ADVERTISEMENT

ದೊಡ್ಡ ಚುಕ್ಕಿ ಗಿಡುಗ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 19:53 IST
Last Updated 21 ಏಪ್ರಿಲ್ 2019, 19:53 IST
ರಕ್ಷಣೆ ಮಾಡಿದ ದೊಡ್ಡ ಚುಕ್ಕಿ ಗಿಡುಗದ ಜೊತೆ ಪ್ರಸನ್ನ ಕುಮಾರ್‌
ರಕ್ಷಣೆ ಮಾಡಿದ ದೊಡ್ಡ ಚುಕ್ಕಿ ಗಿಡುಗದ ಜೊತೆ ಪ್ರಸನ್ನ ಕುಮಾರ್‌   

ಬೆಂಗಳೂರು: ದೊಡ್ಡ ಚುಕ್ಕಿ ಗಿಡುಗ ಹಕ್ಕಿಯೊಂದು (ಗ್ರೇಟರ್‌ ಸ್ಪಾಟೆಡ್‌ ಈಗಲ್‌) ಜಯನಗರದ ಆರ್‌.ವಿ.ರಸ್ತೆ ಬಳಿ ಬಸವಳಿದು ಬಿದ್ದಿದ್ದು, ಅದನ್ನು ವನ್ಯಜೀವಿ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.

ಆರ್‌.ವಿ.ರಸ್ತೆ ಬಳಿ ಕಟ್ಟಡದ ಪ್ರಾಂಗಣದ ಬಳಿ ನಿತ್ರಾಣಗೊಂಡಿದ್ದ ಹಕ್ಕಿಯನ್ನು ಕಂಡು ಸ್ಥಳೀಯರೊಬ್ಬರು ಜಿಲ್ಲಾ ವನ್ಯಜೀವಿ ವಾರ್ಡನ್‌ ಪ್ರಸನ್ನ ಕುಮಾರ್‌ ಅವರಿಗೆ ಶನಿವಾರ ಕರೆ ಮಾಡಿದ್ದರು. ಅವರು ಸ್ಥಳಕ್ಕೆ ಧಾವಿಸಿ ಹಕ್ಕಿಗೆ ಪ್ರಥಮ ಚಿಕಿತ್ಸೆ ನೀಡಿದರು.

‘ಹದ್ದುಗಳು ಹಾಗೂ ಗರುಡಗಳು ನಗರ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಆದರೆ, ದೊಡ್ಡ ಚುಕ್ಕಿ ಗಿಡುಗಗಳು ನಗರ ಪ್ರದೇಶದಲ್ಲಿ ಕಂಡು ಬರುವುದು ಬಲು ಅಪರೂಪ. ಇವು ಹೆಚ್ಚಾಗಿ ರಾಜ್ಯದ ಮಲೆನಾಡು ಪ್ರದೇಶದಲ್ಲಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತವೆ’ ಎಂದು ಪ್ರಸನ್ನ ಕುಮಾರ್‌ ತಿಳಿಸಿದರು.

ADVERTISEMENT

‘ಈ ಹಕ್ಕಿಗಳು ಸತ್ತ ಜೀವಿಗಳಿಗಿಂತ ಸ್ವತಃ ಬೇಟೆಯಾಡಿದ ಆಹಾರವನ್ನು ಇಷ್ಟಪಡುತ್ತವೆ. ನಾವು ರಕ್ಷಣೆ ಮಾಡಿದ ಹಕ್ಕಿ ಇನ್ನೂ ಮರಿಯಷ್ಟೇ. ಹಕ್ಕಿಯನ್ನು ಕೆಂಗೇರಿಯ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಒಪ್ಪಿಸಿದ್ದೇವೆ’ ಎಂದರು.

‘ದೊಡ್ಡ ಗಾತ್ರದ ಈ ಹಕ್ಕಿ ರೆಕ್ಕೆ ಬಿಚ್ಚಿ ಹಾರಲು ಕನಿಷ್ಠ ನಾಲ್ಕು ಅಡಿಗಳಷ್ಟು ಅಗಲದ ಜಾಗ ಬೇಕಾಗುತ್ತದೆ. ಬಹುಮಹಡಿ ಕಟ್ಟಡಗಳ ಸಂದಿಯಲ್ಲಿ ಸಿಲುಕಿದ್ದ ಈ ಹಕ್ಕಿ ಅತ್ತ ಮೇಲಕ್ಕೆ ಹಾರಲೂ ಆಗದೇ, ಇನ್ನೊಂದೆಡೆ ಆಹಾರವೂ ಸಿಗದೆ ದಣಿದಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.