ADVERTISEMENT

ಚಾರಿಸ್ ಕಪ್ಪೆಗಳ ಕೂಟ–ಕೂಗಾಟ!

ಶಶಿಧರಸ್ವಾಮಿ ಆರ್.ಹಿರೇಮಠ
Published 16 ಮಾರ್ಚ್ 2020, 19:30 IST
Last Updated 16 ಮಾರ್ಚ್ 2020, 19:30 IST
ಕಪ್ಪೆ
ಕಪ್ಪೆ   

ಕೊಡಗಿನಲ್ಲಿ ಮುಗಿಲು ತೂತಾದಂತೆ ಧೋ ಎಂದು ಸುರಿಯುತ್ತಿದ್ದ ಮಳೆ ಸಂಜೆ ವೇಳೆಗೆ ಸ್ವಲ್ಪ ವಿಶ್ರಾಂತಿ ನೀಡಿತ್ತು. ತಕ್ಷಣ ನಮ್ಮ ತಂಡ ರಾತ್ರಿ ಕಪ್ಪೆಗಳ‌ ಪೋಟೊಗ್ರಫಿಗಾಗಿ ಕಬ್ಬಿನಕಾಡಿನ ‘ಹನಿವ್ಯಾಲಿ ಕಣಿವೆ’ಯ ಕಾಡಂಚಿನ ತೋಟಗಳತ್ತ ಹೊರಟಿತು.

ತಂಡದ ಸದಸ್ಯರು ತಲೆಗೆ ಟಾರ್ಚ್‌ ಲೈಟ್, ಕಾಲುಗಳಿಗೆ ಗಮ್ ಬೂಟು ಧರಿಸಿ ಕಗ್ಗತ್ತಲ ರಾತ್ರಿಯಲ್ಲಿ ಮೌನವಾಗಿ ಸಾಗುತ್ತಿದ್ದರು. ಕೊರಳಲ್ಲಿ ಮ್ಯಾಕ್ರೊ ಲೆನ್ಸ್‌ ಕ್ಯಾಮೆರಾ, ಕೈಯಲ್ಲಿ ಕೊಡೆ. ಆಗಾಗ ಕಿರ್ರೆಂದು ತೇಲಿಬರುವ ಕೀಟಗಳು ಹಾಡುವ ಮೇಲುದನಿಯ ಸದ್ದು. ಇನ್ನೊಂದೆಡೆ ‘ವಟ್ರ್ .. ವಟ್ರ್ ..’ ಎಂದು ವಟರ್‌ಗುಟ್ಟುವ ಕಪ್ಪೆಗಳ ಕೂಗು. ಇವೆಲ್ಲ ಒಂಥರಾ ತಾಳ-ಮದ್ದಳೆಯಂತೆ ಕೇಳಿಸುತ್ತಿತ್ತು. ವಿಚಿತ್ರ ಎಂದರೆ, ಅಲ್ಲಿ ಕಪ್ಪೆಗಳ ಕೂಗು ಮಾತ್ರ ಕೇಳುತ್ತಿತ್ತು. ಆದರೇ ಕಪ್ಪೆಗಳು ಮಾತ್ರ ಕಾಣುತ್ತಿರಲಿಲ್ಲ.

ಮುಂದೆ ನಡೆದಕೊಂಡು ಹೋಗುತ್ತಿದ್ದ ವನ್ಯಜೀವಿ ಛಾಯಾಗ್ರಾಹಕ ವಿಪಿನ್ ಬಾಳಿಗರು, ಝಕ್‌ ಎಂದು ನಿಂತರು. ಕಿವಿಗೊಟ್ಟು ಏನೋ ಆಲಿಸಿದರು. ನಮ್ಮತ್ತಲೂ ಸನ್ನೆ ಮಾಡಿ ನಿಲ್ಲುವಂತೆ ಸೂಚಿಸಿದರು. ಒಂದು ಸುತ್ತು ಆ ಕಡೆ, ಈ ಕಡೇ ಟಾರ್ಚ್‌ ಹಿಡಿದು ಬೆಳಕು ಚೆಲ್ಲಿ ನೋಡಿ, ಎಲ್ಲ ನನ್ನ ಹಿಂದೆ ಬನ್ನಿ ಎಂದು ಕಿರುದನಿಯಲ್ಲಿ ಹೇಳಿ ಪಕ್ಕದರು. ಇಳಿಜಾರಾದ ಸ್ಥಳಕ್ಕೆ ಇಳಿದರು. ನಾವು ಕೂಡ ನಿಧಾನವಾಗಿ ಇಳಿದು, ಅವರ ಹಿಂದೆ ನಿಂತೆವು. ಅಲ್ಲೇ ಇದ್ದ ಪೊದೆಗಿಡದ ತುದಿ ಎಲೆ ಮೇಲೆ ಕಪ್ಪೆಯೊಂದು ಕುಳಿತಿರುವುದನ್ನು ಟಾರ್ಚ್‌ ಬೆಳಕು ಹರಿಸಿ ತೋರಿಸಿದರು ವಿಪಿನ್‌.

ADVERTISEMENT

’ಇದು ಅಪರೂಪದ ಕಪ್ಪೆ. ಇದರ ಹೆಸರು ’ಚಾರಿಸ್ ಬುಷ್ ಫ್ರಾಗ್’ ಎಂದು ಹೇಳುತ್ತಿದ್ದ ಹಾಗೆ ಆ ಕಪ್ಪೆಯು ತನ್ನ ಬಾಯಿಂದ ಬಲೂನಿನಂತೆ ಗುಳ್ಳೆ ಉಬ್ಬಿಸಿ ಕೂಗಿತು. ಅದು ನಮ್ಮ ಇರುವಿಕೆಯನ್ನು ಗಮನಿಸದೇ ಕೂಗುವುದನ್ನು ಮುಂದುವರಿಸಿತು. ಆಗ ವಿಪಿನ್‍ರವರು ‘ಇದು ಮೇಟಿಂಗ್ ಕಾಲ್ ಮಾಡುತ್ತಿದೆ. ಈಗ ಆ ಕಪ್ಪೆ ಪೋಟೊ ತೆಗೆದುಕೊಳ್ಳಿ’ ಎಂದು ಸೂಚಿಸಿದರು. ನಾವು ಸರದಿಯಲ್ಲಿ ಕಪ್ಪೆ ಗುಳ್ಳೆ ಉಬ್ಬಿಸಿ ಕೂಗುವ ದೃಶ್ಯಗಳನ್ನು ಸೆರೆ ಹಿಡಿದು ಕೊಂಡೆವು.

ಗಂಡು ಕಪ್ಪೆಗಳು ಹೆಣ್ಣನ್ನು ಕೂಟಕ್ಕೆ ಸೆಳೆಯಲು ಈ ರೀತಿ ಗುಳ್ಳೆಯಂತ ಗಾಯನ ಚೀಲ ಮಾಡಿಕೊಳ್ಳುತ್ತವೆ. ಈ ವೇಳೆ ಕೂಗುವ ಸದ್ದು ಜೋರಾಗಿರತ್ತದೆ. ಏಕೆಂದರೆ ನೂರಾರು ಗಂಡು ಕಪ್ಪೆಗಳು ಬೇರೆ ಬೇರೆ ಗಿಡಗಳ ಎಲೆಗಳ ಮೇಲೆ ಕುಳಿತು ಒಟ್ಟಾಗಿ ಸ್ಪರ್ಧೆಗೆ ಬಿದ್ದವರಂತೆ ಕೋರಸ್‍ನಿಂದ ಒಂದರ ನಂತರ ಮತ್ತೊಂದು ಕೂಗುತ್ತಾ, ಹೆಣ್ಣನ್ನು ಕೂಟಕ್ಕೆ ಕರೆಯುತ್ತಿರುತ್ತವೆ. ಪ್ರತಿಯೊಂದು ಕಪ್ಪೆ ಜಾತಿಗೆ ತನ್ನದೇ ಆದ ಪ್ರತ್ಯೇಕ ಕೂಗಾಟದ ಕರೆ ಇದೆ. ಮತ್ತು ಹೆಣ್ಣು ಕಪ್ಪೆಗಳು ತಮ್ಮ ಜಾತಿಗಳ ಗಂಡು ಕಪ್ಪೆಗಳು ಹೊರಹೊಮ್ಮಿಸುವ ಕೂಟ ಕರೆಯನ್ನು ಆಲಿಸಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿವೆ.

ಕೂಗುವ ಕಪ್ಪೆಯ ಪೋಟೊಗ್ರಫಿ ಮುಗಿಸಿ ನಾವು ಹೊರಡಬೇಕೆನ್ನುವಷ್ಟರಲ್ಲಿ ಗಿಡದ ಕೆಳ ಟೊಂಗೆಯಲ್ಲಿ ಇದೇ ಜಾತಿಯ ಕಪ್ಪೆ ಕಾಣಿಸಿತು, ಅದನ್ನು ವಿಪಿನ್ ಅವರಿಗೆ ತೋರಿಸಿದೆ. ಅದಕ್ಕೆ ಅವರು ‘ಸ್ವಲ್ಪ ಹೊತ್ತು ಇಲ್ಲೇ ನಿಲ್ಲೋಣ’ ಎಂದರು. ಅಲ್ಲೆ ನಿಂತವು. ನಾವು ನೋಡಿದ್ದು, ಹೆಣ್ಣು ಕಪ್ಪೆ ಆಗಿತ್ತು. ಅದು ಕುಪ್ಪಳಿಸುತ್ತಾ ನಾಲ್ಕೇ ಜಿಗಿತಕ್ಕೆ ಗಂಡು ಇದ್ದ ಎಲೆಯ ಮೇಲೆ ಬಂದಿತು. ತಟ್ಟನೇ ಗಂಡು ಕಪ್ಪೆಯು ಅದರ ಬೆನ್ನೇರಿ ಹಿಡಿದಪ್ಪಿ ಕೂಟಗೊಂಡವು. ಈ ದೃಶ್ಯವು ಕ್ಷಣಾರ್ಧದಲ್ಲಿ ನಡೆಯಿತು. ಎಲ್ಲವೂ ಕ್ಯಾಮರದಲ್ಲಿ ಸೆರೆಯಾದವು. ಅವು ತಮ್ಮ ಮಿಲನವನ್ನು ಮುಂದುವರಿಸಿದವು. ಒಂದೊಂದೆ ಮಳೆ ಹನಿ ಬಿಳ ತೋಡಗಿದಾಗ ಕ್ಯಾಮೆರಾವನ್ನು ಪ್ಯಾಕ್ ಮಾಡಿಕೊಂಡು ಹನಿವ್ಯಾಲಿಯಲ್ಲಿರುವ ಹೋಮ್‍ಸ್ಟೇಯತ್ತ ನಡೆದೆವು.

ಚಿತ್ರಗಳು : ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.