಿ ಇದ್ದಾವೆಂದು ಗೊತ್ತಿಲ್ಲ. ಕಾಡೆಮ್ಮೆಗಳಿಗೆ ಅರಣ್ಯದಲ್ಲಿ ಆಹಾರದ ಕೊರತೆ ಇಲ್ಲ’ – ಇದು ನಮ್ಮ ಊಟ ಕಸಿದವರ ಅಧೀಕೃತ ಉತ್ತರ! ಬಾಳೂರು, ಹೊಸ್ತೋಟಗಳಲ್ಲಿ ಇತ್ತೀಚೆಗೆ ನಮ್ಮವರು ಇಬ್ಬರು ಸತ್ತು ಹೋಗಿದ್ದಾರೆ. ಅದನ್ನು ಸೇರಿ ಕಳೆದ 2012 ರಿಂದ ಈವರೆಗೆ ಅಧೀಕೃತ ಲೆಕ್ಕಕ್ಕೆ 10 ಮಂದಿ ಸತ್ತಿದ್ದಾರೆ. ನಿಜ, ಹೇಳ್ಬೇಕಂದ್ರೆ ಸಾವಿನ ಸಂಖ್ಯೆ ಇದರ ಎರಡು ಪಟ್ಟು ಇರಬಹುದು. ಸರ್ಕಾರಿ ಲೆಕ್ಕಾಚಾರದ ರಹಸ್ಯ ನೋಡಿ, ಒಮ್ಮೆ ವಿಧಾನ ಪರಿಷತ್ ಸದಸ್ಯರೊಬ್ಬರು ಶಿರಸಿ ಪ್ರದೇಶದ ಶ್ರೀಗಂಧ ಕಳ್ಳ ಕಟಾವಿನ ಬಗ್ಗೆ ಪ್ರಶ್ನಿಸಿದರು. ಒಂದು ಮರ ಕಟಾವಾಗಿದೆಯೆಂದು ವಿಧಾನ ಪರಿಷತ್‍ನಲ್ಲಿ ಉತ್ತರ ಬಂತು. ತಾಲ್ಲೂಕಿನಲ್ಲಿ ನೂರಾರು ಮರ ಕಡಿತವಾಗೋದು ಕಣ್ತೆರೆದರೆ ರಸ್ತೆಯಂಚಿನಲ್ಲಿ ಕಾಣ್ತದೆ. ಇವರ ಪ್ರಕಾರ ಪ್ರಕರಣ ದಾಖಲಾಗಿದ್ದು ಮಾತ್ರ ಅಧಿಕೃತ ಲೆಕ್ಕ. ಕಳ್ಳರನ್ನು ಹಿಡಿದ್ರೆ, ಪ್ರಕರಣ ದಾಖಲಾದ್ರೆ ಇಲಾಖೆಯಿಂದ ಅರಣ್ಯ ರಕ್ಷಣೆಯಾಗ್ತಿಲ್ಲ ಎಂಬ ಸಂದೇಶ ಹೋಗ್ತಿದೆಯೆಂದು ಮುಚ್ಚಿ ಹಾಕುವುದು ಹಿಂದಿರುವ ಕರಾಳ ತಂತ್ರ.
ಪರಿಸ್ಥಿತಿ ಕೈಮೀರ್ತಿದೆ. ಅರಣ್ಯ ನ್ಯಾಯ ಮನುಷ್ಯರ ಪರವಾಗಿದೆ. ನಾವು ಭೂಮಿಗೆ ಬಹಳ ಭಾರವಾದಂತೆ ಕಾಣಿಸ್ತಿದೆ. ಶಿವಮೊಗ್ಗ ಸಾಗರದ ಪೇಟೆಗೆ ಹೋಗಿದ್ದು, ಹತ್ತಾರು ಸಂಖ್ಯೆಯಲ್ಲಿ ಅಲ್ಲಿನ ಬಂಗಾರಮ್ಮನ ಕೆರೆಯಲ್ಲಿ ನೀರು ಕುಡಿದಿದ್ದು, ರಸ್ತೆಗೆ ಅಡ್ಡವಾಗಿ ನಿಂತ ನಮ್ಮ ಬಳಗದ ಚಿತ್ರಗಳನ್ನು ನೋಡಿರಬಹುದು. ಅದೇ ಕೊನೆ, ಕಾಲ ಬಹಳ ಕೆಟ್ಟಿದೆ. ಗೋಡೆಯ ಮೇಲಿನ ಚಿತ್ರವಾಗಿ ಮಾತ್ರ ಉಳಿಯುವ ದಿನ ಬಂದಂತೆ ಕಾಣಿಸ್ತಿದೆ.
ಗಮಯನ ಗುಡ್ಡ ಯಾವತ್ತೋ ಅಕೇಶಿಯಾ ಬೆಟ್ಟವಾಗಿದೆ. ಮುಂದೇನಾಗುತ್ತೋ ಭಯವಿದೆ. ಬದುಕಿನ ಕೊನೆಯಲ್ಲಿ ನಿಂತಿರೋ ನಮ್ಮ ಭವಿಷ್ಯದ ಬಗ್ಗೆ ಹೇಳೋರು, ಕೇಳೋರು ಯಾರಾದ್ರೂ ಇದ್ದೀರಾ?
ಸ್ಥಳ- ಗಮಯನ ಗುಡ್ಡ
ಇಂತಿ ನಿಮ್ಮ ನೊಂದ ಜೀವಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.