ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರ ಗಿರಿಧಾಮ, ಅಂದವಾದ ಉದ್ಯಾನಗಳು, ನದಿ–ಸರೋವರಗಳಿಂದ ಸುತ್ತುವರಿದಿದೆ. ಹಿಮಾಲಯ ಪರ್ವತ ಶ್ರೇಣಿಯ ಮಡಿಲಲ್ಲಿರುವ ಈ ಮನಮೋಹಕ ಗಿರಿಧಾಮ ಝೇಲಂ ನದಿಯ ಎರಡೂ ಬದಿ ವಿಸ್ತರಿಸಿಕೊಂಡಿದ್ದು, ಇದನ್ನು ಪೂರ್ವದ ವೆನಿಸ್ ಎಂದು ಕರೆಯುತ್ತಾರೆ. ಹಾಗಾಗಿ ಶ್ರೀನಗರವನ್ನು ಸೌಂದರ್ಯದ ಖನಿ ಎಂದರೆ ತಪ್ಪಿಲ್ಲ.
ದಾಲ್ ಸರೋವರ ಶ್ರೀನಗರದ ಮುಖ್ಯ ಆಕರ್ಷಣೆಗಳಲ್ಲೊಂದು. ಈ ಸರೋವರ ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು ಇವುಗಳಲ್ಲಿ ಶ್ರೀಧರ ಪರ್ವತದ (ಝಬರ್‌ವಾನ್ ಎಂದೂ ಕರೆಯುತ್ತಾರೆ) ಪಾದದಲ್ಲಿರುವ ನಾಗಿನ್ ಸರೋವರ ಅತ್ಯಂತ ಸುಂದರವಾದುದು ಮತ್ತು ಅಷ್ಟೇ ಚಟುವಟಿಕೆಯ ತಾಣ. ನಾಗಿನ್ ಸರೋವರದ ಸುತ್ತಲೂ ಹಸಿರು ಹುಲ್ಲುಹಾಸು, ಎತ್ತರೆತ್ತರದ ಮರಗಳು ಇದ್ದು ನೋಡುಗರ ಮನತಣಿಸುತ್ತವೆ. ಒಂದು ಬದಿಯಲ್ಲಿ ಎತ್ತರಕ್ಕೆ ಚಿಮ್ಮುವ ನೀರ ಕಾರಂಜಿಗಳಿವೆ. ಶ್ರೀಧರ ಪರ್ವತ, ಅದರ ಹಿಂದೆ ದೂರದಲ್ಲಿ ಹಿಮಚ್ಚಾದಿತ ಶಿಖರಗಳು ಇವೆಲ್ಲಾ ಎಷ್ಟು ನೋಡಿದರೂ ಸಾಲದು ಅನ್ನುವಂತಿವೆ.
ಶ್ರೀನಗರದಲ್ಲಿರುವ ಉದ್ಯಾನವನಗಳ ಪೈಕಿ ದಾಲ್ ಸರೋವರದ ಎದುರಿಗಿರುವ ನಿಷಾದ್ ಬಾಗ್ ಅತ್ಯಂತ ವಿಸ್ತಾರವಾಗಿದೆ. ಉತ್ತಮವಾಗಿ ನಿರ್ವಹಿಸಲ್ಪಟ್ಟಿರುವ ಸುಂದರ ಉದ್ಯಾನ. ದೈವಿಕ ಉದ್ಯಾನ (ಗಾರ್ಡನ್ ಆಫ್ ಬ್ಲಿಸ್)ವೆಂದೂ ಕರೆಸಿಕೊಳ್ಳುವ ನಿಷಾದ್‌ಬಾಗ್ ಅನ್ನು 1633ರಲ್ಲಿ ಮಹಾರಾಣಿ ನೂರ್ ಜಹಾನ್‍ರವರ ಸಹೋದರ ಅಸಾಫ್ ಖಾನ್ ನಿರ್ಮಿಸಿದ್ದಾನೆ. ದಾಲ್ ಈ ಉದ್ಯಾನದ ಹಿನ್ನೆಲೆಯಲ್ಲಿ ಶ್ರೀಧರ ಪರ್ವತವಿದೆ.
ನಿಷಾದ್‌ಬಾಗ್ ಹಲವು ಹಂತಗಳ ರಚನೆ ಗಳನ್ನು ಹೊಂದಿದೆ. ಆ ಹಂತಗಳನ್ನು ನೋಡಲು ಮೆಟ್ಟಿಲುಗಳನ್ನು ಏರುತ್ತಾ ಸಾಗಬಹುದು. ಉದ್ಯಾನದ ನಡುವೆ ಉದ್ದಕ್ಕೂ ನೀರಿನ ಹರಿವು ಇದೆ. ಅದರಲ್ಲಿ ವಿವಿಧ ಬಗೆಯ ಕಾರಂಜಿಗಳಿವೆ. ಇವುಗಳಿಂದ ಚಿಮ್ಮುವ ನೀರ ಹನಿಗಳ ಸಿಂಚನದಿಂದ ಮೈಮನ ಮುದಗೊಳ್ಳುತ್ತವೆ.
ನಿಷಾದ್‌ಬಾಗ್ ಉದ್ಯಾನವನದಲ್ಲಿ ದೇಶ ವಿದೇಶಗಳ ಹೂಗಿಡಗಳನ್ನು ಬೆಳೆಸಿದ್ದಾರೆ. ಕೆಲವು ವಿದೇಶಿ ಮರಗಳೂ ಇವೆ. ಅನೇಕ ಬಗೆಯ ಬಣ್ಣ ಮತ್ತು ಹತ್ತು ಹಲವು ಆಕಾರಗಳಿಂದ ಹೂಗಳು ಕಂಗೊಳಿಸುತ್ತವೆ. ಕಾಲುಹಾದಿಯ ಅಕ್ಕಪಕ್ಕದಲ್ಲಿ ಸಾಲು ಸಾಲು ಬಣ್ಣ ಬಣ್ಣದ ಹೂಗಳು ನಮ್ಮನ್ನು ಸ್ವಾಗತಿಸುತ್ತವೆ. ಉದ್ಯಾನದ ವಿನ್ಯಾಸವೂ ಆಕರ್ಷಕವಾಗಿದೆ. ಕಾಶ್ಮೀರದ ಸಾಂಪ್ರದಾಯಿಕ ಉಡುಪು ತೊಟ್ಟು ಫೋಟೊ ತೆಗೆಸಿಕೊಳ್ಳುವುದಕ್ಕೆ ಇಲ್ಲಿ ಅವಕಾಶವಿದೆ. ಉಡುಪುಗಳನ್ನು ಬಾಡಿಗೆಗೆ ಕೊಡುವುದಲ್ಲದೆ ಫೋಟೊ ಕೂಡ ತೆಗೆದುಕೊಡುತ್ತಾರೆ. ಇದರ ಶುಲ್ಕವನ್ನು ಮೊದಲೇ ಚೌಕಾಸಿ ಮಾಡಿ ನಿಗದಿಪಡಿಸಿಕೊಳ್ಳುವುದು ಒಳ್ಳೆಯದು.
ನಿಷಾದ್‍ಬಾಗ್ ಎದುರಿಗೆ ಇರುವ ದಾಲ್ ಸರೋವರವೂ ಪ್ರೇಕ್ಷಣೀಯ ಸ್ಥಳ. ಅಲ್ಲಿನ ದೋಣಿ ವಿಹಾರ ಮತ್ತು ದೋಣಿಮನೆಗಳಲ್ಲಿನ ವಾಸ್ತವ್ಯ ಪ್ರವಾಸಿಗರ ಮೆಚ್ಚಿನ ತಾಣ. ದಾಲ್ ಸರೋವರ ಕೇವಲ ಒಂದು ಸರೋವರವಲ್ಲ, ಅದು ಬೇರೊಂದೇ ಪ್ರಪಂಚ. ‘ಅಲ್ಲಿ ಏನುಂಟು ಏನಿಲ್ಲ’ ಎನ್ನುತ್ತಾರಲ್ಲಾ, ಹಾಗೆ. ಅಲ್ಲಿ ಎಲ್ಲವೂ ಇದೆ.
ಶ್ರೀನಗರ ಮತ್ತು ನಿಷಾದ್‌ಬಾಗ್ ಭೇಟಿ ಬಹಳ ಕಾಲ ನೆನಪಿನಲ್ಲಿ ಉಳಿಯುವಂತಹ ಅನುಭವವನ್ನು ನೀಡುತ್ತವೆ. ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆಂಬ ಹಂಬಲವನ್ನೂ ಹುಟ್ಟು ಹಾಕುತ್ತದೆ.
ತಲುಪುವುದು ಹೇಗೆ?
ದೇಶದ ಎಲ್ಲ ಭಾಗಗಳಿಂದಲೂ ಶ್ರೀನಗರಕ್ಕೆ ರೈಲು, ವಿಮಾನ, ರಸ್ತೆಯ ಮೂಲಕ ತಲುಪಬಹುದು. ಶ್ರೀನಗರದಲ್ಲಿಯೇ ವಿಮಾನ ನಿಲ್ದಾಣವಿದೆ. ಹತ್ತಿರದ ರೈಲು ನಿಲ್ದಾಣವೆಂದರೆ 305 ಕಿ.ಮೀ ದೂರವಿರುವ ಜಮ್ಮು ತಾವಿ ರೈಲು ನಿಲ್ದಾಣ. ಜಮ್ಮುವಿಗೆ ದೇಶದ ನಾನಾ ಭಾಗಗಳಿಂದ ನೇರ ಸಂಪರ್ಕವಿದೆ. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 1ಎ ಮೂಲಕವೂ ಶ್ರೀನಗರವನ್ನು ತಲುಪಬಹುದು. ಫೆಬ್ರುವರಿಯಿಂದ ಜುಲೈವರೆಗೆ ಶ್ರೀನಗರಕ್ಕೆ ಭೇಟಿ ನೀಡಲು ಸೂಕ್ತಕಾಲ. ಹಿಮಪಾತದ ಅನುಭವ ಪಡೆಯಬೇಕೆಂಬ ಬಯಕೆ ನಿಮಗಿದ್ದರೆ, ಚಳಿಗಾಲದಲ್ಲಿಯೂ ಹೋಗಬಹುದು, ಆದರೆ, ಅದಕ್ಕೆ ಸೂಕ್ತ ತಯಾರಿ ಬೇಕು.
ಇನ್ನು ಏನೇನು ನೋಡಬಹುದು?
ಶ್ರೀನಗರದಲ್ಲೇ ಹಲವು ವೈವಿಧ್ಯಮಯ ಉದ್ಯಾನಗಳಿವೆ. ಮೊದಲು ದಾಲ್‌ಸರೋವರ ಮತ್ತು ನಿಷಾದ್‌ಬಾಗ್ ನೋಡಿ. ನಂತರ, ಶಾಲಿಮಾರ್ ಉದ್ಯಾನ, ಮುಘಲ್ ಉದ್ಯಾನ, ಇಂದಿರಾಗಾಂಧಿ ಟ್ಯುಲಿಪ್ ಉದ್ಯಾನ, ಬದಾಮ್‌ವಾರಿ ಉದ್ಯಾನ, ಶಂಕರಾಚಾರ್ಯ ಬೆಟ್ಟವನ್ನು ನೋಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.