ADVERTISEMENT

ಸರಾಗವಾಗಿ ಈಜುವ ಎಂಪರರ್‌ ಹೆಬ್ಬಾತು

ಏಜೆನ್ಸೀಸ್
Published 13 ಜನವರಿ 2020, 19:45 IST
Last Updated 13 ಜನವರಿ 2020, 19:45 IST
ಹೆಬ್ಬಾತು
ಹೆಬ್ಬಾತು   

ಹೆಬ್ಬಾತುಗಳಲ್ಲಿಯೇ ಎಂಪರರ್‌ ಹೆಬ್ಬಾತು ವಿಶಿಷ್ಟ ರೂಪ ಹಾಗೂ ಶಾಂತ ಸ್ವಭಾವದಿಂದಲೇ ಪ್ರಸಿದ್ಧಿ. ಹಾಗಾಗಿ ಇದಕ್ಕೆ ಸಾರ್ವಭೌಮತೆಯ ಹೆಸರು ದಕ್ಕಿದೆ. ಇದರ ವೈಜ್ಞಾನಿಕ ಹೆಸರು ಚೆನ್‌ ಕನಾಗಿಕಾ (Chen canagica). ಇದು ಅನಾಟಿಡೇ (Anatidae) ಕುಟುಂಬಕ್ಕೆ ಸೇರಿದೆ. ಇದರ ಬಗ್ಗೆ ಇಂದಿನ ಪಕ್ಷಿ ಪ್ರಪಂಚದಲ್ಲಿ ತಿಳಿದುಕೊಳ್ಳೋಣ.

ಸ್ವಾರಸ್ಯಕರ ಸಂಗತಿಗಳು

*ಇದು ಬಹಳ ಸರಾಗವಾಗಿ ಈಜಬಲ್ಲದು. ವರ್ಷವಿಡೀ ಈಜಿಕೊಂಡು ಜೀವನ ಸಾಗಿಸುತ್ತದೆ. ನೆಲದಲ್ಲಿ ಅಪಾಯದ ಮುನ್ಸೂಚನೆ ಎದುರಾದರೆ ನೀರಿನಲ್ಲಿ ಉಳಿದು ಜೀವ ಉಳಿಸಿಕೊಳ್ಳುತ್ತದೆ.

ADVERTISEMENT

*ಬೇರೆ ಪ್ರಭೇದಗಳಿಗೆ ಹೋಲಿಸಿದರೆ ಇದು ಬಹಳ ಗಂಭೀರ ಸ್ವಭಾವದ ಹೆಬ್ಬಾತು. ಆದರೂ ಅಪಾಯದ ಪರಿಸ್ಥಿತಿಗಳಲ್ಲಿ ಮಾತ್ರ ದೊಡ್ಡ ಸದ್ದು ಹೊರಡಿಸುತ್ತದೆ.

*ಬೇಟೆಯಾಡುವ ಸಂದರ್ಭದಲ್ಲಿ ಸ್ಪರ್ಶಜ್ಞಾನವನ್ನು ಬಳಸಿಕೊಂಡು ನೆಲದಲ್ಲಿ ಅಡಗಿರುವ ಹುಳುಗಳನ್ನು ಹುಡುಕಿ ತಿನ್ನುತ್ತದೆ.

* ಹೆಚ್ಚು ದೂರ ಹಾರುವ ಸಾಮರ್ಥ್ಯ ಇದಕ್ಕಿಲ್ಲ.

ಎಲ್ಲಿರುತ್ತೆ?

ಫೆಸಿಫಿಕ್‌ನ ಉತ್ತರ ಭಾಗದಲ್ಲಿ ಹೆಚ್ಚಾಗಿ ನೋಡಬಹುದು. ಜತೆಗೆ ಅರ್ಕಟಿಕ್ ಹಾಗೂ ಅಲಸ್ಕಾ, ರಷ್ಯಾದ ಕರಾವಳಿ ತೀರ, ಚಳಿಗಾಲದಲ್ಲಿ ಎಲೂಟಿಯಾನ್‌ ದ್ವೀಪಗಳಲ್ಲಿ ಕಾಣಬಹುದು. ನದಿ ಹಾಗೂ ಸಮುದ್ರ ತೀರಗಳು, ಸಿಹಿನೀರಿನ ಕೊಳಗಳ ಸಮೀಪ ಇದು ಹೆಚ್ಚಾಗಿ ವಾಸಿಸುತ್ತದೆ.

ಹೇಗಿರುತ್ತೆ?

ಇದರ ಪುಕ್ಕ ನೀರಿನ ಅಲೆಯಂತೆ ಸುರುಳಿಯಾಕಾರದಲ್ಲಿದ್ದು, ನೋಡಲು ಆಕರ್ಷಕವಾಗಿರುತ್ತದೆ. ಮೈ ಎಲ್ಲ ಬೂದು ಮಿಶ್ರಿತ ಕಪ್ಪು ಬಣ್ಣದಲ್ಲಿದ್ದರೆ ನೆತ್ತಿಯಿಂದ ಹಿಡಿದು ಬೆನ್ನಿನವರೆಗೆ ಮಾತ್ರ ಬಿಳಿ ಮಿಶ್ರಿತ ಕೇಸರಿ ಬಣ್ಣದಲ್ಲಿರುತ್ತದೆ. ಕತ್ತಿನ ಒಳಭಾಗದಿಂದ ಮತ್ತೆ ಕಪ್ಪು ಬಣ್ಣದ ಪುಕ್ಕಗಳಿರುತ್ತವೆ. ಬಾಲವು ಶುದ್ಧ ಬಿಳಿ ಬಣ್ಣದಲ್ಲಿದ್ದು, ಕಾಲುಗಳು ಬಂಗಾರ ಬಣ್ಣದಲ್ಲಿರುತ್ತದೆ. ನೋಡಲು ದೂರದಿಂದ ಕೋಳಿಯಂತೆ ಕಾಣುತ್ತದೆ. ಕಪ್ಪು ಬಣ್ಣದ ಕಣ್ಣುಗಳು, ತಿಳಿ ಗುಲಾಬಿ ಬಣ್ಣದ ಕೊಕ್ಕು ಅದಕ್ಕೆ ಕಪ್ಪು ಬಣ್ಣದ ತುದಿ ಇರುತ್ತದೆ. ನೋಡಲು ಮುದ್ದಾಗಿ ಕಾಣುತ್ತದೆ.

ಆಹಾರ ಪದ್ಧತಿ

ಹುಲ್ಲು, ಬೆರ್‍ರಿ ಹಣ್ಣು, ಸಣ್ಣ ತೊಗಟೆ, ಕಾಂಡ, ಮರದ ಎಲೆ, ಸಮುದ್ರದ ಅಲೆಯಲ್ಲಿ ತೇಲುವ ಕದಿರು ಕಡ್ಡಿ, ಕಳೆ, ಮೃದ್ವಂಗಿಗಳನ್ನು ತಿನ್ನುತ್ತದೆ.

ಜೀವನಕ್ರಮ ಮತ್ತು ವರ್ತನೆ

ಹೆಬ್ಬಾತು ಗೂಡು ಕಟ್ಟುವ ಸ್ಥಳದಲ್ಲಿ ಸದಾ ಜಡವಾಗಿ ಕುಳಿತಿರುತ್ತದೆ. ಗೂಡು ಕಟ್ಟುವ ಅವಧಿಯಲ್ಲಿ ಬೇರೆ ಯಾವ ಪಕ್ಷಿಯೊಂದಿಗೆ ಇದು ಬೆರೆಯಲು ಇಷ್ಟಪಡುವುದಿಲ್ಲ. ಸದಾ ಗೂಡನ್ನು ಕಾಳಜಿ ಮಾಡುವ ಕೆಲಸದಲ್ಲಿ ನಿರತವಾಗಿರುತ್ತದೆ. ವಲಸೆ ಹೋಗದ ಅವಧಿಯಲ್ಲಿಯೂ ನೀರಿನಲ್ಲಿ ಹೆಚ್ಚು ಕಾಲ ಈಜಿಕೊಂಡು ಇರುತ್ತದೆ. ಹಗಲಿನಲ್ಲಿ ಕ್ರಿಯಾಶೀಲವಾಗಿರುತ್ತದೆ. ಗುಂಪಿನ ಸದಸ್ಯರ ನಡುವೆ ಆಹಾರವನ್ನು ಹಂಚಿಕೊಳ್ಳುತ್ತದೆ. ಪ್ರಾಯಕ್ಕೆ ಬಂದ ಹೆಬ್ಬಾತುಗಳು ಒಂದು ಕಡೆ ವಾಸ ಮಾಡುತ್ತವೆ. ಅಪಾಯದ ಸಂದರ್ಭದಲ್ಲಿ ತಲೆಯ ಭಾಗವನ್ನು ತಿರುಗಿಸಿ, ಜೋರಾಗಿ ಕೂಗುತ್ತದೆ.

ಸಂತಾನೋತ್ಪತ್ತಿ

ಇದು ಏಕ ಸಂಗಾತಿಗೆ ನಿಷ್ಠೆಯಿಂದ ಇರುವ ಪಕ್ಷಿ. ಆದರೆ, ತನ್ನ ಜೀವನಸಂಗಾತಿ ಸತ್ತರೆ ಮಾತ್ರ ಮತ್ತೊಂದು ಪಕ್ಷಿಯೊಂದಿಗೆ ಸಂಗ ಬೆಳೆಸುತ್ತದೆ. ಮೇ ತಿಂಗಳ ಮೊದಲ ಅವಧಿ ಅಥವಾ ಜೂನ್‌ನಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ಸಾಮಾನ್ಯವಾಗಿ ಈ ಪಕ್ಷಿಗಳದ್ದೆ ಒಂದು ಗುಂಪು ಮಾಡಿಕೊಳ್ಳುತ್ತದೆ. ನದಿ ತೀರದ ಬಂಡೆಗಳ ನಡುವೆ ಗೂಡು ಕಟ್ಟುತ್ತದೆ. ಹುಲ್ಲು ಬಳಸಿ ಗೂಡು ಕಟ್ಟುತ್ತದೆ. ಗೂಡು ಕಟ್ಟಿದ ನಂತರವೂ ಅದು ಹಾಳಾಗದಂತೆ ಕಾಪಾಡಿಕೊಳ್ಳುತ್ತದೆ. ಒಂದು ಸಲ 1 ರಿಂದ 8 ಕೆನೆ ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. 24 ರಿಂದ 25ದಿನಗಳ ಹೆಣ್ಣು ಹೆಬ್ಬಾತು ಕಾವು ಕೊಡುತ್ತದೆ. ಮರಿಗಳು ಒಂದು ಗಂಟೆಗಳ ಒಳಗೆ ನಡೆಯಲು ಶಕ್ತವಾಗುವುದಲ್ಲದೇ ಈಜಬಲ್ಲವು. ಎರಡರಿಂದ ಮೂರು ವರ್ಷಗಳಾಗುವ ಹೊತ್ತಿಗೆ ಪ್ರೌಢಾವಸ್ಥೆ ತಲುಪುತ್ತವೆ.

ಜೀವಿತಾವಧಿ - ಗಾತ್ರ

ಗಾತ್ರ– 2–3 ಕೆ.ಜಿ.,ಜೀವಿತಾವಧಿ– 6 ರಿಂದ 12 ವರ್ಷ ,ಎತ್ತರ–66 ರಿಂದ 89 ಸೆಂ.ಮೀ,ಎತ್ತರ–119 ಸೆಂ.ಮೀ.

ಜೀವಿತಾವಧಿ–6 ರಿಂದ 12 ವರ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.