ADVERTISEMENT

ಕಾವೇರಿ ವನ್ಯಧಾಮದಲ್ಲಿ ಬೆಟ್ಟಳಿಲಿನ ಕಲರವ!

ರಾಜ್ಯದಲ್ಲಿ ಇಲ್ಲಿ ಮಾತ್ರ ಕಾಣಿಸಿಕೊಂಡಿರುವ ಬಲು ಅಪರೂಪದ ಪ್ರಾಣಿ

ಬಿ.ಬಸವರಾಜು
Published 30 ಜೂನ್ 2018, 14:32 IST
Last Updated 30 ಜೂನ್ 2018, 14:32 IST
   

ಹನೂರು: ವೈವಿಧ್ಯಮಯ ಜೀವ ಸಂಕುಲಗಳನ್ನುತನ್ನೊಳಗೆ ಇರಿಸಿಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿರುವ ಕಾವೇರಿ ವನ್ಯಧಾಮವು ಬಲು ಅಪರೂಪದ ಮತ್ತು ಅಳಿಯುವ ಭೀತಿಯಲ್ಲಿರುವ ಬೆಟ್ಟಳಿಲುಗೂ (ಗ್ರಿಜಲ್ಡ್‌ ಜೈಂಟ್‌ ಸ್ಕ್ವೀರಲ್) ಆಶ್ರಯ ನೀಡಿದೆ.

1027 ಚದರ ಕಿ. ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕಾವೇರಿ ಅಭಯಾರಣ್ಯ,ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂಬ ಖ್ಯಾತಿ ಹೊಂದಿದೆ. ಜೇನು ಹಿರ್ಕ (ಹನಿ ಬ್ಯಾಡ್ಜರ್‌), ಕೃಷ್ಣಮೃಗ, ಮಾಷಿರ್‌ ಫಿಶ್‌ ಸೇರಿದಂತೆ ಹಲವು ಅಪರೂಪದ ಪ್ರಾಣಿಗಳು ಇಲ್ಲಿ ಕಂಡು ಬಂದಿದ್ದು, ಈಗ ಬೆಟ್ಟಳಿಲು ಕೂಡ ಈ ಸಾಲಿಗೆ ಸೇರಿದೆ.

ಸಂಗಮ, ಕೊತ್ತನೂರು, ಕೌದಳ್ಳಿ ವನ್ಯಜೀವಿ ವಲಯದ ಹೊಳೆಮುರದಟ್ಟಿ ಅರಣ್ಯ ಪ್ರದೇಶದಲ್ಲಿ ಈ ಅಳಿಲು ಕಾಣಿಸಿಕೊಂಡಿದೆ. ಮರಗಳು ಒಂದಕ್ಕೊಂದು ಅಂಟಿಕೊಂಡಿರುವ ಪ್ರದೇಶದಲ್ಲಿ ಇವುಗಳ ಇರುವಿಕೆ ಹೆಚ್ಚಾಗಿ ಕಂಡು ಬರುತ್ತದೆ.

ADVERTISEMENT

ಅಳಿಲು ಹೇಗಿದೆ?:‘ರತೂಫಾ ಮ್ಯಾಕ್ರೋರಾ’ ಇದರ ವೈಜ್ಞಾನಿಕ ಹೆಸರು. ಶ್ರೀಲಂಕಾದ ಕೇಂದ್ರೀಯ ಮತ್ತು ಆವಾ ಪ್ರಾಂತ್ಯಗಳ ಎತ್ತರದ ಪ್ರದೇಶಗಳಲ್ಲಿ ಕಂಡುಬರುವ ಈ ಜೀವಿ, ಕರ್ನಾಟಕದಲ್ಲಿ ಇಲ್ಲಿ ಮಾತ್ರ ಕಾಣಿಸುತ್ತಿದೆ. ಇದರಲ್ಲಿ ಒಟ್ಟು 26 ಪ್ರಭೇದಗಳಿದ್ದು, ಒಂದೊಂದು ರಾಜ್ಯದಲ್ಲಿ ಬೇರೆ ಬೇರೆ ಪ್ರಭೇದಗಳಿವೆ. ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣೆಯ ಒಕ್ಕೂಟವು ಇದನ್ನು ಅಳಿವಿನಂಚಿನ ಭೀತಿಯಲ್ಲಿರುವ ಪ್ರಾಣಿ ಎಂದು ಗುರುತಿಸಿದೆ.

ಕಂದು ಮಿಶ್ರಿತ ಬೂದು ಬಣ್ಣವನ್ನು ಹೊಂದಿರುವ ಈ ಅಳಿಲಿನ ಹೊಟ್ಟೆಯ ಭಾಗವು ಮಾಸಿದ ಬಿಳಿ ಬಣ್ಣದಿಂದ ಕೂಡಿದೆ. ಹೆಚ್ಚಾಗಿ ಹಗಲಿನಲ್ಲಿ ಸಕ್ರಿಯವಾಗಿರುವ ಇವು, ಮರಗಳಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತವೆ.ನದಿ ಬಯಲಿನ 50 ಮೀಟರ್‌ ಅಂತರದಲ್ಲಿರುವ ಬೃಹದಾಕಾರದ ಮರಗಳೇ ಇದರ ಪ್ರಮುಖ ಆವಾಸಸ್ಥಾನ. ಸ್ಥಳೀಯವಾಗಿ ಸಿಗುವ ಹಣ್ಣು, ಮರದ ತೊಗಟೆ ಹಾಗೂ ಚಿಗುರು ಎಲೆಗಳನ್ನು ತಿನ್ನುತ್ತವೆ.

ಎಷ್ಟು ದೊಡ್ಡದಿದೆ?:ಮೂಗಿನಿಂದ ದೇಹದ ಅಂಚಿನವರೆಗೆ 25ರಿಂದ 45 ಸೆಂ.ಮೀ ಉದ್ದವಿರುತ್ತದೆ. ವಿಶೇಷವೆಂದರೆ ದೇಹದ ಉದ್ದಕ್ಕಿಂತಲೂ ಅದರ ಬಾಲವೇ ಹೆಚ್ಚು ಉದ್ದವಿದೆ. ಇದರ ಬಾಲದ ಉದ್ದ 30 ರಿಂದ 45 ಸೆಂ. ಮೀನಷ್ಟು ಇರುತ್ತದೆ. ಇದು ಸರಿ ಸುಮಾರು 1.53 ಕೆ.ಜಿ ತೂಕವಿರುತ್ತದೆ.

ಇದರ ಹೆಸರಲ್ಲೇ ವನ್ಯಧಾಮ

ಇದೊಂದು ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಿಕೊಂಡಿರುವುದರಿಂದ 1988ರಲ್ಲಿ ತಮಿಳುನಾಡಿನ ಮದುರೆ ಜಿಲ್ಲೆಯಲ್ಲಿ ಇದರ ಹೆಸರಿನಲ್ಲೇ ವನ್ಯಧಾಮವನ್ನು (ಶ್ರೀವಿಲ್ಲಿಪುತ್ತೂರು ವನ್ಯಧಾಮ) ಸ್ಥಾಪಿಸಲಾಗಿದೆ.

*ಪ್ರಪಂಚದಾದ್ಯಂತ ಐದು ಪ್ರದೇಶಗಳಲ್ಲಿ ಮಾತ್ರ ಈ ಅಳಿಲು ಕಂಡು ಬಂದಿದೆ. ರಾಜ್ಯದಲ್ಲಿರುವ ಅರಣ್ಯಗಳ ಪೈಕಿ ಕಾವೇರಿ ವನ್ಯಧಾಮಲ್ಲಿ ಮಾತ್ರ ಕಾಣಿಸಿಕೊಂಡಿರುವುದು ಖುಷಿಯ ವಿಚಾರ

–ಸಂತೋಷ್‌ ಪಾವಗಡ, ವನಜಾಗೃತಿ ತಂಡದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.