ADVERTISEMENT

ಗರ್ಭ ಧರಿಸುವ ಗಂಡು ಕಡಲ ಕುದುರೆ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2018, 13:06 IST
Last Updated 29 ಜುಲೈ 2018, 13:06 IST
   

ಸಾಗರದಲ್ಲಿ ಆಕಾರ ಮತ್ತು ರೂಪದಿಂದ ಗಮನ ಸೆಳೆಯುವ ಹಲವು ಜೀವಿಗಳು ಇವೆ. ಅಂತಹ ಜೀವಿಗಳಲ್ಲಿ ಅಪರೂಪ ಎನಿಸುವ ಜೀವಿ ಕಡಲ ಕುದುರೆ. ಇದರ ದೇಹ ಕುದುರೆಯ ಆಕಾರವನ್ನೇ ಹೋಲುವುದರಿಂದ ಇದನ್ನು ಕಡಲ ಕುದುರೆ (Sea horse) ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು (Hippocampus). ಇಂದಿನ ಮತ್ಸ್ಯಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?: ಇದರ ದೇಹವು ಕಂದು, ಹಳದಿ ಬಣ್ಣಗಳ ಚರ್ಮದಿಂದ ಕೂಡಿರುತ್ತದೆ. ಇತರಮೀನುಗಳಿಗೆ ಇರುವಂತೆ ಇದರ ದೇಹದ ಮೇಲೆಹುರುಪೆಗಳು ಇರುವುದಿಲ್ಲ. ಚರ್ಮ ಒರಟಾಗಿರುತ್ತದೆ. ಕತ್ತಿನ ಭಾಗದಲ್ಲಿ ಎರಡು ಈಜುರೆಕ್ಕೆಗಳಿದ್ದು, ಬಾಲ ನೀಳವಾಗಿರುತ್ತದೆ.ಊಸರವಳ್ಳಿಯಂತೆ ಉಬ್ಬಿದ ಕಣ್ಣುಗಳನ್ನು ಹೊಂದಿದ್ದು, ಕೊಳವೆಯಾಕಾರದ ಮೂತಿಯನ್ನು ಹೊಂದಿದೆ. ಹಲ್ಲುಗಳು ಇರುವುದಿಲ್ಲ.

ಎಲ್ಲೆಲ್ಲಿವೆ?: ಇದರಲ್ಲಿ ಈವರೆಗೆ 40 ತಳಿಗಳನ್ನುಗುರುತಿಸಲಾಗಿದೆ. ಮ್ಯಾಂಗ್ರೋವ್ ಕಾಡುಗಳಿರುವ ಸುಮುದ್ರದ ತೀರ ಪ್ರದೇಶಗಳು, ಹವಳದ ದಿಬ್ಬಗಳು, ಸಸ್ಯಗಳ ಪೊದೆಗಳಲ್ಲಿ ವಾಸಿಸುತ್ತದೆ. ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಖಂಡಗಳ ಸಾಗರಗಳಲ್ಲಿ ಇದರ ಸಂತತಿ ಹೆಚ್ಚಾಗಿ ವಿಸ್ತರಿಸಿದೆ.

ADVERTISEMENT

ವರ್ತನೆ ಮತ್ತು ಜೀವನ ಕ್ರಮ: ಹೆಚ್ಚು ಆಳವಿಲ್ಲದ ಸಮುದ್ರದ ನೀರಿನಲ್ಲಿ ವಾಸಿಸುವ ಇದು ಬೇಸಿಗೆಯಲ್ಲಿ ಮಾತ್ರ ಕಾಣಿಸುತ್ತದೆ. ಇದರ ಈಜುವ ವಿಧಾನ ಇತರ ಜಲಚರಗಳಿಗಿಂತ ಭಿನ್ನವಾಗಿರುತ್ತದೆ. ಲಂಬಾಕಾರದಲ್ಲಿ ಈಜುತ್ತದೆ. ನೋಡಲು ಎಗರಿ ಎಗರಿ ಓಡುತ್ತಿರುವಂತೆ ಭಾಸವಾಗುತ್ತದೆ. ಕೆಲವು ಗಂಡು ಕಡಲ ಕುದುರೆಗಳು, ಹೆಣ್ಣು ಕಡಲ ಕುದುರೆಯ ಬಾಲದ ಜತೆಗೆ ಸುರುಳಿಯಂತೆ ಹೆಣೆದುಕೊಂಡು ಈಜುತ್ತವೆ. ಚಳಿಗಾಲ ಆರಂಭವಾದ‌ ಕೂಡಲೇ ಇದರ ಸಂತತಿ ಕಣ್ಣಿಗೆ ಕಾಣಿಸದೇ ಮರೆಯಾಗುತ್ತದೆ. ಜಲಸಸ್ಯಗಳಿಗೆ ಬಾಲವನ್ನು ಹೆಣೆದುಕೊಂಡು ಇತರ ಜಲಚರಗಳನ್ನು ಬೇಟೆಯಾಡುತ್ತದೆ. ಸಸ್ಯಗಳಿಗೆ ಅಂಟಿಕೊಂಡೇ ವಿಶ್ರಾಂತಿ ಪಡೆಯುತ್ತದೆ. ಇದಕ್ಕೆ ಹೊಟ್ಟೆ ಇಲ್ಲದ ಕಾರಣ ಆಹಾರ ಸಂಗ್ರಹಿಸಿ ಇಡಲು ಆಗುವುದಿಲ್ಲ. ಹೀಗಾಗಿ ಸದಾ ಏನಾದರೊಂದು ಆಹಾರ ಸೇವಿಸುತ್ತಾ ಇರುತ್ತದೆ. ಕೆಲವೊಂದು ದೈತ್ಯ ಪರಭಕ್ಷಕ ಪ್ರಾಣಿಗಳನ್ನು ಹೊರತುಪಡಿಸಿ, ಬೇರಾವ ಕಡಲ ಮೀನುಗಳು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಈ ಕಾರಣದಿಂದ ಇದರ ಸಂತತಿಗೆ ಯಾವುದೇ ಅಪಾಯವಿಲ್ಲ.

ಇದು ಏಕಾಂಗಿಯಾಗಿ ಜೀವಿಸಲು ಇಷ್ಟಪಡುತ್ತದೆ. ಸಾಮಾನ್ಯವಾಗಿ ಜೀವಸಂಕುಲದಲ್ಲಿ ಸಂತಾನೋತ್ಪತ್ತಿಗಾಗಿ ಹೆಣ್ಣು ಗರ್ಭಧರಿಸುತ್ತದೆ. ಇದಕ್ಕೆ ಭಿನ್ನವೆಂಬಂತೆ ಗಂಡು ಕಡಲ ಕುದುರೆ ಗರ್ಭ ಧರಿಸುತ್ತದೆ. ಹೆಣ್ಣು ಕಡಲ ಕುದುರೆ ಗಂಡಿನ ದೇಹದಲ್ಲಿರುವ ಚೀಲದಲ್ಲಿಒಮ್ಮೆಗೆ ಸುಮಾರು2000 ಮೊಟ್ಟೆಗಳನ್ನು ಇಡುತ್ತದೆ. ಗಂಡಿನಹೊಟ್ಟೆಯಲ್ಲಿನ ಆ ಚೀಲದಲ್ಲೇ ಮೊಟ್ಟೆಗಳುಬೆಳೆಯುತ್ತವೆ. ಸುಮಾರು 45 ದಿನಗಳವರೆಗೂ ಗಂಡು ಕಡಲುಕುದುರೆ ಮೊಟ್ಟೆಗಳನ್ನು ಜೋಪಾನವಾಗಿ ಕಾಪಾಡುತ್ತದೆ. 45 ದಿನಗಳಲ್ಲಿ ಮೊಟ್ಟೆಯೊಡೆದು ‌ಮರಿಗಳಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.