ಪ್ರಾಣಿ ಸಂಕುಲಕ್ಕೆ ಇಂದು ಗೂಡು ತಪ್ಪಿಸುವ ಕೆಲಸಗಳೇ ಹೆಚ್ಚು. ಅವಕ್ಕೆ ಗೂಡು ಕಲ್ಪಿಸುವ ಕಾರ್ಯ ಮಾತ್ರ ವಿರಳ. ಮಹಾನಗರದಲ್ಲಿ ಅಸಹಾಯಕ ಮತ್ತು ಅನಾಥ ಪ್ರಾಣಿಗಳ ಸಹಾಯಕ್ಕಾಗಿ ‘ಪೀಪಲ್ಸ್ ಫಾರ್ ಅನಿಮಲ್ಸ್’ ಸಂಸ್ಥೆ ಮುತುವರ್ಜಿ ವಹಿಸುತ್ತಿರುವುದು ಗಮನಾರ್ಹ.
ಆ್ಯಸಿಡ್ ದಾಳಿಗೆ ಸಿಕ್ಕು ಎರಡೂ ಕಣ್ಣು ಕಳೆದುಕೊಂಡ ಮಂಗ, ಕಂಬಗಳಿಂದ ವಿದ್ಯುತ್ ತಗುಲಿಸಿಕೊಂಡ ಹಾಗೂ ಅಮ್ಮನಿಂದ ದೂರವಾದ ಮಂಗಗಳು, ರೆಕ್ಕೆಗೆ ಪೆಟ್ಟು ಬಿದ್ದು ಹಾರಲು ಬಾರದ ಹದ್ದು, ಗಿಳಿ, ಅಳಿಲು, ಕಾಗೆ, ಹಾವು... ಹೀಗೆ ವಿವಿಧ ರೀತಿಯಲ್ಲಿ ಊನಗೊಂಡ ಪ್ರಾಣಿ ಸಂಕುಲಗಳಿಗೆ ಸಂಸ್ಥೆ ಗೂಡಾಗಿದೆ.
ಸಂಸ್ಥೆಯ ಹುಟ್ಟು:1996ರಲ್ಲಿ ಬೆಂಗಳೂರಿನಲ್ಲಿ ಈ ಸಂಸ್ಥೆ ಆರಂಭಗೊಂಡಿದೆ. ಈ ಸರ್ಕಾರೇತರ ಸಂಸ್ಥೆಯ ಪರಿಕಲ್ಪನೆ ವನ್ಯಜೀವಿ ಹೋರಾಟಗಾರ್ತಿ ಮೇನಕಾ ಗಾಂಧಿ ಅವರದು. ಬೆಂಗಳೂರಿನಲ್ಲಿ ನಮ್ರತಾ ದುಗಾರ್, ಅಲ್ಪನಾ ಭಾರತೀಯ, ಗೌರಿ ಮೈನಿ ಹೀರಾ ಮತ್ತು ಆರುಶಿ ಪೊದ್ದಾರ್ ನೆರವಾಗಿದ್ದಾರೆ.
ಕಾರ್ಯವೈಖರಿ:ಈ ಸಂಸ್ಥೆ 6 ಎಕರೆ ವಿಸ್ತೀರ್ಣದ ಕಾಡು ಪ್ರದೇಶದಲ್ಲಿದೆ. ಇದರ ಮುಖ್ಯ ಉದ್ದೇಶ ಬೆಂಗಳೂರು ನಗರ ಪ್ರದೇಶಗಳಲ್ಲಿ ಪೆಟ್ಟು ತಿಂದ ಕಾಡುಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು. ಅವು ಪೂರ್ಣ ಗುಣಮುಖವಾದ ಮೇಲೆ ಮತ್ತೆ ಅದರ ಆವಾಸಸ್ಥಾನಕ್ಕೆ ಬಿಡಲಾಗುತ್ತದೆ. ಸ್ವತಂತ್ರವಾಗಿ ಆಹಾರ ಹುಡುಕಿಕೊಂಡು ಬದುಕಲು ಸಾಧ್ಯವಿಲ್ಲದ ಪ್ರಾಣಿಗಳನ್ನು ಮಾತ್ರ ಅದರ ಜೀವನಪರ್ಯಂತ ಸಾಕಲಾಗುತ್ತದೆ.
ನಿಮಯ ಉಲ್ಲಂಘಿಸಿ ಕಾಡುಪ್ರಾಣಿಗಳನ್ನು ಸಾಕಿಕೊಂಡಿದ್ದರೆ, ಅದು ಈ ಸಂಸ್ಥೆಯ ಗಮನಕ್ಕೆ ಬಂದರೆ, ಮಾಲೀಕರ ಮನವೊಲಿಸಿ ಪ್ರಾಣಿಯನ್ನು ಕಾಡಿಗೆ ಬಿಡಲಾಗುತ್ತದೆ.
ಸಂಸ್ಥೆಯಲ್ಲಿ ಪ್ರಾಣಿಗಳಿಗೆ ದಿನದಲ್ಲಿ ಒಟ್ಟು ಎರಡು ಹೊತ್ತು ಅವುಗಳು ಸೇವಿಸುವ ಆಹಾರವನ್ನೇ ನೀಡಲಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಅಡುಗೆಮನೆ ವ್ಯವಸ್ಥೆ ಇದೆ. ನಾಲ್ವರು ನುರಿತ ವೈದ್ಯರಿದ್ದಾರೆ. 24/7 ಕಾರ್ಯನಿರ್ವಹಿಸುವ ನುರಿತ ಪರಿಹಾರ ಕಾರ್ಯಪಡೆ (ರೆಸ್ಕ್ಯೂಟೀಂ) ಇದೆ. ಸ್ವಯಂಸೇವಕರು ಇದ್ದಾರೆ. 2 ಆ್ಯಂಬುಲೆನ್ಸ್, 5 ವಾಹನ ಇವೆ.
ಇಂಟರ್ನ್‌ಶಿಪ್‌ಗೆ ಅವಕಾಶ: ಪ್ರಾಣಿಗಳ ಬಗ್ಗೆ ಪ್ರೀತಿ ಇದ್ದವರು, ಇದೇ ಕೋರ್ಸ್‌ಗಳಲ್ಲಿ ಓದುತ್ತಿರುವವರು ಈ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್ ಮಾಡಬಹುದಾಗಿದೆ. ನಂತರ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ.
ಸಾರ್ವಜನಿಕರಿಗೆ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 5ವರೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಶನಿವಾರ ಮತ್ತು ಭಾನುವಾರ ಎರಡು ದಿನಕ್ಕೆ ಇಲ್ಲಿ ಸ್ವಯಂಸೇವಕರಾಗಿಯೂ ಕೆಲಸ ಮಾಡಬಹುದು.
ಪೆಟ್ ಬರಿಯಲ್
ಈ ಸಂಸ್ಥೆಯ ಜಾಗದಲ್ಲಿ ನಿಮ್ಮ ಇಷ್ಟದ ಪ್ರಾಣಿಯದೇಹವನ್ನು ಹೂಳಬಹುದಾಗಿದೆ. ಹೀಗೆ ಹೂಳುವುದಕ್ಕೆ ಹಣವನ್ನು ಪಾವತಿಸಬೇಕಾಗುತ್ತದೆ. ಒಂದು, ಮೂರು ಮತ್ತು ಐದು ವರ್ಷಕ್ಕೆ ತಮ್ಮ ಇಷ್ಟದ ಪ್ರಾಣಿಯನ್ನು ಹೂತ ಜಾಗವನ್ನು ಗುತ್ತಿಗೆ ಪಡೆಯಬಹುದಾಗಿದೆ. ನಂತರ ಸಾಕು ಅನ್ನಿಸಿದರೆ ಬೇರೆ ಅವರಿಗೆ ಆ ಜಾಗವನ್ನು ನೀಡಲಾಗುತ್ತದೆ. ಎಷ್ಟು ವರ್ಷಕ್ಕೆ ಗುತ್ತಿಗೆ ಬೇಕೋ ಅದರ ಅನುಗುವಾಗಿ ಹಣ ನಿಗದಿ ಮಾಡಲಾಗಿದೆ.
ಜನವರಿ 2019 ವರೆಗೆ ರಕ್ಷಣೆ ಮಾಡಲಾದ ಪ್ರಾಣಿಗಳು
10,739 – ಪಕ್ಷಿಗಳು
9,687 – ಸರಿಸರ್ಪಗಳು
3,833 – ಸಸ್ತನಿಗಳು
2 – ಜೇಡ ಮತ್ತು ಚೇಳು
*
ನಮಗೆ ಸರ್ಕಾರದಿಂದ ಯಾವುದೇ ಹಣ ಸಿಗುವುದಿಲ್ಲ. ತಿಂಗಳಿಗೆ ₹10 ರಿಂದ ₹15 ಲಕ್ಷ ಖರ್ಚು ಬರುತ್ತದೆ. ಸಂಸ್ಥೆಯ ಕಾರ್ಯ ಮೆಚ್ಚಿ ನೀಡುವ ದೇಣಿಗೆ ಮಾತ್ರ ನಮ್ಮ ಆದಾಯ.
-ಹಿಶಿತಾ ಜಗದೀಶ್, ರೆಸ್ಕ್ಯೂ ಸಂಯೋಜಕ
***
ಪೆಟ್ ಬರಿಯಲ್‌ಗಾಗಿಯೇ ಇರುವ ಸಂಪರ್ಕ ಸಂಖ್ಯೆ: 8197155004
ಸಹಾಯವಾಣಿ: 9900025370, 9980339880
ವಿಳಾಸ: ನಂ. 67, ಬಿಜಿಎಸ್ ಆಸ್ಪತ್ರೆ ಹತ್ತಿರ, ಉತ್ತರಹಳ್ಳಿ ಮುಖ್ಯರಸ್ತೆ, ಕೆಂಗೇರಿ, ಬೆಂಗಳೂರು: 560060
ಪ್ರವೇಶ ಶುಲ್ಕ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.