ADVERTISEMENT

ಚಿಟ್ಟುಗಿಳಿಗಳ ಗುಟ್ಟು ಬಯಲು

ವಿನಾಯಕ ನಾಯಕ್
Published 29 ಜುಲೈ 2019, 19:30 IST
Last Updated 29 ಜುಲೈ 2019, 19:30 IST
ಚಿಟ್ಟುಗಿಳಿ
ಚಿಟ್ಟುಗಿಳಿ   

ಎರಡು ವರ್ಷಗಳ ಹಿಂದಿನ ಮಾತು. ಮಳೆಗಾಲದ ಒಂದು ಮಧ್ಯಾಹ್ನ ಹಿತ್ತಲಿನಲ್ಲಿದ್ದೆ. ದಪ್ಪಗಿನ ಮಳೆಹನಿಗಳು ಬೀಳುತ್ತಿದ್ದಂತೆ ಮನೆಯೊಳಗೆ ಓಡಲು ಅನುವಾದೆ. ಅಷ್ಟರಲ್ಲೇ ಪಕ್ಕದ ಪೇರಲ ಮರದಿಂದ ಎರಡು ಹಸಿರೆಲೆಗಳು ಸರ‍್ರನೆ ಹಾರಿ ಮೇಲಕ್ಕೆ ಹೋದಂತೆ ಕಡೆಗಣ್ಣಿಗೆ ಗೋಚರಿಸಿತು. ಏನೆಂದು ನೋಡಲು ಕಾದು ಕುಳಿತೆ. ಏನೂ ಕಾಣಿಸಲಿಲ್ಲ.

ಕಿಟಕಿಯ ಬಳಿಯೇ ಇದ್ದ ಆ ಪೇರಲ ಮರವನ್ನು ಪಟ್ಟು ಬಿಡದೆ ಮನೆಯೊಳಗಿನಿಂದಲೇ ಆಗಾಗ ಇಣುಕುತ್ತಿದ್ದೆ. ಎರಡೇ ದಿನದಲ್ಲಿ ಗುಟ್ಟು ಬಯಲಾಯಿತು. ಪೇರಲ ಮರದಿಂದ ಸರ‍್ರನೆ ಹಾರಿದ್ದು ಹಕ್ಕಿಯಲ್ಲ; ಅಷ್ಟೇ ಗಾತ್ರದ ಹೆಚ್ಚು ಕಡಿಮೆ ಅದೇ ಆಕಾರ, ಅದೇ ಬಣ್ಣದ ಹಕ್ಕಿ! ಸರಿಯಾಗಿ ಗಮನಿಸುವಾಗ ಇಂಥವೇ ನಾಲ್ಕೈದು ಹಕ್ಕಿಗಳು ಇದೇ ಮರದಲ್ಲಿ ಕಾಣ ಸಿಕ್ಕಿದವು. ಈ ಹಕ್ಕಿಗಳನ್ನು ನಾನು ಇದೇ ಮೊದಲು ನೋಡಿದ್ದರಿಂದ ವಿವರಗಳಿಗಾಗಿ ಸಲೀಂ ಆಲಿಯವರ ‘ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್‌’ ನ ಪುಟ ತಿರುವಿದೆ. ವಿವರಗಳೆಲ್ಲ ಹೊರಬಂದವು.


ಇದು ಲೋರಿಕೀಟ್ ಎನ್ನುವ ಹಕ್ಕಿ. ಕನ್ನಡದಲ್ಲಿ ಚಿಟ್ಟುಗಿಳಿ ಎನ್ನುತ್ತಾರೆ. ಗಿಳಿಗಳ ಜಾತಿಯಲ್ಲಿ ಸಣ್ಣದು. ಹೆಚ್ಚುಕಡಿಮೆ ಗುಬ್ಬಚ್ಚಿ ಗಾತ್ರದ ಈ ಹಕ್ಕಿಯ ಪ್ರಮುಖ ಬಣ್ಣವೇ ಪ್ರಖರ ಎಲೆಹಸಿರು. ಪುಟ್ಟ ಮೋಟುಬಾಲ; ಪೃಷ್ಟದ ಬಳಿ ಪ್ರಖರ ಕಡುಗೆಂಪು ಬಣ್ಣ; ಕೇಸರಿ ಬಣ್ಣದ ಗಿಳಿಕೊಕ್ಕು ಇದರ ಇನ್ನಿತರ ಗುರುತುಗಳು. ಗಂಡು ಹಕ್ಕಿಗೆ ಕತ್ತಿನ ಕೆಳಗೆ ನೀಲಿ ಬಣ್ಣದ ಛಾಯೆ ಇರುತ್ತದೆ.

ADVERTISEMENT

ಅಂದಿನಿಂದ ಆಗಾಗ ಈ ಹಕ್ಕಿಗಳನ್ನು ಗಮನಿಸಲಾರಂಭಿಸಿದೆ. ನನ್ನ ಬಳಿ ಇರುವ ಲೆನ್ಸ್‌ನಿಂದ ಹಕ್ಕಿಯ ಕ್ಲೋಸಪ್ ಬರುವುದಿಲ್ಲವೆಂದು ಗೊತ್ತಿರುವುದ ರಿಂದ ಛಾಯಾಗ್ರಹಣದ ಸಾಹಸಕ್ಕೆ ಕೈ ಹಾಕಲಿಲ್ಲ. ನಾನು ಗಮನಿಸುತ್ತಿದ್ದಂತೇ ಕೆಲವು ದಿನಗಳಲ್ಲಿ ಈ ಚಿಟ್ಟುಗಿಳಿಗಳು ಬರುವುದು ಕಡಿಮೆಯಾಗಿ ಕೊನೆಗೆ ನಿಂತೇ ಹೋಯಿತು.

‘ನನ್ನಿಂದೇನಾದರೂ ಅಪಚಾರವಾಯಿತೇ?’ ಎಂದು ಕೇಳೋಣವೆಂದರೆ ಒಂದೇ ಒಂದು ಹಕ್ಕಿಯೂ ಇಲ್ಲ. ಕೆಲದಿನಗಳ ಬಳಿಕ ನನ್ನ ತಲೆಯಿಂದಲೂ ಈ ಹಕ್ಕಿಗಳು ಮರೆಯಾದವು.

ಕಳೆದ ವರ್ಷ ಮಳೆಗಾಲ ಜೋರಾದ ಬಳಿಕ ಇವು ಮತ್ತೆ ಕಾಣಿಸಿಕೊಂಡವು. ಪೇರಲ ಮರದ ಮೇಲೆ ಜತೆಯಾಗಿಯೇ ಕುಳಿತಿದ್ದ ಎರಡು ಚಿಟ್ಟುಗಿಳಿಗಳು ನಾನು ಗಮನಿಸುವುದು ಗೊತ್ತಾಗಿ ಚೀ...ಚಿ..ಚೀ... ಎನ್ನುತ್ತಾ ಹಾರಿ ಹೋದವು. ಈ ಸಲ ನಾನು ಸ್ವಲ್ಪ ಜಾಸ್ತಿಯೇ ತಯಾರಾಗಿದ್ದೆ. ನನ್ನ ಕ್ಯಾಮೆರಾಕ್ಕೂ ಇತ್ತೀಚೆಗಷ್ಟೇ ಹೊಸದಾಗಿ ಬಿಳಿಯ ಕೋಡು ಬಂದಿತ್ತು(ಕ್ಯಾನಾನ್ 70-200 ಮಿಮೀ 2.8 ಬಿಳಿ ಲೆನ್ಸು)! ಈ ಸಲ ಈ ಹಕ್ಕಿಯನ್ನು ಶೂಟ್ ಮಾಡಿಯೇ ಬಿಡುವುದು ಎಂದು ನಿರ್ಧರಿಸಿದ್ದೆ. ಮಳೆಗಾಲವಾದ್ದರಿಂದ ಮನೆಯೊಳಗಿನಿಂದಲೇ ಕಿಟಿಕಿಯ ಬಳಿ, ಎತ್ತರವನ್ನು ಸರಿದೂಗಿಸಿಕೊಳ್ಳಲು ಕುರ್ಚಿ, ದಿಂಬು ಹೀಗೆ ಸಿಕ್ಕಿದ್ದನ್ನೆಲ್ಲ ಪೇರಿಸಿ ಕ್ಯಾಮೆರಾ ಗುರಿಯಿರಿಸಿ ಕಾದು ನಿಂತೆ.

ಬಂದೇ ಬಿಟ್ಟವು ನೋಡಿ ಪುಟ್ಟ ಗಿಳಿಗಳು. ಓಹ್! ಅವುಗಳ ಹಾವಭಾವ, ಬಿಂಕ ಬಿನ್ನಾಣಗಳನ್ನು ದೊಡ್ಡ ಲೆನ್ಸ್‌ನ ಮೂಲಕ ನೋಡುವ ಚಂದವೇ ಬೇರೆ. ಹಣ್ಣುಗಳಿರುವ ಒಂದು ಟೊಂಗೆಯಿಂದ ಇನ್ನೊಂದು ಟೊಂಗೆಗೆ ಇವುಗಳು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯುವ ಬಿಂಕದೆದುರು ನಮ್ಮ ಮಾಡೆಲ್‌ಗಳ ಕ್ಯಾಟ್‍ವಾಕನ್ನು ನಿವಾಳಿಸಿ ಒಗೆಯಬೇಕು ಎನ್ನಿಸಿತು. ತಿನ್ನುವ ರೀತಿಯೂ ಹಾಗೆಯೇ. ಹಣ್ಣಿನ ಸುತ್ತ ಸುತ್ತಾಡಿ; ಅದರ ಮೇಲೆಯೇ ಕುಳಿತು; ಪಕ್ಕದ ಗೆಲ್ಲಿನಿಂದ ಕತ್ತು ಚಾಚಿ; ಕೆಲವೊಮ್ಮೆ ತಲೆಕೆಳಗಾಗಿ ನೇತಾಡಿ....ಎಲ್ಲ ಭಂಗಿಗಳೂ ಚಂದವೇ. ಚಿಟ್ಟುಗಿಳಿಗಳ ಇನ್ನೊಂದು ವಿಶೇಷವೆಂದರೆ ಇವು ರಾತ್ರಿ ಬಾವಲಿಗಳಂತೆ ತಲೆಕೆಳಗಾಗಿ ನಿದ್ರಿಸುತ್ತವಂತೆ. ಹಾಗಾಗಿ ಇಂಗ್ಲಿಷ್‌ನಲ್ಲಿ ಇವನ್ನು ಹ್ಯಾಂಗಿಗ್ ಪ್ಯಾರೋಟ್ ಎನ್ನುತ್ತಾರೆ!

ಅಂತೂ ಇಂತೂ ಒಂದಷ್ಟು ದಿನ ಈ ಬಿನ್ನಾಣಗಿತ್ತಿಯರ ಫೋಟೊ ಸೆಷನ್ ನಡೆಯಿತು. ಆಗಸ್ಟ್ ಮುಗಿದು ಸೆಪ್ಟೆಂಬರ್ ಬಂದಿರಬಹುದು. ಈ ಪುಟ್ಟ ಹಕ್ಕಿಗಳು ಮತ್ತೆ ನಾಪತ್ತೆಯಾದವು. ಥೇಟ್ ಕಳೆದ ವರ್ಷದ ಹಾಗೆಯೇ. ಅರೆ, ಇವುಗಳಿಗೇನಾಯಿತು ಎಂದು ಮತ್ತೆ ಗೊಂದಲವಾಯಿತು. ನಂತರ ದಿನಗಳೆದಂತೆ ವಿಷಯ ಮರೆತೇ ಹೋಯಿತು.

ಹೀಗೆ ಒಮ್ಮೆ ಹಳೆಯ ಪತ್ರಿಕಾ ಲೇಖನಗಳ ಹಾಳೆಗಳನ್ನೆಲ್ಲ ತಿರುವಿ ಹಾಕುತ್ತಿದ್ದೆ. ಹೀಗೆ ಏನೋ ಹುಡುಕುವಾಗಲೇ ನನ್ನ ಚಿಟ್ಟುಗಿಳಿಯ ಸಮಸ್ಯೆಗೆ ಉತ್ತರ ದೊರಕಿತು. ಅದೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಚಿತ್ರಲೇಖನದ ಮೂಲಕ.
2002ನೇ ಇಸವಿಯಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಲೇಖನದಲ್ಲಿ ತೇಜಸ್ವಿಯವರು ತಾವು ಎದುರಿಸಿದ ಇಂಥದೇ ಪ್ರಸಂಗವೊಂದನ್ನು ವಿವರಿಸಿದ್ದರು. ಆದರೆ ಹಕ್ಕಿ ಮಾತ್ರ ಚಿಟ್ಟುಗಿಳಿಯ ಬದಲು ಉಂಗುರ ಕತ್ತಿನ ಗಿಳಿ.
ತೇಜಸ್ವಿಯವರ ಪ್ರಕಾರ ಕಾಡಿನಲ್ಲಿ ಮರಗಿಡಗಳು ಬೇರೆ ಬೇರೆ ಸಮಯದಲ್ಲಿ ಹೂ ಬಿಟ್ಟು ಹಣ್ಣಾಗಿಸುತ್ತವೆ. ಆದ್ದರಿಂದ ಹಣ್ಣು ತಿನ್ನುವ ಹಕ್ಕಿಗಳಿಗೆ ವರ್ಷವಿಡೀ ಆಹಾರ ಲಭ್ಯ. ಆದರೆ ಜೂನ್, ಜುಲೈ ತಿಂಗಳಲ್ಲಿ ಹಣ್ಣುಗಳನ್ನು ಬಿಡುವ ಅತ್ತಿ, ಆಲ, ಬಸರಿ, ಗೋಣಿ ಮತ್ತಿತರ ಮರಗಳನ್ನು ಯಾವುದಕ್ಕೂ ಉಪಯೋಗವಿಲ್ಲವೆಂದು ಮನುಷ್ಯ ಕಡಿದು ಹಾಕುತ್ತಾನೆ. ಹೀಗಾಗಿ ಹಣ್ಣು ತಿನ್ನುವ ಹಕ್ಕಿಗಳಿಗೆ ಆಹಾರದ ಕೊರತೆ ಉಂಟಾಗುತ್ತದೆ. ಇರುವ ಹಲಸಿನ ಹಣ್ಣು ತಿನ್ನಲು ಅವುಗಳಿಂದ ಆಗುವುದಿಲ್ಲ. ಆದ್ದರಿಂದ ಇವು ಹಿತ್ತಿಲು, ತೋಟಗಳಲ್ಲಿರುವ ಪೇರಲ ಹಣ್ಣಿಗೆ ಲಗ್ಗೆ ಹಾಕುತ್ತವೆ.

ತೇಜಸ್ವಿಯವರ ಈ ವಿವರಣೆ ನನಗೆ ಒಪ್ಪಿಗೆಯಾಯಿತು. ಆದರೆ ಹಕ್ಕಿಗಳಿಗೆ ಒಪ್ಪಿಗೆಯೇ? ಹೌದಾದರೆ ಈ ಮಳೆಗಾಲದಲ್ಲೂ ಬರಲೇಬೇಕಲ್ಲ?
ನೋಡೇ ಬಿಡೋಣ ಎಂದು ಪೇರಲ ಮರದ ಮೇಲೆ ಒಂದು ಕಣ್ಣಿಟ್ಟಿದ್ದೆ. ಮೊನ್ನೆ ಜುಲೈ ತಿಂಗಳಲ್ಲಿ ಭಾರಿ ಮಳೆಯ ನಡುವೆ ಒಮ್ಮೆ ಮರವನ್ನು ಗಮನಿಸಿದಾಗ ಚಿಟ್ಟುಗಿಳಿಯೊಂದು ಹದವಾಗಿ ಬಲಿತ ಪೇರಲವನ್ನು ಕುಕ್ಕಿ ತಿನ್ನುತಿತ್ತು. ನನ್ನನ್ನು ಕಂಡು ಏನೂ ಗೊತ್ತಿಲ್ಲದಂತೆ ಚಿ...ಚೀ...ಚೀ.. ಎನ್ನುತ್ತಾ ಪುರ‍್ರನೆ ಹಾರಿತು. ಥೇಟ್ ಪೇರಲ ಎಲೆಯಂತೇ. ಅದರೊಂದಿಗೆ ನನ್ನ ಗೊಂದಲವೂ ಹಾರಿ ಹೋಯಿತು.

ಈ ಮಳೆಗಾಲದಲ್ಲಿ ನಿಮ್ಮ ಹಿತ್ತಲಿನಲ್ಲೂ ಪೇರಲ ಹಣ್ಣುಗಳು ಕಳವಾಗುತ್ತಿದ್ದರೆ ಸರಿಯಾಗಿ ಗಮನಿಸಿ. ಕಳ್ಳರು ಇವರೇ ಆಗಿರಬಹುದು. ಬಿಡಬೇಡಿ. ಸಾಧ್ಯವಾದರೆ ಶೂಟ್ ಮಾಡಿ- ಕ್ಯಾಮೆರಾ ಮೂಲಕ!

ಚಿತ್ರಗಳು : ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.