ADVERTISEMENT

ವಿಶ್ವದ ಅತಿ ಪುಟ್ಟ ಕ್ರೇನ್ ‘ಡಿಮಾಯ್ಸೆಲ್‌’

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 19:45 IST
Last Updated 16 ಜನವರಿ 2020, 19:45 IST
ಡಿಮಾಯ್ಸೆಲ್‌
ಡಿಮಾಯ್ಸೆಲ್‌   

ಕೆಲವು ಹಕ್ಕಿಗಳು ಆಕರ್ಷಕ ದೇಹರಚನೆಯಿಂದಲೇ ಗಮನ ಸೆಳೆಯುತ್ತವೆ. ಇಂತಹ ಸುಂದರ ಹಕ್ಕಿಗಳ ಕುರಿತು ಕಥೆ–ಕವಿತೆಗಳಲ್ಲೂ ಉಲ್ಲೇಖಿಸಲಾಗಿದೆ. ನಿಸರ್ಗ ಪ್ರಿಯರ ಗಮನ ಸೆಳೆಯುವ ಹಕ್ಕಿಗಳಲ್ಲಿ ಕ್ರೇನ್‌ಗಳು ಇವೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಸುಂದರ ಬಕಪಕ್ಷಿಗಳಲ್ಲಿ ಒಂದಾದ ಹಾಗೂ ಕ್ರೇನ್‌ಗಳಲ್ಲೇ ಅತಿಪುಟ್ಟದಾದ ಡೆಮಾಯ್ಸೆಲ್‌ ಕ್ರೇನ್‌ (Demoiselle Crane) ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಬೂದು, ಬಿಳಿ ಮತ್ತು ಕಪ್ಪು ಬಣ್ಣದ ನಯವಾದ ಪುಕ್ಕ ದೇಹವನ್ನು ಆವರಿಸಿರುತ್ತದೆ. ಬೆನ್ನು, ಸೊಂಟ, ಉದರ ಬೂದು ಬಣ್ಣದಲ್ಲಿದ್ದರೆ, ಕೆನ್ನೆ, ಕತ್ತು ಮತ್ತು ಎದೆಭಾಗ ಕಪ್ಪು ಬಣ್ಣದ ಪುಕ್ಕದಿಂದ ಆವೃತವಾಗಿರುತ್ತದೆ. ತಲೆಯ ಮೇಲೆ ಬಿಳಿ ಬಣ್ಣದ ಪುಕ್ಕ ಬೆಳೆದಿದ್ದು, ತಲೆಯ ಹಿಂಬದಿಯಲ್ಲಿ ಇಳಿಬಿಟ್ಟಂತೆ ನೀಳವಾಗಿ ಕೂದಲು ಬೆಳೆದಿರುವುದು ಇದರ ಆಕರ್ಷಣೆಗಳಲ್ಲಿ ಒಂದು. ಕಣ್ಣುಗಳು ಪುಟ್ಟದಾಗಿದ್ದರೂ ಗಾಢ ಕೆಂಬಣ್ಣದಲ್ಲಿ ಹೊಳೆಯುತ್ತಿರುತ್ತವೆ. ಕೊಕ್ಕು ಕೋಳಿ ಕೊಕ್ಕಿನಂತೆ ಇದ್ದು, ದೃಢವಾಗಿರುತ್ತದೆ. ಮಧ್ಯಭಾಗದಿಂದ ತುದಿ ವರೆಗೆ ತಿಳಿಗೆಂಪು ಬಣ್ಣದಲ್ಲಿರುತ್ತದೆ. ಅಗಲವಾದ ರೆಕ್ಕೆಗಳಿಗೆ ಮತ್ತಷ್ಟು ಮೆರುಗು ನೀಡಲು ನಿಳವಾದ ಬಾಲವಿದೆ. ಕೋಲುಗಳಂತಹ ನೀಳವಾದ ಕಾಲುಗಳು ಬೂದು ಬಣ್ಣದಲ್ಲಿರುತ್ತವೆ. ಬೆರಳುಗಳು ಬಿಡಿಯಾಗಿದ್ದು, ನೀಳವಾಗಿರುತ್ತವೆ.

ADVERTISEMENT

ವಾಸಸ್ಥಾನ

ಭಾರತ ಉಪಖಂಡ, ಚೀನಾ, ಜಪಾನ್‌, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಮಂಗೋಲಿಯಾ, ರಷ್ಯಾ, ಕಜಕಸ್ತಾನ್ ಹಾಗೂ ತೈವಾನ್ ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ.

ಋತುವಿಗೆ ತಕ್ಕಂತೆ ವಾಸಸ್ಥಾನವನ್ನು ಬದಲಾಯಿಸುತ್ತಿರುತ್ತದೆ. ಆಫ್ರಿಕಾ ಖಂಡದ ಉತ್ತರ ಭಾಗಗಳಿಗೂ ವಲಸೆ ಹೋಗುತ್ತದೆ. ದಟ್ಟವಾಗಿ ಪೊದೆ ಗಿಡಗಳು ಬೆಳೆದಿರುವ ಬಯಲು ಪ್ರದೇಶ, ಹುಲ್ಲುಗಾವಲು ಪ್ರದೇಶ, ಜೌಗುಭೂಮಿ, ಕೆರೆ, ಸರೋವರ, ನದಿಗಳಲ್ಲಿ ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಒಂಟಿಯಾಗಿ ಜೀವಿಸಲು ಹಾಗೂ ಗುಂಪಿನಲ್ಲಿ ಜೀವಿಸಲು ಎರಡೂ ರೀತಿಯಲ್ಲೂ ಇಷ್ಟಪಡುತ್ತದೆ. ಸಂತಾನೋತ್ಪತ್ತಿ ಅವಧಿಯಲ್ಲಿ ಒಂಟಿಯಾಗಿದ್ದರೆ, ಉಳಿದ ಸಮಯಗಳಲ್ಲಿ ಗುಂಪಿನಲ್ಲಿ ಕೂಡಿ ಆಹಾರ ಹುಡುಕುತ್ತಾ ಅಲೆಯುತ್ತದೆ. ಹಗಲಿನಲ್ಲಿ ಮಾತ್ರ ಹೆಚ್ಚು ಚುರುಕಾಗಿರುತ್ತದೆ. ರಾತ್ರಿಯಲ್ಲಿ ಒಂಟಿ ಕಾಲಿನ ಮೇಲೆ ನಿಂತು, ಕತ್ತನ್ನು ಬೆನ್ನಿನ ಮೇಲೆ ಇಟ್ಟು ವಿಶ್ರಾಂತಿ ಪಡೆಯುತ್ತದೆ.

ಚಳಿಗಾಲ ಮತ್ತು ಸಂತಾನೋತ್ಪತ್ತಿ ಅವಧಿಯಲ್ಲಿ ಮೂಲಸ್ಥಾನ ಬಿಟ್ಟು ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತದೆ. ವಲಸೆ ಹೋಗುವಾಗ ಸುಮಾರು 400 ಕ್ರೇನ್‌ಗಳು ಒಟ್ಟಿಗೆ ಹಾರುತ್ತಾ ಖಂಡಗಳನ್ನು ದಾಟುತ್ತವೆ. ಸಾಮಾನ್ಯವಾಗಿ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ವಲಸೆ ಹೋದರೆ, ಮಾರ್ಚ್‌, ಏಪ್ರಿಲ್‌ ಹೊತ್ತಿಗೆ ಮೂಲಸ್ಥಾನಕ್ಕೆ ಮರಳುತ್ತವೆ. ದೇಹದ ಚಲನೆ ಹಾಗೂ ವಿಶಿಷ್ಟ ಸದ್ದುಗಳ ಮೂಲಕ ಸಂವಹನ ನಡೆಸುತ್ತದೆ.

ಆಹಾರ

ಇದು ಸರ್ವಭಕ್ಷಕ ಹಕ್ಕಿ. ವಿವಿಧ ಬಗೆಯ ಕಾಳು ಹಾಗೂ ಹುಲ್ಲು ಇದರ ಪ್ರಮುಖ ಆಹಾರ. ಎಕದಳ ಧಾನ್ಯಗಳನ್ನೂ ಇಷ್ಟಪಟ್ಟು ತಿನ್ನುತ್ತದೆ. ವಿವಿಧ ಬಗೆಯ ಕೀಟಗಳು, ಹಲ್ಲಿಗಳು, ಎರೆಹುಳುಗಳು ಹಾಗೂ ಪುಟ್ಟಗಾತ್ರದ ಉಭಯವಾಸಿಗಳನ್ನು ಭಕ್ಷಿಸುತ್ತದೆ.

ಸಂತಾನೋತ್ಪತ್ತಿ

ವಯಸ್ಕ ಕ್ರೇನ್‌ಗಳು ಒಮ್ಮೆ ಜೊತೆಯಾದರೆ ಜೀವಿತಾವಧಿಯವರೆಗೂ ಒಂದೇ ಸಂಗಾತಿಯೊಂದಿಗೆ ಕೂಡಿ ಬಾಳುತ್ತವೆ. ಏಪ್ರಿಲ್‌ನಿಂದ ಮೇ ವರೆಗಿನ ಅವಧಿ ಇದರ ಸಂತಾನೋತ್ಪತ್ತಿ ಪ್ರಶಸ್ತವಾಗಿರುತ್ತದೆ. ಪೊದೆಗಿಡಗಳು ಬೆಳೆದಿರುವ ಪ್ರದೇಶ, ಬಯಲು ಹುಲ್ಲುಗಾವಲು ಪ್ರದೇಶಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ.

ಈ ಅವಧಿಯಲ್ಲಿ ಜೋಡಿ ಹಕ್ಕಿಗಳನ್ನು ಗೂಡಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಗಡಿ ಗುರುತಿಸಿಕೊಂಡು ಇತರೆ ಹಕ್ಕಿಗಳು ಪ್ರವೇಶಿಸುವುದನ್ನು ನಿರಾಕರಿಸುತ್ತವೆ. ಆಕ್ರಮಣಕಾರಿ ಸ್ವಭಾವ ತೋರುತ್ತವೆ.

ಹೆಣ್ಣು ಹಕ್ಕಿ ಎರಡು ಮೊಟ್ಟೆಗಳನ್ನು ಇಡುತ್ತದೆ. 27ರಿಂದ 29 ದಿನಗಳವರೆಗೆ ಪೋಷಕ ಹಕ್ಕಿಗಳೆರಡೂ ಮೊಟ್ಟೆಗಳಿಗೆ ಕಾವು ಕೊಡುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಗಳನ್ನು ಪೋಷಕ ಹಕ್ಕಿಗಳು ಕಾಳಜಿಯಿಂದ ಆಹಾರ ಉಣಿಸಿ ಬೆಳೆಸುತ್ತವೆ. ಆಹಾರ ಹುಡುಕುವಾಗ ಮರಿಗಳು ಪೋಷಕ ಹಕ್ಕಿಗಳ ಜತೆಯಲ್ಲೇ ಸುತ್ತುತ್ತವೆ. 55ರಿಂದ 65 ದಿನಗಳಲ್ಲಿ ಮರಿಗಳಿಗೆ ಸಂಪೂರ್ಣ ಪುಕ್ಕ ಬೆಳೆಯುತ್ತದೆ. 10 ತಿಂಗಳ ನಂತರ ಸ್ವತಂತ್ರವಾಗಿ ಆಹಾರ ಹುಡಕಲು ಆರಂಭಿಸುತ್ತವೆ. 4ರಿಂದ 8 ವರ್ಷಗಳ ಅವಧಿಯಲ್ಲಿ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ಇದರ ಆಕರ್ಷಕ ದೇಹರಚನೆಯನ್ನು ಗಮನಿಸಿ ಫ್ರೆಂಚ್ ರಾಣಿ ಮೇರಿ ಆ್ಯಂಟೊನಿಯೆಟೆ ಅವರು ಇದಕ್ಕೆ ಸುಂದರ ಯುವತಿ ಎಂದು ಅರ್ಥ ನೀಡುವ ಡಿಮಾಯ್ಸೆಲ್‌ ಎಂಬ ಹೆಸರಿನಿಂದ ಕರೆದಿದ್ದಾರೆ.

* ಇದು ಸದಾ ಖುಷಿಯಿಂದ ಇರಲು ಇಷ್ಟಪಡುವ ಹಕ್ಕಿ. ರೆಕ್ಕೆಗಳನ್ನು ಅಗಲಿಸಿ ಕುಣಿಯುತ್ತಿರುತ್ತದೆ. ಗಿಡದ ಎಲೆಗಳನ್ನು ಕಿತ್ತು ಆಕಾಶಕ್ಕೆ ಎಸೆದು ಸಂಭ್ರಮಿಸುತ್ತದೆ.

* ಇತರೆ ಕ್ರೇನ್‌ಗಳಿಗೆ ಹೋಲಿಸಿದರೆ ಈ ಹಕ್ಕಿಯೇ ಹೆಚ್ಚು ಚುರುಕಾದ ಜೀವನಕ್ರಮ ಪಾಲಿಸುತ್ತದೆ. ಕುಣಿಯುವಾಗಲೂ ಹೆಚ್ಚು ಉತ್ಸಾಹ ತೋರುತ್ತದೆ.

* ಕ್ರೇನ್‌ಗಳ ಕುರಿತು ಹಲವು ಪುರಾಣಗಳು, ಕಥೆಗಳಲ್ಲಿ ಉಲ್ಲೇಖವಿದೆ. ಕ್ರೇನ್‌ಗಳಿಗೆ ಸಂಬಂಧಿಸಿದಂತೆ ಹಲವು ಕಲಾವಿದರು ಚಿತ್ರಗಳನ್ನೂ ಬಿಡಿಸಿದ್ದಾರೆ. ಪುರಾತನ ಈಜಿಪ್ಟ್ ಸಮಾಧಿಗಳಲ್ಲೂ ಕ್ರೇನ್‌ಗಳಿಗೆ ಸಂಬಂಧಿಸಿದ ಕುರುಹುಗಳು ದೊರೆತಿವೆ.

* ವಿವಿಧ ಪ್ರದೇಶಗಳ ಸಂಸ್ಕೃತಿಗಳಲ್ಲಿ ಇದನ್ನು ಭಿನ್ನ ಭಾವಗಳ ಸಂಕೇತಗಳಿ ಸೂಚಿಸಲಾಗುತ್ತಿದೆ.

* ನೆಲದ ಮೇಲೆ ಕಾಲಿಡದೇ ನೂರಾರು ಕಿ.ಲೊ ಮೀಟರ್ ದೂರದ ವರೆಗೆ ಹಾರುವ ಸಾಮರ್ಥ್ಯಕ್ಕಿದೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ-2 ರಿಂದ 3 ಕೆ.ಜಿ

ದೇಹದ ಎತ್ತರ-76 ಸೆಂ.ಮೀ

ದೇಹದ ಉದ್ದ- 85 ರಿಂದ 100 ಸೆಂ.ಮೀ

ರೆಕ್ಕೆಗಳ ಅಗಲ-155 ರಿಂದ 180 ಸೆಂ.ಮೀ

ಜೀವಿತಾವಧಿ-25 ರಿಂದ 65 ವರ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.