ADVERTISEMENT

ಕಡಲ ಕಾಗೆಗೀಗ ಕಾವಿನ ಸಮಯ...

ಸಂತೋಷಕುಮಾರ ಮೆಹೆಂದಳೆ
Published 12 ಜೂನ್ 2018, 11:38 IST
Last Updated 12 ಜೂನ್ 2018, 11:38 IST
   

ಇದು ಯಾವತ್ತೂ ಒಂದು ಕಡೆ ನಿಲ್ಲುವ ಪಕ್ಷಿಯಲ್ಲ. ಸುಲಭಕ್ಕೆ ನಿಮ್ಮ ಕಣ್ಣಿಗೆ ಮತ್ತು ಕ್ಯಾಮೆರಾ ಲೆನ್ಸ್‌ಗೆ ತನ್ನ ಪೋಸು ಕೊಡುವ ಗಿರಾಕಿಯೂ ಅಲ್ಲ. ಎಲ್ಲಿಯವರೆಗೆ ತನ್ನ ಏಕಾಂತತೆಗೆ ಭಂಗ ಬರುವುದಿಲ್ಲವೋ ಅಲ್ಲಿಯವರೆಗೆ ಒಂದೆಡೆ ಗುಂಪು ಕಟ್ಟಿಕೊಂಡು, ಕುಟುಂಬ ಸಮೇತ ವಿಹರಿಸುತ್ತದೆ.

ನೋಡನೋಡುತ್ತಲೇ ಮೀನು, ಹುಳು ಹುಪ್ಪಟೆ, ಸಣ್ಣ ಪಕ್ಷಿಗಳ ಮೊಟ್ಟೆ, ಸತ್ತು ಬಿದ್ದ ಸಮುದ್ರ ಜೀವಿ ಹೀಗೆ ಯಾವುದಾದರೂ ಆದೀತು; ಸಿಕ್ಕಿದ್ದನ್ನು ಕಬಳಿಸುತ್ತಾ ಸಮುದ್ರದ ಉಪ್ಪು ನೀರನ್ನೇ ಕುಡಿಯುತ್ತಾ, ಗಂಟೆಗಟ್ಟಲೆ ಸಮುದ್ರದಲ್ಲೇ ತಲೆ ಮುಳುಗಿಸಿಕೊಂಡು ತನ್ನನ್ನು ತಾನು ಬಚ್ಚಿಟ್ಟುಕೊಳ್ಳುತ್ತಾ ದಂಗುಬಡಿಸುತ್ತದೆ ಕಡಲಕಾಗೆ ಅಥವಾ ಸಮುದ್ರಕಾಗೆ. ಸೀಬರ್ಡ್ ಎನ್ನುವ ಈ ಹಕ್ಕಿಯ ಕತ್ತು ಮತ್ತು ಅದರ ಮೈಮೇಲೆ ಬಿಳುಪು ತುಪ್ಪಳವಿದೆ. ಆಕರ್ಷಕ ಕೆಂಪು ಕೊಕ್ಕು ಮತ್ತು ಅದೇ ರೀತಿಯ ಕಡುಗೆಂಪು ಕಾಲು.

\

ADVERTISEMENT

ಕರಾವಳಿ ಮತ್ತು ಸಮುದ್ರದ ಹಿನ್ನೀರ ದಂಡೆಗುಂಟ ಸಾಲು ಸಾಲು ಶಿಸ್ತಿನ ಸೈನಿಕರಂತೆ ಗುಂಪುಗುಂಪಾಗಿ ವಿಹರಿಸುತ್ತಿರುವ ಹಕ್ಕಿಗಳಿಗೆ ಜನವರಿ ಶುರುವಾಗುವ ಮೊದಲೇ ಜಾಗ ಹುಡುಕಿ ಬೀಡುಬಿಡುವ ಹಬ್ಬ ಆರಂಭವಾಗಿಬಿಡುತ್ತದೆ. ಈ ಸಮುದ್ರ ಹಕ್ಕಿಗಳ ಬದುಕು ನೋಡಲಷ್ಟೇ ಗುಂಪುಗುಂಪು. ಆದರೆ ಎಲ್ಲವೂ ಪ್ರತ್ಯೇಕವೇ ಅನ್ನುವುದು ವಿಸ್ಮಯಕಾರಿ ಅಧ್ಯಯನ. ನೀರ ಸಮೀಪ, ಹಿನ್ನೀರ ನಡುಗಡ್ಡೆ, ಸಮುದ್ರದ ಕಲ್ಲುಸಂದಿನ ಪೊಟರೆ ಹೀಗೆ ಜನವಸತಿಯಿಂದ ದೂರ, ಮನುಷ್ಯನ ವಾಸನೆ ತಾಗದ ಪ್ರದೇಶಗಳಲ್ಲಿ ಮತ್ತು ಶತ್ರುಗಳಿಗೆ ಸುಲಭಕ್ಕೆ ದಕ್ಕದಿರಲಿ ಎನ್ನುವಂತಹ ಸ್ಥಳ ಹುಡುಕಿ, ನಿರ್ದಿಷ್ಟ ಮತ್ತು ನಿಗದಿತ ಅಂತರದ ವಲಯವನ್ನು ಗುರುತಿಸಿ ಪ್ರತಿಯೊಂದೂ ಜೋಡಿ ಗೂಡು ನಿರ್ಮಿಸುತ್ತವೆ.

ವಿಸ್ಮಯಕಾರಿ ಎಂದರೆ ಪ್ರತಿ ಜೋಡಿಯೂ ತನ್ನ ವಲಯದ ಸರಹದ್ದನ್ನು ಗುರುತಿಸುತ್ತದೆ. ಆ ಸರಹದ್ದಿನಲ್ಲಿ ಬೇರೆ ಕಡಲ ಕಾಗೆ ಸಂಸಾರಕ್ಕಾಗಿ ಪ್ರವೇಶಿಸುವಂತಿಲ್ಲ. ಜೊತೆಗೆ ಒಂದು ಜೋಡಿಯಾದ ಹಕ್ಕಿಗಳ ಸಂಸಾರದ ಖಾಸಗಿ ವಿಷಯದಲ್ಲಿ ಮೂಗು ತೂರಿಸುವಂತಿಲ್ಲ. ಆದರೆ, ಹಲವು ವರ್ಷಗಳ ಬಾಂಧವ್ಯದ ನಂತರವೂ ಕೆಲವೊಮ್ಮೆ ವಿಚ್ಛೇದನ ಹೊಂದುವ ಹಕ್ಕಿಗಳು ಮತ್ತೆ ಹೊಸ ಜೋಡಿಯನ್ನು ಹುಡುಕಿಕೊಳ್ಳುತ್ತವೆ. ಆದರಲ್ಲಿ ವಿಶೇಷವೆಂದರೆ ಹಾಗೆ ಜೋಡಿಯಾಗುವ ಹಕ್ಕಿಗಳು ಮೊದಲೊಮ್ಮೆ ಸಂಸಾರ ನಡೆಸಿ ಬೇರ್ಪಟ್ಟವೇ ಆಗಿರುತ್ತವೆ. ಹೊಸದಾಗಿ ಜೋಡಿಯಾಗುವವು ಹೊಸ ಹಕ್ಕಿಗಳ ಜೊತೆಯನ್ನೇ ಬಯಸುತ್ತವೆ.

ಸಾಮಾನ್ಯವಾಗಿ ಮೂರು ಮೊಟ್ಟೆಗಳ ಕರಾರುವಾಕ್ಕಾದ ಕುಟುಂಬ ಯೋಜನೆ ನಡೆಸುವ ಕಡಲಹಕ್ಕಿ, ಮೊದಲ ಮರಿ ಮತ್ತು ಎರಡನೆಯದಕ್ಕೂ ಹತ್ತರಿಂದ ಹನ್ನೆರಡು, ಕೆಲವೊಮ್ಮೆ ಇಪ್ಪತ್ತೆರಡು ದಿನಗಳ ಅಂತರ ಕಾಯ್ದುಕೊಳ್ಳುತ್ತದೆ. ಮೂರು ಮೊಟ್ಟೆಗಳಲ್ಲಿ ಮೊದಲ ಎರಡನ್ನು ಇಪ್ಪತ್ತೆರಡು ದಿನಗಳ ಕಾಲ ಬಿಸಿಯಾಗಿಸಿ ಮರಿ ಮಾಡಿದರೆ ಮೂರನೆಯದನ್ನು ಮರಿ ಮಾಡಲು ಎರಡು ವಾರಗಳ ಅಂತರ ಪಡೆಯುತ್ತದೆ. ಇದೆಲ್ಲಾ ಸಮಯದಲ್ಲಿ ಗಂಡುಹಕ್ಕಿ ಆಹಾರವನ್ನು ಪೂರೈಸುತ್ತಾ ಶತ್ರು ದಾಳಿಗೆ ಒಳಗಾಗದಂತೆ ರಕ್ಷಣೆ ನೀಡುತ್ತಾ ಕಾಯುತ್ತದೆ. ಸರಿಸುಮಾರು ಗೂಡು ಮಾಡುವಿಕೆಯಿಂದ ಹಿಡಿದು ಮರಿಗಳನ್ನು ಸಶಕ್ತರನ್ನಾಗಿಸುವ ಐದು ತಿಂಗಳ ಕಾಲಾವಧಿಯುದ್ದಕ್ಕೂ ಜೋಡಿಗಳು ನಿರಂತರವಾಗಿ ಜೊತೆಯಾಗಿರುತ್ತವೆ.

ನಂತರದಲ್ಲಿ ಮತ್ತೆ ಲೋಕ ಸಂಚಾರಾರ್ಥವಾಗಿ ದೊಡ್ಡ ಗುಂಪು ಸೇರಿಕೊಂಡು ಜೀವನ ನಡೆಸುತ್ತವೆ. ವಿಶೇಷವೆಂದರೆ ಸಮುದ್ರ ನೀರು ಕುಡಿದು ಬದುಕುವ ಪಕ್ಷಿ ಪ್ರಬೇಧದಲ್ಲಿ ಕಡಲ ಕಾಗೆಯದ್ದು ಮುಂಚೂಣಿ ಸ್ಥಾನ. ಬೇರಾವುದೇ ಪಕ್ಷಿ ಇವತ್ತಿಗೂ ಉಪ್ಪು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿಲ್ಲ. ಅವುಗಳ ಪಾದ, ಹಾರಲೂ ನೀರಿನಲ್ಲಿ ಈಜಲೂ ಇರುವ ಅಪರೂಪದ ವಿನ್ಯಾಸ ಹೊಂದಿದ್ದು ಇದು ಉಭಯಚರಿ. ಆದರೆ ಹೆಚ್ಚಿನಂಶ ಸುಲಭ ಆಹಾರೋತ್ಪನ್ನಕ್ಕಾಗಿ ಸಮುದ್ರವನ್ನೇ ಅವಲಂಬಿಸುವುದರಿಂದ ಇದರ ಹೆಸರೂ ಕಡಲ ಹಕ್ಕಿಯಾಗೇ ಉಳಿದುಹೋಗಿದೆ.

ಹೆಚ್ಚಿನಂಶ ಕೆನಡಾ ಮತ್ತು ದಕ್ಷಿಣ ಅಮೆರಿಕದ ವಸಾಹತು ಪ್ರದೇಶಗಳನ್ನು ತನ್ನ ಮೂಲ ನೆಲೆಯಾಗಿಸಿಕೊಂಡಿರುವ ಕಡಲ ಹಕ್ಕಿ ಪ್ರತಿವರ್ಷ ದೇಶಾಂತರ ಹೊರಡುವ ಜಾತಿಯದ್ದಲ್ಲ. ಒಮ್ಮೆ ಬಂದರೆ ಇಲ್ಲೇ ಎರಡ್ಮೂರು ವರ್ಷ ಠಿಕಾಣಿ ಹೂಡಿ, ಒಮ್ಮೆ ಅತ್ತ ಹೋದರೆ ಮತ್ತೆ ಹತ್ತಿರದಲ್ಲೇ ಸಂಸಾರ ನಿಭಾಯಿಸಿ ಇತ್ತ ಬಾರದೇ ಉಳಿದರೂ ಉಳಿದೀತು.

ಹಾಗಾಗಿ ಖಚಿತ ನೆಲೆಯ ಪದ್ಧತಿಯ ಬಗ್ಗೆ ಅಧ್ಯಯನ ಇನ್ನೂ ನಡೆದಿದ್ದು ಹೆಚ್ಚಿನ ಸೀ ಬರ್ಡ್‌ಗಳ ವಸತಿ ಭಾರತದ ಕರಾವಳಿಗಳೇ ಆಗಿದೆ. ಅದರಲ್ಲೂ ಸಮಶೀತೋಷ್ಣದ ಕರ್ನಾಟಕದ ಸಹ್ಯಾದ್ರಿ ಅಂಚಿನ ತೀರಗಳು ಇದಕ್ಕೆ ಅಚ್ಚುಮೆಚ್ಚು. ಉಳಿದಂತೆ ಅಲ್ಲಲ್ಲಿ ಸರಹದ್ದು ಗುರುತಿಸಿಕೊಳ್ಳುತ್ತಿವೆಯಾದರೂ ಇಲ್ಲೀಗ ಸಾವಿರ ಲೆಕ್ಕದಲ್ಲಿ ಕಡಲ ಕಾಗೆಯ ಕಲರವ ನಿತ್ಯ ನೂತನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.