ಪರ್ಡಿಕುಲಾ ಏಷ್ಯಾಟಿಕಾ ಎಂಬ ವೈಜ್ಞಾನಿಕ ಹೆಸರುಳ್ಳ ಇದನ್ನು ಲಾವಕ್ಕಿ ಅಥವಾ ಕಾಡುಬುರ್ಲಿ ಎಂದು ಕರೆಯುವುದು ರೂಢಿ. ಅಂಜುಬುರುಕ ಹಕ್ಕಿಗಳ ಜಾತಿಗೆ ಸೇರಿದ ಇವು ಭಾರತವಷ್ಟೇ ಅಲ್ಲದೇ ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲೂ ಕಂಡುಬರುತ್ತವೆ. ಬಯಲುಗಳಲ್ಲಿ ಓಡಾಡುವ ಈ ಪುಟ್ಟ ಹಕ್ಕಿಯ ಗಾತ್ರ ಗುಬ್ಬಚ್ಚಿಯಷ್ಟೇ ಸಣ್ಣದು. ಕೆಲವು ಪ್ರದೇಶದ ಬುರ್ಲಿಗಳು ಗುಬ್ಬಚ್ಚಿಗಿಂತ ಚಿಕ್ಕದಾಗಿರುವುದೂ ಉಂಟು. 15 ರಿಂದ 20 ಸೆಂಟಿಮೀಟರುಗಳಷ್ಟು ಉದ್ದವುಳ್ಳ ಈ ಹಕ್ಕಿಗಳು ಸರಾಸರಿ 60 ರಿಂದ 90 ಗ್ರಾಂಗಳಷ್ಟು ತೂಗಬಲ್ಲವು.
ಪೊದೆಗಳೇ ಆಶ್ರಯತಾಣ
ಈ ಕಾಡುಬುರ್ಲಿಗಳ ಮೈಯ ಗರಿಗಳು ಕಂದು ಮತ್ತು ಬೂದುಬಣ್ಣದವು. ಅವುಗಳ ಓಡಾಟಕ್ಕೆ ತೆರವಾದ ಜಾಗ ಬೇಕಾದರೂ, ಬೆದರಿದಾಗ ಅಡಗಿಕೊಳ್ಳಲು ಪೊದೆಗಳ ಮರೆಯೂ ಬೇಕು. ಅಪಾಯ ಎದುರಾದಾಗ ಹಾರುವ ಬದಲು ಓಡಿಯೇ ಹೋಗಿ ಪೊದೆಯಲ್ಲಿ ಅವಿತುಕೊಳ್ಳುತ್ತವೆ. ತೀರ ಚಿಕ್ಕದಾದ ಬಾಲವುಳ್ಳ, ದುಂಡು ಶರೀರದ ಈ ಹಕ್ಕಿ ನೆಲದ ಮೇಲೆ ಸರಸರನೆ ವೇಗವಾಗಿ ಅಲೆದಾಡುತ್ತದೆ. ಹಾರಬಲ್ಲುದಾದರೂ ನಡೆದಾಡುವುದೇ ಹೆಚ್ಚು. ಕೋಳಿಗಳಂತೆ ನೆಲದಲ್ಲಿ ಸಿಗುವ ಕೀಟಗಳನ್ನು, ಲಾಡಿಹುಳು, ಕೊಕ್ಕೆಹುಳು, ಹುಲ್ಲಿನಲ್ಲಿನ ಹುಳುಗಳನ್ನು ಮತ್ತು ಬೇಳೆಕಾಳುಗಳನ್ನೂ ಸೇವಿಸುತ್ತವೆ.
ರಂಗು ರಂಗಿನ ದೇಹ
ನೋಟಕ್ಕೆ ಒಂದೇ ಗಾತ್ರದಂತೆ ಕಂಡುಬರುವ ಇವುಗಳ ರೆಕ್ಕೆಗಳು ವಿವಿಧ ವರ್ಣಗಳಿಂದ ಕೂಡಿದ್ದು, ತಲೆಯು ಕಂದುಮಿಶ್ರಿತ ಕೆಂಪು ಬಣ್ಣ ಹೊಂದಿದೆ. ನೆತ್ತಿಯ ಭಾಗವು ಬಣ್ಣಬಣ್ಣದ ಮಚ್ಚೆಯಂತೆ ಕಾಣುತ್ತದೆ. ಹಿಂಭಾಗವು ಕಪ್ಪು, ಹಳದಿ ಪಟ್ಟಿಗಳನ್ನು ಹೊಂದಿರುತ್ತದೆ. ಹೊಟ್ಟೆಯ ಭಾಗವು ಬಿಳಿ ಮಿಶ್ರಿತ ಕಂದುಬಣ್ಣದಿಂದ ಕೂಡಿದ್ದು ಅದರ ಮೇಲೆ ಕರೀ ಪಟ್ಟಿಗಳನ್ನು ಕಾಣಬಹುದಾಗಿದೆ.
ಸಂತಾನೋತ್ಪತ್ತಿ
ಕಲ್ಲುಬಂಡೆಗಳಿಂದ ಕೂಡಿದ ಮತ್ತು ಮುಳ್ಳುಗಳಿಂದ ಕೂಡಿದ ಪೊದೆಗಳುಳ್ಳ ಪ್ರದೇಶಗಳನ್ನು ಸಾಕಷ್ಟು ಇಷ್ಟಪಡುವ ಬುರ್ಲಿಗಳು ನೆಲವನ್ನು ಸಮತಟ್ಟು ಮಾಡಿಕೊಂಡು, ತಳದಲ್ಲಿ ಹುಲ್ಲನ್ನು ಹರಡಿ ಗೂಡನ್ನು ನಿರ್ಮಿಸಿಕೊಳ್ಳುತ್ತವೆ. ಸುತ್ತಲೂ ಪೊದೆಯನ್ನೇ ಆಶ್ರಯವನ್ನಾಗಿಸಿಕೊಂಡು ತಾವು ಕಟ್ಟಿದ ಗೂಡಿನಲ್ಲಿ ಒಂದು ಅವಧಿಗೆ 4 ರಿಂದ 8 ಮೊಟ್ಟೆಗಳನ್ನಿಡುವ ಹೆಣ್ಣು ಕಾಡುಬುರ್ಲಿಯು 16 ರಿಂದ 20 ದಿನಗಳವರೆಗೆ ಕಾವುಕೊಟ್ಟು ಮರಿಗಳನ್ನು ಮಾಡುತ್ತದೆ..
ಸಾರ್ವತ್ರಿಕವಾಗಿ ಬೇಟೆಗೆ ತುತ್ತಾಗುತ್ತಿಲ್ಲವಾದರೂ ಸಹ ಪ್ರಾಕೃತಿಕ ವಿಕೋಪ ಮತ್ತು ಆವಾಸಗಳ ನಾಶಕ್ಕೆ ಸಿಲುಕಿ ಐಯುಸಿಎನ್ ಸಂಸ್ಥೆಯ ಅಳಿವಿನಂಚಿನ ಪಕ್ಷಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕಾಡುಬುರ್ಲಿಗಳನ್ನು ಜಪಾನೀಯರು ರುಚಿಯಾದ ಮಾಂಸ ಮತ್ತು ಮೊಟ್ಟೆಗಾಗಿ ಕೋಳಿಗಳನ್ನು ಸಾಕುವಂತೆ ಗೂಡುಗಳಲ್ಲಿ ಸಾಕುತ್ತಾರಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.