ಸನ್ ಬರ್ಡ್ ಎಂದೇ ಪ್ರಚಲಿತವಾದ 132 ವಿಧಗಳ ಮಕರಂದ ಸವಿಯುವ ಪುಟಾಣಿ ಹಕ್ಕಿ, ವಿಶ್ವದ ಅನೇಕ ಕಡೆ ಉಷ್ಣ ಪ್ರದೇಶಗಳಲ್ಲಿ ಜೀವಿಸುತ್ತಿವೆ. ಕರ್ನಾಟಕದಲ್ಲಿ ಅವುಗಳ ಆರು ತಳಿಗಳು ಕಂಡುಬರುತ್ತವೆ. ಅವುಗಳಲ್ಲಿ ಒಂದಾದ ನಾಲ್ಕಿಂಚಿನ ‘ನೇರಳೆ ಬೆನ್ನಿನ ಸೂರಕ್ಕಿ’ ಬಲುಸುಂದರ. ಅದರ ಹೆಸರು ‘ಪರ್ಪಲ್ ರಂಪ್ಡ್ ಸನ್ ಬರ್ಡ್’ (ವೈಜ್ಞಾನಿಕ ತಳಿ * EPTOCOMA ZEY* ONICA).
ಕೆಳಮುಖವಾಗಿ ಓರೆಯಾದ ಕೊಕ್ಕಿನಲ್ಲಿ ಬ್ರಷ್‌ನಂತೆ ಮೊನಚಾದ ಕೊಳವೆಯಂತಿರುವ ಉದ್ದನೆಯ ನಾಲಗೆ ಚಾಚಿ ಹೂವುಗಳ ಮಕರಂದವನ್ನು ಆಹಾರವಾಗಿ ಚೀಪುವುದು ಈ ಪಕ್ಷಿಯ ಜೀವನ ಕ್ರಮ. ಆಗಾಗ ಕೆಲವು ಬಗೆಯ ಕೀಟಗಳನ್ನೂ ನಾಲಗೆಯಲ್ಲಿ ಸೆಳೆದು ತಂದು ಮರಿಗಳಿಗೆ ಉಣಬಡಿಸುತ್ತದೆ.
ನಿಮ್ಹಾನ್ಸ್ ಸಮುಚ್ಚಯದ ಹಿಂಬದಿಯ ಹಸಿರು ತಾಣದಲ್ಲಿ ಉದ್ದುದ್ದ ದಂಟಿನ ಕೆಂಪು ಹೂ ಬಿಟ್ಟ ದೊಡ್ಡ ಗಿಡವೊಂದರ ಮೇಲಿನ ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು, ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಎಂ.ವಿ. ವಿಷ್ಣುದಾಸ್. ಅವರು ಕತ್ರಿಗುಪ್ಪೆಯ ನಿವಾಸಿ.
ಅವರು ಬಳಸಿದ ಕ್ಯಾಮೆರಾ, ಕೆನಾನ್ 1200 D, ಜೊತೆಗೆ 55- 250 ಎಂ.ಎಂ. ಜೂಂ ಲೆನ್ಸ್.
ಈ ಚಿತ್ರದ ಎಕ್ಸ್‌ಪೋಷರ್ ವಿವರ ಇಂತಿವೆ: 250 ಎಂ.ಎಂ ಫೋಕಲ್ ಲೆಂಗ್ತ್ ನಲ್ಲಿ ಅಪರ್ಚರ್ ಎಫ್ 5.6, ಶಟರ್ ವೇಗ 1/ 200 ಸೆಕೆಂಡ್, ಐ.ಎಸ್ ಒ. 125. ಫ್ಲಾಶ್, ಟ್ರೈಪಾಡ್ ಬಳಸಿಲ್ಲ.
ತಾಂತ್ರಿಕ ಮತ್ತು ಕಲಾತ್ಮಕ ಅಂಶಗಳ ಅವಲೋಕನ:
* ಅಂಗೈ ಅಗಲದ ಈ ಪುಟಾಣಿ ಹಕ್ಕಿ ಕೆಲವೊಮ್ಮೆ ರೆಕ್ಕೆ ಬಿಚ್ಚಿ ಹಾರುತ್ತಿದ್ದಂತೆಯೇ ಹೂವಿನ ಬುಡಕ್ಕೆ ಉದ್ದನೆಯ ಕೊಳವೆ ನಾಲಗೆ ಚಾಚಿ ಯಾವ ಸಪೋರ್ಟಿಲ್ಲದೇ ಮಕರಂದ ಹೀರುವುದು ಸಹಜ ಕ್ರಿಯೆ. ಶಟರ್ ವೇಗವನ್ನು 1 / 200 ಸೆಕೆಂಡ್ ಇಟ್ಟರೂ ಅದೃಷ್ಟವಶಾತ್ ಇಲ್ಲಿ ಚಿತ್ರ ಅಲುಗಾಡಲಿಲ್ಲ ಚಿತ್ರದ ಶೇಖ್ ತಪ್ಪಿಸಲು ಶಟರ್ ವೇಗವನ್ನು 1/500 ಸೆಕೆಂಡ್ ಅಳವಡಿಸಿಕೊಳ್ಳುವುದು ಸಮಂಜಸ.
* ಅದಕ್ಕೆ ತಕ್ಕಂತೆ, ಐ.ಎಸ್.ಒ ವನ್ನು ಸ್ವಲ್ಪ ಹೆಚ್ಚಿಸಬೇಕಾಗುತ್ತದೆ. ಅಂದರೆ, 125 ಬದಲು ಸುಮಾರು 200 ಅಪರ್ಚರ್ ಎಫ್ 5.6 ಸರಿಯಿದೆಯಾದರೂ, ಮುಖ್ಯ ವಸ್ತುವಿನ ಹಿನ್ನೆಲೆಯ ಎಲೆ, ರೆಂಬೆ,ಹೂಗಳು ಇತ್ಯಾದಿ ಹರಕು ಹರಕಾಗಿ ಫೋಕಸ್ ಆಗಿ, ಚಿತ್ರಣದ ಪರಿಣಾಮವನ್ನು ಸ್ವಲ್ಪ ಗೊಂದಲಮಯವಾಗಿಸಿದೆ. ಅಪರ್ಚರ್‌ನ್ನು ಇನ್ನೂ ಹಿಗ್ಗಿಸಿದ್ದರೆ (ಎಫ್ 4 ), ಸಂಗಮ ವಲಯ (ಡೆಪ್ತ್ ಆಫ್ ಫೀಲ್ಡ್) ಸಂಕುಚಿತಗೊಂಡು, ಹಿನ್ನೆಲೆಯನ್ನು ಇನ್ನಷ್ಟು ಮಂದವಾಗಿಸಿ, ಮುಖ್ಯವಸ್ತುವಿನ ಆ್ಯಕ್ಷನ್‌ಗೆ ಹೆಚ್ಚಿನ ನಿಖರವಾಗಿರುತ್ತಿತ್ತು.
* ಕಲಾತ್ಮಕವಾಗಿ ಡಯಾಗೊನಾಲ್ ಕಾಂಪೋಶಿಷನ್ ಮತ್ತು ಹೂವು- ಕೊಕ್ಕಿನ ಭಾಗ ಚೌಕಟ್ಟಿನ ಒಂದು ಮೂರಾಂಶದ ಬಿಂದುವಿನಲ್ಲಿರು
ವುದು ಉತ್ತಮವಾದ ಚಿತ್ರ ಸಂಯೋಜನೆ.
* ಬಲಭಾಗದ ಕೆಳ ಅಂಚಿನಲ್ಲಿರುವ ಒಂದೇ ಬಗೆಯ ಹೂ ವೊಂದನ್ನು ಸಂಧಿಸಿ, ನಂತರ ಮೇಲೆ ಸಾಗಿ, ಮತ್ತೊಂದರ ಮಕರಂದದೆಡೆ ಕೊಕ್ಕು ಚಾಚಿರುವ ಹಕ್ಕಿಯ ಭಂಗಿ ಸುಂದರವಾಗಿ ಮೂಡಿಬಂದಿದೆ. ಕತೆಯೊಂದನ್ನು ಹೆಣೆದು ಹೇಳುವ ತರಹ, ವಿಷ್ಣುದಾಸ್ ಹೂವುಗಳೆರಡನ್ನೂ ಚೌಕಟ್ಟಿನಲ್ಲಿ ಜೋಡಿಸಿದ್ದಾರೆ. ಚಿತ್ರದ ಅಖಂಡತೆಯ (ಇನ್ ಫಿನಿಟಿ) ಗುಣ ಅದರಿಂದ ಊರ್ಜಿತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.