ಡಾ. ಕೆ.ಎಸ್.ಚೈತ್ರಾ
ಮರಗಳ ಎಡೆಯಿಂದ ನಿಧಾನವಾಗಿ ವಾಲಾಡುತ್ತ, ಹುಲ್ಲಿನಲ್ಲಿ ನಡೆದಾಡಿ, ನಂತರ ನದಿ ತೀರದಲ್ಲಿ ಜಾರಿ, ಮಣ್ಣು ನೀರಿನಲ್ಲಿ ಮುಳುಗುತ್ತಿದ್ದ ಈ ಆನೆಯಂತಹ ದೈತ್ಯಜೀವಿಗಳನ್ನು ಕಂಡ ಹಳ್ಳಿಗರಿಗೆ ಎಲ್ಲಿಲ್ಲದ ಆಶ್ಚರ್ಯ. ಚಿತ್ರಗಳಲ್ಲಿ ಕಂಡ, ಯಾರಿಂದಲೋ ಕೇಳಿದ ಆಫ್ರಿಕಾದಂತಹ ದೂರ ದೇಶದಲ್ಲಿರುವ ಸುಮಾರು ಮೂರು ಟನ್ ಭಾರವಿರುವ ಈ ಪ್ರಾಣಿಗಳನ್ನು ನೋಡಲು ಜನರೆಲ್ಲರೂ ಕೆಲಸ ಬಿಟ್ಟು ಓಡಿ ಬರುವಷ್ಟು ಸೋಜಿಗ ಅದಾಗಿತ್ತು. ಆದರೆ ಪರಿಸ್ಥಿತಿ ಎರಡು ದಶಕಗಳಲ್ಲಿ ಸಂಪೂರ್ಣ ಬದಲಾಗಿದೆ. ಈಗ ಆ ಪ್ರಾಣಿ ಹೆಸರು ಕೇಳಿದರೇ ಹೆದರಿಕೆ-ಬೇಸರ. ಹೇಗಾದರೂ ತೊಲಗಿದರೆ ಸಾಕು ಎಂಬ ಮನೋಭಾವ. ಇದು ದಕ್ಷಿಣ ಅಮೆರಿಕಾದ ಕೊಲಂಬಿಯಾ ದೇಶದ ಗ್ರಾಮಗಳಲ್ಲಿ ಹಿಪ್ಪೋಪೊಟಮಸ್ ಅಥವಾ ನೀರಾನೆ/ನೀರ್ಗುದುರೆ ಬಗ್ಗೆ ಇರುವ ಧೋರಣೆ. ಸ್ವಾರಸ್ಯಕರ ವಿಷಯವೆಂದರೆ, ಭಾರತಕ್ಕೆ ಇವುಗಳಲ್ಲಿ ಅರವತ್ತು ನೀರಾನೆಗಳು ಈ ವರ್ಷದ ಅಂತ್ಯಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ.
ಎಲ್ಲಿಂದ ಬಂತು ನೀರಾನೆ?
ನೀರಿನಲ್ಲಿ ಮುಳುಗಿದ್ದು, ದೊಡ್ಡ ಕಣ್ಣು ಪುಟ್ಟ ಕಿವಿ ಅಷ್ಟೇ ಕಾಣುವ ಹಾಗೆ ಇರುವ ದೊಡ್ಡ ಸಸ್ತನಿಗಳು ನೀರಾನೆಗಳು. ಹಾಗೆ ನೋಡಿದರೆ ಇವುಗಳ ತವರೂರು ಆಫ್ರಿಕಾ. ಇದೀಗ ದಕ್ಷಿಣ ಅಮೆರಿಕಾದ ಕೊಲಂಬಿಯಾದಿಂದ ನಮ್ಮ ಭಾರತಕ್ಕೆ ಅರವತ್ತು ನೀರಾನೆಗಳು ಬರುವ ಸಾಧ್ಯತೆ ಇದೆ. ಒಮ್ಮೆ ವಿಸ್ಮಯ ಮೂಡಿಸಿದ್ದ ಈ ಪ್ರಾಣಿಗಳ ಬಗ್ಗೆ ಅಲ್ಲಿಯ ಜನರ ಆಕ್ರೋಶ ವ್ಯಕ್ತಪಡಿಸಲು ಕಾರಣವಿದೆ.
ಕೊಲಂಬಿಯಾಕ್ಕೆ ಇವು ತಾವಾಗಿ ಬಂದದ್ದಲ್ಲ; ಅತಿಥಿಗಳಾಗಿಯೇ ಕಾಲಿಟ್ಟಿದ್ದು. ತನ್ನ ಷೋಕಿಗಾಗಿ ಅವುಗಳನ್ನು 1980ರಲ್ಲಿ ವೈಭವೋಪೇತ ಹಸಿಂಡ ನೆಪೋಲ್ಸ್ ಎಸ್ಟೇಟ್‌ಗೆ ಅನಧಿಕೃತವಾಗಿ ಬರಮಾಡಿಕೊಂಡದ್ದು ಮಾದಕ ವಸ್ತು ಕೊಕೇನ್ ವ್ಯವಹಾರದಲ್ಲಿ ಜಗತ್ತಿಗೆ ದೊರೆಯೆಂದು ಪ್ರಸಿದ್ಧನಾದ ಪಾಬ್ಲೋ ಎಸ್ಕೋಬಾರ್. ದೊಡ್ಡ ಎಸ್ಟೇಟಿನಲ್ಲಿ ಜಿರಾಫ್, ಒಂಟೆ, ಆಸ್ಟ್ರಿಚ್, ಜಿಂಕೆ ಹೀಗೆ ಅನೇಕ ಪ್ರಾಣಿಗಳನ್ನು ಸಾಕಿದ್ದ. ಅದರೊಂದಿಗೇ ಬಂದದ್ದು ಒಂದು ಗಂಡು ಮತ್ತು ಮೂರು ಹೆಣ್ಣು ನೀರಾನೆಗಳು. 1993ರಲ್ಲಿ ಆತನ ನಿಧನದ ನಂತರ ಈ ಪ್ರಾಣಿಗಳ ಮೇಲ್ವಿಚಾರಣೆ ಮಾಡುವವರು ಇಲ್ಲವಾದರು. ಕೆಲವು ಎಸ್ಟೇಟಿನಲ್ಲಿಯೇ ಉಳಿದವು. ಹೊಸದಾಗಿ ಸೇರ್ಪಡೆಯಾದ ಮರಿಗಳು ಆಹಾರ ಅರಸಿ ಹೊರನಡೆದವು. ಹಾಗೆ ಅವು ಉಷ್ಣ ಮತ್ತು ಜೌಗು ಪ್ರದೇಶವಾದ ಆಂಟಿಯೊಕ್ರಿಯದ ಮ್ಯಾಗ್ದೋಲಿನ್ ನದಿಯ
ತೀರವನ್ನು ತಮ್ಮ ವಸತಿಯನ್ನಾಗಿ ಮಾಡಿಕೊಂಡವು. ನಾಲ್ಕು ನೀರಾನೆ
ಗಳಿದ್ದದ್ದು, ಈಗ 140ಕ್ಕೂ ಹೆಚ್ಚಾಗಿವೆ. ಅವುಗಳ ಮೂಲ ನೆಲೆಯಾದ ಆಫ್ರಿಕಾವನ್ನು ಬಿಟ್ಟರೆ ಇವುಗಳು ಅತ್ಯಂತ ಹೆಚ್ಚು ಸಂಖ್ಯೆಯಲ್ಲಿರುವುದು ಕೊಲಂಬಿಯಾದಲ್ಲೇ.
ಈ ನೀರಾನೆಗಳಿಗೆ ಸಹಜ ಶತ್ರುಗಳಾದ ಮೊಸಳೆ, ಸಿಂಹ ಅಥವಾ ಇನ್ನಿತರ ಆಫ್ರಿಕನ್ ವನ್ಯಪ್ರಾಣಿಗಳು ಇಲ್ಲಿಲ್ಲ. ಹಾಗಾಗಿ ಆಫ್ರಿಕಾಗಿಂತ ಅತ್ಯಂತ ವೇಗವಾಗಿ ಇಲ್ಲಿ ಇವುಗಳ ವಂಶಾಭಿವೃದ್ಧಿ ಆಗುತ್ತಿದೆ. ಅಧ್ಯಯನದ ಪ್ರಕಾರ ಇದೇ ರೀತಿಯಲ್ಲಿ ಅವುಗಳ ವಂಶಾಭಿವೃದ್ಧಿ ಮುಂದುವರೆದರೆ 2024ರಲ್ಲಿ ಅವುಗಳ ಸಂಖ್ಯೆ 1,400 ತಲುಪುವ ಸಾಧ್ಯತೆ ಇದೆ.
ಅಸಮತೋಲನ
ಹೆಚ್ಚುತ್ತಿರುವ ನೀರಾನೆಗಳಿಂದಾಗಿ ಪರಿಸರ ವ್ಯವಸ್ಥೆಗೆ ಭಂಗ ಬಂದಿದೆ. ಜಗತ್ತಿನ ಅತಿದೊಡ್ಡ ನದಿಗಳಲ್ಲಿ ಒಂದಾದ, ಅಪಾರ ಜೀವವೈವಿಧ್ಯ ಹೊಂದಿರುವ ನದಿ ಮೆಗ್ದಲಿನಾ. ಇದರ ತಟದಲ್ಲಿ ವಾಸವಾಗಿರುವ ಈ ನೀರಾನೆಗಳು ಪ್ರತಿರಾತ್ರಿ ಸುಮಾರು ನಲವತ್ತು ಕೆ.ಜಿ ಹುಲ್ಲನ್ನು ತಿನ್ನುತ್ತವೆ. ಅವು ಹೊರಹಾಕುವ ತ್ಯಾಜ್ಯ ವಸ್ತುಗಳು ನೀರನ್ನು ಕಲುಷಿತಗೊಳಿಸುತ್ತವೆ. ಇದರಿಂದಾಗಿ ಮೀನು ಸೇರಿದಂತೆ ನದಿಯಲ್ಲಿರುವ ಅಪರೂಪದ ಜೀವಜಾಲ ನಶಿಸಿ ಹೋಗುತ್ತಿದೆ. ಆಹಾರವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಇನ್ನಿತರ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳಿಗೂ ಅಪಾಯವಿದೆ. ಉದಾಹರಣೆಗೆ ವೆಸ್ಟ್‌ಇಂಡಿಯನ್ ಮ್ಯಾನಟಿ, ಟ್ರಾಪಿಕಲ್ ಆಟರ್‌ಗಳಿಗೆ ಇವು ತೀವ್ರಸ್ಪರ್ಧೆಯನ್ನು ಒಡ್ಡುತ್ತಿವೆ. ಈ ನೀರಾನೆಗಳು ಉಭಯವಾಸಿಗಳಾಗಿವೆ. ಕೊಲಂಬಿಯಾದ ಅನೇಕ ಹಳ್ಳಿಗಳಲ್ಲಿ ಮೀನುಗಾರಿಕೆ ಜನರ ಮುಖ್ಯ ಉದ್ಯಮ. ಹೀಗಾಗಿ ನದಿಯನ್ನೇ ತಮ್ಮ ನಿತ್ಯದ ಬದುಕಿಗಾಗಿ ಅವಲಂಬಿಸಿದ್ದಾರೆ. ಹೊಸದಾಗಿ ಬಂದು ಸೇರಿದ ಮತ್ತು ತಮ್ಮ ಸಂತತಿಯನ್ನು ತೀವ್ರವಾಗಿ ಹೆಚ್ಚಿಸಿಕೊಳ್ಳುತ್ತಿರುವ ಈ ನೀರಾನೆಗಳಿಂದ ಜನರು ಹಾಗೂ ಪ್ರಾಣಿಗಳ ನಡುವೆ ಸಂಘರ್ಷ ಶುರುವಾಗಿದೆ. ತಮ್ಮ ಆಹಾರ ಮತ್ತು ಅಸ್ತಿತ್ವಕ್ಕಾಗಿ ನೀರಾನೆಗಳು ಸ್ಥಳೀಯರ ಮೇಲೆ ಆಗಾಗ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಹಾಗಾಗಿಯೇ ಕೊಲಂಬಿಯಾದ ಪರಿಸರ ಸಚಿವಾಲಯವು ಕಳೆದ ವರ್ಷ ನೀರಾನೆಗಳನ್ನು ಆಕ್ರಮಣಕಾರಿ ಪ್ರಾಣಿಗಳೆಂದು ಘೋಷಿಸಿದೆ.
ನಿಯಂತ್ರಣ ಕ್ರಮಗಳು
ಇವುಗಳನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಸಂತಾನಶಕ್ತಿಹರಣಕ್ಕಾಗಿ ಗರ್ಭನಿರೋಧಕ ಔಷಧ ಹಾಕುವ, ಶಸ್ತ್ರಚಿಕಿತ್ಸೆ ಮಾಡಿಸುವ ಯೋಜನೆ ಕೈಗೊಳ್ಳಲಾಗಿತ್ತು. ಆದರೆ ಇದು ಸಮಯ ಬೇಡುವ, ಅಪಾಯಕಾರಿ ಯೋಜನೆ. ಪ್ರತಿ ಪ್ರಾಣಿಗೂ 7,000 ಪೌಂಡ್‌ಗಳಷ್ಟು ದುಡ್ಡನ್ನು ಖರ್ಚು ಮಾಡಬೇಕು. ಅದರೊಂದಿಗೇ ದಪ್ಪ ಚರ್ಮವನ್ನು ಚುಚ್ಚುವುದು ಕಷ್ಟ. ಕೆಲವು ಬಾರಿ ಮತ್ತು ಬರಿಸುವ ಔಷಧ ಪರಿಣಾಮಕಾರಿಯಲ್ಲ; ಹಾಗೆಂದು ಹೆಚ್ಚಿಗೆ ಪ್ರಮಾಣದಲ್ಲಿ ನೀಡಿದರೆ ಪ್ರಾಣಿಗಳೇ ಸಾಯಬಹುದು. ಹಾಗಾಗಿ ಸಾಕಷ್ಟು ಯೋಚಿಸಿ ಸ್ಥಳೀಯ ಸಂಸ್ಥೆಯ ಮೂಲಕ ವಿದೇಶಿ ಬೇಟೆಗಾರರಿಗೆ ಇವುಗಳನ್ನು ಸಾಯಿಸಲು ಬೇಡಿಕೆಯನ್ನು ಮುಂದಿಟ್ಟಿತ್ತು. ಆ ಪ್ರಕಾರ 2009ರಲ್ಲಿ ಪೆಪೆ ಎನ್ನುವ ನೀರಾನೆಯನ್ನು ಕೊಲ್ಲಲಾಗಿತ್ತು. ದೈತ್ಯ ಮೃತದೇಹದ ಮುಂದೆ ಸೈನಿಕರು ನಿಂತಂತಹ ಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾದದ್ದೇ ಕೊಲಂಬಿದಲ್ಲಿ ಮತ್ತು ಇತರ ದೇಶಗಳಲ್ಲಿ ದೊಡ್ಡದೊಂದು ಈ ಅಮಾನವೀಯ ಕೃತ್ಯದ ಬಗ್ಗೆ ಗಲಾಟೆ ಎದ್ದಿತು. ಹಾಗಾಗಿ ಈ ರೀತಿ ನೀರಾನೆಗಳನ್ನು ಸಾಯಿಸುವ ಪ್ರಯತ್ನದಿಂದ ಸರ್ಕಾರ ಹಿಂದೆಗೆಯುವುದು ಅನಿವಾರ್ಯವಾಗಿತ್ತು.
ಸರ್ಕಾರ ಜನರ ಜೀವಕ್ಕೆ ಗಮನಕೊಡದೆ ಪ್ರಾಣಿ ರಕ್ಷಣೆ ಎಂದು ಕುಳಿತರೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತೇವೆ. ಇವುಗಳ ಮಾಂಸ, ಹಂದಿಮಾಂಸದ ಹಾಗೆ ಇರುತ್ತದೆ. ಹಾಗಾಗಿ ಅವುಗಳನ್ನು ಕೊಂದು ತಿನ್ನುವುದೇನೂ ಕಷ್ಟವಲ್ಲ ಎಂಬ ನಿರ್ಧಾರಕ್ಕೆ ಇಲ್ಲಿನ ಜನರು ಬಂದಿದ್ದಾರೆ. ಹಾಗೆಂದು ಎಲ್ಲರೂ ಈ ನೀರಾನೆಗಳನ್ನು ವಿರೋಧಿಸುತ್ತಾರೆ ಎಂದೇನಿಲ್ಲ. ಎಲ್ಲೆಡೆಯಂತೆ ಪರ-ವಿರೋಧಗಳು ಇಲ್ಲೂ ಇವೆ. ‘ಶಾಂತವಾಗಿದ್ದಾಗ ಏನೂ ತೊಂದರೆ ಮಾಡದ ಮುದ್ದು ಪ್ರಾಣಿಗಳಾದ ಈ ನೀರಾನೆಗಳು ಸ್ವಭಾವತಃ ಆಕ್ರಮಣಕಾರಿಯಲ್ಲ. ಕೆಲವು ವರ್ಷಗಳಿಂದ ಅವುಗಳ ಜೊತೆಗೆ ಒಂದೇ ಸ್ಥಳದಲ್ಲಿ ವಾಸ
ವಾಗಿದ್ದು, ಅವುಗಳ ಆಂಗಿಕ ಭಾಷೆಯನ್ನು ನಾವು ಕಲಿತಿದ್ದೇವೆ. ಅವುಗ
ಳಿಗೆ ಸಿಟ್ಟು ಬಂದಾಗ ಸುಮ್ಮನೆ ಬಿಟ್ಟುಬಿಡುವುದು ಸೂಕ್ತ. ಮೀನುಗಾರಿಕೆ
ಯಲ್ಲಿ ನಮಗೆ ಲಾಭ ಕಡಿಮೆಯಾಗಿದೆ ನಿಜ. ಆದರೆ ಈ ನೀರಾನೆಗಳನ್ನು ನೋಡಲು ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಅವುಗಳಿಂದ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಲಾಭ ಬರುತ್ತಿದೆ. ಹಿಪ್ಪೋ ಟೂರಿಸಂ ಎಂದೇ ನಮ್ಮ ಹಳ್ಳಿಗಳನ್ನು ಗುರುತಿಸಲಾಗುತ್ತಿದೆ. ಒಂದು ರೀತಿಯಲ್ಲಿ ನಮ್ಮ ಆದಾಯದ ಮೂಲವೂ ಆಗಿರುವ ಈ ನೀರಾನೆಗಳನ್ನು ಸಹಿಸಿಕೊಳ್ಳುವುದು ಅನಿವಾರ್ಯ’ ಎನ್ನುವವರೂ ಇದ್ದಾರೆ.
ಸ್ಥಳಾಂತರ!
ಈಗ ಕಂಡುಕೊಂಡಿರುವ ಪರಿಹಾರವೆಂದರೆ ಇವುಗಳಲ್ಲಿ ಅರವತ್ತನ್ನು ಭಾರತಕ್ಕೆ ಮತ್ತು ಹತ್ತನ್ನು ಮೆಕ್ಸಿಕೋಕ್ಕೆ ಕಳುಹಿಸುವುದು. ಜೀವಶಾಸ್ತ್ರಜ್ಞ ಜೀನ್ ಸನರ್ ಹೇಳುವ ಪ್ರಕಾರ, ಇವುಗಳನ್ನು ಕಳುಹಿಸುವುದು ಅಷ್ಟು ಸುಲಭವಲ್ಲ. ಮೊದಲು ಅವುಗಳನ್ನು ಸೆರೆಹಿಡಿದು, ರೋಗಗಳಿಗಾಗಿ ರಕ್ತ ಪರೀಕ್ಷೆ ಮಾಡಬೇಕು. ವಿಶೇಷವಾಗಿ ತಯಾರಿಸಲಾದ ದೊಡ್ಡ ಬೋನುಗಳಲ್ಲಿ ಹೆಲಿಕಾಪ್ಟರ್‌ಗಳಲ್ಲಿ ಕಳುಹಿಸ
ಬೇಕು. ಬೇರೆ ದೇಶಕ್ಕೆ ಕಾಲಿಡುವ ಮುನ್ನ ಕ್ವಾರಂಟೈನ್ ಮಾಡುವುದೂ ಅವಶ್ಯ. ಅಗತ್ಯವಿದ್ದಲ್ಲಿ ಸಂತಾನಶಕ್ತಿಹರಣ ಚಿಕಿತ್ಸೆಯನ್ನು ಮಾಡಬೇಕಾ
ಗುತ್ತದೆ. ಇದಕ್ಕೆಲ್ಲ ಸುಮಾರು ಮೂವತ್ತೈದು ಲಕ್ಷ ಡಾಲರ್ ಖರ್ಚಾಗುತ್ತದೆ. ಇದರ ಬದಲು ಅವುಗಳನ್ನು ಕೊಲ್ಲುವುದೇ ಸುಲಭ
ವಾದ ಮತ್ತು ಪ್ರಾಯೋಗಿಕವಾದ ವಿಧಾನ. ಆದರೆ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ದುಬಾರಿ- ಕಷ್ಟಕರ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.
ಭಾರತದ ಜಾಮ್ ನಗರಕ್ಕೆ ಸ್ಥಳಾಂತರ?
ಭಾರತದ ಗುಜರಾತ್ ರಾಜ್ಯದ ಜಾಮ್ ನಗರದಲ್ಲಿರುವ ಗ್ರೀನ್ಸ್ ಜೂಆಲಜಿ ರೆಸ್ಕ್ಯುಅಂಡ್ ರಿಹ್ಯಾಬಿಲಿಟೇಶನ್ ಕಿಂಗ್‌ಡಂಗೆ ಮತ್ತು ಮೆಕ್ಸಿಕೋಗೆ ನೀರಾನೆಗಳನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಇದರ ಬಗ್ಗೆ ಅಧಿಕೃತ ಪ್ರಕಟಣೆ ಭಾರತದಿಂದ ಬಂದಿಲ್ಲ. ಆದರೆ ಇಲ್ಲಿನ ಮೂಲಗಳ ಪ್ರಕಾರ ಜಾಮ್ ನಗರದಲ್ಲಿ ಕೇವಲ ಹನ್ನೆರಡು ನೀರಾನೆಗಳಿಗೆ ಅವಕಾಶವಿದ್ದು, ಈಗಾಗಲೇ ಎರಡು ನೀರಾನೆಗಳಿವೆ. ಭಾರತದಲ್ಲಿ ನೀರಾನೆಗಳ ಸಂಖ್ಯೆ 65 ರಿಂದ 85 ಕ್ಕೆ (1995 ರಿಂದ 2022ಕ್ಕೆ) ಏರಿದೆ. ಈ ಕಾರಣದಿಂದ ಅವುಗಳ ಮೂಲ ನೆಲೆಗೆ ವಾಪಸ್ ಕಳುಹಿಸುವುದೇ ಸೂಕ್ತ ಎನ್ನುವುದು ಪ್ರಾಣಿತಜ್ಞರ ಅಭಿಪ್ರಾಯ. ವ್ಯಕ್ತಿಯೊಬ್ಬನ ಷೋಕಿಗಾಗಿ ತಮ್ಮ ಮೂಲ ನೆಲೆ ಕಳೆದುಕೊಂಡ ಅತಂತ್ರ ಪ್ರಾಣಿಗಳು, ಜನರಿಗೆ ಆಗುತ್ತಿರುವ ತೊಂದರೆ ಇವೆಲ್ಲವೂ ಪರಿಸರದ ಸಮತೋಲನ ಹದಗೆಟ್ಟರೆ ಆಗುವ ಅಪಾಯಕ್ಕೆ ಒಂದು ಉದಾಹರಣೆಯಾಗಿ ಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.