ಕಂತೀಸ್ವಾಮಿ ಮಠದಲ್ಲಿರುವ ಹೂದೋಟದಲ್ಲಿ ಮ್ಯಾಣ ಮಲ್ಲಿಗೆ ಸಸ್ಯ ಹುಲುಸಾಗಿ ಬೆಳೆಯುತ್ತಿತ್ತು. ಹಚ್ಚ ಹಸಿರಿನ ಚಿಗುರೆಲೆಗಳು ಆಕರ್ಷಕವಾ ಗಿದ್ದವು. ಈ ಸಸ್ಯದ ಎಲೆಗಳ ಮೇಲೆ ಯಾವಾಗ ಕಪಿಲ ಚಿಟ್ಟೆ ಮೊಟ್ಟೆ ಇಡುತ್ತದೋ ಎಂದು ಕಾಯುತ್ತಿದ್ದೆ.
ಏಕೆಂದರೆ ಕಪಿಲ ಚಿಟ್ಟೆ, ಚಿಟ್ಟೆ ರೂಪ ತಾಳುವ ಮುನ್ನ ಕಂಬಳಿಹುಳುವಾಗಿರುತ್ತದೆ. ಅದರ ಆಹಾರ ಈ ಮ್ಯಾಣ ಮಲ್ಲಿಗೆ ಗಿಡ.
ಆ ದಿನ ಗಿಡದ ಹತ್ತಿರ ಹೋದಾಗ ಎಲೆಯ ತುಂಬೆಲ್ಲಾ ಸುಮಾರು ಗಾಢ ಕೆಂಪು ವರ್ಣದ, ಕೇಸರಿ ಬಣ್ಣದ ತಲೆ, ಉಳಿದ ಭಾಗದಲ್ಲಿ ಸಣ್ಣ ಸಣ್ಣ ಮುಳ್ಳಿನಂತಹ ಮೃದು ಕವಲುಗಳಿರುವ ಹತ್ತು ಕಂಬಳಿಹುಳುಗಳು ಹರಿದಾಡುತ್ತಾ ಎಲೆಯನ್ನು ಭಕಾಸುರನಂತೆ ಮುಕ್ಕುತ್ತಿದ್ದವು. ಹಾಗೆ ಎಲೆಗಳನ್ನು ತಿನ್ನುತ್ತಾ, ತಿನ್ನುತ್ತಾ ಬೆಳೆಯತೊಡಗಿದವು. ನಾನು ನಿತ್ಯವೂ ಆ ಗಿಡದ ಬಳಿ ಹೋಗಿ ಅವುಗಳ ಚಟುವಟಿಕೆಯನ್ನು ಗಮನಿಸುತ್ತಾ ಕ್ಯಾಮೆರಾದಲ್ಲಿ ಛಾಯಾಚಿತ್ರಗಳನ್ನು ಹಿಡಿಯತೊಡಗಿದೆ.
ಒಂದು ದಿನ ಮುಂಜಾನೆ ಎಂದಿನಂತೆ ಆ ಗಿಡದ ಹತ್ತಿರ ಹೋಗಿ ನೋಡಿದೆ. ಒಂದೇ ಒಂದು ಕಂಬಳಿಹುಳಗಳು ಕಾಣಲಿಲ್ಲ. ಅವು ಕೋಶಾವಸ್ಥೆಗೆ ಹೋಗಿರುವುದು ಖಾತ್ರಿ ಆಯಿತು. ಅರೆ ಈ ‘ಕಪಿಲ ಮಹಾ ಮುನಿಗಳು ಎಲ್ಲಿ ಹೋಗಿ ತಪಸ್ಸಿಗೆ ಕುಳಿತಿದ್ದಾರಪ್ಪಾ’ ಎಂದು ಹುಡುಕಲು ಶುರು ಮಾಡಿದೆ. ಹತ್ತಿರದಲ್ಲಿದ್ದ ಹುಲ್ಲಿನ ಪೊದೆ, ಗಿಡ-ಮರಗಳ ಕೊಂಬೆಗಳನ್ನು ತಡಕಾಡಿದೆ. ಕೊನೆಗೆ, ಒಂಟಿಯಾದ ಬಲ್ಲೇ ಗಿಡದ ಕಾಂಡದಲ್ಲಿ ಕಾವಿ ವರ್ಣದ ಅಂಗಿ ತೊಟ್ಟು, ಕಪ್ಪು ಬಣ್ಣದ ಪಟ್ಟಿಗಳನ್ನು ಅಂಟಿಸಿಕೊಂಡು, ಬಿಳಿಬಣ್ಣದ ಹೊದಿಕೆ ಹೊತ್ತು, ತಲೆ ಕೆಳ ಮಾಡಿ ಸುಂದರ ದೇಹ ಪ್ರಾಪ್ತಿಗಾಗಿ ಕೋಶಾವಸ್ಥೆಯಲ್ಲಿ ಕಪಿಲ ಚಿಟ್ಟೆ ಮುನಿ ಕುಳಿತಿದ್ದನ್ನು ನೋಡಿದೆ. ಪ್ರಕೃತಿ ಮಾತೆಯ ನಿಸರ್ಗ ನಿಯಮಕ್ಕೆ ಮನಸೋತು ಕೈಮುಗಿದೆ. ಕಪಿಲ ಮುನಿಯ ತಪಸ್ಸಿಗೆ ಭಂಗ ಉಂಟುಮಾಡದೆ, ನಿತ್ಯವೂ ಅದರ ಬದಲಾವಣೆಗಳನ್ನು ಕ್ಯಾಮೆರಾದಲ್ಲಿ ದಾಖಲಿಸುತ್ತಾ ಸಾಗಿದೆ.
ಕಚೇರಿಗೆ ರಜೆ ಇದ್ದಿದ್ದರಿಂದ ಮುಂಜಾನೆ ಕ್ಯಾಮೆರಾ ಹಿಡಿದು ಆ ಚಿಟ್ಟೆ ತಪಸ್ಸಿಗೆ ಕೂತ ಜಾಗಕ್ಕೆ ಹೋದಾಗ ನನಗೆ ಆಶ್ಚರ್ಯ ಕಾದಿತ್ತು. ಜೊತು ಬಿದ್ದ ಮುನಿಯ ಕೋಶದಲ್ಲಿ ಉದ್ದವಾದ ಕಪ್ಪು ಪಟ್ಟೆಯೊಂದು ಕಂಡಿತು. ಕೇಸರಿ ಬಣ್ಣದ ಚುಕ್ಕೆಗಳು ಹಾಗೂ ರೆಕ್ಕೆಗಳ ಮೇಲೆ ಕಪ್ಪು ಗೆರೆಗಳಿರುವುದು ಸ್ಪಷ್ಟವಾಗಿ ಕಾಣಿಸಿತು. ಸೂಕ್ಷ್ಮವಾಗಿ ಕ್ಯಾಮೆರಾದ ಲೆನ್ಸ್‌ನಿಂದ ವೀಕ್ಷಿಸಿದಾಗ ಅದರೊಳಗಿನ ಬಿಂಬವೊಂದು ಮಿಸುಕಾಡಿದಂತೆ ಭಾಸವಾಯಿತು. ಹೌದು, ಅದು ತನ್ನ ಸುಂದರ ರೂಪ ಪಡೆದು ಪ್ರೌಢ ಚಿಟ್ಟೆಯಾಗಿ ಹೊರಬರುವ ತವಕದಲ್ಲಿತ್ತು. ಅದು ಪ್ರಕೃತಿಯ ಆಜ್ಞೆಗಷ್ಟೇ ಕಾಯುತ್ತಿತ್ತು. ನಾನು ತದೇಕ ಚಿತ್ತದಿಂದ ಅದನ್ನೇ ನೋಡುತ್ತಿದ್ದೆ. ಸಮಯ ಜಾರುತ್ತಿತ್ತು. ಅರ್ಧ ತಾಸು ಆಯ್ತು, ಒಂದು ತಾಸು ಆಯಿತು. ಈಗ ಕೋಶದಿಂದ ಚಿಟ್ಟೆ ಹೊರ ಬರಲು ಆರಂಭಿಸಿತು.
ಆ ಕೋಶದ ಕೆಳ ತುದಿ ಒಂದಷ್ಟು ಬಾಯಿ ತೆರೆಯಿತು. ಒಳಗಿನಿಂದ ಮಿಸುಗಾಡುತ್ತಾ ತಲೆ, ಮೀಸೆ, ಹೀರುಗೊಳವೆ, ಮುಂಗಾಲುಗಳು ನಿಧಾನವಾಗಿ ಹೊರ ಬಂದವು. ಹಿಂದೆಯೇ ಅದು ಹೊರಳಾಡುತ್ತ ರೆಕ್ಕೆಗಳು ಹಾಗೂ ಸಂಪೂರ್ಣ ದೇಹಭಾಗ ಹೊರ ಬಂದು ಕಾಲಿನ ಸಹಾಯದಿಂದ ಕೋಶದ ದಿಂಬಕ್ಕೆ ನೇತು ಬಿದ್ದಿತು. ಅವುಗಳ ರೆಕ್ಕೆಗಳು ಇನ್ನು ಒದ್ದೆಯಾಗಿದ್ದು ಹಾರುವ ಸ್ಥಿತಿಯಲ್ಲಿರಲ್ಲಿಲ್ಲ. ರೆಕ್ಕೆಗಳಿಗೆ ದೇಹದಿಂದ ರಕ್ತ ಪರಿಚಲನೆ ಹೊಂದಿ ಸೂರ್ಯನ ಕಿರಣಗಳು ಅದರ ಮೇಲೆ ಬಿದ್ದು ರೆಕ್ಕೆಗಳು ಒಣಗಿ ಗಟ್ಟಿಯಾದಂತೆ ಕಂಡವು.
ಕೋಶಕ್ಕೆ ನೇತಾಡುತ್ತಿದ್ದ ಪ್ರೌಢ ಚಿಟ್ಟೆ ನಿಧಾನವಾಗಿ ರೆಕ್ಕೆ ಗಳನ್ನು ಅಗಲಿಸಿ ಅಲ್ಲಿಂದ ಹಾರಿ ಹೂವಿಂದ ಹೂವಿಗೆ ಹಾರುತ್ತಾ ಮಕರಂದ ಹೀರಲು ಪ್ರಕೃತಿಯ ಮಡಿಲಿನಲ್ಲಿ ಮಾಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.