ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲಾಗದ ಕಾರಣ ಇಂದಿಗೂ ಅದು ಚರ್ಚಾವಿಷಯವಾಗಿ ಉಳಿದಿದೆ. ಆನೆ, ಕರಡಿ, ಚಿರತೆ ಹಾಗೂ ಹುಲಿ ದಾಳಿಗೆ ಕಾಡಿನಂಚಿನ ಜನರು ಜೀವ ಕಳೆದುಕೊಳ್ಳುವುದು ಮತ್ತು ಊರಿನತ್ತ ತಲೆ ಹಾಕಿದ ಪ್ರಾಣಿಗಳು ಜನರಪ್ರತಿರೋಧಕ್ಕೆ ಸಾಯುವುದು ಶತಮಾನಗಳಿಂದಲೂ ನಡೆಯುತ್ತಿದೆ. ಸರ್ಕಾರ ಹಾಗೂ ವಿಜ್ಞಾನಿಗಳು ಈ ಸಮಸ್ಯೆಗೆ ಇಂದಿಗೂ ಪರಿಹಾರ ಕಂಡುಹಿಡಿದಿಲ್ಲ.
2017ರಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 30 ಸಾವಿರ ಆನೆಗಳಿವೆ. ಮನುಷ್ಯರು ಮತ್ತು ಆನೆಗಳ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಎರಡೂ ಕಡೆಗಳಲ್ಲಿ ಸಾವು ಸಂಭವಿಸಿವೆ. ಪ್ರತಿ ವರ್ಷ 500ಕ್ಕೂ ಅಧಿಕ ಜನರು ಹಾಗೂ ನೂರಕ್ಕೂ ಅಧಿಕ ಆನೆಗಳು ಮೃತಪಟ್ಟಿವೆ ಎಂದು ಪರಿಸರ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. 2012–19ರ ಅವಧಿಯಲ್ಲಿ ಕರ್ನಾಟಕದಲ್ಲಿ 111 ಹುಲಿಗಳು ಸತ್ತಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾಹಿತಿ ನೀಡಿದೆ.
ಭಾರತದ ಕಾಡಿನ ವಿಸ್ತೀರ್ಣವನ್ನು ಪರಿಗಣಿಸಿದರೆ ಆನೆ, ಹುಲಿ, ಚಿರತೆ ಹಾಗೂ ಕರಡಿಗಳ ಸಂಖ್ಯೆ ಇಲ್ಲಿ ಹೆಚ್ಚಾಗಿದೆ. ಕಾಡಿನ ಗುಣಮಟ್ಟ ಚೆನ್ನಾಗಿದ್ದರೆ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತದೆ ಎನ್ನುವುದು ಹಳೆಯ ಮಾತು. ಆದರೆ, ಭಾರತದ ಕಾಡಿನ ಗುಣಮಟ್ಟ ತೀರಾ ಕುಸಿದಿದೆ. ಆದ್ದರಿಂದ, ಹೆಚ್ಚಿದ ರಕ್ಷಣೆ ಮತ್ತು ಕಳ್ಳಬೇಟೆ ನಿಯಂತ್ರಣದಿಂದಾಗಿ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನಬಹುದು.
‘ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳಿರುವ ಬಂಡಿಪುರ ಹುಲಿ ಅಭಯಾರಣ್ಯದ ವಿಸ್ತೀರ್ಣ 874 ಚದರ ಕಿ.ಮೀ. ಅದರಲ್ಲಿ ಅರ್ಧದಷ್ಟು ಭಾಗ ಕಾಡಿನ ವೈಶಿಷ್ಟ್ಯವನ್ನೇ ಕಳೆದುಕೊಂಡಿದೆ. ಮರಗಳಿಗೆ ನಿರಂತರ ಬೀಳುತ್ತಿರುವ ಕೊಡಲಿ ಪೆಟ್ಟು ಮತ್ತು ಸಾಕು ಹಸುಗಳ ಹಾವಳಿಯಿಂದ ಕಾಡಿನಂಚು ಹಾಳಾಗುತ್ತಿದ್ದರೆ, ಮಧ್ಯ ಭಾಗದಲ್ಲಿ ಲಂಟಾನ ಹಾವಳಿಯಿಂದ ಆನೆ, ಕಾಡೆಮ್ಮೆ ಮತ್ತು ಜಿಂಕೆಗೆ ಆಹಾರವಾಗಿದ್ದ ಹುಲ್ಲುಗಾವಲು ತಲೆಯೆತ್ತದಂತಾಗಿದೆ. ಅನಿವಾರ್ಯವಾಗಿ ಈ ಪ್ರಾಣಿಗಳು ಹೊಸ ಆಹಾರ ಮೂಲದತ್ತ ತಿರುಗುತ್ತಿವೆ’ ಎನ್ನುವರು ಪರಿಸರ ವಿಜ್ಞಾನಿಗಳಾದ ಕೃಪಾಕರ ಮತ್ತು ಸೇನಾನಿ.
‘ಹುಲಿ, ಆನೆ ಸಂತತಿ ಹೆಚ್ಚಾಗಬೇಕು ಎನ್ನುವ ವಾದವಿದೆ. ಅವಕ್ಕೆ ಆಹಾರ ಬೇಕು. ಪ್ರಾಣಿಗಳ ವರ್ಣತಂತುವಿನಲ್ಲಿ ಜೈವಿಕ ವೈವಿಧ್ಯವೂ ಇರಬೇಕು. ಕಾಡಿನ ಗುಣಮಟ್ಟ ಕಡಿಮೆಯಾದಂತೆ ಮತ್ತು ಪ್ರಾಣಿಗಳ ಸಂತತಿ ಹೆಚ್ಚಾದಂತೆ ಮರಿಗಳು ಹೊಸ ಪ್ರದೇಶಕ್ಕೆ ಹೋಗುತ್ತವೆ. ಇದಕ್ಕಾಗಿ ಕಾಡಿನ ಸಂಪರ್ಕ ಮಾರ್ಗ ಬೇಕು. ಆ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
‘ಮನುಷ್ಯರ ಜೊತೆಗಿನ ಸಂಘರ್ಷಕ್ಕೆ ಕಡಿವಾಣ ಹಾಕಲು ಆನೆಗಳನ್ನು ಕಾಡಿನಲ್ಲೇ ಇರುವಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಅಗತ್ಯ ಮೇವು ಹಾಗೂ ನೀರಿನ ಸಂಗ್ರಹಕ್ಕೆ ಬೇಕಾದ ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿದ್ದು, ಮುಂದಿನ ವರ್ಷದಿಂದಲೇ ಇದರ ಫಲಿತಾಂಶ ನಮ್ಮ ಮುಂದೆ ಇರಲಿದೆ’ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ‘ಆನೆ ದಿನ’ದಂದು ತಿಳಿಸಿದ್ದರು.
ಆದರೆ ಸಚಿವರ ಈ ಮಾತನ್ನು ಅನುಷ್ಠಾನ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಗೆ ‘ಈಗಿನ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಇಂತಹ ಯಾವುದೇ ಯೋಜನೆ ಅನುಷ್ಠಾನ ಆಗುತ್ತಿಲ್ಲ’ ಎನ್ನುತ್ತಾರೆ ಪರಿಸರವಾದಿಗಳು.
ಆಹಾರ ಮತ್ತು ನೀರಿಗಾಗಿ 650 ಚದರ ಕಿ.ಮೀ. ಪ್ರದೇಶವನ್ನು ಸ್ವಂತ ನೆಲೆ ಎಂದುಹೆಣ್ಣಾನೆಯು ಗುರುತಿಸಿಕೊಳ್ಳುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಆದರೆ ಸಲಗಗಳು 292 ಕಿ.ಮೀ ಪ್ರದೇಶದಲ್ಲಿ ಅಲೆದಾಡುತ್ತವೆ. ಆಹಾರ ಸಿಗದಿದ್ದಾಗ ಕಾಡಿನಂಚಿನ ಕಾಫಿ ತೋಟಕ್ಕೂ ಹೋಗುತ್ತವೆ. ಈ ಕಾಫಿ ತೋಟ ಒಂದು ಕಾಲದಲ್ಲಿ ಕಾಡೇ ಆಗಿದ್ದಿರಬಹುದು. 1977ರಲ್ಲಿ ಕೊಡಗಿನಲ್ಲಿ 2566 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಇದ್ದ ಕಾಡು, 1997ರಲ್ಲಿ 1841 ಚದರ ಕಿ.ಮೀ.ಗೆ ಇಳಿಯಿತು. ಇದೇ ಅವಧಿಯಲ್ಲಿ 300 ಚದರ ಕಿ.ಮೀ ಇದ್ದ ತೋಟದ ವಿಸ್ತೀರ್ಣ 1197 ಚದರ ಕಿ.ಮೀ.ಗೆ ಏರಿದೆ ಎಂದು ವಿಶ್ವ ವನ್ಯಜೀವಿ ನಿಧಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮಾತು ಅರಣ್ಯದಿಂದಕಂಗೊಳಿಸುತ್ತಿದ್ದ ಎಲ್ಲಾ ಪ್ರದೇಶಗಳಿಗೆ ಅನ್ವಯವಾಗುತ್ತದೆ.
ಅರಣ್ಯದ ನಡುವೆ ಹಾದುಹೋಗುವ ರಸ್ತೆ, ವಿದ್ಯುತ್ ಮಾರ್ಗ, ರೈಲ್ವೆ ಯೋಜನೆ, ಅಣೆಕಟ್ಟೆ ನಿರ್ಮಾಣ, ಕೈಗಾರಿಕೆ ಹಾಗೂ ಜನವಸತಿ ಪ್ರದೇಶ ಅಭಿವೃದ್ಧಿಯಿಂದಲೂ ಕಾಡಿನ ನಾಶವಾಗಿದೆ. ಒಂದು ಕಡೆ ವನ್ಯಪ್ರಾಣಿ ಸಂರಕ್ಷಣೆ ಹೆಚ್ಚಿ, ಪ್ರಾಣಿಗಳ ಸಂತತಿ ಹೆಚ್ಚಾಗುತ್ತದೆ. ಕಾಡುಗಳ ನಡುವಿನ ಸಂಪರ್ಕ ಮಾರ್ಗವೂ ನಾಶವಾಗಿ ವಲಸೆ ಕಷ್ಟವಾಗುತ್ತಿದೆ. ಕಬಿನಿ, ಹಾರಂಗಿ, ಭದ್ರಾದಂತಹ ಕಾಡಿನ ನಡುವೆ ತಲೆಯೆತ್ತಿದ್ದ ಅಣೆಕಟ್ಟೆಗಳಿಂದಲೂ ವನನಾಶವಾಗಿದೆ. ಆನೆ, ಹುಲಿ ಈಜಿ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ಉಳಿದ ಪ್ರಾಣಿಗಳಿಗೆ ಅಣೆಕಟ್ಟೆ ನಿರ್ಮಾಣ ಒಂದು ರೀತಿ ಬೇಲಿ ಹಾಕಿದಂತೆ. ಕಾಡಿನ ನಾಶವಾದರೆ ಪ್ರಾಣಿಗಳು ಅನಿವಾರ್ಯವಾಗಿ ತೋಟದತ್ತ ನುಗ್ಗುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಂಟಾನದಂತಹ ಕಳೆ ನಾಶ ಮಾಡಲೇಬೇಕಾದ ಅನಿವಾರ್ಯ ಈಗ ಹೆಚ್ಚಾಗಿದೆ.
ಕಾಡಿನಂತೆಯೇ ಕಲ್ಲುಗುಡ್ಡಗಳು ಕರಡಿಗಳ ನೈಜ ಆವಾಸಸ್ಥಾನ. ಇಂತಹ ಪ್ರದೇಶದಲ್ಲಿ ಬೆಳೆಯುವ ಸೀತಾಫಲ ಬಂಡೆಗಳ ನಡುವೆ ಕಟ್ಟುವ ಜೇನು ಅವುಗಳ ಆಹಾರ. ಆದರೆ ಅರಣ್ಯ ಇಲಾಖೆ ಅಥವಾ ಗ್ರಾಮ ಅರಣ್ಯ ಸಮಿತಿಯು ಸೀತಾಫಲ ಸಂಗ್ರಹಿಸುವ ಹರಾಜು ಹಾಕುತ್ತಿವೆ. ಆಹಾರ ಅಭಾವದಿಂದ ಕರಡಿಗಳು ಗ್ರಾಮದತ್ತ ನುಗ್ಗುತ್ತಿವೆ. ಬೇಸಿಗೆಯಲ್ಲಿ ಕಾದ ಬಂಡೆಗಳಿಂದ ತಪ್ಪಿಸಿಕೊಳ್ಳಲು ನೀರಾವರಿಯಿಂದ ತಂಪಾದ ಹೊಲಕ್ಕೆ ನುಗ್ಗುತ್ತಿವೆ. ಸಂಜೆ ವೇಳೆ ಅಡ್ಡಾಡುವ ಜನರ ಮೇಲೆ ದಾಳಿ ನಡೆಸುತ್ತಿವೆ. ಚಿರತೆಗಳದ್ದೂ ಹೆಚ್ಚು ಕಡಿಮೆ ಇದೇ ಸ್ಥಿತಿ.
ಊರು ಮತ್ತು ತೋಟಕ್ಕೆ ನುಗ್ಗಿ ಬೆಳೆ ಹಾನಿ ಇಲ್ಲವೇ ಜೀವಹಾನಿ ಮಾಡುವ ಆನೆಗಳನ್ನು ಗುರುತಿಸಿ ಹಿಡಿಯುವಂತೆ ಅರಣ್ಯ ಇಲಾಖೆಗೆ ವಿಶ್ವ ವನ್ಯಜೀವಿ ನಿಧಿ ಶಿಫಾರಸು ಮಾಡಿದೆ. 1822ರಲ್ಲಿ ಕೊಡಗಿನ ರಾಜ, ಉಪಟಳಕಾರಿ ಎಂದು ಗುರುತಿಸಲಾಗಿದ್ದ 233 ಆನೆಗಳನ್ನು ಸಾಯಿಸಿ 181 ಆನೆಗಳನ್ನು ಖೆಡ್ಡಾ ಮೂಲಕ ಸೆರೆಹಿಡಿದ. ಇದು ನಡೆದಿದ್ದು ಕೇವಲ 38 ದಿನದಲ್ಲಿ. ಈಗಲೂ ತಂಟೆಕೋರ ಆನೆ, ಚಿರತೆ ಮತ್ತು ಕರಡಿಗಳನ್ನು ಅರಣ್ಯ ಇಲಾಖೆ ಹಿಡಿಯುತ್ತಿದೆ. ಇದೊಂದು ನಿರಂತರ ಪ್ರಕ್ರಿಯೆ. ಆದರೆ ಇದಕ್ಕೆ ವೇಗ ತುಂಬಬೇಕು.
ಕಾಡಿನಿಂದ ವನ್ಯಜೀವಿಗಳು ಯಾವ ಕಾರಣಕ್ಕೆ ಹೊರಹೋಗುತ್ತವೆ ಎನ್ನುವ ದೀರ್ಘಕಾಲದ ಅಧ್ಯಯನದ ಜೊತೆಯಲ್ಲಿ ಕಾಡಿನ ಸಸ್ಯ ಜಗತ್ತಿನ ಗುಣಮಟ್ಟ ಅಭಿವೃದ್ಧಿಗೆ ಒತ್ತು ನೀಡಿ, ಲಂಟಾನ, ಪಾರ್ಥೇನಿಯಂ ಮತ್ತು ಯುಪಟೋರಿಯಂ ನಿರ್ಮೂಲನೆ ಮಾಡಬೇಕಾಗಿದೆ.
* ಕಾಡಿಗೆ ಬೀಳುವ ಬೆಂಕಿ ಮತ್ತು ಅತಿಕ್ರಮಿಸುವ ಲಂಟಾನದಂತಹ ವಿದೇಶಿ ಕಳೆಗಳು ಕಾಡಿನ ಗುಣಮಟ್ಟವನ್ನೇ ಛಿದ್ರಗೊಳಿಸಿವೆ. ಕಾಡಿನ ನೈಜ ಜೈವಿಕ ಸಂಯೋಜನೆಯನ್ನೇ ಅಸ್ತವ್ಯಸ್ತಗೊಳಿಸಿವೆ. ಇದು ಅರಣ್ಯ ಜೀವಿಗಳ ಬದುಕಿಗೆ ಸವಾಲಾಗಿ ಪರಿಣಮಿಸಿದೆ.
-ಕೃಪಾಕರ,ಸೇನಾನಿ, ಪರಿಸರ ವಿಜ್ಞಾನಿಗಳು
* ಕರಡಿಗಳಿಗೆ ಆಹಾರವಾದ ಸೀತಾಫಲದ ಫಸಲನ್ನು ಈ ವರ್ಷದಿಂದ ಹರಾಜು ಹಾಕುವುದನ್ನು ಅರಣ್ಯ ಇಲಾಖೆ ಬಳ್ಳಾರಿ ವಲಯದಲ್ಲಿ ನಿಲ್ಲಿಸಿದೆ.
- ಎಸ್.ಲಿಂಗರಾಜ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ ವಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.