ADVERTISEMENT

ಹೂವಿಂದ ಹೂವಿಗೆ ಹಾರುವ ಚಿಟ್ಟೆಗಳು ಕೆಸರಲಿ ಏನು ಮಾಡುತ್ತಿವೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜೂನ್ 2021, 11:52 IST
Last Updated 17 ಜೂನ್ 2021, 11:52 IST
ಕೆಸರು ನೀರಿನ ಸುತ್ತ ನೆರೆದ ಕಪ್ಪು ಚಿಟ್ಟೆಗಳು
ಕೆಸರು ನೀರಿನ ಸುತ್ತ ನೆರೆದ ಕಪ್ಪು ಚಿಟ್ಟೆಗಳು   

ಚಿಟ್ಟೆಗಳೆಂದರೆ ಹೂವಿಂದ ಹೂವಿಗೆ ಹಾರುತ್ತವೆ, ಮಕರಂದವನ್ನು ಹೀರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಅದೇ ಚಿಟ್ಟೆಗಳು ಕೆಸರು ನೀರಿನ ಸುತ್ತ ಕುಳಿತು ಏನು ಮಾಡುತ್ತಿವೆ? ಗುಂಪಾಗಿ ಕುಳಿತು ಅಲ್ಲೇನು ಹೀರುತ್ತಿವೆ? ಎಂಬ ಕುತೂಹಲ ಈ ವಿಡಿಯೊ ನೋಡಿದ ಪ್ರತಿಯೊಬ್ಬರಲ್ಲೂ ಮೂಡಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್‌ ಕಸ್ವಾನ್‌ ಅವರು ಅರಣ್ಯಕ್ಕೆ ಭೇಟಿ ನೀಡಿದ ಸಂದರ್ಭ ದಾರಿಯಲ್ಲಿ ಸಿಕ್ಕಿದ ಚಿಟ್ಟೆಗಳು ದೃಶ್ಯವನ್ನು ವಿಡಿಯೊ ಮಾಡಿ, ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಕೆಸರು ನೀರಿನ ಸುತ್ತಲು ನೆರೆದಿರುವ ಕಪ್ಪು ಬಣ್ಣದ ಚಿಟ್ಟೆಗಳು, ಲಗುಬಗೆಯಿಂದ ರೆಕ್ಕೆಗಳನ್ನು ಅಲ್ಲಾಡಿಸುತ್ತ ಗುಂಪಾಗಿ ಏನು ಮಾಡುತ್ತಿವೆ ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ.

ಚಿಟ್ಟೆಗಳ ಕುತೂಹಲಕಾರಿ ಚಟುವಟಿಕೆ ಬಗ್ಗೆ ವಿವರಿಸಿರುವ ಕಸ್ವಾನ್‌, ಚಿಟ್ಟೆಗಳು ಕೆಸರಿನ ಸುತ್ತ, ಸೆಗಣಿಯ ಸುತ್ತ, ನೀರಿನ ಸುತ್ತ ಹೀಗೆ ಗುಂಪಾಗಿ ಸೇರಿಕೊಂಡಿರುತ್ತವೆ. ಚಿಟ್ಟೆಗಳು ತಮ್ಮ ದೇಹಕ್ಕೆ ಅಗತ್ಯ ದ್ರವ ಮತ್ತು ಉಪ್ಪಿನ ಅಂಶವನ್ನು ಹೀರಿಕೊಳ್ಳಲು ಹೀಗೆ ಗುಂಪುಗೂಡುವ ಅಭ್ಯಾಸ ಹೊಂದಿವೆ. ಹೀಗೆ ಕೆಸರನ್ನು ಕೆದಕುವ ಚಟುವಟಿಕೆಯನ್ನು ವಿಜ್ಞಾನಿಗಳು 'ಮಡ್‌ ಪಡ್ಲಿಂಗ್‌' ಎಂದು ವಿವರಿಸಿದ್ದಾರೆ.

ADVERTISEMENT

ಕುತೂಹಲಕಾರಿ ಅಂಶವೆಂದರೆ ಇಂತಹ ನಡವಳಿಕೆ ಹೆಚ್ಚಾಗಿ ಗಂಡು ಚಿಟ್ಟೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹೆಣ್ಣು ಚಿಟ್ಟೆಗಳನ್ನು ಆಕರ್ಷಿಸಲು ಉಪ್ಪು ಮತ್ತು ಫೆರೊಮೊನ್‌ ಎಂಬ ರಾಸಾಯನಿಕ ಅಂಶವನ್ನು ಸಂಗ್ರಹಿಸುತ್ತವೆ ಎಂದು ವಿವರಿಸಿದ್ದಾರೆ.

ಇಂತಹ ಚಟುವಟಿಕೆಗಳನ್ನು ನೋಡಿದ್ದೇವೆ. ಆದರೆ ಅದರ ಹಿಂದೆ ಇಂತಹ ವೈಜ್ಞಾನಿಕ ಕಾರಣಗಳು ಇವೆ ಎಂದು ಗೊತ್ತಿರಲಿಲ್ಲ. ಕೆಸರಿನಲ್ಲೂ ಉತ್ತಮ ಅಂಶಗಳನ್ನು ಸಂಗ್ರಹಿಸುವುದನ್ನು ಪ್ರಕೃತಿ ಚೆನ್ನಾಗಿ ತಿಳಿಸಿಕೊಡುತ್ತದೆ ಎಂದು ಕೆಲವು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.