ADVERTISEMENT

ಹುಲಿಯ ಹೆಜ್ಜೆ ಹಿಡಿದು...

ಶಿವು ಕೆ.
Published 29 ಜುಲೈ 2019, 3:00 IST
Last Updated 29 ಜುಲೈ 2019, 3:00 IST
ಹುಲಿ. ಚಿತ್ರಗಳು: ಲೇಖಕರವು
ಹುಲಿ. ಚಿತ್ರಗಳು: ಲೇಖಕರವು   

‘ಉಪ್ಪಿನಹಳ್ಳದಲ್ಲಿ ಹುಲಿ ಕುಳಿತಿದೆ ಬನ್ನಿ’... ಎಂದು ನಾವಿದ್ದ ಸಫಾರಿ ಬಸ್‌ ಚಾಲಕನಿಗೆ ಮತ್ತೊಬ್ಬ ಚಾಲಕ ಕರೆ ಮಾಡಿ ಹೇಳಿದ. ಹಾಗೆ ಹೇಳಿದ ಐದು ನಿಮಿಷದಲ್ಲಿ ನಮ್ಮ ಬಸ್‌ ಉಪ್ಪಿನಹಳ್ಳದ ಬಳಿಗೆ ತಲುಪಿತ್ತು.

ಸುಮಾರು 200 ಅಡಿಯಷ್ಟು ದೂರದಲ್ಲಿರುವ ಒಂದು ಪುಟ್ಟ ನೀರಿನ ಹೊಂಡದಲ್ಲಿ ಹುಲಿ ನೆಮ್ಮದಿಯಾಗಿ ಕುಳಿತಿತ್ತು. ಇದೇ ಮೊದಲ ಬಾರಿಗೆ ಹುಲಿಯನ್ನು ನೇರವಾಗಿ ನೋಡಿದ್ದು. ನಾವು ಬಸ್‌ನಿಂದ ಇಳಿಯುವ ವೇಳೆಗೆ, ಛಾಯಾಗ್ರಾಹಕರು ಹುಲಿಯ ಫೋಟೊ ಕ್ಲಿಕ್ಕಿಸುತ್ತಿದ್ದರು.

ನಮ್ಮ ಚಾಲಕ, ಯಾರು ಮಾತನಾಡದಂತೆ ಸೂಚಿಸಿದ್ದ. ಎಲ್ಲರೂ ನಿಶ್ಯಬ್ದವಾಗಿದ್ದರು. ಆದರೆ, ಮಿಷನ್‌ಗನ್‌ಗಳಿಂತಿದ್ದ ಕ್ಯಾಮೆರಾಗಳು ಮಾತಾಡುತ್ತಿದ್ದವು. 400, 500, ಎಂಎಂ ಲೆನ್ಸ್ ಇಟ್ಟುಕೊಂಡಿದ್ದ ಕೆಲವರಂತೂ ಟರ್..ರ್..ರ್ರ್.....ಅಂತ ಸದ್ದು ಮಾಡುತ್ತಾ ಚಿತ್ರಗಳನ್ನು ಕ್ಲಿಕ್ಕಿಸುತ್ತಲೇ ಇದ್ದರು.

ADVERTISEMENT

ನಾನು ಸ್ವಲ್ಪ ಜಾಗ ಮಾಡಿಕೊಂಡು, ಮುಂದೆ ನಿಂತು, ನನ್ನ ಕ್ಯಾಮೆರಾದಿಂದ ಹುಲಿ ಚಿತ್ರ ತೆಗೆಯುತ್ತಾ ಹೊರಟೆ. ಹುಲಿರಾಯನ ಸರಣಿ ಚಿತ್ರಗಳು ಕ್ಯಾಮೆರಾದಲ್ಲಿ ಮೂಡುತ್ತಲೇ ಹೋದವು. ಹುಲಿಯ ಆರಾಮ ಭಂಗಿ, ಹಳ್ಳದಲ್ಲಿ ಹೊರಳಾಡಿ ದಣಿವಾರಿಸಿಕೊಂಡು ಕೆಸರು ಮೆತ್ತಿಕೊಂಡ ನೋಟ, ಗಾಂಭೀರ್ಯದ ಹೆಜ್ಜೆ, ತೀಕ್ಷ್ಣ ನೋಟ.. ಹೀಗೆ ಚಿತ್ರಗಳನ್ನು ಕ್ಲಿಕ್ಕಿಸಿದಷ್ಟೂ ಸಾಲದು. ಅಷ್ಟರಲ್ಲಾಗಲೇ ಹುಲಿರಾಯನಿಗೆ ಏನನ್ನಿಸಿತೋ ಏನೋ ನಿಧಾನವಾಗಿ ಎದ್ದು ಪೊದೆಯ ಕಡೆ ನಡೆದು ಮರೆಯಾದ.

ಹುಲಿಯನ್ನು ಬರಿ ಕಣ್ಣಿನಲ್ಲಿ ನೋಡಿ ಆನಂದಿಸುವುದು ಒಂದು ಅನುಭವವಾದರೆ, ಕ್ಯಾಮೆರಾದ 300 ಎಂಎಂ ಲೆನ್ಸ್ ಮೂಲಕ ಹತ್ತಿರದಿಂದ ನೋಡುತ್ತಾ ಕ್ಲಿಕ್ಕಿಸುವ ಆನಂದವೇ ಬೇರೆ!

ಕಬಿನಿ ಹಿನ್ನೀರಿಗೆ ಸೇರಿದ ಅಂತರಸಂತೆ ಅರಣ್ಯವಲಯದ ಪ್ರದೇಶದಲ್ಲಿ ತೆಗೆದ ಈ ಹುಲಿ ಚಿತ್ರ, ‘ಹುಲಿ ಚಿತ್ರ ತೆಗೆಯಬೇಕೆಂಬ’ ನನ್ನ ಹದಿನೇಳು ವರ್ಷಗಳ ಸಂಕಲ್ಪವನ್ನು ಪೂರೈಸಿತ್ತು. ಇದೊಂದು ಅಭೂತಪೂರ್ವ ಅನುಭವ. ಕ್ಯಾಮೆರಾ ಬದುಕಿನಲ್ಲಿ ಸಾರ್ಥಕತೆ ತಂದ ಕ್ಷಣ.

ಆಗಲೇ ಸಂಕಲ್ಪ ಮಾಡಿದ್ದೆ...

ಒಂದೂವರೆ ದಶಕದ ಹಿಂದಿನ ಘಟನೆ; ನಾಡಿನ ಖ್ಯಾತ ಛಾಯಾಗ್ರಾಹಕ ದಿ.ಟಿ.ಎನ್.ಪೆರುಮಾಳ್ ಸರ್, ಬಂಡಿಪುರದಲ್ಲಿ ಕ್ಲಿಕ್ಕಿಸಿದ್ದ ಹುಲಿ ಫೋಟೊವನ್ನು ನನಗೆ ತೋರಿಸುತ್ತಾ, ‘ಹುಲಿ ಸಿಕ್ತು’ ನೋಡು ಎಂದಿದ್ದರು. ಆಗಲೇ ಮನದಲ್ಲಿ ಸಂಕಲ್ಪ ಮಾಡಿದ್ದೆ, ನಾನು ಏನಾದ್ರೂ ಮಾಡಿ ಒಮ್ಮೆ ಹುಲಿ ಫೋಟೊ ತೆಗೆಯಲೇ ಬೇಕೆಂದು. ಆದರೆ, ಇಲ್ಲಿವರೆಗೂ ಅದು ಸಾಧ್ಯವೇ ಆಗಿರಲಿಲ್ಲ.

ನಂತರದಲ್ಲಿ ನಾನು ಛಾಯಾಗ್ರಹಣ ಕಲಿಯುತ್ತಿದ್ದ ವೇಳೆ ಅನೇಕ ಬಾರಿ ಕಾಡಿಗೆ ಹೋಗಿದ್ದಿದೆ. ಆಗೆಲ್ಲ, ಕಾಡಿನಲ್ಲಿ ಫೋಟೊ ತೆಗೆಯುವವರನ್ನೆಲ್ಲ ನೋಡಿ, ‘ಇಂಥ ದಟ್ಟ ಕಾಡಿನಲ್ಲಿ ಹುಲಿಯಂತಹ ಕಾಡುಪ್ರಾಣಿಗಳ ಚಿತ್ರಗಳನ್ನು ಅದ್ಹೇಗೆ ಕ್ಲಿಕ್ಕಿಸುತ್ತಾರೆ? ಅವು ದಾಳಿ ಮಾಡಿಬಿಟ್ಟರೆ ಏನು ಗತಿ’ ಎಂದೆಲ್ಲಾ ಯೋಚಿಸುತ್ತಿದ್ದೆ.

ಒಮ್ಮೆ 2002ರಲ್ಲಿ ಮೊದಲ ಬಾರಿಗೆ ಬಂಡಿಪುರಕ್ಕೆ ಪ್ರಾಣಿಗಳ ಫೋಟೊಗ್ರಫಿ ತೆಗೆಯಲು ಹೋಗಿದ್ದೆ. ಅಂದು ನಮ್ಮ ತಂಡವನ್ನು ಮಿನಿ ಬಸ್ಸಿನಲ್ಲಿ ಕಾಡೊಳಗೆ ಕರೆದೊಯ್ದರು. ಆಗ ಪಕ್ಕದಲ್ಲಿದ್ದ ಗೆಳೆಯರಿಗೆ ‘ಈಗ ಆನೆ, ಹುಲಿ ನಮ್ಮ ಮೇಲೆ ಆಕ್ರಮಣ ಮಾಡಿಬಿಟ್ಟರೆ ಏನು ಮಾಡುವುದು?’ ಅಂತ ಭಯದಿಂದ ಕೇಳಿದ್ದೆ. ಅದಕ್ಕೆ ಗೆಳೆಯ, ‘ಆನೆ ಸೊಂಡ್ಲು ನಮ್ಮ ಬಸ್‌ ಕಿಟಕಿಯಲ್ಲಿ ಹಿಡಿಸಲ್ಲ. ಹುಲಿ ಬಂದರೆ ಕಿಟಕಿಯ ಕಂಬಿಗಳು ತಡೆಯುತ್ತವೆ. ಏನೂ ಆಗಲ್ಲ ಸುಮ್ಮನಿರು’ ಎಂದು ಹೇಳಿ ಧೈರ್ಯ ತುಂಬಿದ್ದ! ಹೀಗೆ ನಾವು ಮಾತನಾಡುತ್ತಿದ್ದಾಗಲೇ ನಮ್ ಬಸ್ ಎದುರಿಗೆ ಜಿಂಕೆಗಳು, ಕಾಡು ಕೋಣಗಳು, ಕಡವೆಗಳು, ಆನೆಗಳು ಬಂದವು. ಮೊದಲ ಸಲ ಪ್ರಾಣಿಗಳನ್ನು ನೋಡಿದ ಕುತೂಹಲ, ಉದ್ವೇಗದಲ್ಲಿ ಕ್ಲಿಕ್ಕಿಸಿದ ಫೋಟೊಗಳು ಸರಿಯಾಗಿ ಬಂದಿರಲಿಲ್ಲ. ಕೆಲವು ಔಟ್ ಆಫ್ ಪೋಕಸ್, ಇನ್ನೂ ಕೆಲವು ಬ್ಲರ್ ಆಗಿದ್ದವು. ಒಟ್ಟಾರೆ ಕಾಡಿನಲ್ಲಿ ನನ್ನ ಮೊದಲ ಫೋಟೊಗ್ರಫಿ ಸಫಾರಿ ವಿಫಲವಾಗಿತ್ತು.

ಇದಾದ ಮೇಲೆ ಹಲವು ವರ್ಷಗಳಿಂದ ಆರು ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಫೋಟೊಗ್ರಫಿಗಾಗಿಯೇ ಬಂಡಿಪುರ, ನಾಗರಹೊಳೆ ಕಾಡುಗಳಿಗೆ ಹೋಗುತ್ತಿದ್ದೇನೆ. ಪ್ರತಿ ಸಾರಿ ಕಾಡಿಗೆ ಹೋಗು ವಾಗಲೂ ‘ಈ ಬಾರಿಯಾದರೂ ನನ್ನ ಕಣ್ಣಿಗೆ ಹುಲಿ ಕಾಣಿಸಿಕೊಳ್ಳಲಿ’ ಅಂತ ದೇವರಲ್ಲಿ ಪ್ರಾರ್ಥಿಸಿಕೊಂಡೇ ಹೋಗುತ್ತಿದ್ದೆ. ಆದರೆ ಒಮ್ಮೆಯೂ ಹುಲಿ ಇರಲಿ, ಅದರ ಬಾಲವನ್ನೂ ನೋಡಲಾಗಿರಲಿಲ್ಲ.

ಆದರೆ, ಹುಲಿ ಚಿತ್ರ ತೆಗೆಯಬೇಕೆಂಬ ನನ್ನ ಬಹು ವರ್ಷಗಳ ಹಂಬಲ, ಅಂತರಸಂತೆಯ ಅರಣ್ಯದಲ್ಲಿ ಈಡೇರಿತು.

ಹುಲಿಯ ಚಿತ್ರ ತೆಗೆದ ಸಂಭ್ರಮದೊಂದಿಗೆ ಪಕ್ಕಕ್ಕೆ ತಿರುಗಿ ನೋಡಿದರೆ, ಕಾರಿನಲ್ಲಿ ಕುಳಿತವರೊಬ್ಬರು ಮೊಬೈಲ್‌ನಲ್ಲಿ ಹುಲಿಯ ನೋಟ ಕ್ಲಿಕ್ಕಿಸುತ್ತಿದ್ದರು. ಆ ಕಡೆ ತಿರುಗಿ ನೋಡಿದರೆ, ‘ಅರೆ, ನಟ ಸಾಧು ಕೋಕಿಲ!. ಅವರನ್ನೂ ಈ ಹುಲಿ ಮೋಡಿ ಮಾಡಿತ್ತು, ನೋಡಿ.

‘ಹುಲಿ ಫೋಟೊಗ್ರಫಿ ಕಷ್ಟ’

ಕರ್ನಾಟಕದ ಕಾಡುಗಳಲ್ಲಿ ಹುಲಿ ಸಂಖ್ಯೆ ಕಡಿಮೆ. ಹೀಗಾಗಿ ಫೋಟೊಗ್ರಫಿ ಮಾಡುವುದು ಕಷ್ಟ. ಆದರೆ ಉತ್ತರ ಭಾರತದ ಕಾಡುಗಳಲ್ಲಿ ಹುಲಿಗಳು ಹೇರಳವಾಗಿ ಕಾಣಸಿಗುತ್ತವೆ. ಫೋಟೊಗ್ರಫಿ ಮಾಡುವುದು ಸುಲಭ ಎಂದು ಅಲ್ಲಿಗೆ ಹೋಗಿ ಬಂದಿದ್ದ ಅನೇಕ ಗೆಳೆಯರು ಹೇಳುತ್ತಿದ್ದಾಗ. ನನಗೂ ಅಲ್ಲಿಗೆ ಹೋಗಿ ಹುಲಿ ಫೋಟೊ ತೆಗೆಯುವ ಆಸೆ ಮೂಡುತ್ತಿತ್ತು. ಆದರೆ, ನನ್ನ ಆರ್ಥಿಕ ಪರಿಸ್ಥಿತಿ ಅವಕಾಶ ನೀಡುತ್ತಿರಲಿಲ್ಲ. ಅಪರೂಪಕ್ಕೆ ಬಂಡಿಪುರ, ನಾಗರಹೊಳೆಗೆ ಹೋಗುವುದೇ ದೊಡ್ಡದೆನಿಸಿರುವಾಗ, ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಅಲ್ಲಿಗೆ ಹೋಗಿ ಫೋಟೊ ತೆಗೆಯುವುದು ಕಷ್ಟವೆನಿಸಿತ್ತು. ಆದರೂ 2003ರಲ್ಲಿ ದುಬಾರಿಯೆನಿಸಿದ ಕಬಿನಿ ಜಂಗಲ್ ಲಾಡ್ಜಿಗೆ ಒಂದು ದಿನದ ಮಟ್ಟಿಗೆ ಹೋಗಿಬಂದೆ. ಆದರೂ ಹುಲಿ ಫೋಟೊ ತೆಗೆಯಲಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.