ಅಂದು ಭಾನುವಾರ. ಎಂದಿನಂತೆ ನನ್ನ ಗೂಡಿಗೆ ಬಂದ ಹೊಯ್ಸಳಕಟ್ಟೆ ಮಂಜುನಾಥ ‘ಫಾರಿನ್‌ನಿಂದ ಪಕ್ಷಿ ಬಂದಿರ್ತಾವೆ, ಕಗ್ಗಲಡುಗೆ ಹೋಗೋಣು ಬರ‍್ರಿ’ ಎನ್ನುತ್ತಲೇ ಕ್ಯಾಮೆರಾ ಬ್ಯಾಗನ್ನು ಹೆಗಲಿಗೆ ಏರಿಸಿಬಿಟ್ಟ. ಶಿರಾ ದಾಟಿ ರಸ್ತೆಯ ಅಂಕುಡೊಂಕುಗಳಲ್ಲಿ ಸಾಗುತ್ತಿದ್ದ ವೇಗಕ್ಕೆ ಕೆರೆಯ ಕೋಡಿ ಬ್ರೇಕ್ ಹಾಕಿತು.
ವಿಶಾಲವಾದ ಕೆರೆ. ಬರಿದಾಗಿ ಬಿರುಕು ಬಿಟ್ಟಿದ್ದ ಒಡಲು. ಅದರ ನಡುವೆ ಬೆಳೆದು ನಿಂತ ಜಾಲಿ ಮರಗಳು. ಒಮ್ಮೆ ಇಡೀ ಕೆರೆಯ ಸುತ್ತಾ ಕಣ್ಣಾಡಿಸಿದೆ. ವರುಣನ ಮುಖ ಕಾಣದ ತೋಟಪಟ್ಟಿಗಳು ಅಸ್ಥಿಪಂಜರದಂತೆ ಕಂಡವು. ಪಕ್ಕದಲ್ಲೇ ಕಗ್ಗಲಡು ಗ್ರಾಮ. ಅಲ್ಲಿನ ಸರ್ಕಾರಿ ಶಾಲೆಯ ಆವರಣದಲ್ಲಿರುವ ಹುಣಸೆಮರವೇ ವಿದೇಶಿ ಪಕ್ಷಿಗಳ ಆವಾಸಸ್ಥಾನ. ಆದರೆ, ಈ ಬಾರಿ ಆ ಬಾನಾಡಿಗಳ ಸಂಭ್ರಮ ಕಾಣಲಿಲ್ಲ.
ಅದೇ ಹುಣಸೇಮರದ ಕೆಳಗೆ ಕುಳಿತಿದ್ದ ಹಿರಿಯರನ್ನು ಮಾತಿಗೆಳೆದೆ. ‘ಯಜಮಾನ್ರೆ.. ಯಾಕೆ ಈ ಸಾರಿ ಹಕ್ಕಿಗಳು ಬಂದ್ಹಂಗಿಲ್ಲ’ ಎಂದೆ. ಬಾಡಿದ ಮುಖವನ್ನು ಮೇಲೆತ್ತಿ ಹುಣಸೆಮರದತ್ತ ನೋಡಿ, ‘ಬಂದಿದ್ವಪ್ಪಾ, ಎರಡು ದಿವ್ಸ ಇದ್ದು ಹೋದ್ವು. ಕೆರೆಯಾಗ ನೀರು ಎಲ್ಲೈತಪ್ಪಾ. ಮನೆಮಕ್ಕಳಿಗೆ ನೀರು ಕುಡಿಸೋದ ಕಷ್ಟ ಆಗೈತೆ. ಕೆರೆಯಾಗ ನೀರ ತುಂಬಿಸಿ, ಈ ಊರನ್ನು ಪಕ್ಷಿಧಾಮ ಮಾಡ್ತಿವಿ ಅಂತ ಎಮ್ಮೆಲ್ಲೆ ಹೇಳಿಹೋದೋರು ಈ ಕಡೆ ತಲೆ ಹಾಕ್ಲಿಲ್ಲಪಾ. ಹಕ್ಕಿಗಳು ಇದ್ದಿದ್ರ ಊರು ಚಂದ್ ಇರ್ತಿತ್ತು’ ಎನ್ನುತ್ತಲೇ ಎರಡೂ ಕೈಗಳನ್ನು ತಲೆಯ ಮೇಲಿಟ್ಟುಕೊಂಡರು.
ಮಗ್ಗುಲ್ಲಲ್ಲೇ ಇದ್ದ ಕೃಷ್ಣಪ್ಪನವರ ಚಹಾದಂಗಡಿಯ ಮೇಲೆ ಪಕ್ಷಿ ಪ್ರಿಯರು ಕಳೆದ ವರ್ಷ ಹಚ್ಚಿದ್ದ ಪೊಸ್ಟರ್ ಇತ್ತು. ಮಾಸಿದ ಪೋಸ್ಟರ್‌ನಲ್ಲಿ ಹೀಗಿತ್ತು- ‘ದೇಶ-ವಿದೇಶಗಳಿಂದ ಸಂತಾನಭಿವೃದ್ಧಿಗಾಗಿ ನಿಮ್ಮೂರಿಗೆ ವಲಸೆ ಬಂದ ನಮಗೆ ಸೂಕ್ತ ಪರಿಸರ ಒದಗಿಸಿ ಸಹಕರಿಸಿದ ಕಗ್ಗಲಡು ಸುತ್ತಲಿನ ಹಳ್ಳಿಗಳ ಜನರಿಗೆ ನಮ್ಮ ಅನಂತಾನಂತ ವಂದನೆಗಳು, ಮುಂದಿನ ವರ್ಷ ಸಂತಾನದೊಂದಿಗೆ ಮತ್ತೆ ಬರುತ್ತೇವೆ’. ಈ ಒಕ್ಕಣೆ ನೋಡಿ ಕಣ್ಣಿಗೆ ಕತ್ತಲು ಕವಿದಂತಾಯಿತು. ಮಾತು ಹೊರಡದಂತಾಯಿತು. ಏಕೆಂದರೆ ಈ ವರ್ಷ ಅವು ಬಾಣಂತನಕ್ಕೆ ಬರಲಿಲ್ಲ.
ಹೀಗಿತ್ತು ಪಕ್ಷಿಗಳ ಸಂಭ್ರಮ
ಪ್ರತಿ ವರ್ಷ ನವೆಂಬರ್–ಡಿಸೆಂಬರ್ ತಿಂಗಳಲ್ಲಿ ಕಗ್ಗಲಡುವಿನ ಮರಗಳ ಮೇಲೆ ಪೇಂಟೆಡ್ ಸ್ಟಾರ್ಕ್ ಕೊಕ್ಕರೆಗಳು ತುಂಬಿರುತ್ತವೆ. ಕಳೆದ ವರ್ಷ ಇದೇ ತಿಂಗಳುಗಳಲ್ಲಿ ಹುಣಸೆಮರವೊಂದರಲ್ಲಿ ಪೇಂಟೆಡ್ ಸ್ಟಾರ್ಕ್ ಪಕ್ಷಿಗಳ ಸಂಸಾರವೇ ಇತ್ತು. ಹಕ್ಕಿಗಳು ಗೂಡು ಕಟ್ಟಿ ಮರಿಗಳ ಆರೈಕೆಯಲ್ಲಿ ತೊಡಗಿದ್ದವು. ಇನ್ನು ಕೆಲವು ಹಕ್ಕಿಗಳು ದೂರದಿಂದ ಬಾರೆ ಮರ, ಜಾಲಿ ಮರದಿಂದ ಹಸಿರು ಟೊಂಗೆಗಳನ್ನು ಕಿತ್ತು, ಕೊಕ್ಕಿನಲ್ಲಿ ಹಿಡಿದುಕೊಂಡು ಮರಿಗಳಿಗೆ ಗೂಡನ್ನು ಕಟ್ಟುವಲ್ಲಿ ತಲ್ಲೀನವಾಗಿದ್ದವು. ಸ್ಟಾರ್ಕ್‌ಗಳು ಕೆರೆಯಲ್ಲಿ ಮೀನುಗಳನ್ನು ಹಿಡಿದುಕೊಂಡು ಬಂದು ಮರಿಗಳ ಬಾಯಲ್ಲಿ ಉಣಿಸುತ್ತಿದ್ದವು. ಇನ್ನೂ ಕೆಲವು ಹಕ್ಕಿಗಳು ಗಂಟಲಲ್ಲಿ ಸಂಗ್ರಹಿಸಿಕೊಂಡು ಬಂದ ನೀರಿನ ಗುಟುಕನ್ನು ಮರಿಗಳ ಬಾಯಲ್ಲಿ ಬಿಡುತ್ತಿದ್ದವು. ಮರದ ಕೆಳಗೆ ನಿಂತ ಪಕ್ಷಿಪ್ರಿಯರು ಬೈನಾಕ್ಯುಲರ್ ಹಿಡಿದು ಆ ಹಕ್ಕಿಗಳ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಇನ್ನು ಕೆಲವರು ಕ್ಯಾಮೆರಾ ತುಂಬಿಸಿಕೊಳ್ಳುತ್ತಿದ್ದರು.
ಕಳೆದ ವರ್ಷ ಇದೇ ವೇಳೆ ಕೆಲವು ಪಕ್ಷಿಗಳು ಗೂಡು ಕಟ್ಟಿ, ಬಾಳ್ವೆ ಮಾಡಿ, ಗರ್ಭಧರಿಸಿ, ಮೊಟ್ಟೆ ಇಟ್ಟು, ಮರಿಗಳು ಹಾರಾಡುವವರೆಗೆ ಇಲ್ಲಿಯೇ ಇದ್ದು ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ವಾಪಸು ತಮ್ಮ ತಮ್ಮ ನೆಲೆಗೆ ಮರಳಿದ್ದನ್ನು ನೋಡಿದ್ದೆ. ಈ ವರ್ಷ ಪಕ್ಷಿಗಳ ಸುಳಿವೇ ಇರಲಿಲ್ಲ.
ಹೀಗೆ ಹಲವು ವರ್ಷಗಳಿಂದ ವಲಸೆ ಬರುತ್ತಿದ್ದ ಬಾನಾಡಿಗಳು ಈ ಊರಿನೊಂದಿಗೆ ಕರುಳು ಸಂಬಂಧವನ್ನೂ ಕಡಿದುಕೊಂಡಿವೆ. ಕಾರಣವಿಷ್ಟೇ; ಅನ್ನ-ನೀರು ಕೊಡುತ್ತಿದ್ದ ಗಂಗೆ ಕೆರೆಯಲ್ಲಿ ಸಮಾಧಿಯಾಗಿದ್ದಾಳೆ. ಹೀಗಾಗಿ ಅವು ಇನ್ನೆಂದೂ ಕಗ್ಗಲಡುವಿಗೆ ಬರುವುದಿಲ್ಲ. ಸಣ್ಣ ನೀರಾವರಿ ಇಲಾಖೆ ಕೆರೆಗೆ ನೀರು ಹರಿಸಿದ್ದರೆ ಕಳೆದ ವರ್ಷದ ಸಂಭ್ರಮ ಈ ವರ್ಷವೂ ಇರುತ್ತಿತ್ತು. ಜೀವಸಂಕುಲದ ಚಲನಶೀಲ ಪರಂಪರೆಯ ಕೊಂಡಿ ಕಳಚುವುದಕ್ಕೆ ಯಾರನ್ನು ದೂರಬೇಕು ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
ಪೇಂಟೆಡ್ ಸ್ಟಾರ್ಕ್
ಅಳಿವಿನಂಚಿನಲ್ಲಿರುವ ವಿಶಿಷ್ಟ ಪಕ್ಷಿ ಪೇಂಟೆಡ್ ಸ್ಟಾರ್ಕ್ ಸಿಕೊನಿಡೆ ಕುಟುಂಬಕ್ಕೆ ಸೇರಿದೆ. ಭಾರತ, ಬರ್ಮಾ, ಬಾಂಗ್ಲಾ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಲ್ಲಿ ಕಂಡುಬರುತ್ತವೆ. ಸುಮಾರು ಮೂರುವರೆ ಅಡಿ ಎತ್ತರವಿರುವ ಇವು ಕೆಂಪು ಬಣ್ಣದ ಕಾಲು, ಹಳದಿ ಬಣ್ಣದ ಕೊಕ್ಕುಗಳನ್ನು ಹೊಂದಿರುತ್ತದೆ. ರೆಕ್ಕೆಗಳ ಮೇಲೆ ಗಾಢವಾದ ಹಸಿರು ಮಿಶ್ರಿತ ಕಪ್ಪು, ಗುಲಾಬಿ ವರ್ಣದ ಪಟ್ಟಿಗಳನ್ನು ಹೊಂದಿದೆ. ಎದೆಯ ಭಾಗದಲ್ಲಿ ಕಪ್ಪುಗೆರೆಗಳಿದ್ದು ಹೆಣ್ಣು ಮತ್ತು ಗಂಡು ಒಂದೇ ರೂಪವನ್ನು ಹೊಂದಿರುತ್ತವೆ. ಚಳಿಗಾಲದ ಅಂತ್ಯದಲ್ಲಿ ದಕ್ಷಿಣ ಭಾರತದ ಸುರಕ್ಷಿತ ಸ್ಥಳಗಳಿಗೆ ವಲಸೆ ಬರುವ ಇವು ಮೂರರಿಂದ ನಾಲ್ಕು ಮೊಟ್ಟೆಗಳನ್ನು ಇಟ್ಟು, ಸರದಿಯ ಪ್ರಕಾರ ಹೆಣ್ಣು ಗಂಡುಗಳೆರೆಡೂ ಕಾವು ಕೊಡುತ್ತವೆ. ಮೀನು, ಕಪ್ಪೆಗಳು ಇವುಗಳ ಆಹಾರ.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.