ADVERTISEMENT

ಚೆಲ್ವಿಯ ಕರುಳಿನ ಕೂಗು!

ಚಂದ್ರಹಾಸ ಕೋಟೆಕಾರ್
Published 16 ಆಗಸ್ಟ್ 2018, 19:30 IST
Last Updated 16 ಆಗಸ್ಟ್ 2018, 19:30 IST
ಶ್ವಾನ ಚೆಲ್ವಿಯ ಸಂಸಾರ–ಪ್ರಜಾವಾಣಿ ಚಿತ್ರ/ಚಂದ್ರಹಾಸ ಕೋಟೆಕಾರ್‌
ಶ್ವಾನ ಚೆಲ್ವಿಯ ಸಂಸಾರ–ಪ್ರಜಾವಾಣಿ ಚಿತ್ರ/ಚಂದ್ರಹಾಸ ಕೋಟೆಕಾರ್‌   

ಚೆಲ್ವಿಗೆ ತನ್ನ ಒಡಲಲ್ಲಿ ಹೊತ್ತಿ ಉರಿಯುುತ್ತಿದ್ದ ಬೆಂಕಿಯ ಸಂಕಟ, ನೋವು, ದುಃಖ ತಾಳಲಾರದೆ ಚಡಪಡಿಸುತ್ತಿದ್ದಳು. ಪಕ್ಕ ಇದ್ದವರ ಕಾಲ ಬಳಿ ಹೋಗಿ ಒಂದೇ ಸಮನೇ ತನ್ನ ಅಳಲು ತೋಡಿಕೊಳ್ಳುತ್ತಿದ್ದಳು. ಅವಳಿಗೆ ಏನೂ ಹೇಳಲು ತೋಚುತ್ತಿರಲಿಲ್ಲ. ಅವಳ ಮನಸ್ಸು ಜರ್ಜರಿತಗೊಂಡಿತ್ತು. ಅವಳ ನೋವಿಗೂ ಒಂದು ಕಾರಣ ಇತ್ತು. ಮನಸ್ಸಿನ ನೋವನ್ನು ಸಹಿಸಲಾರದ ಸಂಕಟ ಅವಳ ಮುಖದಲ್ಲಿ ಮಡುಗಟ್ಟಿತ್ತು.

ನಗರದ ಪುರಭವನದ ಕ್ಯಾಂಟೀನ್‌ ಪಕ್ಕ ಚೆಲ್ವಿ ಕಾಯಂ ವಾಸ. ನಾಲ್ಕೈದು ವರ್ಷಗಳಿಂದ ಆಕೆ ಅಲ್ಲಿಯೇ ಇದ್ದಾಳೆ. ಚೆಲ್ವಿಗೆ ಆಕೆಯಷ್ಟೇ ಮುದ್ದಾದ ನಾಲ್ಕು ಮರಿಗಳಿವೆ. ಮೈಯೆಲ್ಲಾ ಕಣ್ಣಾಗಿ ಕಾಯ್ದರೂ ಎಲ್ಲ ಮಕ್ಕಳನ್ನು ಉಳಿಸಿಕೊಳ್ಳಲು ಅವಳಿಂದ ಸಾಧ್ಯ ಆಗಲಿಲ್ಲ. ಮೆತ್ತನೆಯ ಹತ್ತಿಯಂತಿದ್ದ ಮುದ್ದಾದ ಮರಿಗಳು ಅನ್ಯರ ಪಾಲಾಗಿವೆ. ನಾಲ್ಕು ಮಕ್ಕಳಲ್ಲಿ ಅವಳ ಪಾಲಿಗೆ ದಕ್ಕಿದ್ದು ಒಂದೇ ಮಗು. ಆ ಮಗು ಚೆಲ್ವಿಯ ಜೀವ.

ಚೆಲ್ವಿ ಹುಟ್ಟಿ ಬೆಳೆದಿದ್ದು ಪುರಭವನದ ಬಳಿ. ಸುಂದರವಾಗಿ ಇದ್ದ ಮರಿಗೆ ‘ಚೆಲ್ವಿ’ ಅಂಥ ಹೆಸರು ಇಟ್ಟಿದ್ದು ಕ್ಯಾಂಟೀನ್‌ ಪಕ್ಕದಲ್ಲಿರುವ ರಂಗ ತಾಲೀಮು ಕಲಾವಿದ ಪದ್ದಣ್ಣ. ಅವಳ ಅಂದಕ್ಕಿಟ್ಟ ಹೆಸರು ಅದಾಗಿತ್ತು. ಪುರಭವನಕ್ಕೆ ಬರುವ ಎಲ್ಲರಿಗೂ ಚೆಲ್ವಿ ಚಿರಪರಿಚಿತೆ. ಅಲ್ಲಿಗೆ ಬರುವ ಎಲ್ಲರ ಬಾಯಲ್ಲಿ ಮೊದಲು ಬರುವ ಹೆಸರೇ ಚೆಲ್ವಿ. ಆಕೆಯ ಹೊಟ್ಟೆಪಾಡಿಗೂ ತೊಂದರೆ ಆಗುತ್ತಿರಲಿಲ್ಲ. ಯಾರಾದರೂ ಒಬ್ಬರು ಊಟ ಉಪಾಹಾರ ತಂದು ಕೊಡುತ್ತಿದ್ದರು.

ADVERTISEMENT

ಆಕೆಯ ರೂಪಕ್ಕೆ, ತೋರುತ್ತಿದ್ದ ಪ್ರೀತಿಗೆ ಸೋಲದವರೇ ಇಲ್ಲ. ಎಲ್ಲರೂ ಮುದ್ದು ಮಾಡುವವರೇ. ಅವಳ ಸ್ವಭಾವವೇ ಹಾಗೆ. ಆಕೆ ಯಾರಿಗೂ ಗುರ್ ಎಂದ ನಿದರ್ಶನ ಇಲ್ಲ. ಬಾಲ ಅಲ್ಲಾಡಿಸುತ್ತ ಎಲ್ಲರ ಹಿಂದೆ ಸುತ್ತುವ ಅವಳಿಗೆ ಬಂದವರು ತಲೆ ಸವರಿದರೆ ಸಾಕು, ಕಣ್ಣು ತುಂಬಾ ಅವರನ್ನು ನೋಡುತ್ತ ಅವರ ಹಿಂದೆ–ಮುಂದೆ ಇರುತ್ತಾಳೆ. ಸರ್‌.ಪುಟ್ಟಣ್ಣ ಚೆಟ್ಟಿ ಪುರಭವನ ಪ್ರತಿಭಟನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕಾಯಂ ತಾಣ. ಸದಾ ಜನಸಂದಣಿ, ವಾಹನಗಳ ಓಡಾಟಗಳ ಜಂಜಾಟದಲ್ಲಿ ತನ್ನ ತುಂಟ ಮಗುವಿಗೆ ಏನೂ ತೊಂದರೆ ಆಗದಂತೆ ನಿಭಾಯಿಸುವ ಆತಂಕ ಸದಾ ಚೆಲ್ವಿಯ ಮೇಲಿತ್ತು. ಚೆಲ್ವಿಯ ಮಗು ಎಂಬ ಅಕ್ಕರೆಯಿಂದ ಈ ತುಂಟ ಮರಿಯ ಬಗ್ಗೆಯೂ ಎಲ್ಲರೂ ಕಾಳಜಿ ತೋರುತ್ತಿದ್ದರು.

ಅದೊಂದು ದಿನ ಮಧ್ಯಾಹ್ನದ ಬಿಸಿಲ ಝಳ ಹೆಚ್ಚಿತ್ತು. ನೆರಳನ್ನು ಅರಸಿ ಚೆಲ್ವಿ ತನ್ನ ಮಗುವಿನೊಂದಿಗೆ ಕ್ಯಾಂಟೀನ್‌ ಎದುರು ನಿಲ್ಲಿಸಿದ್ದ ಕಾರಿನ ಅಡಿ ಮಲಗಿದ್ದಳು. ಆಗ ನಡೆದ ಅವಘಡ ಚೆಲ್ವಿಯ ಜೀವನದಲ್ಲಿ ದುರಂತಕ್ಕೆ ಕಾರಣವಾಗಿತ್ತು. ಕಾರಿನ ಹಿಂದಿನ ಚಕ್ರ ಚೆಲ್ವಿಯ ಮಗುವಿನ ಕಾಲುಗಳ ಮೇಲೆ ಹಾದು ಹೋಗಿತ್ತು. ಚೆಲ್ವಿ ಆ ಕ್ಷಣಕ್ಕೆ ಕಾರನ್ನು ಅಟ್ಟಿಸಿಕೊಂಡು ಹೋದಳು. ಆದರೂ ಪ್ರಯೋಜನ ಆಗಲಿಲ್ಲ.

ಮರಳಿ ಬಂದ ಚೆಲ್ವಿಯ ಮೊಗದಲ್ಲಿ ನೋವು, ಆತಂಕ ಇತ್ತು. ಮಗುವಿನ ಅಳು, ಸಂಕಟ ನೋಡದೆ ಕಣ್ಣೀರು ಸುರಿಸಿದ ಚೆಲ್ವಿ ಒಮ್ಮೆ ತನ್ನ ಮಗುವನ್ನು, ಮತ್ತೊಮ್ಮೆ ಕಾರು ಹೋದ ದಿಕ್ಕನ್ನು ನೋಡುವುದು. ಮರಿಯ ಕೂಗಾಟ ಕೇಳಿ ಅಲ್ಲಿ ನೆರೆದವರತ್ತ ಸಹಾಯಕ್ಕಾಗಿ ಚೆಲ್ವಿ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಿದ್ದ ದೃಶ್ಯ ಎಂಥ ಕಟುಕರ ಮನವನ್ನಾದರೂ ಕಲುಕುವಂತಿತ್ತು. ಅಲ್ಲಿದ್ದವರ ಎದುರು ತನ್ನ ಎರಡು ಮುಂಗಾಲು ಮೇಲೆತ್ತಿ ಸಹಾಯಕ್ಕೆ ಒಂದೇ ಸಮನೆ ಅಂಗಲಾಚುವ, ಮೊರೆ ಇಡುವ ಆ ಮೂಕಪ್ರಾಣಿಯ ವೇದನೆ, ಮಗುವಿನ ಮೇಲಿನ ಪ್ರೀತಿ ಎಲ್ಲರ ಕಣ್ಣಾಲಿಗಳಲ್ಲಿ ನೀರು ತರಿಸಿತ್ತು.

ನಗರ ಧಾವಂತದ ಜೀವನಕ್ಕೆ ಸಿಕ್ಕ ಜನ ‘ಅಯ್ಯೋ ಪಾಪ...’ ಎಂದು ಮರುಕ ವ್ಯಕ್ತಪಡಿಸಿ ಮುಂದೆ ಹೋಗುತ್ತಿದ್ದರು. ಅಂಗ ಊನವಾದ ತನ್ನ ಮರಿಯನ್ನು ಚೆಲ್ವಿಯ ತನ್ನ ಬೆನ್ನಿಗೆ ಕಟ್ಟಿಕೊಂಡು ತಿರುಗುತ್ತಿದ್ದಾಳೆ. ಈಗ ಹಿಂದೆಂದಿಗಿಂತಲೂ ಹೆಚ್ಚು ಜಾಗರೂಕಳಾಗಿದ್ದಾಳೆ. ಮರಿಯನ್ನು ವಾಹನಗಳ ಸುತ್ತ ಸುಳಿಯಲು ಬಿಡುತ್ತಿಲ್ಲ. ತನ್ನ ಮಗುವಿನ ಕಾಲು ಕಳೆದ ಕಾರುಗಳನ್ನು ಕಂಡರೆ ಆಕೆಗೆ ಎಲ್ಲಿಲ್ಲದ ಕೋಪ. ಕಾರು ಕಂಡರೆ ಗುರ್ ಎನ್ನುತ್ತಾಳೆ. ಕಣ್ಣು ಕೆಂಪಗಾಗುತ್ತವೆ. ಕಾರುಗಳ ಶಬ್ದಕೇಳಿದರೆ ಸಾಕು ಬೆಚ್ಚಿ ಬೀಳುತ್ತಾಳೆ. ರೊಚ್ಚಿಗೇಳುತ್ತಾಳೆ. ಯಾವ ಕಾರು ಬಂದರೂ ಸರಿ ಅಟ್ಟಿಸಿಕೊಂಡು ಹೋಗುತ್ತಾಳೆ. ಪಾಪ, ತನ್ನ ಮಗುವಿನ ಮೇಲೆ ಗಾಲಿ ಹರಿಸಿದ ಕಾರು ಯಾವುದು ಎಂದು ಆಕೆಗೆ ಹೇಗೆ ಗೊತ್ತಾಗಬೇಕು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.