ಕಲಬುರ್ಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುತ್ತಮುತ್ತಲ ಪ್ರದೇಶವು ಹಲವು ಕಾರಣಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಅಲ್ಲದೇ, ಪ್ರವಾಸೋದ್ಯಮ ದೃಷ್ಟಿಯಿಂದಲೂ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಅರಣ್ಯ ಪ್ರದೇಶ, ಚಾರಣ, ಜಲಾಶಯ, ಜಲಪಾತ, ವನ್ಯಜೀವಿ ಧಾಮ ಮುಂತಾದವು ವಿಭಿನ್ನ ಪರಿಸರದ ಹೊಸತಾದ ಅನುಭೂತಿ ನೀಡದೇ ಇರುವುದಿಲ್ಲ.
ಚಿಂಚೋಳಿ ಅರಣ್ಯ ಪ್ರದೇಶದ ಒಟ್ಟು ವಿಸ್ತಾರ 135 ಚದರ ಕಿ.ಮೀ. ಇದೆ. 2011ರಲ್ಲಿ ಅಭಯಾರಣ್ಯವೆಂದು ಘೋಷಣೆಯಾಗಿ 10 ವರ್ಷಗಳ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಹಲವು ಹಂತಗಳಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ.
‘ಕಾಡಿನ ರಮ್ಯ ಪರಿಸರ ಇರಿಸಿಕೊಂಡೇ ಪ್ರವಾಸಿಗರ ಹಿತದೃಷ್ಟಿಯಿಂದ ಕೆಲವಷ್ಟು ಸೌಲಭ್ಯ ಕಲ್ಪಿಸಿದರೆ ಅನುಕೂಲವಾಗುತ್ತದೆ. ಮಾಣಿಕಪುರ, ಎತ್ತಿಪೋತ ಜಲಪಾತಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಅವುಗಳ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಲ್ಲದೇ ಪ್ರಮುಖ ಸ್ಥಳಗಳಲ್ಲಿ ಚಿತ್ರಗಳ ಸಹಿತ ಫಲಕಗಳನ್ನು ಅಳವಡಿಸಬೇಕು’ ಎಂದು ಪ್ರವಾಸಿಗರು ಹೇಳುತ್ತಾರೆ.
‘ಪ್ರವಾಸಿಗರು ಬರುವಂತೆ ಮಾಡಲು ಉತ್ತಮ ರಸ್ತೆ ವ್ಯವಸ್ಥೆ ಮಾಡಬೇಕು. ಉತ್ತಮ ಪಾದಚಾರಿ ಮಾರ್ಗ ಕಲ್ಪಿಸಬೇಕು. ಪ್ರಮುಖ ಸ್ಥಳಗಳಲ್ಲಿ ಲಘು ಆಹಾರ, ಊಟ ಅಥವಾ ಪಾನೀಯ ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ಅವರು.
‘ವಿಶಾಲ ವ್ಯಾಪ್ತಿ ಹೊಂದಿರುವ ಅರಣ್ಯ ಪ್ರದೇಶದಲ್ಲಿ ಅಲ್ಲಲ್ಲಿ ಮರಗಳು ಕಟಾವು ಆಗುವ, ದುಷ್ಕರ್ಮಿಗಳಿಗೆ ಬೆಂಕಿ ಹಚ್ಚುವ ಅಥವಾ ಸಸ್ಯ ಸಂಪತ್ತಿಗೆ ಹಾನಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕೆ ಅರಣ್ಯ ಇಲಾಖೆಯು ಇನ್ನಷ್ಟು ಭದ್ರತಾ ಕ್ರಮ ತೆಗೆದುಕೊಂಡರೆ, ಅರಣ್ಯವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಪರಿಸರ ಪ್ರೇಮಿ ಚಂದ್ರಶೇಖರ ಹೇಳುತ್ತಾರೆ.
ವನ್ಯಜೀವಿ ಧಾಮದಲ್ಲಿ ಅರಣ್ಯ ಕಾವಲು ಪಡೆ (ವಿಚಕ್ಷಣ ದಳ) ಮಂಜೂರು ಮಾಡಬೇಕು. ಕಾಡಿನ ಅಭಿವೃದ್ಧಿ,ಮೇಲ್ವಿಚಾರಣೆ ಹಾಗೂ ಕಾವಲು ಉಸ್ತುವಾರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯನ್ನೂ ಮಂಜೂರು ಮಾಡಬೇಕು. ಅಳಿವಿನ ಅಂಚಿನಲ್ಲಿರುವ ಸಸ್ಯ ಮತ್ತು ಜೀವಿಗಳ ಸಂರಕ್ಷಣೆಗೆ ಮತ್ತು ಔಷಧೀಯ ಸಸ್ಯಗಳ ವನಗಳ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.