ADVERTISEMENT

ನವಿಲುಗಳ ಪ್ರಣಯ ಪ್ರಸಂಗ

ಶಶಿಧರಸ್ವಾಮಿ ಆರ್.ಹಿರೇಮಠ
Published 26 ಆಗಸ್ಟ್ 2019, 19:30 IST
Last Updated 26 ಆಗಸ್ಟ್ 2019, 19:30 IST
ನವಿಲುಗಳು ಪ್ರಯಣ
ನವಿಲುಗಳು ಪ್ರಯಣ   

ನಾಗರಹೊಳೆ ಹುಲಿ ಯೋಜನೆಯ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟಿ ವಲಯದ ಕಾಡಿನಲ್ಲಿ ವನ್ಯಜೀವಿ ಛಾಯಾಗ್ರಹಣಕ್ಕಾಗಿ ಅರಣ್ಯ ಇಲಾಖೆಯ ವಾಹನದಲ್ಲಿ ನಾವು ಸಾಗುತ್ತಿದ್ದೆವು. ಶುಭ್ರವಾದ ನೀಲಾಕಾಶ, ಆಗ ತಾನೇ ಉದಯಿಸಿದ ಭಾಸ್ಕರನಿಂದ ಖಗ-ಮೃಗಗಳ ಚಟುವಟಿಕೆ ಆರಂಭವಾಗಿತ್ತು. ನವಿಲುಗಳು ಮೇ-ಆವ್ಹ್... ಮೇ-ಆವ್ಹ್... ಮೇ-ಆವ್ಹ್... ಎಂದು ಕಾಡಿಗೆಲ್ಲ ಮಾರ್ದನಿಸುವಂತೆ ಕೂಗುತ್ತಿದ್ದವು.

ಇದ್ದಕ್ಕಿದ್ದಂತೆ ಮೋಡ ಮುಸುಕಿತು. ಹೆಪ್ಪುಗಟ್ಟಿದ ಕಾರ್ಮೋಡಗಳು ತೇಲಲಾರಂಭಿಸಿದವು. ಮಳೆ ಬರುವ ಮುನ್ಸೂಚನೆ ಸಿಕ್ಕಂತೆ ಭಾಸವಾಯಿತು.

ಸ್ವಲ್ಪ ದೂರದಲ್ಲಿ ಪೊದೆಯ ಮುಂದೆ ಗಂಡು ನವಿಲೊಂದು ನಾಟ್ಯವಾಡುವ ದೃಶ್ಯ ಕಂಡಿತು. ತಕ್ಷಣ ಚಾಲಕನಿಗೆ ವಾಹನ ನಿಲ್ಲಿಸುವಂತೆ ಸೂಚನೆ ಕೊಟ್ಟೆ. ಗಂಡು ನವಿಲಿನ ನೃತ್ಯವನ್ನು ಪೋಟೊಗ್ರಫಿ ಮಾಡತೊಡಗಿದೆ. ಅಲ್ಲಿಗೆ ಹೆಣ್ಣು ನವಿಲು ಬಂದಿತು. ಅದು ಅತ್ತಿಂದಿತ್ತ ಅಡ್ಡಾಡಿ, ಗಂಡು ನವಿಲನ್ನು ಒಂದು ಸುತ್ತುಹಾಕಿ ಬಂದು ತನ್ನ ಎದೆಯನ್ನು ಉಬ್ಬಿಸಿ ಸುತ್ತಲೂ ಒಮ್ಮೆ ನೋಡಿ ತಾನೂ ಮಿಲನಕ್ಕೆ ಸಿದ್ಧ ಎಂದು ಸಮ್ಮತಿ ಸೂಚಿಸುವಂತೆ ತನ್ನ ಮೊಟುಬಾಲದ ಗರಿಯನ್ನು ಅರಳಿಸಿ ನಿಂತಿತು.

ADVERTISEMENT

ಕಾನನದ ಹಚ್ಚಹಸಿರು, ಹಿಂಬದಿಯಲ್ಲಿರುವ ಪೊದೆ, ಕಾರ್ಮೋಡಗಳ ಶೃಂಗಾರ ನೋಡಿ ಈ ನವಿಲುಗಳು ಹಿಗ್ಗಿದವು. ನಾಚಿದ ಹೆಣ್ಣನ್ನು ಕಂಡ ಗಂಡು ಒಂದೊಂದೆ ಹೆಜ್ಜೆಗಳನ್ನಿಕ್ಕುತ್ತ ತನ್ನ ಅರಳಿದ ಗರಿಗಳ ಗುಚ್ಚವನ್ನು ಹೊತ್ತು ಹೆಣ್ಣಿನ ಸನಿಹಕ್ಕೆ ಬಂದಿತು. ಒಮ್ಮೆ ತನ್ನ ಕೊರಳು ಎತ್ತಿ ಪ್ರಿಯತಮೆಯನ್ನು ದಿಟ್ಟಿಸಿ ನೋಡಿತು. ಇನ್ನೂ ಸನಿಹಕೆ ಬಂದು, ತಬ್ಬಿಕೊಂಡು, ತನ್ನ ಕೊಕ್ಕಿನಿಂದ ಮೃದುವಾಗಿ ತಲೆಯನ್ನು ನೇವರಿಸಿ, ಮುತ್ತಿಕ್ಕಿತು. ಕೊಕ್ಕಿನಿಂದ ಪುಕ್ಕಗಳನ್ನು ಹಿಡಿದು ಚುಂಬಿಸತೊಡಗಿತು.

ಎರಡು ದೇಹಗಳು ಕೂಟಕ್ಕೆ ಬೆಸೆದುಕೊಂಡವು. ನಾಟ್ಯಕ್ಕಾಗಿ ತೆರದ ಗರಿ ಸಮೂಹ ಅರಳಿ, ಅರಳಿದಂತೆಯೇ ಇದ್ದವು. ಅದರ ಸಾವಿರ ಕಣ್ಣುಗಳು ಉಲ್ಲಾಸಗೊಂಡಂತೆ ಕಂಡವು. ನಲ್ಲನಲ್ಲೆಯರ ಅಪ್ಪುಗೆಯ ತೋಳುಗಳು ಕಂಬಕ್ಕೆ ಹಬ್ಬಿದ ಲತೆಯಂತೆ ಗೋಚರಿಸಿ ಪ್ರಕೃತಿಯು ಚಿತ್ತಾರ ಬಿಡಿಸಿದಂತೆ ಕಂಡು ಬಂತು.

ಮುಚ್ಚಿದ ಕಣ್ಣುಗಳು, ಪಿಸು ಲಲ್ಲೆ ಮಾತುಗಳ ಜೊತೆಗೆಬಿಡಿಸಲಾಗದ ಅಪ್ಪುಗೆಯಿಂದೊಂದಿಗೆ ಈ ಜೀವಗಳು ಮೌನಕ್ಕೆ ಒಳಗಾದವು. ಬಳಲಿದ ಕಣ್ಣು, ಭಾವಪರವಶತೆಯಿಂದ ಈ ಪ್ರೇಮಿಗಳು ಮೌನದಿಂದ ಎಚ್ಚೆತ್ತು ಪ್ರಣಯ ಕೂಟವನ್ನು ಪೂರ್ಣಗೊಳಿಸಿದದರು.

ಈ ಎಲ್ಲ ದೃಶ್ಯಗಳು ನನ್ನ ಕ್ಯಾಮೆರಾದಲ್ಲಿ ಸೆರೆಯಾದವು. ಅದ್ಭುತ ವರ್ಣಾತೀತ ಸನ್ನಿವೇಶವನ್ನು ಕಣ್ಮನ, ಕ್ಯಾಮೆರಾಗಳಲ್ಲಿ ತುಂಬಿಕೊಂಡು, ಮಳೆ ಹನಿಗಳು ಬೀಳಲಾರಂಭಿಸಿದಾಗ ಕಾಡಿನಿಂದ ಮರಳಿದೆವು.
ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.