ಬೇಟೆಯಾಡಿದ ಪ್ರಾಣಿಯನ್ನು ಕುಕ್ಕಿ ಕುಕ್ಕಿ ತಿನ್ನುವ ತೀಕ್ಷಣ ಕಣ್ಣುಗಳ ರಣಹದ್ದುಗಳೆಂದರೆ ಎಂದಿಗೂ ಅಸಡ್ಡೆಯ ನೋಟವೆ. ಆದರೆ, ಎಂಥ ಕೊಳೆತ ಮಾಂಸವನ್ನು ತಿಂದೂ ಅರಗಿಸಿಕೊಳ್ಳಬಲ್ಲ ಶಕ್ತಿ ಈ ಪಕ್ಷಿಗಿದೆ. ಇದು ಕ್ಯಾಥರ್ಡಿಯಾ ಕುಟುಂಬಕ್ಕೆ ಸೇರಿದ್ದು,ಟರ್ಕಿ ಹದ್ದು, ಕಪ್ಪು ಹದ್ದು, ಕಿಂಗ್ ಹದ್ದು, ಕ್ಯಾಲಿಫೋರ್ನಿಯಾ, ಆ್ಯಂಡಿಯನ್ ಸೇರಿದಂತೆ 23 ಬಗೆಯ ಹದ್ದುಗಳು ಈ ಕುಟುಂಬದಲ್ಲಿವೆ. ಇದರ ವೈಜ್ಞಾನಿಕ ಹೆಸರು ಚೋರಡಟ ( Chordata). ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿದುಕೊಳ್ಳೋಣ.
ಹೇಗಿರುತ್ತೆ?
ವಿಶಾಲವಾದ ರೆಕ್ಕೆಗಳು ಹಾರಾಟಕ್ಕೆ ಅನುಕೂಲವಾಗಿವೆ. ಗಟ್ಟಿಯಾದ ಕೊಕ್ಕನ್ನು ಹೊಂದಿದ್ದು, ಕಣ್ಣುಗಳು ತೀಕ್ಷ್ಣವಾಗಿರುತ್ತವೆ. ಎಷ್ಟೇ ಎತ್ತರದಲ್ಲಿದ್ದರೂ ಬೇಟೆಯನ್ನು ಸುಲಭವಾಗಿ ಗುರುತಿಸಿ, ಅದನ್ನು ಪಡೆಯಬಲ್ಲ ಚಾಕಚಕ್ಯತೆ ಇದಕ್ಕಿದೆ. ಕಪ್ಪು ಬಣ್ಣದ ಪುಕ್ಕ ದೇಹವನ್ನು ಆವರಿಸಿದ್ದು, ಮೇಲೆ ಬಿಳಿ ಗೆರೆ ಹೊಂದಿರುವ ರೆಕ್ಕೆಗಳು ಇರುತ್ತವೆ, ತಲೆಯ ಭಾಗ ಬೋಳಾಗಿರುತ್ತದೆ. ದೃಢವಾದ ಕಾಲುಗಳಿರುತ್ತವೆ. ಮರದ ರೆಂಬೆಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳಲು ನೆರವಾಗುವಂತೆ ಕಾಲುಗುರುಗಳು ರಚನೆಯಾಗಿವೆ. ಇವುಗಳಿಗೆ ಧ್ವನಿ ಪೆಟ್ಟಿಗೆ ಇರುವುದಿಲ್ಲ. ಹಾಗಾಗಿ ಬುಸುಗುಟ್ಟುವುದು ಬಿಟ್ಟು ಬೇರೆ ಯಾವುದೇ ಶಬ್ದವನ್ನೂ ಹೊರಡಿಸುವುದಿಲ್ಲ.
ಬಾಲ ಪುಟ್ಟದಾಗಿರುತ್ತದೆ.
ಜೀವನಕ್ರಮ ಮತ್ತು ವರ್ತನೆ
ಹದ್ದುಗಳು ಗೂಡುಗಳನ್ನು ಕಟ್ಟುವುದಿಲ್ಲ. ಎತ್ತರದ ಮರಗಳ ಕೊಂಬೆಗಳ ಮೇಲೆ, ಎತ್ತರದ ಕಟ್ಟಡಗಳ ಮೇಲ್ಭಾಗದಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಇದು ಸತ್ತ, ಕೊಳೆತ ಪ್ರಾಣಿಗಳನ್ನು ತಿನ್ನುವುದರಿಂದ ಬ್ಯಾಕ್ಟೀರಿಯಾಗಳನ್ನು ಹರಡದಂತೆ ತಡೆಯುವ ಪಕ್ಷಿಯೆಂದೇ ಗುರುತಿಸಲಾಗಿದೆ. ಒಮ್ಮೆ ಬೇಟೆಯ ಸುಳಿವು ಸಿಕ್ಕರೆ, ಅದು ದಕ್ಕುವವರೆಗೂ ಗಂಟೆಗಟ್ಟಲೆ ಆಕಾಶದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಲೇ ಇರುತ್ತದೆ.ಸೂಕ್ತ ಸಮಯ ನೋಡಿ ಬೇಟೆಯಾಡುತ್ತದೆ. ಕತ್ತಿನಲ್ಲಿ ಬೇಟೆಯ ಮಾಂಸವನ್ನು ಶೇಖರಿಸಿಡಲು ಪುಟ್ಟ ಚೀಲಗಳಿರುತ್ತವೆ. ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಹಕ್ಕಿಯಾಗಿದೆ. ಇದರಲ್ಲಿ 25 ತಳಿಗಳನ್ನು ಗುರುತಿಸಲಾಗಿದೆ.
ಎಲ್ಲಿರುತ್ತೆ?
ಈ ಪಕ್ಷಿ ವಿವಿಧ ವಾತಾವರಣಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಬೇಟೆಯಾಡಲು ಸೂಕ್ತವಾಗಿರುವ, ಮಾಂಸಾಹಾರ ಹೆಚ್ಚಾಗಿ ದೊರೆಯುವ ಪ್ರದೇಶಗಳಲ್ಲಿ ಈ ಹದ್ದು ವಾಸಿಸುತ್ತದೆ. ಆಸ್ಟ್ರೇಲಿಯಾ ಖಂಡ, ಧ್ರುವ ಪ್ರದೇಶಗಳು ಮತ್ತು ಪುಟ್ಟ ದ್ವೀಪಗಳಲ್ಲಿ ಈ ಹದ್ದು ವಾಸಿಸುವುದಿಲ್ಲ. ಆದರೆ ಹಿಮ ಸುರಿಯುವ ಪ್ರದೇಶಗಳಿಗೂ ಹೊಂದಿಕೊಳ್ಳುತ್ತದೆ.
ಆಹಾರ
ಇದು ಸಂಪೂರ್ಣ ಮಾಂಸಾಹಾರಿ ಪ್ರಾಣಿ. ಕೆಲವೊಮ್ಮೆ ಗಾಯಗೊಂಡ ಪ್ರಾಣಿಗಳನ್ನು ಮತ್ತು ಆಗಷ್ಟೆ ಹುಟ್ಟಿದ ಮರಿಗಳನ್ನು ಬೇಟೆಯಾಡಿ ತಿನ್ನುವುದರಲ್ಲಿ ಇದಕ್ಕೆ ಖುಷಿ ಹೆಚ್ಚು. ಆಸ್ಟ್ರಿಚ್ ಹಕ್ಕಿಯ ಮೊಟ್ಟೆಗಳು, ಹಾವುಗಳು, ನರಿಗಳು, ಮೊಲಗಳ ಮಾಂಸವೆಂದರೆ ಇದಕ್ಕೆ ತುಂಬ ಇಷ್ಟ.
ಸಂತಾನೋತ್ಪತ್ತಿ
ಆಹಾರಕ್ಕಾಗಿ ಅಷ್ಟೆ ಅಲ್ಲದೇ ತನ್ನ ಸಂಗಾತಿಯನ್ನು ಮೆಚ್ಚಿಸಲು ಹದ್ದು ಆಕಾಶದಲ್ಲಿ ಗಂಟೆಗಟ್ಟಲೇ ಹಾರುತ್ತಲೇ ಇರುತ್ತದೆ. ಗಂಡು ಹದ್ದು ಹಾರಾಟದ ಕೌಶಲವನ್ನು ತನ್ನ ಸಂಗಾತಿಗೆ ತೋರಿಸುತ್ತ ಮೆಚ್ಚಿಸಲು ಪ್ರಯತ್ನಿಸುತ್ತದೆ. ಜೊತೆಯಾದ ನಂತರ ಈ ಹದ್ದುಗಳು ಒಟ್ಟಿಗೆ ಬೇಟೆಯಾಡುತ್ತವೆ. ಹೆಣ್ಣು ಹದ್ದು ಒಂದು ಅಥವಾ ಎರಡು ಮೊಟ್ಟೆಗಳನ್ನು ಇಡುತ್ತದೆ. ಗಂಡು ಮತ್ತು ಹೆಣ್ಣು ಹದ್ದುಗಳು ಮೊಟ್ಟೆಗಳಿಗೆ ಕಾವು ಕೊಡುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಗಳಿಗೆ ರೆಕ್ಕೆಗಳು ಸರಿಯಾಗಿ ಮೂಡಿರುವುದಿಲ್ಲ. ಪೋಷಕ ಹಕ್ಕಿಗಲೇ ಆಹಾರ ಉಣಿಸಿ ಬೆಳೆಸುತ್ತವೆ. ಮೊದಲು ಮೃದು ಮಾಂಸವನ್ನು ತಿನ್ನಿಸಿ ಬೆಳೆಸುತ್ತವೆ. ಮರಿಗಳು ಮೂರು ತಿಂಗಳ ಕಾಲ ಗೂಡಿನಲ್ಲಿಯೇ ಇರುತ್ತವೆ. ಆರು ತಿಂಗಳ ನಂತರ ಆಹಾರ ಹುಡುಕುಲು ಆರಂಭಿಸುತ್ತವೆ. ವರ್ಷವಾದ ಮೇಲೆ ವಯಸ್ಕ ಹಂತ ತಲುಪುತ್ತವೆ.
ಸ್ವಾರಸ್ಯಕರ ಸಂಗತಿಗಳು
* ಇದರ ಉದರಭಾಗದಲ್ಲಿ ಮೂಳೆಗಳನ್ನು ಸುಲಭವಾಗಿ ಅರಗಿಸಿಕೊಳ್ಳಲು ನೆರವಾಗುವ ವಿಶೇಷ ಬಗೆಯ ರಾಸಾಯನಿಕವಿದ್ದು, ಇದು ಬ್ಯಾಟರಿಗಳಲ್ಲಿ ತುಂಬಿಸುವ ಆ್ಯಸಿಡ್‌ಗಿಂತಲೂ ಹೆಚ್ಚು ಮಾರಕವಾಗಿರುತ್ತದೆ.
*ಬೇಸರದಲ್ಲಿದ್ದಾಗ ಈ ಪಕ್ಷಿಯ ತಲೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ದೂರದಿಂದ ನೋಡಿದರೆ ನಾಚಿಕೊಂಡು ಕೆಂಪಾಗಿರುವಂತೆ ಕಾಣುತ್ತದೆ.
* ಹಲವು ಭಾಗಗಳಲ್ಲಿ ಮೃತ್ಯುವಿನ ಸಂಕೇತವಾಗಿ ಹದ್ದುಗಳು ಬಳಕೆಯಾಗಿದ್ದರೆ, ಈಜಿಪ್ಟ್ ಸಂಸ್ಕೃತಿಯಲ್ಲಿ ಮಕ್ಕಳು ಮತ್ತು ತಾಯಂದಿರನ್ನು ರಕ್ಷಿಸುವ ದೇವತೆ ನೆಕ್‌ಬೆಟ್‌ನ ಪ್ರೀತಿಯ ಪ್ರಾಣಿಯೆಂದೇ ಪರಿಗಣಿಸಲಾಗಿದೆ. ಈಜಿಪ್ಟ್ ಕಾಲದ ಕಲಾಕೃತಿಗಳಲ್ಲಿ ಇದನ್ನು ಕಾಣಬಹುದು. ಅಮೆರಿಕದ ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಕ್ಯಾಲಿಫೋರ್ನಿಯಾದ ಹದ್ದುಗಳಿಗೆ ವಿಶೇಷವಾದ ಮಹತ್ವವಿದೆ.
*ಪಾರ್ಸಿ ಜನಾಂಗ ಸೇರಿ ಏಷ್ಯಾದ ಕೆಲವು ಜನಾಂಗದವರು ಮನುಷ್ಯರ ಮೃತದೇಹವನ್ನು ಯಾವುದೇ ಸಂಸ್ಕಾರ ಮಾಡದೇ ಹದ್ದುಗಳಿಗೆ ಆಹಾರವಾಗಿ ಸಮರ್ಪಿಸುತ್ತಾರೆ.
ಜೀವಿತಾವಧಿ
11 ರಿಂದ 47 ವರ್ಷ
ಉದ್ದ
2 ಅಡಿಯಿಂದ4.9
ತೂಕ
1.7 ಕೆ.ಜಿಯಿಂದ 15 ಕೆ.ಜಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.