ನಿರ್ದಿಷ್ಟ ಭೂ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವ ಅಪರೂಪದ ಪ್ರಾಣಿಗಳು ಕೆಲವು ಇವೆ. ಅಂತಹ ಪ್ರಾಣಿಗಳಲ್ಲಿ ಕಾಂಗರೂ ಕೂಡ ಒಂದು. ಇದು ಆಸ್ಟ್ರೇಲಿಯಾ ಖಂಡದಲ್ಲಿ ಮಾತ್ರ ಕಾಣಸಿಗುವ ಪ್ರಾಣಿ. ಕಾಂಗರೂಗಳಲ್ಲಿ ಈವರೆಗೆ 8 ಪ್ರಭೇದಗಳನ್ನು ಗುರುತಿಸಲಾಗಿದೆ.
ಅವುಗಳಲ್ಲಿ ವಾಲ್ಲಬಿ ಕೂಡ ಒಂದು. ಇದರಲ್ಲಿ 30 ತಳಿಗಳಿವೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಅಪರೂಪದ ಕೆಸರು ವಾಲ್ಲಬಿ (Swamp wallaby) ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ವಾಲ್ಲಬಿಯ ಬೈಕಲರ್ (Wallabia bicolor). ಇದು ಕಾಂಗರೂಗಳ ಮ್ಯಾಕ್ರೊಪೊಡಿಡೇ (Macropodidae) ಕುಟುಂಬಕ್ಕೆ ಸೇರಿದೆ.
ಹೇಗಿರುತ್ತದೆ?
ಕಂದು, ಕಪ್ಪು ಮತ್ತು ಬಿಳಿ ಬಣ್ಣದ ದಟ್ಟವಾದ ಕೂದಲಿನಿಂದ ಕೂಡಿದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಕಾಲುಗಳು, ಬೆನ್ನು, ಸೊಂಟ, ಬಾಲ, ಕತ್ತು ಕಪ್ಪು ಬಣ್ಣದಲ್ಲಿದ್ದರೆ, ಕುತ್ತಿಗೆ, ಎದೆ ಮತ್ತು ಉದರ ಭಾಗ ಕಂದು ಬಣ್ಣದಲ್ಲಿರುತ್ತದೆ. ಅಲ್ಲಲ್ಲಿ ಬಿಳಿ ಕೂದಲು ಬೆಳೆದಿರುತ್ತವೆ. ಹೀಗಾಗಿ ಇದನ್ನು ಬೈ ಕಲರ್ ವಾಲ್ಲಬಿ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯುತ್ತಾರೆ.
ಹಿಂಗಾಲುಗಳು ದೊಡ್ಡದಾಗಿದ್ದು, ಬಲಿಷ್ಠವಾಗಿರುತ್ತವೆ. ಆದರೆ ಮುಂಗಾಲುಗಳು ಚಿಕ್ಕದಾಗಿದ್ದು, ಆಹಾರವನ್ನು ಹಿಡಿದು ತಿನ್ನುವುದಕ್ಕೆ ನೆರವಾಗುತ್ತವೆ. ಮುಖ ಪುಟ್ಟದಾಗಿದ್ದು, ಮೂತಿ ನೀಳವಾಗಿರುತ್ತದೆ. ಕೆನ್ನೆಯ ಭಾಗದಲ್ಲಿ ದಟ್ಟವಾಗಿ ಬಿಳಿ ಕೂದಲು ಬೆಳೆದಿರುತ್ತವೆ. ಕಣ್ಣುಗಳು ಮಧ್ಯಮ ಗಾತ್ರದಲ್ಲಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಎಲೆಯಾಕಾರದ ಕಿವಿಗಳು ದೊಡ್ಡದಾಗಿದ್ದು, ಸದಾ ಸೆಟೆದುಕೊಂಡಿರುತ್ತವೆ. ಬಾಲ ನೀಳವಾಗಿದ್ದು, ದುಂಡಗಿರುತ್ತದೆ. ದೇಹದ ಸಮತೋಲನಕ್ಕೂ ಈ ಬಾಲ ನೆರವಾಗುತ್ತದೆ.
ಎಲ್ಲಿದೆ?
ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಇದರ ಸಂತತಿ ಹೆಚ್ಚಾಗಿದೆ. ಇದಲ್ಲದೆ, ದಕ್ಷಿಣ ಆಸ್ಟ್ರೇಲಿಯಾ, ವಿಕ್ಟೋರಿಯಾ, ಪೂರ್ವ ಕ್ವೀನ್ಸ್‌ಲ್ಯಾಂಡ್, ನ್ಯೂ ಸೌತ್ ವೇಲ್ಸ್‌ನ ಪೂರ್ವ ಭಾಗದಲ್ಲೂ ಇದನ್ನು ಕಾಣಬಹುದು. ದಟ್ಟವಾದ ಅರಣ್ಯಗಳು, ಮರಗಳು ಹೆಚ್ಚಾಗಿರುವ ಪ್ರದೇಶಗಳು ಮತ್ತು ಕೆಸರು ಮಣ್ಣು ಇರುವಂತಹ ಜೌಗು ಪ್ರದೇಶಗಳಲ್ಲಿ ವಾಸಿಸುವುದಿರಿಂದ ಇದಕ್ಕೆ ಈ ಹೆಸರು ಇಡಲಾಗಿದೆ.
ಬಯಲು ಪ್ರದೇಶಗಳಲ್ಲಿ ವಾಸಿಸುವುದಕ್ಕೆ ಇವು ಇಷ್ಟಪಡುವುದಿಲ್ಲ. ಅಂತಹ ಪ್ರದೇಶಗಳಿಗೆ ಬಂದರೂ ದಟ್ಟವಾಗಿ ಪೊದೆಗಳು ಬೆಳೆದಿರುವ ಪ್ರದೇಶಗಳಲ್ಲಿ ಕೆಲವು ದಿನ ಇರುತ್ತದೆ.
ಜೀವನಕ್ರಮ ಮತ್ತು ವರ್ತನೆ
ಇದು ಒಂಟಿಯಾಗಿ ಜೀವಿಸಲು ಇಷ್ಟಪಡುವ ಕಾಂಗರೂ. ಆದರೂ ಗಡಿ ಗುರುತಿಸಿಕೊಳ್ಳದೇ ಜೀವಿಸುತ್ತದೆ. ಒಂದು ವಾಲ್ಲಬಿ ವಾಸಿಸುತ್ತಿರುವ ಪ್ರದೇಶಕ್ಕೆ ಮತ್ತೊಂದು ವಾಲ್ಲಬಿ ಬಂದರೂ ಯಾವುದೇ ಪ್ರತಿರೋಧ ತೋರದೆ ತಮ್ಮ ಪಾಡಿಗೆ ತಾವು ಬದುಕುತ್ತವೆ.
ಒಂದು ವಾಲ್ಲಬಿ ಸಾಮಾನ್ಯವಾಗಿ 16 ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಅರಸುತ್ತಾ ಸುತ್ತುತ್ತದೆ. ಹಗಲೆಲ್ಲಾ ಸುರಕ್ಷಿತ ಪ್ರದೇಶಗಲ್ಲಿ ವಿಶ್ರಾಂತಿ ಪಡೆದು, ಸಂಜೆಯಾಗುತ್ತಿದ್ದಂತೆ ಆಹಾರ ಹುಡುಕಲು ಆರಂಭಿಸುತ್ತದೆ. ರಾತ್ರಿಯಲ್ಲೂ ಆಹಾರ ಹುಡುಕುತ್ತಾ ಸಂಚರಿಸುತ್ತದೆ. ವೇಗವಾಗಿ ಓಡುತ್ತಾ, ಜಿಗಿಯುತ್ತಾ ದಿನವೊಂದರಲ್ಲಿ ಕಿ.ಮೀಟರ್ ಗಟ್ಟಲೇ ದೂರವನ್ನು ಪಯಣಿಸುತ್ತದೆ.
ಆಹಾರ
ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಮೃದುವಾದ ಎಲೆಗಳನ್ನು ಇಷ್ಟಪಟ್ಟು ತಿನ್ನುತ್ತದೆ. ಇದಲ್ಲದೇ, ಹುಲ್ಲು, ಪೊದೆ ಗಿಡಗಳ ಎಲೆಗಳು, ಮೊಗ್ಗುಗಳು, ಜರೀ ಗಿಡಗಳನ್ನು ತಿನ್ನುತ್ತದೆ.
ಸಂತಾನೋತ್ಪತ್ತಿ
ಜೀವಿತಾವಧಿಯಲ್ಲಿ ಎರಡಕ್ಕಿಂತ ಹೆಚ್ಚು ವಾಲ್ಲಬಿಗಳೊಂದಿಗೆ ಜೊತೆಯಾಗುತ್ತದೆ. ಆಹಾರ ಹುಡುಕುತ್ತಾ ಅಲೆಯುವಾಗ ಸಂಗಾತಿಯನ್ನೂ ಹುಡುಕಿಕೊಳ್ಳುತ್ತದೆ. ಗಂಡು ವಾಲ್ಲಬಿಗಳು ಹೆಣ್ಣು ವಾಲ್ಲಬಿಗಳ ಮೇಲೆ ಹಕ್ಕು ಸಾಧಿಸಲು ಕಾಳಗ ನಡೆಸುತ್ತವೆ. ಕಾಳಗದಲ್ಲಿ ಗೆದ್ದ ಗಂಡು ವಾಲ್ಲಬಿ ಹೆಣ್ಣಿನೊಂದಿಗೆ ಜೊತೆಯಾಗುತ್ತದೆ. ವರ್ಷವಿಡೀ ಇದು ಸಂತಾನೋತ್ಪತ್ತಿ ನಡೆಸುತ್ತದೆ.
33ರಿಂದ 38 ದಿನಗಳ ವರೆಗೆ ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಮರಿ ಜನಿಸಿದ ನಂತರ 36 ವಾರಗಳ ವರೆಗೆ ತಾಯಿ ವಾಲ್ಲಬಿಯ ಹೊಟ್ಟೆ ಚೀಲದಲ್ಲೇ ಇರುತ್ತದೆ. 15 ತಿಂಗಳ ವರೆಗೆ ತಾಯಿ ಹಾಲು ಕುಡಿದುಕೊಂಡೇ ಜೀವಿಸುತ್ತದೆ. 15ರಿಂದ 18 ತಿಂಗಳ ನಂತರ ವಯಸ್ಕ ಹಂತ ತಲುಪುತ್ತದೆ.
ಸ್ವಾರಸ್ಯಕರ ಸಂಗತಿಗಳು
* ಇದರ ಪಾದಗಳಲ್ಲಿ ಜಲ ನಿರೋಧಕ ಪೊರೆಗಳು ಬೆಳೆದಿರುತ್ತವೆ. ಹೀಗಾಗಿ ಸದಾ ಜೌಗು ಪ್ರದೇಶದಲ್ಲಿದ್ದರೂ ಏನೂ ಆಗದು.
*ಅಪಾಯ ಎದುರಾದರೆ ಕೂಡಲೇ ವೇಗವಾಗಿ ಓಡಲು ಆರಂಭಿಸುತ್ತದೆ. ರಸ್ತೆ ದಾಟುವಾಗ ವಾಹನಗಳು ಅಡ್ಡ ಬಂದರೆ ಹಾರಿಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತದೆ.
*ಇದು ವೇಗವಾಗಿ ಮುಂದಕ್ಕೆ ಸಾಗುವ ಸಾಮರ್ಥ್ಯ ಹೊಂದಿದ್ದರೂ ಹಿಂದಕ್ಕೆ ಚಲಿಸಲು ಆಗುವುದಿಲ್ಲ.
* ನೀರಿನಲ್ಲಿದ್ದಾಗ ನಾಲ್ಕೂ ಕಾಲುಗಳನ್ನು ಬಳಸಿಕೊಂಡು ವೇಗವಾಗಿ ಈಜುತ್ತದೆ. ನೆಲದ ಮೇಲಿದ್ದಾಗ ಹಿಂಗಾಲುಗಳನ್ನಷ್ಟೇ ಬಳಸಿಕೊಳ್ಳುತ್ತದೆ.
* ಮರಿಯ ಬೆಳವಣಿಗೆಗೆ ಇದರ ದೇಹದಲ್ಲಿ ಎರಡು ಬಗೆಯ ಪೋಷಕಾಂಶಗಳಿರುವ ಹಾಲು ಉತ್ಪಾದನೆಯಾಗುತ್ತದೆ. ಆಗಷ್ಟೇ ಜನಿಸಿದ ಮರಿಗೆ ಒಂದು ಬಗೆಯ ಹಾಲು ಉಣಿಸಿದರೆ, ದೊಡ್ಡದಾದ ಮರಿಗೆ ಮತ್ತೊಂದು ಬಗೆಯ ಪೋಷಕಾಂಶಗಳಿರುವ ಹಾಲು ಕುಡಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.