ADVERTISEMENT

ಸಂಕೋಚ ಸ್ವಭಾವದ ನೀಲಿ ಪೆಂಗ್ವಿನ್‌

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 19:45 IST
Last Updated 1 ಜನವರಿ 2020, 19:45 IST
ನೀಲಿ ಪೆಂಗ್ವಿನ್
ನೀಲಿ ಪೆಂಗ್ವಿನ್   

ಪೆಂಗ್ವಿನ್‌ ಪ್ರಭೇದಗಳಲ್ಲಿಯೇ ಅತಿ ಸಣ್ಣ ಗಾತ್ರದಲ್ಲಿರುವುದು ನೀಲಿ ಪೆಂಗ್ವಿನ್‌. ಇದರ ವೈಜ್ಞಾನಿಕ ಹೆಸರು ಎಡಿಪುಟಲಾ ಮೈನರ್‌ ( Eudyptula minor). ಸ್ಪೆನ್ಸಿಡಾ (Spheniscidae)ಕುಟುಂಬಕ್ಕೆ ಸೇರಿದೆ. ಇದರ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಎಲ್ಲಿರುತ್ತೆ?

ಆಸ್ಟ್ರೇಲಿಯಾದ ದಕ್ಷಿಣ ಕರಾವಳಿ ತೀರ ಹಾಗೂ ದ್ವೀಪ ಸಮೂಹಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಕಲ್ಲುಬಂಡೆ ಇರುವ ಸಮುದ್ರ ತೀರವೆಂದರೆ ಬಹಳ ಇಷ್ಟ. ನ್ಯೂಜಿಲೆಂಡ್‌ನ ಕರಾವಳಿಯ ತೀರಗಳಲ್ಲಿಯೂ ಇದನ್ನು ನೋಡಬಹುದು.

ADVERTISEMENT

ಹೇಗಿರುತ್ತೆ?

ಇದರ ಕಣ್ಣುಗಳು ನೀಲಿ ಮಿಶ್ರಿತಬೂದು ಬಣ್ಣದಲ್ಲಿರುತ್ತದೆ. ಇದರ ದೇಹದ ಉಷ್ಣತೆ ಸಾಮಾನ್ಯವಾಗಿ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಇರುತ್ತದೆ. ಹೆಣ್ಣು ಪೆಂಗ್ವಿನ್‌ ಗಂಡು ಪೆಂಗ್ವಿನ್‌ಗಿಂತ ಚಿಕ್ಕದಿರುತ್ತದೆ. ಚಿಕ್ಕ ಕೊಕ್ಕು ಹೊಂದಿರುತ್ತದೆ. ಇದರ ಪುಕ್ಕವು ಕ್ರಮೇಣ ಬಣ್ಣ ಕಳೆದುಕೊಂಡು ಪೇಲವವಾಗುತ್ತದೆ. ಕೊಕ್ಕು ಕಪ್ಪು ಬಣ್ಣದಲ್ಲಿದ್ದರೆ, ದೇಹದ ಮೇಲ್ಮೆನ ಪುಕ್ಕ ನೀಲಿ ಬಣ್ಣದಲ್ಲಿರುತ್ತದೆ. ಹೊಟ್ಟೆಯ ಭಾಗದಲ್ಲಿ ಬೆಳ್ಳಿ ಬಣ್ಣದ ಪುಕ್ಕಗಳಿದ್ದು, ನೋಡಲು ಮುದ್ದಾಗಿ ಕಾಣುತ್ತದೆ.

ಆಹಾರಪದ್ಧತಿ

ಪಕ್ಕಾ ಮಾಂಸಾಹಾರಿ ಪ್ರಾಣಿಯಾಗಿದ್ದು, ಚಿಕ್ಕ ಚಿಕ್ಕ ಮೀನುಗಳು, ಸರಿಸೃಪಗಳು, ಅಕ್ಟೋಪಸ್‌, ಏಡಿಯನ್ನು ತಿಂದು ಬದುಕುತ್ತದೆ.

ಸಂತಾನೋತ್ಪತ್ತಿ

ಇದು ಏಕಸಂಗಾತಿಗೆ ನಿಷ್ಠೆಯಿಂದ ಕೂಡಿರುತ್ತದೆ. ಒಮ್ಮೆ ಒಂದು ಸಂಗಾತಿಯೊಂದಿಗೆ ಸ್ನೇಹ ಬೆಳೆಸಿದರೆ ಕೊನೆಯವರೆಗೆ ಅದನ್ನು ಹಾಗೆ ಉಳಿಸಿಕೊಳ್ಳಲು ಇಷ್ಟಪಡುತ್ತದೆ. ಗೂಡು ಕಟ್ಟುವಲ್ಲಿ ವಿಫಲವಾದರೆ ಅಥವಾ ಸಂಗಾತಿ ಸತ್ತರೆ ಮತ್ತೊಂದು ಸಂಗಾತಿಯೊಂದಿಗೆ ಕೂಡಿ ಬಾಳುತ್ತದೆ. ಇದು ಸಾಮಾನ್ಯವಾಗಿ ಜೂನ್‌ನಿಂದ ಅಕ್ಟೋಬರ್‌ವರೆಗೆ ಸಂತಾನೋತ್ಪತ್ತಿ ನಡೆಸುತ್ತದೆ. ಇಂಥ ಸಂದರ್ಭದಲ್ಲಿ ಇದು ಗೂಡಿನಲ್ಲಿ ವಾಸಿಸುತ್ತದೆ. ಪೆಂಗ್ವಿನ್‌ಗಳು ಕಲ್ಲಿನಲ್ಲಿ ಗೂಡು ಕಟ್ಟುತ್ತವೆ. ಒಂದರಿಂದ ಎರಡು ಮೊಟ್ಟೆಗಳನ್ನು ಇಡುತ್ತದೆ. 31 ರಿಂದ 40 ದಿನಗಳ ಕಾಲ ಕಾವು ಕೊಡುತ್ತದೆ. ಆ ನಂತರ ಮರಿ ಹೊರಬರುತ್ತದೆ. 18 ರಿಂದ 38 ದಿನಗಳ ಕಾಲದ ಮರಿಯ ಜವಾಬ್ದಾರಿಯನ್ನು ಪೋಷಕ ಹಕ್ಕಿಗಳು ಹೊರುತ್ತವೆ. ಆ ನಂತರ ರಾತ್ರಿಯ ಹೊತ್ತು ಮಾತ್ರ ಕಾಳಜಿ ಮಾಡುತ್ತವೆ. 50 ರಿಂದ 65 ದಿನಗಳ ಹೊತ್ತಿಗೆ ಸ್ವತಂತ್ರ ಪಕ್ಷಿಯಾಗುತ್ತದೆ. ನಂತರ ಮೂರು ವರ್ಷಕ್ಕೆ ಪ್ರಾಯಕ್ಕೆ ಬರುತ್ತದೆ.

ವರ್ತನೆ ಮತ್ತು ಜೀವನಕ್ರಮ

ಇದು ಹಗಲಿನಲ್ಲಿರುವಷ್ಟೆ ರಾತ್ರಿಯಲ್ಲಿಯೂ ಕ್ರಿಯಾಶೀಲವಾಗಿರುತ್ತದೆ. ಗೂಡಿನ ಬದಿಯಲ್ಲಿಯೇ ಕುಳಿತುಕೊಂಡು ರಾತ್ರಿ ಹೊತ್ತು ಮರಿಗಳನ್ನು ಆರೈಕೆ ಮಾಡುತ್ತದೆ. ಸಾಮಾನ್ಯವಾಗಿ ಗೂಡಿನವರೆಗೆ ಎಲ್ಲ ಪೆಂಗ್ವಿನ್‌ಗಳು ಒಟ್ಟಿಗೆ ನಡಿಗೆ ಆರಂಭಿಸುತ್ತವೆ. ಈ ನಡಿಗೆಯು ಶಿಸ್ತುಬದ್ಧವಾಗಿರುತ್ತದೆ. ಇದು ಬಹಳ ಗದ್ದಲ ಎಬ್ಬಿಸುವ ಪಕ್ಷಿಯಾಗಿದ್ದು, ಅಪಾಯಕಾರಿ ಸನ್ನಿವೇಶ ಎದುರಾದಾಗ ಚಾಕಚಕ್ಯತೆಯಿಂದ ನಿರ್ವಹಣೆ ಮಾಡುತ್ತದೆ.ತುಂಬಾ ಸಂಕೋಚ ಸ್ವಭಾವದ ಪಕ್ಷಿ ಇದು. ಹೆಚ್ಚಾಗಿ ಇವು ತಮ್ಮ ಗೂಡುಗಳಲ್ಲಿಯೇ ಕಾಲ ಕಳೆಯುತ್ತವೆ. ಆಗಾಗ್ಗೆ ತಾತ್ಕಾಲಿಕ ಗೂಡುಗಳನ್ನು ಮಾಡಿಕೊಂಡು ಜೀವನ ನಡೆಸುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಕೆಲವು ವಿಜ್ಞಾನಿಗಳು ಹೇಳುವಂತೆ, ನೆಲದಲ್ಲಿ ವಾಸಿಸುವ ಪೆಂಗ್ವಿನ್‌ಗಳಿಗೆ ದೃಷ್ಟಿ ಮಂದವಾಗಿರುತ್ತದೆ. ಆದರೆ, ಇದೇ ಪಕ್ಷಿ ನೀರಿನಲ್ಲಿದ್ದರೆ ಉತ್ತಮ ದೃಷ್ಟಿಯನ್ನು ಹೊಂದಿರುತ್ತದೆ.

* ಶೀಘ್ರ ಈಜು ಪಕ್ಷಿಗಳೆಂದೆ ಪ್ರಸಿದ್ಧಿ ಪಡೆದಿದೆ. 2012ರಲ್ಲಿ ನಡೆದ ಸಂಶೋಧನೆಯ ಪ್ರಕಾರ, ಈ ಪಕ್ಷಿಯು ಈಜುವಾಗ ನೀರಿನ ಗುಳ್ಳೆಗಳು ಏಳುತ್ತವೆ. ಈ ರೀತಿ ಗುಳ್ಳೆಗಳು ಏಳುವಂತೆ ಅದರ ರಕ್ಕೆಯಲ್ಲಿಯೇ ನೈಸರ್ಗಿಕ ಗುಳ್ಳೆ ವರ್ಧಕವಿದೆ. ಇದು ನೀರಿನ ಸಾಂದ್ರತೆಯನ್ನು ಕಡಿಮೆ ಮಾಡಿ, ಅತಿ ವೇಗವಾಗಿ ಈಜುವಂತೆ ಮಾಡುತ್ತದೆ.

ಗಾತ್ರ -1ರಿಂದ 3 ಕೆ.ಜಿ.ಜೀವಿತಾವಧಿ -10 ರಿಂದ 20 ವರ್ಷ ,ಎತ್ತರ -30 ರಿಂದ 33 ಸೆಂ.ಮೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.