ಪಕ್ಷಿಗಳಿಲ್ಲದ ಪ್ರಕೃತಿಯನ್ನು ಊಹಿಸಲೂ ಅಸಾಧ್ಯ, ಪ್ರತಿ ವರ್ಷ ತಪ್ಪದೆ ಅದೇ ದಿನ, ಅದೇ ಸ್ಥಳಕ್ಕೆ ಕರಾರುವಾಕ್ಕಾಗಿ ಪಕ್ಷಿಗಳು ನಿರ್ದಿಷ್ಟ ದಾರಿಯನ್ನು ಅನುಸರಿಸಿ ಸಾವಿರಾರು ಕಿಲೋ ಮೀಟರ್‌ಗಳ ಪ್ರಯಾಣ ಮಾಡಿ ತಲುಪುತ್ತವೆ ಎಂದರೆ ಆಶ್ಚರ್ಯಪಡಲೇಬೇಕು.
ಶ್ರೀರಂಗಪಟ್ಟಣದಿಂದ 3 ಕಿ.ಮೀ ದೂರದಲ್ಲಿರುವ ನಗುವನಹಳ್ಳಿ ಯಲ್ಲಿ ಈಗ ನೀಲಿ ಬಾಲದ ಕಳ್ಳಿಪೀರ ಹಕ್ಕಿಗಳಿಗೆ (ಬ್ಲೂ ಟೇಲ್ಡ್ ಬೀ ಈಟರ್) ‘ಹೆರಿಗೆ ಆಸ್ಪತ್ರೆ’ಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಫೆಬ್ರುವರಿಯಲ್ಲಿ ವಲಸೆ ಬಂದಿರುವ ಇವು ಜೂನ್ ತಿಂಗಳವರಗೆ ಬೀಡು ಬಿಟ್ಟು, ಸಂತಾನೋತ್ಪತ್ತಿ ಮಾಡಿಕೊಂಡು ತಮ್ಮ ವಾಸ ಸ್ಥಳಕ್ಕೆ ಹಾರಿಹೋಗುತ್ತವೆ.
ಕಳ್ಳಿಪೀರ ಹಕ್ಕಿಗಳ ಕಲರವ, ಓಡಾಟ, ಪ್ರೀತಿ, ಪ್ರಣಯ, ಲಾಲನೆ, ಆಹಾರವನ್ನು ತಂದು ಗುಟುಕು ನೀಡುವ ದೃಶ್ಯಗಳನ್ನು ನೋಡುವುದೇ ಒಂದು ಅದ್ಭುತ ಅನುಭವ. ಕ್ಯಾಮೆರಾ ಇದ್ದರಂತೂ ಒಂದೊಂದು ಕ್ಷಣವನ್ನೂ ವಿವಿಧ ಆ್ಯಂಗಲ್‌ನಲ್ಲಿ ಸೆರೆಹಿಡಿಯಬಹುದು. ನಗುವನಹಳ್ಳಿಯ ಕಾವೇರಿಯ ನದಿದಂಡೆಯ ಹತ್ತಿರ ಕೆಲವು ಹೊತ್ತು ಕಾಲ ಕಳೆದರೆ ಸಾಕು ಹೊತ್ತು ಹೋಗುವುದೆ ಗೊತ್ತಾ ಗುವುದಿಲ್ಲ.
ಫೆಬ್ರುವರಿ-ಮೇ ತಿಂಗಳಲ್ಲಿ 4ರಿಂದ 6 ಮೊಟ್ಟೆಗಳನ್ನಿಡುತ್ತವೆ. ಕಾವು ಕೊಟ್ಟು ಮರಿ ಮಾಡುತ್ತವೆ. ಇವುಗಳು ಹೆಚ್ಚಾಗಿ ಮೈದನಹಳ್ಳಿ, ಸಾವನದುರ್ಗದಲ್ಲಿ ಕಾಣಬಹುದು. ಜೇನು ಹುಳುಗಳನ್ನು ಹಿಡಿದು ತಿನ್ನುತ್ತವೆ.
‘ನೀಲಿ ಬಾಲದ ಕಳ್ಳಿ ಪೀರ ನೋಡಲು ಗುಬ್ಬಚಿಗಿಂತ ದೊಡ್ಡದಾದ ಗೊರವಂಕಕ್ಕಿಂತ ಚಿಕ್ಕದಾದ ಹಸಿರು ಪಕ್ಷಿ. ನೆತ್ತಿ ಕಂದು ಬಣ್ಣದಿಂದ ಕೂಡಿರುತ್ತದೆ. ಕಣ್ಣಿನ ಸುತ್ತ ಕಾಡಿಗೆಯಂತೆ ಕಂಡು ಬರುತ್ತದೆ. ಕತ್ತಿನ ಬಳಿ ಕಂದು ಪಟ್ಟಿ ಇರುತ್ತದೆ. ಕಪ್ಪು ಕೊಕ್ಕು ಮೊನಚಾಗಿ ಬಾಗಿರುತ್ತದೆ. ಬಾಲದ ಮಧ್ಯದಿಂದ ಸೂಜಿಯಂತೆ ನೀಳವಾದ ಗರಿಗಳನ್ನು ಕಾಣಬಹುದು. ಈ ಹಕ್ಕಿಗೆ ಜೇನ್ನೊಣಬಾಕ, ಕಳ್ಳಿಪೀತ್ರ, ಕುರುಡು ಗಿಣಿ, ಗಣಿಗಾರ‍್ಲ ಹಕ್ಕಿ, ಜೇನುಹಿಡುಕ... ಹೀಗೆ ಹತ್ತಾರು ಹೆಸರುಗಳಿಂದ ಕರೆಯುತ್ತಾರೆ. ಈ ಹಕ್ಕಿಗಳು ಭಾರತ ದೇಶಕ್ಕೆ ಸಂತಾನೋತ್ಪತ್ತಿಗೋಸ್ಕರವೇ ವಲಸೆ ಬರುತ್ತವೆ. ಮತ್ತೆ ಮರಿಗಳೊಡನೆ ಬಂದ ದಾರಿಯಲ್ಲೇ ಹೋಗುತ್ತವೆ’ ಎಂದು ಪಕ್ಷಿ ತಜ್ಞ ಡಾ.ಎಸ್.ವಿ.ನರಸಿಂಹನ್ ತಿಳಿಸುತ್ತಾರೆ..
ವಾರಾಂತ್ಯದ ದಿನಗಳು ಬಂತ್ತೆಂದರೆ ಸಾಕು ಬೆಂಗಳೂರು ವನ್ಯಜೀವಿ ಛಾಯಾಗ್ರಹಕರ ದಂಡು ಬೀಡು ಬಿಟ್ಟಿರುತ್ತದೆ. ಈ ಬೇಸಿಗೆ ರಜೆಯಲ್ಲಿ ಮಕ್ಕಳು ಹಕ್ಕಿಗಳ ಸೌಂದರ್ಯ ಸವಿಯಲು ಸರಿಯಾದ ಸಮಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.