ಜಲವಾಸಿ ಹಕ್ಕಿಗಳು ವಿಶ್ವದ ಎಲ್ಲ ಖಂಡಗಳಲ್ಲೂ ಇವೆ. ಆಯಾ ಪ್ರದೇಶದ ಭೌಗೋಳಿಕ ರಚನೆ, ವಾತಾವರಣಕ್ಕೆ ತಕ್ಕಂತೆ ವಿವಿಧ ಗಾತ್ರ ಮತ್ತು ಆಕಾರದ ನೀರು ಹಕ್ಕಿಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಅಪರೂಪದ ಲಾಂಗ್ ಬಿಲ್ಡ್ ಕರ್ಲೂ (Long- Billed Curlew) ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ನ್ಯೂಮಿನಿಯಸ್ ಅಮೆರಿಕನಸ್ (Numenius americanus). ಇದು ಸ್ಕೊಲೊಪ್ಯಾಸಿಡೇ (Scolopacidae) ಹಕ್ಕಿಗಳ ಕುಟುಂಬಕ್ಕೆ ಸೇರಿದ್ದು, ಜಲವಾಸಿ ಹಕ್ಕಿಗಳ ಚಾರದಿಫಾರ್ಮ್ಸ್ (Charadriiformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.
ಹೇಗಿರುತ್ತದೆ?
ನೀರು ಹಕ್ಕಿಯಾದರೂ ಸಾಕುಕೋಳಿಯಂತೆ ಕಾಣುತ್ತದೆ. ತಿಳಿಕಂದು, ಕಪ್ಪು ಮತ್ತು ಬಿಳಿ ಬಣ್ಣದ ಪುಕ್ಕ ದೇಹವನ್ನು ಆವರಿಸಿರುತ್ತದೆ. ರೆಕ್ಕೆಗಳು, ಬೆನ್ನು ಮತ್ತು ಬಾಲ ಬಿಳಿ–ಕಪ್ಪು ಮಿಶ್ರಿತ ಬಣ್ಣದಲ್ಲಿದ್ದರೆ, ಉದರ, ಎದೆ, ತಿಳಿಕಂದು ಬಣ್ಣದಲ್ಲಿರುತ್ತದೆ. ದುಂಡಾದ ಮತ್ತು ಹೆಚ್ಚು ನೀಳವಾಗಿರದ ಕತ್ತು ಮತ್ತು ಪುಟ್ಟದಾದ ತಲೆ ಕಪ್ಪು ಮತ್ತು ಬಿಳಿ ಬಣ್ಣದ ಪುಕ್ಕದಿಂದ ಕೂಡಿರುತ್ತವೆ. ಕಣ್ಣುಗಳು ಪುಟ್ಟದಾಗಿದ್ದು, ಸಂಪೂರ್ಣ ಕಪ್ಪುಬಣ್ಣದಲ್ಲಿರುತ್ತವೆ. ಮಧ್ಯಮಗಾತ್ರದ ಕಾಲುಗಳು ತಿಳಿ ಬೂದು ಬಣ್ಣದಲ್ಲಿದ್ದು, ನಾಲ್ಕು ಬೆರಳುಗಳು ಇರುತ್ತವೆ. ಕಪ್ಪು ಬಣ್ಣದ ಕೊಕ್ಕು ನೀಳವಾಗಿದ್ದು ತುದಿಯಲ್ಲಿ ಬಾಗಿರುತ್ತದೆ. ಕೆಳಭಾಗದ ಕೊಕ್ಕು ತಿಳಿಗಂದು ಬಣ್ಣದಲ್ಲಿರುತ್ತದೆ.
ವಾಸಸ್ಥಾನ
ಕೆನಡಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಈ ಹಕ್ಕಿಯ ಸಂತತಿ ವಿಸ್ತರಿಸಿದೆ. ಋತುವಿಗೆ ತಕ್ಕಂತೆ ವಾಸಸ್ಥಾನವನ್ನು ಬದಲಾಯಿಸುತ್ತದೆ. ಕೆಸರಿನಿಂದ ಕೂಡಿದ ಜೌಗು ಪ್ರದೇಶಗಳು, ಹೆಚ್ಚು ಎತ್ತರ ಬೆಳೆಯದ ಹುಲ್ಲುಗಾವಲು ಪ್ರದೇಶ, ನದಿ, ಸರೋವರ, ಕಡಲ ತೀರ ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.
ಜೀವನ ಕ್ರಮ ಮತ್ತು ವರ್ತನೆ
ಇದು ಒಂಟಿಯಾಗಿ ಜೀವಿಸಲು ಇಷ್ಟಪಡುವ ನೀರುಹಕ್ಕಿ. ಹಗಲಿನಲ್ಲಿ ಮಾತ್ರ ಹೆಚ್ಚು ಚುರುಕಾಗಿರುತ್ತದೆ. ಸಂತಾನೋತ್ಪತ್ತಿ ಅವಧಿಯಲ್ಲಿ ಮಾತ್ರ ಸಂಗಾತಿಯೊಂದಿಗೆ ಕೂಡಿ ಬಾಳುತ್ತದೆ. ಪ್ರತಿ ಹಕ್ಕಿ ನಿರ್ದಿಷ್ಟ ಗಡಿ ಗುರುತಿಸಿಕೊಂಡು ವಾಸಿಸುತ್ತದೆ. ಆದರೆ ವಲಸೆ ಹೋಗುವಾಗ ಮಾತ್ರ ಎಲ್ಲವೂ ಕೂಡಿ ಗುಂಪಿನಲ್ಲಿ ಹಾರುತ್ತಾ ಹೋಗುತ್ತವೆ. ವಿವಿಧ ಬಗೆಯ ಶಬ್ದಗಳನ್ನು ಹೊರಡಿಸುತ್ತಾ ಸಂವಹನ ನಡೆಸುತ್ತವೆ.
ಆಹಾರ
ಇದು ಮಿಶ್ರಾಹಾರಿ ಹಕ್ಕಿ. ಹುಲ್ಲುಗಾವಲು ಪ್ರದೇಶದಲ್ಲಿದ್ದಾಗ ವಿವಿಧ ಬಗೆಯ ಕೀಟಗಳನ್ನು ಭಕ್ಷಿಸುತ್ತದೆ. ವಿವಿಧ ಬಗೆಯ ಉಭಯವಾಸಿ ಜೀವಿಗಳು, ಮೀನುಗಳು, ಪುಟ್ಟಗಾತ್ರದ ಸರೀಸೃಪಗಳನ್ನು ಹೆಕ್ಕಿ ತಿನ್ನುತ್ತದೆ. ಅಪರೂಪಕ್ಕೆ ವಿವಿಧ ಬಗೆಯ ಕಾಳುಗಳು, ಬೆರ‍್ರಿಗಳನ್ನು ತಿನ್ನುತ್ತದೆ.
ಸಂತಾನೋತ್ಪತ್ತಿ
ವಯಸ್ಕ ಹಂತ ತಲುಪಿದ ನಂತರ ರೆಕ್ಕೆಗಳನ್ನು ಅಗಲಿಸಿ, ವಿವಿಧ ಬಗೆಯ ಸದ್ದುಗಳನ್ನು ಹೊರಡಿಸುತ್ತಾ ಗಂಡು ಕರ್ಲೂ ಹೆಣ್ಣು ಕರ್ಲೂ ಗಮನ ಸೆಳೆಯಲು ಪ್ರಯತ್ನಿಸುತ್ತದೆ. ಹೆಣ್ಣಿಗೆ ಇಷ್ಟವಾದರೆ ಜೊತೆಯಾಗುತ್ತದೆ. ಸಾಯುವವರೆಗೂ ಒಂದೇ ಸಂಗಾತಿಯೊಂದಿಗೆ ಕರ್ಲೂ ಬಾಳುತ್ತದೆ.
ಏಪ್ರಿಲ್ ಮಧ್ಯಭಾಗದಿಂದ ಸೆಪ್ಟೆಂಬರ್‌ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಹುಲ್ಲು ಬೆಳೆದಿರುವ ಸುರಕ್ಷಿತ ಪ್ರದೇಶಗಳಲ್ಲಿ ನೆಲದ ಮೇಲೆಯೇ ಇದು ಗೂಡು ಕಟ್ಟುತ್ತದೆ. ಪರಭಕ್ಷಕ ಜೀವಿಗಳಿಂದ ರಕ್ಷಿಸಿಕೊಳ್ಳಲು ವಿವಿಧ ವಸ್ತುಗಳನ್ನು ಬಳಸಿಕೊಂಡು ಗೂಡಿನ ಸುತ್ತ ಕೋಟೆ ನಿರ್ಮಿಸುತ್ತದೆ.
ಹೆಣ್ಣು ಕರ್ಲೂ ನಾಲ್ಕು ಮೊಟ್ಟೆಗಳನ್ನು ಇಟ್ಟು, ಹಗಲಿನಲ್ಲಿ ಕಾವುಕೊಟ್ಟರೆ, ಗಂಡು ಕರ್ಲೂ ರಾತ್ರಿಯಲ್ಲಿ ಕಾವು ಕೊಡುತ್ತದೆ. ಸುಮಾರು 30 ದಿನಗಳ ವರೆಗೆ ಕಾವು ಕೊಟ್ಟ ನಂತರ ಮರಿಗಳು ಮೊಟ್ಟೆಯೊಡೆದು ಹೊರಬರುತ್ತವೆ. ಸುಮಾರು ಎರಡು ವಾರಗಳ ವರೆಗೆ ಕಾಳಜಿ ವಹಿಸಿ ಹೆಣ್ಣುಹಕ್ಕಿಯೇ ಮರಿಗಳನ್ನು ಬೆಳೆಸುತ್ತದೆ. ಸಂಪೂರ್ಣವಾಗಿ ಪುಕ್ಕ ಮೂಡಲು 6–8 ವಾರಗಳು ಬೇಕಾಗುತ್ತವೆ. ಅಲ್ಲಿಯವರೆಗೆ ವಿವಿಧ ಬಗೆಯ ಕೀಟಗಳನ್ನು ಮರಿಗಳಿಗೆ ತಾಯಿ ಹಕ್ಕಿ ಉಣಿಸಿ ಬೆಳೆಸುತ್ತದೆ. 3ರಿಂದ 4 ವರ್ಷಗಳ ನಂತರ ಮರಿಗಳು ವಯಸ್ಕ ಹಂತ ತಲುಪುತ್ತವೆ.
ಸ್ವಾರಸ್ಯಕರ ಸಂಗತಿಗಳು
* ಬಾಗಿದ ಮತ್ತು ನೀಳವಾದ ಕೊಕ್ಕು ಹೊಂದಿರುವುದರಿಂದ ಇದೇ ಅರ್ಥವನ್ನು ನೀಡುವ ಗ್ರೀಕ್‌ನ ನ್ಯೂಮಿನಿಯಸ್ ಪದವನ್ನು ಈ ಹಕ್ಕಿಯ ವೈಜ್ಞಾನಿಕ ಹೆಸರಲ್ಲಿ ಸೇರಿಸಲಾಗಿದೆ.
* ಅಗತ್ಯವಿದ್ದಾಗ ನೀರಿನಲ್ಲಿ ವೇಗವಾಗಿ ಈಜುತ್ತದೆ.
* ನೀಳವಾದ ಕೊಕ್ಕು ಇರುವುದರಿಂದ ಬಿಲಗಳಲ್ಲಿ ಅಡಗಿರುವ ಏಡಿಗಳು, ಮೃದ್ವಂಗಿಗಳನ್ನು ಸುಲಭವಾಗಿ ಹೆಕ್ಕುತ್ತದೆ.
* ಕೊಕ್ಕನ್ನು ಬಳಸಿಕೊಳ್ಳಲು ವಿಶೇಷ ಅಂಗವಿದ್ದು, ಬೆರಳಿನಂತೆಯೇ ಉಪಯೋಗಿಸಿಕೊಳ್ಳುತ್ತದೆ.
* ಇದರ ಗುಂಪನ್ನು ಕರ್ಫ್ಯೂ, ಗೇಮ್, ಹೆಡ್, ಸ್ಕೀನ್, ಸಲೊನ್ ಎಂದು ಕರೆಯುತ್ತಾರೆ.
* ಗಂಡಿಗಿಂತ ಹೆಣ್ಣು ಕರ್ಲೂ ಕೊಕ್ಕು ಹೆಚ್ಚು ನೀಳವಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.