ವಿಶ್ವದಾದ್ಯಂತ ವಿವಿಧ ಬಗೆಯ ಕೊಕ್ಕರೆಗಳನ್ನು ಗುರುತಿಸಲಾಗಿದೆ. ನಮಗೆ ತಿಳಿದಿರುವಂತೆ ಬಹುತೇಕ ಕೊಕ್ಕರೆಗಳ ಪುಕ್ಕ ಒಂದು ಅಥವಾ ಎರಡು ಬಣ್ಣಗಳಲ್ಲಿ ಇರುತ್ತದೆ. ವಿವಿಧ ಬಣ್ಣದ ಪುಕ್ಕದಿಂದ ಕಂಗೊಳಿಸುವಂತಹ ಕೊಕ್ಕರೆಗಳು ಕೆಲವು ಮಾತ್ರ. ಅವುಗಳಲ್ಲಿ ಬಿಳಿಕತ್ತಿನ ಬಕ ಕೂಡ ಒಂದು. ಇದನ್ನು ಇಂಗ್ಲಿಷ್‌ನಲ್ಲಿ ವೈಟ್ ನೆಕ್ಡ್ ಸ್ಟಾರ್ಕ್ (White-Necked Stork) ಎನ್ನುತ್ತಾರೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಈ ಅಪರೂಪದ ಹಕ್ಕಿಯ ಬಗ್ಗೆ ತಿಳಿಯೋಣ.
ಇದರ ವೈಜ್ಞಾನಿಕ ಹೆಸರು ಸಿಕೊನಿಯಾ ಎಪಿಸ್ಕೊಪಸ್ (Ciconia episcopus). ಇದು ಸಿಕೊನಿಡೇ (Ciconiidae) ಹಕ್ಕಿಗಳ ಕುಟುಂಬಕ್ಕೆ ಸೇರಿದ್ದು, ಸಿಕೊನೀಫಾರ್ಮ್ಸ್ (Ciconiiformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.
ಹೇಗಿರುತ್ತದೆ?
ಕಪ್ಪು, ಕೆಂಪು ಮತ್ತು ಗಾಢ ಹಸಿರು ಬಣ್ಣದ ಪುಕ್ಕ ದೇಹವನ್ನು ಆವರಿಸಿದ್ದರೆ, ಕತ್ತಿನ ಭಾಗವೆಲ್ಲಾ ಸಂಪೂರ್ಣ ಬಿಳಿ ಬಣ್ಣದ ಪುಕ್ಕದಿಂದ ಕೂಡಿರುತ್ತದೆ. ಹೀಗಾಗಿಯೇ ಇದನ್ನು ಬಿಳಿಕತ್ತಿನ ಸ್ಟಾರ್ಕ್ ಎನ್ನುತ್ತಾರೆ. ತಲೆಯ ಮೇಲೆ ಕಪ್ಪು ಬಣ್ಣದ ಪುಕ್ಕ ಬೆಳೆದಿರುತ್ತದೆ. ದೃಢವಾದ ಕೊಕ್ಕು ನೀಳವಾಗಿದ್ದು, ಕಪ್ಪು ಮತ್ತು ಕೆಂಪು ಮಿಶ್ರಿತ ಬಣ್ಣದಲ್ಲಿರುತ್ತದೆ. ನೀಳವಾದ ಕಾಲುಗಳು ಕೂಡ ಕಪ್ಪು–ಕೆಂಪು ಮಿಶ್ರಿತ ಬಣ್ಣಗಳಲ್ಲಿ ಇರುತ್ತವೆ. ಕಣ್ಣುಗಳು ದೊಡ್ಡದಾಗಿದ್ದು, ಗಾಢಕಂದು ಮತ್ತು ಕಪ್ಪು ಬಣ್ಣದಲ್ಲಿರುತ್ತವೆ. ಬಹುತೇಕ ಕೊಕ್ಕರೆಗಳಿಗಿರುವಂತೆ ಸಪೂರ ದೇಹವನ್ನು ಹೊಂದಿರುತ್ತದೆ. ಹೆಣ್ಣು ಮತ್ತು ಗಂಡು ಕೊಕ್ಕರೆಗಳಲ್ಲಿ ಹೆಚ್ಚಿನ ವ್ಯತ್ಯಾಸಗಳು ಇರುವುದಿಲ್ಲ.
ಎಲ್ಲಿದೆ?
ಭಾರತ, ಬಾಂಗ್ಲಾದೇಶ, ಭೂತಾನ್, ಕಾಂಬೊಡಿಯಾ, ಇಂಡೊನೇಷ್ಯಾ, ಲಾವೊಸ್, ಮಲೇಷ್ಯಾ, ಮ್ಯಾನ್ಮಾರ್, ನೇಪಾಳ ಮತ್ತು ಪಾಕಿಸ್ತಾನಗಳಲ್ಲಿ ಈ ಹಕ್ಕಿಯ ಸಂತತಿ ಹೆಚ್ಚಾಗಿ ವಿಸ್ತರಿಸಿದೆ. ಆಫ್ರಿಕಾದ ಕೆಲವು ಉಷ್ಣವಲಯ ಪ್ರದೇಶಗಳಿಗೂ ಇದು ವಲಸೆ ಹೋಗುತ್ತದೆ.ಕೆಸರಿನಿಂದ ಕೂಡಿದ ಜೌಗು ಪ್ರದೇಶಗಳೇ ಇದರ ನೆಚ್ಚಿನ ವಾಸಸ್ಥಾನ. ನದಿ, ಸರೋವರಕ, ಕೆರೆ, ಕೊಳಗಳಲ್ಲಿ ವಾಸಿಸುತ್ತದೆ.
ಜೀವನಕ್ರಮ ಮತ್ತು ವರ್ತನೆ
ತೀಕ್ಷ್ಣ ದೃಷ್ಟಿ ಶಕ್ತಿ ಹೊಂದಿರುವ ಹಕ್ಕಿಗಳಲ್ಲಿ ಇದು ಕೂಡ ಒಂದಾಗಿದ್ದು, ರಾತ್ರಿಯಲ್ಲೂ ಸುಲಭವಾಗಿ ಆಹಾರವನ್ನು ಬೇಟೆಯಾಡುತ್ತದೆ. ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ, ಹೀಗಾಗಿ ಪ್ರತಿ ಕೊಕ್ಕರೆ ನಿರ್ದಿಷ್ಟ ಗಡಿ ಗುರುತಿಸಿಕೊಂಡು ವಾಸಿಸುತ್ತದೆ. ಆಹಾರ ದೊರೆಯುವ ಪ್ರಮಾಣ ಹೆಚ್ಚಾಗಿದ್ದರೆ, ಪುಟ್ಟ ಗುಂಪು ರಚಿಸಿಕೊಂಡು ಅಲೆಯುತ್ತವೆ. ಸಂಗಾತಿಯೊಂದಿಗೂ ಸುತ್ತುತ್ತದೆ. ವಲಸೆ ಹೋಗುವ ಕೊಕ್ಕರೆಗಳಲ್ಲಿ ಇದು ಕೂಡ ಒಂದಾಗಿದ್ದು, ನೂರಾರು ಸ್ಟಾರ್ಕ್‌ಗಳು ಸೇರಿ ವಲಸೆ ಹೋಗುತ್ತವೆ.
ಆಹಾರ
ಇದು ಸಂಪೂರ್ಣ ಮಾಂಸಾಹಾರಿ ಪಕ್ಷಿ. ವಿವಿಧ ಬಗೆಯ ಮೀನುಗಳು, ಕಪ್ಪೆ, ಹಲ್ಲಿ, ಹಾವು, ದೊಡ್ಡಗಾತ್ರದ ಕೀಟಗಳು, ಲಾರ್ವಾಗಳು, ಮೃದ್ವಂಗಿಗಳು, ಏಡಿಗಳನ್ನು ಮತ್ತು ಜಲವಾಸಿ ಕೀಟಗಳನ್ನು ಭಕ್ಷಿಸುತ್ತದೆ.
ಸಂತಾನೋತ್ಪತ್ತಿ
ವಯಸ್ಕ ಹಂತ ತಲುಪಿದ ನಂತರ ಗಂಡು ಕೊಕ್ಕರೆ ತನ್ನ ಗಡಿಯೊಳಗೆ ಪ್ರವೇಶಿಸುವ ಹೆಣ್ಣುಕೊಕ್ಕರೆಯ ಗಮನ ಸೆಳೆದು ಬಾಂಧವ್ಯ ಬೆಸೆದುಕೊಳ್ಳುತ್ತದೆ. ಸಾಯುವವರೆಗೂ ಒಂದೇ ಸಂಗಾತಿಯೊಂದಿಗೆ ಕೂಡಿ ಬಾಳುವುದು ವಿಶೇಷ.
ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಸೇರಿ, ಕಡ್ಡಿಗಳು, ಹುಲ್ಲು, ಎಲೆಗಳನ್ನು ಬಳಸಿ, ನೆಲದಿಂದ ಸುಮಾರು ಗರಿಷ್ಠ 50 ಮೀಟರ್ ಎತ್ತರದ ಮರಗಳ ರೆಂಬೆಯ ಮೇಲೆ ಗೂಡು ನಿರ್ಮಿಸಿಕೊಳ್ಳುತ್ತವೆ.ಹೆಣ್ಣು ಹಕ್ಕಿ 2ರಿಂದ 4 ಮೊಟ್ಟೆಗಳನ್ನು ಇಟ್ಟರೆ, ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಸೇರಿ ಮೊಟ್ಟೆಗೆ ಕಾವು ಕೊಡುತ್ತವೆ. ಮೊಟ್ಟೆಯೊಡೆದು ಹೊರಬಂದ ಮರಿಗಳಿಗೆ ಪೋಷಕ ಹಕ್ಕಿಗಳು ಆಹಾರ ಉಣಿಸಿ ಬೆಳೆಸುತ್ತವೆ. 55ರಿಂದ 65 ದಿನಗಳ ವರೆಗೆ ಮರಿಗಳು ಗೂಡಿನಲ್ಲೇ ಬೆಳೆಯುತ್ತವೆ. ನಂತರ ಹೊರಬಂದು ಆಹಾರ ಹುಡುಕುವುದನ್ನು ಆರಂಭಿಸುತ್ತವೆ.
ಸ್ವಾರಸ್ಯಕರ ಸಂಗತಿಗಳು
* ಸ್ಟಾರ್ಕ್‌ಗಳಲ್ಲಿ 19 ಪ್ರಭೇದಗಳನ್ನು ಗುರುತಿಸಲಾಗಿದೆ.
*ಅಂಟಾರ್ಟಿಕಾ ಖಂಡವನ್ನು ಹೊರತುಪಡಿಸಿ ವಿಶ್ವದ ಎಲ್ಲ ಪ್ರದೇಶಗಳಲ್ಲೂ ಸ್ಟಾರ್ಕ್‌ಗಳನ್ನು ಕಾಣಬಹುದು.
*ಜೌಗು ಪ್ರದೇಶಗಳಷ್ಟೇ ಅಲ್ಲದೆ, ಶುಷ್ಕ ವಾತಾವರಣ ಇರುವಂತಹ ಪ್ರದೇಶಗಳಲ್ಲೂ ಇದು ವಾಸಿಸುತ್ತದೆ.
*ಕೆಲವು ಸ್ಟಾರ್ಕ್‌ಗಳು 40 ವರ್ಷಗಳ ವರೆಗೆ ಜೀವಿಸಿರುವ ಉದಾಹರಣೆಗಳೂ ಇವೆ.
*ಒಮ್ಮೆ ಗೂಡು ನಿರ್ಮಿಸಿದರೆ, ಪ್ರತಿ ವರ್ಷ ನವೀಕರಿಸಿಕೊಂಡು ಅದನ್ನೇ ಬಳಸುತ್ತದೆ.
*ಸ್ಟಾರ್ಕ್‌ಗಳು ಸುಮಾರು 5 ಕೋಟಿ ವರ್ಷಗಳಿಂದ ಭೂಮಿಯ ಮೇಲೆ ವಾಸಿಸುತ್ತಿವೆ ಎಂದು ಹೇಳಲಾಗಿದೆ.
*ಹೆರಾನ್, ಸ್ಪೂನ್‌ಬಿಲ್ ಮತ್ತು ಐಬಿಸ್ ಹಕ್ಕಿಗಳ ಹಲವು ಲಕ್ಷಣಗಳೂ ಇವಕ್ಕೆ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.