ADVERTISEMENT

ಭಾರತದ ಚೀತಾ ಯೋಜನೆಗೆ 2 ವರ್ಷ: ಸಂಖ್ಯೆ ಹೆಚ್ಚಳ ಇನ್‌ಸ್ಟಂಟ್ ಕಾಫಿಯಲ್ಲ– ಯಾದವ್

ಪಿಟಿಐ
Published 14 ಸೆಪ್ಟೆಂಬರ್ 2024, 11:26 IST
Last Updated 14 ಸೆಪ್ಟೆಂಬರ್ 2024, 11:26 IST
<div class="paragraphs"><p>ಚೀತಾ</p></div>

ಚೀತಾ

   

ನವದೆಹಲಿ: ‘ಕೀನ್ಯಾದಿಂದ ಭಾರತಕ್ಕೆ ಚೀತಾಗಳ ಹೊಸ ತಂಡ ಕರೆತರುವ ಯೋಜನೆಯ ಕುರಿತ ಒಡಂಬಡಿಕೆ ಪ್ರಗತಿಯಲ್ಲಿದ್ದು, ಕೀನ್ಯಾದ ಅನುಮತಿಗಾಗಿ ಕಾದಿದ್ದೇವೆ’ ಎಂದು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯಾನ್ಸ್‌ನ ಮಹಾನಿರ್ದೇಶಕ ಎಸ್.ಪಿ. ಯಾದವ್ ತಿಳಿಸಿದ್ದಾರೆ.

ಆಫ್ರಿಕಾ ಖಂಡದಿಂದ ಚೀತಾಗಳನ್ನು ಭಾರತಕ್ಕೆ ಕರೆತರುವ ಯೋಜನೆಗೆ ಇದೇ ಸೆ. 17ಕ್ಕೆ ಎರಡು ವರ್ಷ ಪೂರ್ಣವಾಗಲಿದೆ. ಚೀತಾಗಳ ಅಂತರ ಖಂಡ ಹಸ್ತಾಂತರದ ಯೋಜನೆಯ ಭಾಗವಾಗಿ 20 ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕರೆತರಲಾಗಿತ್ತು. 2022ರ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ ಎಂಟು ಹಾಗೂ 2023ರ ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಿಸಲಾಗಿತ್ತು.

ADVERTISEMENT

ಈವರೆಗೂ 3 ಹೆಣ್ಣು ಹಾಗೂ 5 ಗಂಡು ಸೇರಿದಂತೆ ಒಟ್ಟು ಎಂಟು ವಯಸ್ಕ ಚೀತಾಗಳು ಮೃತಪಟ್ಟಿವೆ. ಭಾರತದಲ್ಲೇ ಹದಿನೇಳು ಮರಿಗಳು ಜನಿಸಿವೆ. ಇವುಗಳಲ್ಲಿ 12 ಬದುಕುಳಿದಿವೆ. ಹೀಗಾಗಿ ಕುನೋಗೆ ಕರೆತರಲಾದ ಚೀತಾಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸೆ. 17ಕ್ಕೆ ಈ ಯೋಜನೆಗೆ ಎರಡು ವರ್ಷ ಪೂರ್ಣಗೊಳ್ಳಲಿದ್ದು, ಸದ್ಯ ಇವೆಲ್ಲವೂ ಸಂರಕ್ಷಿತ ಪ್ರದೇಶದಲ್ಲೇ ಇವೆ. 

'ಆಫ್ರಿಕಾದಿಂದ ಪ್ರತಿ ವರ್ಷ 12ರಿಂದ 14 ಚೀತಾಗಳನ್ನು ಕರೆತರುವ ಯೋಜನೆಯ ಭಾಗವಾಗಿ ಕ್ರಿಯಾ ಯೋಜನೆಯನ್ನು ಮರಳಿ ಜಾರಿಗೆ ತರಲಾಗುತ್ತಿದೆ. ಇದರಲ್ಲಿ ನಮೀಬಿಯಾ ಸೇರಿದಂತೆ ಆಫ್ರಿಕಾ ಖಂಡದ ಇತರ ರಾಷ್ಟ್ರಗಳಿಂದ ಮುಂದಿನ ಐದು ವರ್ಷಗಳಿಗೆ ಯೊಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಒಡಂಬಡಿಕೆ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಭಾರತ ತನ್ನ ಭಾಗವನ್ನು ಪೂರ್ಣಗೊಳಿಸಿದೆ. ಕೀನ್ಯಾ ಸರ್ಕಾರ ಇನ್ನಷ್ಟೇ ಅನುಮತಿ ನೀಡಬೇಕಿದೆ. ಇದಾದ ನಂತರ ಎರಡೂ ಸರ್ಕಾರಗಳು ಒಡಂಬಡಿಕೆಗೆ ಜಂಟಿ ಸಹಿ ಹಾಕಲಿವೆ’ ಎಂದು ತಿಳಿಸಿದ್ದಾರೆ.

ಮರಿಯೊಂದಿಗೆ ಚೀತಾ

ಚೀತಾಗಳ ಸಂಖ್ಯೆ ಹೆಚ್ಚಾದರೆ ಆಫ್ರಿಕಾದಲ್ಲಿ ದಯಾಮರಣ

‘ದಕ್ಷಿಣ ಆಫ್ರಿಕಾದೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ. ಅಲ್ಲಿ ಹೆಚ್ಚುವರಿಯಾಗಿರುವ 12ರಿಂದ 16 ಚೀತಾಗಳನ್ನು ಗುರುತಿಸಲಾಗಿದೆ. ಇವುಗಳನ್ನು ಬೇರೆ ರಾಷ್ಟ್ರಕ್ಕೆ ನೀಡಬೇಕು. ಇಲ್ಲವೇ ಆ ರಾಷ್ಟ್ರ ಅವುಗಳಿಗೆ ದಯಾಮರಣ ನೀಡಬೇಕಾದ ಸ್ಥಿತಿಯಲ್ಲಿದೆ’ ಎಂದು ಯಾದವ್ ಹೇಳಿದ್ದಾರೆ.

‘ದಕ್ಷಿಣ ಆಫ್ರಿಕಾದಲ್ಲಿ ಆಯಾ ಅಭಯಾರಣ್ಯಗಳ ಗಾತ್ರಗಳಿಗೆ ಅನುಗುಣವಾಗಿ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸಲಾಗುತ್ತದೆ. ಒಂದೊಮ್ಮೆ ಅಲ್ಲಿನ ಪ್ರಾಣಿಗಳ ಸಂಖ್ಯೆ ಹೆಚ್ಚಾದಲ್ಲಿ, ಒಂದೋ ಅವುಗಳನ್ನು ಬೇರೆ ರಾಷ್ಟ್ರಗಳಿಗೆ ನೀಡಲಾಗುತ್ತದೆ. ಇಲ್ಲವೇ ದಯಾಮರಣ ನೀಡುವ ಪದ್ಧತಿಯನ್ನು ಪಾಲಿಸಿಕೊಂಡು ಬರಲಾಗಿದೆ. ಪ್ರಾಣಿಗಳ ಸಂಖ್ಯೆ ಹೆಚ್ಚಾದಲ್ಲಿ ಅವುಗಳನ್ನು ಉಳಿಸಿಕೊಳ್ಳಲು ಅವರಿಗೆ ಆಗದು’ ಎಂದು ವಿವರಿಸಿದರು. 

‘ಆಫ್ರಿಕಾದಿಂದ ಚೀತಾಗಳನ್ನು ಭಾರತಕ್ಕೆ ಕರೆತರಲು ಚಳಿಗಾಲ ಅತ್ಯಂತ ಸೂಕ್ತ. ಇವುಗಳಿಗಾಗಿಯೇ ಗುಜರಾತ್‌ನ ಬನ್ನಿ ಬಳಿ ಸಂತಾನೋತ್ಪತ್ತಿ ಕೇಂದ್ರ ತೆರೆಯಲಾಗಿದೆ. ಇದು ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿದ್ದು, 16 ಚೀತಾಗಳನ್ನು ಇರಿಸಲು ಅವಕಾಶವಿದೆ’ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.

ಚೀತಾ

‘ಪವನ್‌’ ಸಾವು ವಿಷ ಪ್ರಾಶನದಿಂದ ನಡೆದಿತ್ತೇ...?

‘ನಮೀಬಿಯಾದಿಂದ ಕರೆತರಲಾದ ಚೀತಾದಲ್ಲಿ ಪವನ್ ಎಂಬ ಚೀತಾ ವಿಷಪ್ರಾಶನದಿಂದ ಕಳೆದ ತಿಂಗಳು ಮೃತಪಟ್ಟಿತ್ತು ಎಂಬ ವರದಿಯನ್ನು ಯಾದವ್ ಅಲ್ಲಗಳೆದರು. ಪ್ರಾಣಿಯ ಜೊಲ್ಲು ಹಾಗೂ ದೇಹದ ಇತರ ಭಾಗಗಳಲ್ಲಿ ವಿಷದ ಪ್ರಮಾಣ ಪತ್ತೆಯಾಗಿಲ್ಲ. ಅವೆಲ್ಲವೂ ಊಹಾಪೋಹ’ ಎಂದು ಸ್ಪಷ್ಟಪಡಿಸಿದರು.

‘ಪವನ್ ಎಂಬ ಚಿರತೆಯು ಪ್ರವಾಹದಲ್ಲಿ ಮುಳುಗಿ ಮೃತಪಟ್ಟಿರುವ ಲಕ್ಷಗಳಿವೆ. ಆದರೆ ವಿಷ ಉಣಿಸಿರುವುದು ಖಾತ್ರಿಯಾಗಿಲ್ಲ. ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಶ್ವಾಸಕೋಶದಲ್ಲಿ ನೀರು ತುಂಬಿರುವುದನ್ನು ಖಾತ್ರಿಪಡಿಸಿದ್ದಾರೆ. ಅದರ ಸಾವು ನಿಜಕ್ಕೂ ದುರದೃಷ್ಟಕರ’ ಎಂದಿದ್ದಾರೆ.

ಕುನೋ ರಾಷ್ಟ್ರೀಯ ಉದ್ಯಾನ ಹಾಗೂ ಗಾಂಧಿ ಸಾಗರ್ ವನ್ಯಜೀವಿಗಳ ತಾಣದಲ್ಲಿ ಚೀತಾಕ್ಕೆ ಬೇಟಿಯಾಡಲು ಕಡಿಮೆ ಸಂಖ್ಯೆಯ ಪ್ರಾಣಿಗಳಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಯಾದವ್, ‘ಯಾವುದೇ ಪ್ರದೇಶವಾಗಲಿ ಅಲ್ಲಿರುವ ಇತರ ಪ್ರಾಣಿಗಳ ಸಂಖ್ಯೆಯನ್ನು ಆಧರಿಸಿಯೇ ಚೀತಾಗಳಿರುತ್ತವೆ. ಒಂದೊಮ್ಮೆ ಬೇಟೆಯ ಪ್ರಾಣಿಗಳ ಸಂಖ್ಯೆ ಕಡಿಮೆ ಇದ್ದಲ್ಲಿ, ಅಲ್ಲಿ ಹೆಚ್ಚಿನ ಚೀತಾಗಳನ್ನು ಬಿಡುವುದಿಲ್ಲ’ ಎಂದು ತಿಳಿಸಿದರು.

‘ಕುನೋನಲ್ಲಿರುವ ಚೀತಾಗಳಿಗೆ ಅರಿವಳಿಕೆ ಮೂಲಕವೇ ರೋಗನಿರೋಧಕ ಶಕ್ತಿಯ ಲಸಿಕೆಯನ್ನು ಸಿಬ್ಬಂದಿ ನೀಡುತ್ತಿದ್ದಾರೆ. ಒಂದೊಮ್ಮೆ ಇದು ಸಾಧ್ಯವಾಗದಿದ್ದರೆ, ಅವುಗಳನ್ನು ಹಿಡಿದು ಲಸಿಕೆ ನೀಡುವುದನ್ನು ಹೊರತುಪಡಿಸಿ ಅನ್ಯ ಮಾರ್ಗವಿಲ್ಲ’ ಎಂದಿದ್ದಾರೆ.

ಚೀತಾ

ಭಾರತದ ಬೇಸಿಗೆಯಲ್ಲಿ ಚಳಿಗಾಲದ ನೈಸರ್ಗಿಕ ಕೋಟ್ ಪಡೆಯುವ ಚೀತಾಗಳು

ಉತ್ತರ ಹಾಗೂ ದಕ್ಷಿಣ ಧೃವಗಳ ನಡುವಿನ ಸರ್ಕಾಡಿಯನ್‌ ಲಯಗಳ ವ್ಯತ್ಯಾಸದಿಂದಾಗಿ ಕೆಲವೊಂದು ಚೀತಾಗಳು ಚಳಿಗಾಲದಲ್ಲಿ ದಪ್ಪದಾದ ನೈಸರ್ಗಿಕ ಹೊದಿಕೆಯನ್ನು ಪಡೆಯುತ್ತವೆ. ಆದರೆ ಆಫ್ರಿಕಾದ ಚಳಿಗಾಲ ಹಾಗೂ ಭಾರತದ ಚಳಿಗಾಲದ ಸಮಯದಲ್ಲಿನ ವ್ಯತ್ಯಾಸಗಳಿದ್ದು, ಭಾರತದ ಬೇಸಿಗೆ ಹಾಗೂ ಮಳೆಗಾಲದ ಸಮಯದಲ್ಲಿ ಈ ಚೀತಾಗಳು ದಪ್ಪನೆಯ ಹೊದಿಕೆಯನ್ನು ಹೊಂದುವ ಮೂಲಕ ಆರೋಗ್ಯ ಸಮಸ್ಯೆ ಎದುರಿಸಿದ್ದವು’ ಎಂದಿದ್ದಾರೆ.

‘ಇಂಥ ಚಳಿಗಾಲದ ನೈಸರ್ಗಿಕ ಹೊದಿಕೆಯನ್ನು ಹೊಂದಿದ್ದ ನಮೀಬಿಯಾದ ಒಂದು ಹೆಣ್ಣು ಚೀತಾ ಹಾಗೂ ದಕ್ಷಿಣ ಆಫ್ರಿಕಾದ ಎರಡು ಗಂಡು ಚೀತಾಗಳ ಮೈಯಲ್ಲಿ ಗಾಯಗಳಾಗಿದ್ದವು. ಸೋಂಕಿಗೆ ತುತ್ತಾದ ಇವು ಮೃತಪಟ್ಟವು’ ಎಂದು ಯಾದವ್ ತಿಳಿಸಿದ್ದಾರೆ.

ವಿಶ್ರಾಂತಿ ಪಡೆಯುತ್ತಿರುವ ಚೀತಾ

ವಿದೇಶಿ ಮಾಧ್ಯಮಗಳನ್ನೂ ಚಕಿತಗೊಳಿಸಿದ ಭಾರತದ ಚೀತಾ ಯೋಜನೆ

‘ಭಾರತಕ್ಕೆ ಚೀತಾಗಳನ್ನು ತರುವ ವಿಷಯವನ್ನು ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚಾಗಿ ಪ್ರಚಾರ ಮಾಡಿದವು. ಭಾರತ ಕೈಗೊಂಡ ಈ ನಿರ್ಧಾರವನ್ನು ಅಳವಡಿಸಿಕೊಳ್ಳಲು ಬೇರೆ ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಸಾಧ್ಯವಾಗಿಲ್ಲ. ಈ ಯೋಜನೆಯಲ್ಲಿ ಭಾರತ ಯಶಸ್ಸು ಸಾಧಿಸುತ್ತದೆ ಎಂಬುದನ್ನು ವಿದೇಶಿ ಮಾಧ್ಯಮಗಳಿಗೆ ಅಚ್ಚರಿ ಮೂಡಿಸಿದೆ’ ಎಂದು ಯಾದವ್ ಸಂತಸ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ ದಕ್ಷಿಣ ಆಫ್ರಿಕಾದ ಚೀತಾ ಸಂಖ್ಯೆ ಗಣನೀಯ ಕುಸಿತ ಕಂಡಿತು. ಹೀಗಾಗಿ ನಮೀಬಿಯಾದಿಂದ ಚೀತಾಗಳನ್ನು ತರಿಸಿಕೊಂಡರೂ, ಅವುಗಳು ದಕ್ಷಿಣ ಆಫ್ರಿಕಾದ ಹವಾಗುಣಕ್ಕೆ ಹೊಂದಿಕೊಳ್ಳಲು 20 ವರ್ಷಗಳು ಬೇಕಾದವು. ಇದರಿಂತೆಯೇ 2005ರಲ್ಲಿ ಸಾರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಎಲ್ಲಾ ಹುಲಿಗಳು ಮೃತಪಟ್ಟವು. ಆದರೆ ಅದೇ ಜಾಗದಲ್ಲಿ ಹುಲಿಗಳ ಸಂಖ್ಯೆ ಮತ್ತು ಏರಿಕೆಯಾಗಲು 15 ವರ್ಷಗಳ ಬೇಕಾದವು. ಹೀಗಾಗಿ ವನ್ಯಜೀವಿಗಳ ಸಂಖ್ಯೆ ಹೆಚ್ಚಳ ಎಂಬ ವಿಷಯ ದಿಢೀರನೇ ಸಿದ್ಧಪಡಿಸುವ ಇನ್‌ಸ್ಟಂಟ್‌ ಕಾಫಿಯಲ್ಲ. ಅದಕ್ಕೂ ಒಂದಷ್ಟು ಸಮಯ ಬೇಕು’ ಎಂದು ಎಸ್‌.ಪಿ. ಯಾದವ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.