ಪವನ್ ಕುಮಾರ್ ಎಚ್.
ಆಗುಂಬೆ: ಜೂನ್ ಆರಂಭದೊಂದಿಗೆ ಭಾರತದಲ್ಲಿ ಮುಂಗಾರು ಕೂಡ ಆರಂಭವಾಗುವುದು ವಾಡಿಕೆ. ಆದರೆ, ಈ ಬಾರಿ ವಿಳಂಬವಾಗಿ ಬಂದ ಮುಂಗಾರು ಕೃಷಿರಂಗದ ಮೇಲೆ ಮಾತ್ರವಲ್ಲದೇ, ಪಶ್ಚಿಮ ಘಟ್ಟದಲ್ಲಿ ನೆಲೆಯಾಗಿರುವ ಜೀವಿಗಳ ಜೀವನ ಚಕ್ರದ ಮೇಲೂ ಗಂಭೀರ ಪರಿಣಾಮವನ್ನು ಬೀರಿದೆ!
ಕರ್ನಾಟಕದ ಪಶ್ಚಿಮ ಘಟ್ಟಕ್ಕೆ ಜೂನ್ ತಿಂಗಳ ಮೊದಲ ಹದಿನೈದು ದಿನಗಳಲ್ಲಿಯೇ ಮುಂಗಾರು ಪ್ರವೇಶವಾಗುವುದು ವಾಡಿಕೆ. ಅದರೊಂದಿಗೆ ನದಿ, ತೊರೆ, ಹಳ್ಳಗಳು ತುಂಬಿ ಹರಿಯುತ್ತವೆ. ಕಪ್ಪೆಗಳ ಸಂತಾನೋತ್ಪತ್ತಿಗೆ ಇಂಥ ಪರಿಸರ ಪ್ರಶಸ್ತ. ಆದರೆ, ಈ ಋತುವಿನಲ್ಲಿ ಮಳೆಯಿಲ್ಲದೇ, ನೀರಿಲ್ಲದೇ ಕಪ್ಪೆಗಳ ಸಂತಾನೋತ್ಪತ್ತಿಗೆ ತೀವ್ರ ತೊಡಕುಂಟಾಗಿದೆ ಎಂದು ಪರಿಸರ ತಜ್ಞರು ಹೇಳುತ್ತಾರೆ.
ಜೂನ್ ಕೊನೆ ವಾರದಲ್ಲಿ ಪಶ್ಚಿಮ ಘಟ್ಟಪ್ರದೇಶಗಳಲ್ಲಿ ಭಾರಿ ಮಳೆಯಾಯಿತು. ಆಗ ಕಪ್ಪೆಗಳು ಇಟ್ಟ ಮೊಟ್ಟೆಗಳು ಜುಲೈ ಮೊದಲ ವಾರದ ಅತ್ಯಲ್ಪ ಮಳೆಯಿಂದಾಗಿ ನಾಶವಾಗಿವೆ ಎಂದೂ ಅವರು ವಿವರಿಸುತ್ತಾರೆ.
ವೈವಿಧ್ಯಮಯ ಕಪ್ಪೆ, ಹಾವುಗಳಿಗೆ ಪಶ್ಚಿಮ ಘಟ್ಟ ನೆಲೆವೀಡು. ಗಮನಿಸಬೇಕಾದ ಅಂಶವೆಂದರೆ ಈ ವರ್ಷ ಹಲವು ಬಗೆಯ ಕಪ್ಪೆಗಳು ಮತ್ತು ಹಾವುಗಳು ಈ ವರೆಗೆ ಅವುಗಳ ಆವಾಸ ಸ್ಥಾನದಲ್ಲಿಯೇ ಕಾಣಿಸಿಲ್ಲ. ತಮ್ಮ ಚಟುವಟಿಕೆಗಳ ಕುರುಹು ತೋರಿಸಿಲ್ಲ.
ಕರ್ನಾಟಕದಲ್ಲಿ ಕಪ್ಪೆಗಳ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುವ ಹಲವು ಸ್ಥಳಗಳಲ್ಲಿ ಸಂತಾನೋತ್ಪತ್ತಿ ಚಟುವಟಿಕೆ ಕುಸಿತಗೊಂಡಿದೆ ಎಂದು ಕಪ್ಪೆಗಳ ಕುರಿತು ಅಧ್ಯಯನ ನಡೆಸಿರುವ ಗುರುರಾಜ ಕೆ. ವಿ. ಹೇಳುತ್ತಾರೆ. ನೈಸರ್ಗಿಕ ಆವಾಸಸ್ಥಾನಗಳಲ್ಲಿಯೇ ಕಪ್ಪೆಗಳ ಮಿಲನ ಕರೆ ಕೇಳಿಸುತ್ತಿಲ್ಲ ಎಂದೂ ಅವರು ವಿವರಿಸುತ್ತಾರೆ.
ಕಪ್ಪೆಗಳ ಜೀವನ ಚಕ್ರದಲ್ಲಿ ಮುಂಗಾರು ಋತು ಪ್ರಮುಖ ಪಾತ್ರ ವಹಿಸುತ್ತದೆ. ಮಿಲನ ಕ್ರಿಯೆಗೆ ಮತ್ತು ಮೊಟ್ಟೆ ಇಡುವ ಕ್ರಿಯೆಗೆ ಮುಂಗಾರಿನ ಋತು ಸಕಾಲ. ಪಶ್ಚಿಮ ಘಟ್ಟದ ಕುಂಬಾರ ನೈಟ್, ಜೊಗ್ ನೈಟ್, ಮಲಬಾರ್ ಟ್ರೀ, ಬುಲ್, ಕ್ಯಾಸಲ್‌ರಾಕ್ ನೈಟ್ ಪ್ರಭೇದಗಳು ಮತ್ತು ಇತರ ಪ್ರಭೇದಗಳ ಕಪ್ಪೆಗಳ ಮೊಟ್ಟೆಗಳು ತೊರೆಗಳಲ್ಲಿ ನೀರಿದ್ದರೆ ಮಾತ್ರ ಉಳಿದುಕೊಳ್ಳಲು ಸಾಧ್ಯ.
‘ಕಳೆದ ವರ್ಷಕ್ಕೆ ಹೋಲಿಸಿದರೆ ನಮ್ಮ ಸಂಶೋಧನಾ ಕ್ಷೇತ್ರದಲ್ಲಿ ಮಲಬಾರ್ ಪಿಟ್ ವೈಪರ್ ಹಾವುಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ಆಗುಂಬೆಯಲ್ಲಿ ಈ ಬಾರಿಯ ಮುಂಗಾರು ಹಿಂದಿನದಕ್ಕಿಂತಲೂ ಭಿನ್ನವಾಗಿದೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ ಮಳೆ ಆಗಿರಲಿಲ್ಲ. ಕಪ್ಪೆ, ಹಾವುಗಳ ಸಂತಾನೋತ್ಪತ್ತಿಗೆ ಪೂರ್ವ ಮುಂಗಾರೂ ಕೂಡ ಮುಖ್ಯ. ಇದರ ಜತೆಗೆ ವಿಳಂಬವಾಗಿ ಬಂದ ಮುಂಗಾರು ಅವುಗಳ ಸಂತಾನೋತ್ಪತ್ತಿ ಚಕ್ರದಲ್ಲಿ ಗೊಂದಲ ಉಂಟು ಮಾಡಿದೆ’ ಎಂದು ಆಗುಂಬೆಯ ಕಾಳಿಂಗ ಮಳೆಕಾಡು ಪರಿಸರ ವಿಜ್ಞಾನ ಕೇಂದ್ರದ ಸಂಶೋಧಕಿ ಪ್ರಿಯಾಂಕಾ ಸ್ವಾಮಿ ಹೇಳುತ್ತಾರೆ. ಮಳೆಗಾಲದಲ್ಲಿ ಸಕ್ರಿಯವಾಗಿರುವ ಮಲಬಾರ್ ಪಿಟ್ ವೈಪರ್‌ಗಳ ಟೆಲಿಮೆಟ್ರಿಕ್ ಅಧ್ಯಯನದಲ್ಲಿ ಪ್ರಿಯಾಂಕಾ ಸ್ವಾಮಿ ಅವರ ತಂಡ ತೊಡಗಿಸಿಕೊಂಡಿದೆ.
ಈ ಋತುವಿನಲ್ಲಿ ಹಲವು ಬಗೆಯ ಹಾವುಗಳು ಅವುಗಳ ಆವಾಸಸ್ಥಾನದಲ್ಲೇ ಕಾಣಿಸಿಲ್ಲ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸುತ್ತಾರೆ.
‘ಜೂನ್ ಮೊದಲ ವಾರದ ವೇಳೆಗಾಗಲೇ ಶೀಲ್ಡ್‌ಟೈಲ್ ಹಾವುಗಳು, ಸ್ಯಾಂಡ್ ಬೋವಾ ಮತ್ತು ಇತರ ಹಾವುಗಳು ಕಾಣಿಸಬೇಕಾಗಿತ್ತು. ಈಗಾಗಲೇ ಅಗಸ್ಟ್ ಬಂದಿದೆ. ಆದರೆ, ಹಾವುಗಳು ಕಾಣಿಸುವುದೇ ಅಪರೂಪವಾಗಿದೆ. ಕಪ್ಪೆಗಳ ಜೀವನ ಚಕ್ರದಲ್ಲಾಗಿರುವ ಬದಲಾವಣೆಯು, ಅವುಗಳನ್ನು ತಿಂದು ಬದುಕುವ ಈ ಹಾವುಗಳ ಮೇಲೆ ಪರಿಣಾಮ ಬೀರಿರಬಹುದು’ ಎಂದು ಹುಣಸೂರು ಮೂಲದ ಉರಗತಜ್ಞ ಗೆರ‍್ರಿ ಮಾರ್ಟಿನ್ ಹೇಳುತ್ತಾರೆ.
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪರಿಸರ ವಿಜ್ಞಾನ ಕೇಂದ್ರದ (ಸಿಇಎಸ್) ಕಾರ್ತಿಕ್ ಸುಣಗಾರ್, ‘ಪಶ್ಚಿಮ ಘಟ್ಟಗಳಲ್ಲಿನ ಅನಿಯಮಿತ ಮಳೆಯು ಸ್ಥಳೀಯ ಹಾವುಗಳ ಮೇಲೆ ತಕ್ಷಣದ ಪರಿಣಾಮಗಳನ್ನು ಬೀರಿದೆ. ಅನಿಶ್ಚಿತ ಮಳೆಯು ಹೀಗೇ ಹಲವು ವರ್ಷ ಮುಂದುವರಿದರೆ ಅದು ಪರಿಸರ ವಿಜ್ಞಾನದ ಮೇಲೂ ದೊಡ್ಡ ಪರಿಣಾಮಗಳನ್ನು ಬೀರಬಹುದಾದ ಆತಂಕವಿದೆ’ ಎಂದು ವಿಶ್ಲೇಷಿಸುತ್ತಾರೆ.
‘ಈ ಬೆಳವಣಿಗೆಯು ಇಡೀ ಆಹಾರ ಸರಪಳಿಯ ಮೇಲೆ ಪರಿಣಾಮ ಬೀರುತ್ತದೆ’ ಎಂದು ಗುರುರಾಜ ಹೇಳುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ವಿಭಾಗದಲ್ಲಿ ಕಪ್ಪೆಗಳ ಕುರಿತು ಅಧ್ಯಯನ ನಡೆಸಿರುವ ಓಂಕಾರ ಪೈ, ‘ಈ ಬಾರಿಯ ಮಳೆಗಾಲದಲ್ಲಿ ಕಪ್ಪೆಗಳ ಚಟುವಟಿಕೆ ತೀವ್ರವಾಗಿ ಇಳಿಮುಖವಾಗಿದೆ. ಕೆಲವೇ ಕಪ್ಪೆಗಳ ಸದ್ದು ಮಾತ್ರ ಈ ವರೆಗೆ ಕೇಳಿಬಂದಿದೆ. ಕಪ್ಪೆಗಳ ಸದ್ದಿನಲ್ಲಿನ ವೈವಿಧ್ಯ ಮಾತ್ರವಲ್ಲದೆ ಸಂಖ್ಯೆಯಲ್ಲೂ ಕುಸಿತವಾಗಿದೆ‘ ಎಂದು ಪರಿಸರದಲ್ಲಿನ ಬೆಳವಣಿಗೆಗಳಿಗೆ ಕನ್ನಡಿ ಹಿಡಿಯುತ್ತಾರೆ.
ಆಗಸ್ಟ್‌ನಲ್ಲಿಯೂ ಮಳೆ ಕೊರತೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಇದು ಪರಿಸರದ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.