ADVERTISEMENT

‘ಗೂಬೆಗಳ ಲೋಕ’ಕ್ಕೆ ಮಾಹಿತಿ ನೀಡಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 12:51 IST
Last Updated 4 ಜೂನ್ 2019, 12:51 IST
Rock Eagle Owl, Bengal Eagle Owl, Eurasian Eagle Owl, Indian Eagle Owl
Rock Eagle Owl, Bengal Eagle Owl, Eurasian Eagle Owl, Indian Eagle Owl   

ಒಂಟಿಯಾಗಿ ಕಾಣಿಸುವ ಪಕ್ಷಿ ಪ್ರಬೇಧಕ್ಕೆ ಸೇರಿರುವ, ಸಾಮಾನ್ಯ ಅಧ್ಯಯನಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ, ಭಯ, ಕುತೂಹಲ ಉಳಿಸಿಕೊಂಡಿರುವ ವಿಶಿಷ್ಟ ಪಕ್ಷಿ ಗೂಬೆ.

ಇದುಸ್ಟ್ರಿಜಿಫೋರ್ಮೀಸ್ ಗಣಕ್ಕೆ ಸೇರಿದೆ. ರಾತ್ರಿಯಲ್ಲಿ ಚಟುವಟಿಕೆಯಿಂದ ಕೂಡಿರುವ ಜೀವಿ. ಇಲಿ, ಹೆಗ್ಗಣ, ಕೀಟ, ಪಕ್ಷಿಗಳನ್ನು ಬೇಟೆಯಾಡಿ ತಿಂದು ಬದುಕುತ್ತದೆ. ಇದುವರೆಗೆ ವಿಶ್ವದಲ್ಲಿ ಸುಮಾರು 133 ಗೂಬೆ ಪ್ರಬೇಧಗಳು ಪತ್ತೆಯಾಗಿವೆ.

ಕಣಜದ ಗೂಬೆ, ಕೊಂಬಿನ ಗೂಬೆ, ಮಂಜಿನಗೂಬೆ, ಮೀನು ತಿನ್ನುವ ಗೂಬೆ (ಬ್ರೌನ್ ಫಿಶ್ ಔಲ್), ಕುಬ್ಜಗೂಬೆ (ಪಿಗ್ಮಿ ಔಲ್) ಸದ್ಯಕ್ಕೆ ಪ್ರಚಲಿತದಲ್ಲಿ ಕಾಣಿಸಿಕೊಳ್ಳುತ್ತಿರುವ ಗೂಬೆ ವೈವಿಧ್ಯಗಳು.

ADVERTISEMENT

ತಟ್ಟೆಯಂತೆ ಅಗಲವಾಗಿರುವ ಮುಖ, ದೊಡ್ಡ ಕಣ್ಣುಗಳು, ದಪ್ಪತಲೆ, ಮೋಟು ಕತ್ತು, ಮೃದುವಾದ ತುಪ್ಪಳದಂಥ ರೆಕ್ಕೆಪುಕ್ಕಗಳು, ಕೊಕ್ಕೆಯಂಥ ಕೊಕ್ಕು ಮತ್ತು ಬಲವಾದ ಕಾಲುಗಳು ಗೂಬೆಯ ದೇಹ ಲಕ್ಷಣದ ವಿಶೇಷ.

ಹೆಚ್ಚು ಕಡಿಮೆ ಎಲ್ಲ ಬಗೆಯ ಪರಿಸರಗಳಿಗೂ ಇದು ಹೊಂದಿಕೊಂಡು ಬದುಕುತ್ತದೆ. ರಾತ್ರಿ ವೇಳೆಯಷ್ಟೇ ಆಹಾರ ಹುಡುಕಲು ಕಾರ್ಯಾಚರಣೆಗಿಳಿಯುವ ಗೂಬೆಗೆ ಹಗಲು ಕಣ್ಣು ಕಾಣಿಸುವುದಿಲ್ಲ ಎಂಬ ತಪ್ಪು ಕಲ್ಪನೆ ಜನರಲ್ಲಿದೆ.

ಮರದ ಪೊಟರೆ, ಪ್ರಪಾತಗಳಲ್ಲಿನ ಸಂದುಗಳು, ನೆಲದ ಮೇಲಿನ ಗುಳಿಗಳು ಮುಂತಾದ ಸ್ವಾಭಾವಿಕ ನೆಲೆಗಳನ್ನು ಗೂಡುಗಳನ್ನಾಗಿ ಮಾಡಿಕೊಳ್ಳುತ್ತವೆ. ಕೆಲವು ಸಲ ಗಿಡುಗ ಇಲ್ಲವೆ ಕಾಗೆಗಳಿಂದ ತೊರೆಯಲ್ಪಟ್ಟ ಗೂಡುಗಳನ್ನೂ ಬಳಸುವುದುಂಟು.

ಹಳೆಯ ಮನೆ, ಚರ್ಚುಗಳ ಗೋಪುರಗಳು, ಕಣಜಗಳಲ್ಲಿನ ಚಾವಣಿ ಮುಂತಾದ ಸ್ಥಳಗಳಲ್ಲೂ ಗೂಡು ಕಟ್ಟುತ್ತವೆ. ಪಾಳುಬಿದ್ದ ಕಟ್ಟಡಗಳಂತೂ ಇದಕ್ಕೆ ಬಲು ಅಚ್ಚುಮೆಚ್ಚಿನ ಸ್ಥಳ. ಇಂಥ ಸ್ಥಳಗಳಲ್ಲಿ ಗೂಡು ನಿರ್ಮಿಸಿಕೊಂಡು ಕರ್ಕಶವಾಗಿ ದೀರ್ಘವಾಗಿ ಕಿರಿಚುತ್ತಲೊ, ಲೊಚಗುಟ್ಟುವಂತೆ ಇಲ್ಲವೆ ಗೊರಕೆಯಂತೆ ಕೇಳಿಸುವ ಸದ್ದು ಮಾಡುತ್ತಲೊ ಇರುವುದರಿಂದ ತಾನಿರುವ ನೆಲೆಯ ಭೀಕರತೆಯನ್ನು ಹೆಚ್ಚಿಸುತ್ತದೆ.

ಭಾರತದ ಕೆಲವು ಭಾಗಗಳಲ್ಲಿ ಗೂಬೆಗಳನ್ನು ಅಪಶಕುನ ಎಂದರೆ, ಮತ್ತೆ ಕೆಲವೆಡೆ ಇದು ಶುಭವೆಂದು ಪರಿಗಣಿಸಲಾಗಿದೆ. ಇವು ಇಲಿ, ಹಾವುಗಳ ಸಂಖ್ಯೆಯನ್ನು ಅಂಕೆಯಲ್ಲಿಡುವ ಪರಿಸರ ವ್ಯವಸ್ಥೆಯ ಒಂದು ಸೂಕ್ಷ್ಮ ಕೊಂಡಿಯೂ ಹೌದು. ಇಂಥ ಪಕ್ಷಿಯನ್ನು ಕೆಲವೊಂದು ಕಾರಣಗಳಿಗೆ ನಾಶಪಡಿಸುವ ಪ್ರಯತ್ನಗಳೂ ನಡೆದಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಗೂಬೆ ಪರಿಸರ ವ್ಯವಸ್ಥೆಯ ಕೊಂಡಿಯಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ. ಈ ಜೀವಿಯ ಬಗೆಗಿರುವ ನಂಬಿಕೆ–ಅಪನಂಬಿಕೆಗಳೇನು? ಎಂಬಂತಹ ಮಾಹಿತಿಯನ್ನು ಅನಾವರಣಗೊಳಿಸಲು ಬೆಂಗಳೂರಿನ ಪರಿಸರ – ನಿಸರ್ಗ ಸಂರಕ್ಷಣಾ ಸಂಸ್ಥೆ ಮುಂದಾಗಿದೆ. ಈ ಸಂಬಂಧ ಸೆಪ್ಟೆಂಬರ್ ತಿಂಗಳಲ್ಲಿ ‘ಗೂಬೆಗಳ ಮುಗ್ಧ ಲೋಕ’ ಎಂಬ ಛಾಯಾಚಿತ್ರ – ಸಾಕ್ಷ್ಯಚಿತ್ರ ಪ್ರದರ್ಶನ, ಸಂವಾದ’ ಆಯೋಜಿಸುತ್ತಿದೆ. ಸಂಸ್ಥೆಯು ಪ್ರತಿವರ್ಷ ಆಯೋಜಿಸುವ ‘ತೇಜಸ್ವಿ ಜೀವಲೋಕ’ ಸರಣಿಯ ಮುಂದುವರಿದ ಭಾಗವಾಗಿ ಈ ಕಾರ್ಯಕ್ರಮ ನಡೆಯುತ್ತಿದೆ.

‘ನಮ್ಮಲ್ಲಿ ಗೂಬೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ಹೆಚ್ಚಾಗಿ ನಡೆಯದಿದ್ದರೂ ಕೆಲ ಉತ್ಸಾಹಿಗಳು ಗೂಬೆಗಳ ಕುರಿತು ಅಧ್ಯಯನ ನಡೆಸುತ್ತಿರುವುದಂತೂ ನಿಜ. ಆಸಕ್ತರು ಗೂಬೆಯ ಕುರಿತ ಚಿತ್ರಗಳು, ಡಾಕ್ಯುಮೆಂಟರಿ ಸೇರಿದಂತೆ ತಂತ್ರ–ಮಂತ್ರ, ವಾಸ್ತುಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದಲ್ಲಿ ಗೂಬೆಗಳನ್ನು ಯಾವ ರೀತಿ ಉಲ್ಲೇಖಿಸಲಾಗಿದೆ ಎಂಬೆಲ್ಲ ಮಾಹಿತಿಗಳನ್ನು ಸಂಸ್ಥೆಯೊಂದಿಗೆ ಹಂಚಿಕೊಳ್ಳಬಹುದು. ಇವುಗಳನ್ನು ಮೂಲ ಮಾಹಿತಿದಾರರ ಹೆಸರಲ್ಲೇ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ’ ಎಂದು ಸಂಸ್ಥೆಯ ಮುಖ್ಯಸ್ಥ ಈಶ್ವರ ಪ್ರಸಾದ್ ತಿಳಿಸಿದ್ದಾರೆ. ಮಾಹಿತಿ ಹಂಚಿಕೊಳ್ಳುವ ವಿಳಾಸ; ‘ಪರಿಸರ–ನಿಸರ್ಗ ಸಂರಕ್ಷಣಾ ಸಂಸ್ಥೆ, ‘ಸ್ಫೂರ್ತಿ ವನ’, ಸಿ.ಜೆ.ಎಫ್, ಬೆಂಗಳೂರು ಜಲಮಂಡಳಿ, 18ನೇ ಕ್ರಾಸ್, ಮಲ್ಲೇಶ್ವರ, ಬೆಂಗಳೂರು –55. ಇಮೇಲ್ ವಿಳಾಸ: parisara1989@gmail.com ಹೆಚ್ಚಿನ ಮಾಹಿತಿಗೆ ದೂರವಾಣಿ: 9448077019ಗೆ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.