ಈ ಬಾರಿ ನಿರೀಕ್ಷೆಗಿಂತ ಮೊದಲೇ ಮಳೆಗಾಲ ಬಂತು. ಕರಾವಳಿ ಪ್ರದೇಶಗಳಲ್ಲಿ ನಿರೀಕ್ಷೆ ಮೀರಿ ಸುರಿಯಿತು. ಸಾಕಷ್ಟು ಗಡಿಬಿಡಿನೂ ಮಾಡಿತು. ಜತೆಗೆ, ಜೀವವೈವಿಧ್ಯದ ನೆಲೆಯಾದ ಕರಾವಳಿಯ ನದಿ, ಕೆರೆಯ ದಂಡೆಗಳಲ್ಲಿ ಸದ್ದಿಲ್ಲದೆ ಹೊಸ ಮುಖವೊಂದು ಪ್ರತ್ಯಕ್ಷವಾಯಿತು.
ಕರಾವಳಿಯ ಜೀವ ಸಂಕುಲಗಳಿಗೆ ಮತ್ತು ಸಂತಾನೋತ್ಪತ್ತಿಗೆ ಕಾರಣವಾಗಿರುವ ಕಾಂಡ್ಲಾ ಕಾಡಿನ ಕಗ್ಗತ್ತಲೆಯಲ್ಲಿ ಕಂಡ ಹೊಸ ಜೀವ ಪ್ರಭೇದವೇ ಚಿಮ್ಮಂಡೆ ಕಪ್ಪೆ ಅಥವಾ ಹಿಮ್ಮಂಡೆ ಕಪ್ಪೆ.
ಈ ಕಪ್ಪೆಗೆ ‘ಘಜವಾರಿಯಾ‘ ಎಂದು ಹೆಸರಿಡಲಾಗಿದೆ. ಒಡಿಶಾದ ಕಡಲ ತೀರದಲ್ಲಿ ನಿರಂತರ ಸಂಶೋಧನೆಗಳ ನಂತರ ಕಪ್ಪೆ ವೀಕ್ಷಕ ಈ ಡಾ. ಕೃಷ್ಣನ್ ಘಜವಾರಿಯಾ ಇದನ್ನು ಪತ್ತೆ ಮಾಡಿದ್ದಾರೆ. ಈ ಸಂಶೋಧನೆ ಕೀರ್ತಿ ಅವರಿಗೆ ಸಲ್ಲುತ್ತದೆ. ಒಡಿಶಾ ಮೂಲದಲ್ಲಿ ಮಾತ್ರ ಕಂಡು ಬರುವ ಈ ಚಿಮ್ಮಂಡೆ ಜೀವಸಮೂಹ ಈಗ ಕರಾವಳಿಯಲ್ಲಿ ಕಾಣಿಸಿಕೊಂಡಿದೆ. ಸುಮಾರು 35 ಪ್ರಭೇದದ ಕಪ್ಪೆಗಳ ನಡುವೆ ವಿಭಿನ್ನವಾಗಿ ಕಾಣುವ ಉಭಯಚರಿಯಾಗಿರುವ ಈ ಕಪ್ಪೆಗೆ ಕರಾವಳಿ ಸರಿಯಾದ ನೆಲೆ ಅಲ್ಲ ಎನ್ನುವ ವಾದವೂ ಇದೆ. ಆದರೆ ಚಿಮ್ಮಂಡೆ ಕಪ್ಪೆಗಳು ಮಾತ್ರ ಕರಾವಳಿಯ ಕಡಲ ದಂಡೆಗಳಲ್ಲಿ ಕುಪ್ಪಳಿಸಲಾರಂಭಿಸಿವೆ. ಮಂಗಳೂರಿನ ಕೈಗಾರಿಕಾ ಪ್ರದೇಶದಲ್ಲಿ ಇವುಗಳ ಅಬ್ಬರ ಹೆಚ್ಚಾಗಿವೆ. ಎಂಥಾ ಪರಿಸ್ಥಿತಿಯಲ್ಲೂ ಬದುಕಬಲ್ಲವೆಂಬ ಛಾತಿಯನ್ನು ಪ್ರದರ್ಶಿಸುತ್ತಿವೆ.
ಕಪ್ಪೆಗಳು ಬಾಯಿಯ ನಾಲಿಗೆ ಬೀಸಿ ಬೇಟೆಯಾಡುವುದು ಸಾಮಾನ್ಯ ಸಂಗತಿ. ಆದರೆ ಈ ತಳಿಯ ಕಪ್ಪೆಯ ಶೈಲಿಯ ಬಗ್ಗೆ ಆಸಕ್ತಿಕರ ವಿಷಯಗನ್ನು ವಿಶ್ಲೇಷಿಸಲಾಗಿದೆ. ಅದೇನೆಂದರೆ, ಇವು ಬೀಸುವ ನಾಲಿಗೆಯಲ್ಲಿರುವ ಅಂಟಿನ ಜೊತೆಗೆ ಸಣ್ಣ ಪ್ರಮಾಣದ ಆಸಿಡ್ ಕೂಡಾ ಪತ್ತೆಯಾಗಿದೆ. ನಾಲಿಗೆಗೆ ಸಿಕ್ಕು ದೈಹಿಕ ಆಘಾತಕ್ಕೊಳಗಾಗುವ ಕೀಟ ತಕ್ಷಣ ಬಲಿಯಾಗುತ್ತದೆ. ಸಾಮಾನ್ಯವಾಗಿ ಬೇರೆ ಕಪ್ಪೆಗಳಲ್ಲಿ ಕೀಟಗಳು ಒದ್ದಾಡಿ ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಆಗ ಕಪ್ಪೆಗಳು ಶ್ರಮಪಟ್ಟು, ಕೀಟವನ್ನು ಹಿಡಿದು ನುಂಗುತ್ತವೆ. ಹಾಗಾಗಿ ಈ ಕಪ್ಪೆಯ ವಿಶೇಷತೆಯ ಬಗ್ಗೆ ಕಪ್ಪೆಗಳ ಜಗತ್ತು ಹೆಚ್ಚಿನ ಪ್ರಯೋಗ ಮತ್ತು ಸಂಶೋಧನೆಗೆ ನಡೆಯುತ್ತಿದೆ. ಅಂದ ಹಾಗೆ ಇದರ ನಾಲಿಗೆ ಬೀಸುವ ವೇಗ ನಮ್ಮ ಯಾವುದೇ ಕ್ರಿಯೆಯ ಎಂಟು ಪಟ್ಟು ವೇಗದಷ್ಟಿದೆಯಂತೆ.
ಈ ಕಪ್ಪೆ ಪತ್ತೆಯಾಗಿದ್ದು ಉತ್ತಮ ಬೆಳವಣಿಗೆಯೇ. ಕಳಿಂಗ ಪ್ರದೇಶದ ಕಪ್ಪೆಗಳ ಬಗ್ಗೆ ಸಂಶೋಧನೆ ನಡೆಯುವಾಗ ಈ ತಳಿಯನ್ನು ಹೋಲುವ ಕಪ್ಪೆಗಳು ಮಂಗಳೂರಿನ ಕೈಗಾರಿಕಾ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಕೂಡಲೇ ಬೆಂಗಳೂರಿನ ಏಟ್ರೀ (ATREE – Ashoka trust for research in Ecology and the Environment) ತನ್ನ ಸಂಶೋಧಕರೊಂದಿಗೆ ಕಪ್ಪೆಗಳ ಬಗ್ಗೆ ತುಲನೆಗೆ ಇಳಿದಿದೆ.
ಚಿಕ್ಕ ಬಾಯಿಯ ಮೈಕ್ರೊ ಹೈಲ್ಡಾ ಎನ್ನುವ ಗುಂಪಿನ ಈ ಕಪ್ಪೆ ಸಾಮಾನ್ಯವಾಗಿ ಭಾರತದ್ದು ಆಗಿರಲಿಕ್ಕೆ ಸಾಧ್ಯವೇ ಇಲ್ಲ ಎಂದು ಮೊದಲ ನೋಟಕ್ಕೆ ಗೊತ್ತಾಗಿದೆ. ಕಾರಣ ಇದರ ಮೂಲ ಆಗ್ನೇಯ ಏಷ್ಯಾ, ಮಲೇಶಿಯಾ ಮತ್ತು ಮ್ಯಾನ್ಮಾರ್ ಭಾಗಗಳಲ್ಲಿದ್ದು ಬಹುಶಃ ಅಲ್ಲಿಂದ ಇಲ್ಲಿಗೆ ಮರಮುಟ್ಟು ಸಾಗಾಣಿಕೆಯಲ್ಲಿ ಅದರ ಮೊಟ್ಟೆ ಅಥವಾ ಕೆಲವು ಜೀವಂತ ಕಪ್ಪೆಗಳು ಬಂದು ಸೇರಿಕೊಂಡು ಜೀವ ಜಾಲ ಅಭಿವೃದ್ಧಿ ಆಗಿರಬೇಕೆಂದು ಊಹಿಸಲಾಗಿದೆ.
ಇದು ಕರಾವಳಿ ಅದರಲ್ಲೂ ಮೊದಲಿಗೆ ಮಂಗಳೂರಿನ ಆಸುಪಾಸಿನಲ್ಲೇ ಕಂಡು ಅಚ್ಚರಿ ಮೂಡಿಸಿದ್ದಕ್ಕೆ ಇದಕ್ಕೆ ‘ಮೈಕ್ರೋಹೈಲ್ಡಾ - ಕೊಡಿಯಾಲ್’ ಎಂದು ವಿಶೇಷ ಗುಂಪಿನ ವರ್ಗೀಕರಣ ಮಾಡಲಾಗಿದೆ. ‘ಮೈಕ್ರೊಹೈಲ್ಡಾ’ ಎನ್ನುವುದು ಈಗಾಗಲೇ ವರ್ಗೀಕರಿಸಿದ ಪ್ರಭೇದವಾಗಿದ್ದು ಈ ಚಿಮ್ಮಂಡೆ ಮಂಗಳೂರು ಕರಾವಳಿ ವಲಯಕ್ಕೆ ಸೇರಿರುವುದರಿಂದ ಇದಕ್ಕೆ ಅಲ್ಲಿನ ಸ್ಥಳ ನಾಮಕರಣದ ಅಸ್ಮಿತೆಯಾದ ಕೊಡಿಯಾಲ್ ಅನ್ನು ಸೇರಿಸಲಾಗಿದೆ. ಈ ಕಪ್ಪೆ ಯಾವಾಗಿನಿಂದ ಇಲ್ಲಿ ನೆಲೆ ಕಂಡುಕೊಂಡಿದ್ದರೂ ನಗರ ಪ್ರದೇಶದ ಗಡಿಬಿಡಿಯಲ್ಲಿ ಇಲ್ಲಿವರೆಗೂ ಲಕ್ಷ್ಯಕ್ಕೆ ಬಾರದೆ ಹೋಗಿರುವ ಸಾಧ್ಯತೆ ಇದೆ ಎಂದು ಇದರ ಮೂಲ ಸಂಶೋಧನೆಯಲ್ಲಿ ತೊಡಗಿದ್ದ ಡಾ.ದತ್ತಾ ಅಭಿಪ್ರಾಯಪಟ್ಟಿದ್ದಾರೆ. ಸುಮಾರು ದಶಕಗಳಲ್ಲಿ ಜೀವ ವಿಕಸನಗೊಂಡಿರುವ ಸಾಧ್ಯತೆಯಲ್ಲಿ ಈ ಚಿಮ್ಮಂಡೆ ಸದ್ಯಕ್ಕೆ ಪಕ್ಕಾ ಕರಾವಳಿ ನಿವಾಸಿಯಾಗಿದೆ.
ಈ ಬೂದು ಬಣ್ಣದ ಕಂದು ಕಪ್ಪೆ ಸುಮಾರು ಎರಡು ಸೆ.ಮೀ. ಉದ್ದ ಇದ್ದು, ಚಾಪೆಯಂತಹ ರಚನೆಯ ಕಂದು ಬಣ್ಣದ ವಿನ್ಯಾಸವಿದೆ. ಬೇರೆ ಕಪ್ಪೆಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ. ಮೈ ದಪ್ಪ ಕಾಲು ಚಿಕ್ಕದಾಗಿರುವ ಕಾರಣ ಸ್ವಲ್ಪ ವಿಚಿತ್ರವಾಗಿಯೂ ಕಾಣಿಸುವ ಇದು ಮಣ್ಣಿನ ಬಣ್ಣದಲ್ಲಿ ಸುಲಭವಾಗಿ ಬೆರೆತು ಹೋದಂತಿರುತ್ತದೆ.
ಒಟ್ಟಾರೆ ಈ ವರ್ಷ ಕಪ್ಪೆಯ ವರಾತ ಕಡಿಮೆಯಾಗುತ್ತಿದೆ ಎಂದು ಕೂಗೇಳುತ್ತಿರುವಾಗ ಈ ಹೊಸ ಚಿಮ್ಮಂಡೆ ಮತ್ತೊಮ್ಮೆ ಕಪ್ಪೆ ಅಧ್ಯಯನಕಾರರಿಗೆ ಹುರುಪು ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.